ಅದು ಭಾನುವಾರ ಸಂಜೆ. ಶುಂಠಿ ಟೀ ಹೀರುತ್ತ ಟಿವಿಯಲ್ಲಿ ಬರುತ್ತಿದ್ದ ಶಂಕರ್ ನಾಗ್ ಅವರ ‘ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು’ ಎನ್ನುವ ಸೂಪರ್ ಹಿಟ್ ಹಾಡನ್ನು ಕೇಳುತ್ತ ಕೂತಿದ್ದೆ. ಮನಸ್ಸಿಗೆ ಎದೇನೋ ಖುಷಿ ಎನಿಸಿ ಹಾಡನ್ನು ಗುನುಗುತ್ತಿದ್ದೆ. ಈ ಹಾಡು ಮುಗಿಯುತ್ತಿದ್ದಂತೆ ಅದರ ಹಿಂದೆಯೇ ಮತ್ತೊಂದು ಹಾಡು ಬಂತು. ಅದುವೇ ರೆಬಲ್ ಸ್ಟಾರ್ ಅಂಬರೀಶ್ ಅವರ ಎಸ್.ಪಿ.ಬಾಲಸುಬ್ರಮಣ್ಯಂ ಕಂಠ ಸಿರಿಯಲ್ಲಿ ಮೂಡಿ ಬಂದ ‘ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ’. ಈ ಹಾಡಲ್ಲಿ ಬರುವ ‘ಚಾಮುಂಡಿ ರಕ್ಷಣೆ ನಮಗೆ, ಗೊಮ್ಮಟೇಶ್ವರ ಕಾವಲು ಇಲ್ಲಿ’ ಎಂಬ ಸಾಲು ಒಂದು ಕ್ಷಣ ನನ್ನ ತಲೆಗೆ ಕೆಲಸ ಕೊಟ್ಟಿತು.
ಹೆಣ್ಣು, ಹೊನ್ನು, ಮಣ್ಣಿಗಾಗಿ ಸ್ವಂತ ಅಣ್ಣ, ತಮ್ಮ, ತಂದೆ, ತಾಯಿ ಎಂದೂ ನೋಡದೆ ಕುಟುಂಬದವರನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿ ಸ್ವಂತ ಸುಖದ ಬಗ್ಗೆ ಚಿಂತಿಸುವ ಈ ಸಮಾಜದಲ್ಲೂ ಮಹಾನ್ ತ್ಯಾಗಿಗಳಿದ್ದರು ಎಂಬ ಬಗ್ಗೆ ಯೋಚಿಸಿ ನಗು ಬಂತು. ಸಾವಿರ ವರ್ಷಗಳ ಹಿಂದೆ ಬಾಹುಬಲಿ ತನ್ನ ಸಹೋದರನ ಜೊತೆ ಯುದ್ಧ ಮಾಡಿದೆ ಎಂಬ ಪಶ್ಚಾತ್ತಾಪದ ಸುಳಿಗೆ ಸಿಕ್ಕಿ ತನಗೆ ಸಿಕ್ಕ ರಾಜ್ಯ, ಸುಖ, ಸಂಪತ್ತನೆಲ್ಲ ತೊರೆದು ವೈರಾಗಿಯಾದ. ಆದರೆ ಈಗಿನ ಕಾಲದಲ್ಲಿ ಇಂತಹ ಘಟನೆಗಳು ಎಂದೂ ಜರುಗದು ಎಂದರೆ ತಪ್ಪಾಗಲಾರದು ಅನಿಸುತ್ತೆ. ಅದೇನೆ ಇರಲಿ ಗೊಮ್ಮಟೇಶ್ವರನಂತಹ ಮಹಾನ್ ತ್ಯಾಗಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಿಕೊಡುವ ಅವಶ್ಯಕತೆ ಹೆಚ್ಚಿದೆ. ಇಂತಹ ಕಥೆಗಳಿಂದಲೇ ಮಾನವ ಮೌಲ್ಯ ಹೆಚ್ಚುತ್ತೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳವು ಬೆಂಗಳೂರಿನಿಂದ 145 ಕಿ.ಮೀ. ಮೈಸೂರಿನಿಂದ 85 ಕಿ,ಮೀ ಮತ್ತು ಹಾಸನದಿಂದ 53 ಕಿ.ಮೀ ದೂರದಲ್ಲಿದೆ. ಶ್ರವಣಬೆಳಗೊಳವು ಸುಮಾರು 2 ಸಹಸ್ರ ವರ್ಷಗಳಿಗೂ ಹಳೆಯ ಜೈನರ ಕಲೆ, ವಾಸ್ತುಶಿಲ್ಪ, ಧರ್ಮ, ಮತ್ತು ಸಂಸ್ಕೃತಿಯ ಪ್ರಮುಖ ಕೇಂದ್ರ ಬಿಂದು ಆಗಿದೆ. ಬಾಹುಬಲಿ ತ್ಯಾಗದ ಹಿಂದಿನಿಂದಲೂ ಶ್ರವಣಬೆಳಗೊಳವೊಂದು ಮೋಕ್ಷ ಭೂಮಿಯಾಗಿತ್ತು ಎಂದು ಇತಿಹಾಸಗಾರರು ಹೇಳುತ್ತಾರೆ. ಬಹುದೂರದ ಸ್ಥಳಗಳಿಂದ ವ್ರತ ಸ್ವೀಕರಿಸಿ ದೇಹ ತ್ಯಾಗಕ್ಕಾಗಿಯೇ ಇಲ್ಲಿಗೆ ಮುನಿಗಳು, ಶ್ರಾವಕರು ಬರುತ್ತಿದ್ದರು.
ಜೈನರ ಮಹಾನ್ ಆಚಾರ್ಯರುಗಳಲ್ಲಿ ಅತ್ಯಂತ ಪೂರ್ವಿಕರಾದ ಶ್ರುತಕೇವಲಿಯಾದ ಭಗವಾನ್ ಭದ್ರಬಾಹು ಮುನಿಗಳು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿದ್ದಾಗ ಉತ್ತರ ಭಾರತದಲ್ಲಿ 12 ವರ್ಷಗಳ ಕಾಲ ಭೀಕರ ಕ್ಷಾಮ ಬರುತ್ತದೆ. ಆಗ ಧರ್ಮದ ತತ್ವಗಳನ್ನು ಉಳಿಸಲು ಭದ್ರಬಾಹು ಮುನಿಯು ದಕ್ಷಿಣಕ್ಕೆ ತಮ್ಮ ಶಿಷ್ಯರೊಂದಿಗೆ ಬಂದರು. ಈ ವೇಳೆ ಶ್ರವಣಬೆಳಗೊಳದಲ್ಲಿ ನೆಲೆ ನಿಂತರು. ಉಳಿದ ಮುನಿ ಸಮುದಾಯ ಮತ್ತೂ ದಕ್ಷಿಣಕ್ಕೆ ಸಾಗಿ ಮಧುರೆ ಬಳಿ ನೆಲೆ ನಿಲ್ಲುತ್ತಾರೆ. ಭದ್ರಬಾಹುಮುನಿ ಶ್ರವಣಬೆಳಗೊಳದ ಕಳ್ವಪ್ಪುವಿನಲ್ಲಿ ನೆಲೆ ನಿಂತ ಮೇಲೆ ಅಲ್ಲೇ ದೇಹಾವಸಾನವಾಗುತ್ತಾರೆ.
ಈ ಭದ್ರಬಾಹುವಿನೊಂದಿಗೆ ಚಂದ್ರಗುಪ್ತಮುನಿ ನಿಲ್ಲುತ್ತಾನೆ. ತನ್ನ ಗುರು ಅರ್ಹತ್ ಪದವಿ ಪಡೆದ ಮೇಲೆ ಚಂದ್ರಗುಪ್ತಮುನಿಯು ಈ ಬೆಟ್ಟದ ಮೇಲೆಯೇ ನೆಲೆ ನಿಂತು ಸಲ್ಲೇಖನ ವ್ರತ ಸ್ವೀಕರಿಸಿ ದೇಹತ್ಯಾಗ ಮಾಡುತ್ತಾನೆ. ಇಲ್ಲಿಂದಾಚೆಗೆ ಈ ಬೆಟ್ಟ (ಕಳ್ಳಪ್ಪು) ಜೈನರಿಗೆ ಬಹು ಪವಿತ್ರ ಸ್ಥಳವಾಗಿ ಇದನ್ನು ನೋಡಲು, ವ್ರತಗಳನ್ನು ಸ್ವೀಕರಿಸಿ ದೇಹತ್ಯಾಗ ಮಾಡಲು ದೂರ ದೂರದ ಊರುಗಳಿಂದ ಜನರು ಬರಲು ಆರಂಭಿಸುತ್ತಾರೆ. ಆದರೆ ಇಲ್ಲಿಯ ವರೆಗೂ ಕೂಡ ದೇಹತ್ಯಾಗ ಮಾಡಿದ ಭದ್ರಬಾಹು, ಚಂದ್ರಗುಪ್ತಮುನಿ ಯಾರು ಎಂಬ ಬಗ್ಗೆ ಗೊಂದಲಗಳಿವೆ. ಇದು ಜೈನರು ಶ್ರವಣಬೆಳಗೊಳಕ್ಕೆ ಬಂದು ನೆಲೆಸಿದ ಕಥೆ. ಇನ್ನು ಹೈಸ್ಕೂಲಿನಲ್ಲಿ ಓದುವಾಗ ಮಹಾಕವಿ ಪಂಪನ ಭರತ-ಬಾಹುಬಲಿ ಯುದ್ಧದ ಕಥೆ ಓದಿದ ನೆನಪು ಮೆಲುಕು ಹಾಕುತ್ತ. ನಾವೀಗ ಅದರ ಬಗ್ಗೆ ಎಳೆ ಎಳೆಯಾಗಿ ಅರಿತುಕೊಳ್ಳೋಣ.
ಜೈನ ಸಾಹಿತ್ಯದಲ್ಲಿ ಪ್ರಥಮ ತೀರ್ಥಂಕರ ಆದಿನಾಥ, ಪ್ರಥಮ ಚಕ್ರವರ್ತಿ ಭರತ, ಪ್ರಥಮ ಮನ್ಮಥ ಬಾಹುಬಲಿ. ವೈರಾಗ್ಯದ ಪಾಠವನ್ನು ಇಡೀ ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ ಕೀರ್ತಿ ಈ ಬಾಹುಬಲಿಗೆ ಸಲ್ಲಿತ್ತದೆ. ಜೈನ ವಾಹ್ಮಯದಲ್ಲಿ ಶ್ವೇತಾಂಬರ ಹಾಗೂ ದಿಗಂಬರ ಪಂಥಗಳೆರಡರಲ್ಲಿಯೂ ಬಾಹುಬಲಿ ಕಲ್ಪನೆ ಇದೆ. ಆದಿತೀರ್ಥಂಕರ ಋಷಭನಾಥ ಭಗವಾನರು, ತಮ್ಮ ಇಬ್ಬರು ಪತ್ನಿಯರಲ್ಲಿ ಯಶಸ್ವತಿ ದೇವಿಯಿಂದ ಭರತನೇ ಮೊದಲಾಗಿ 99 ಜನ ಗಂಡುಮಕ್ಕಳೂ ಬ್ರಾಹ್ಮ ಎಂಬ ಒಬ್ಬ ಮಗಳನ್ನೂ ಪಡೆಯುತ್ತಾರೆ. ಅದೇ ರೀತಿ ಸುನಂದೆಯ ಗರ್ಭದಿಂದ ಬಾಹುಬಲಿ ಮತ್ತು ಸುಂದರಿ ಎಂಬ ಇಬ್ಬರು ಮಕ್ಕಳನ್ನು ಪಡೆಯುತ್ತಾರೆ. ಋಷಭನಾಥರಿಗೆ ವೈರಾಗ್ಯ ಪ್ರಾಪ್ತಿಯಾದಾಗ ಹಿರಿಯ ಮಗನಾದ ಭರತನನ್ನು ಅಯೋಧ್ಯೆಯ ಅಧಿರಾಜನನ್ನಾಗಿ ಮಾಡಲಾಗುತ್ತೆ. ಬಾಹುಬಲಿಯನ್ನು ಪೌದನಪುರದ ಯುವರಾಜನನ್ನಾಗಿಯೂ, ಇತರಮಕ್ಕಳನ್ನು ಉಳಿದ ರಾಜ್ಯಗಳಿಗೆ ಒಡೆಯರನ್ನಾಗಿಯೂ ಮಾಡಿ ತಪಸ್ಸಿಗೆ ಹೋಗುತ್ತಾರೆ.
ತಂದೆ ತಪ್ಪಸ್ಸಿಗೆ ಹೋದ ಹಲವು ವರ್ಷಗಳ ನಂತರ ಚಕ್ರವರ್ತಿ ಭರತನಿಗೆ ಏಕಕಾಲದಲ್ಲಿ ಮೂರು ಸಿಹಿ ಸುದ್ದಿಗಳು ಸಿಗುತ್ತವೆ. 1.ಋಷಭನಾಥರಿಗೆ ಕೇವಲ ಜ್ಞಾನಪ್ರಾಪ್ತಿಯಾದದ್ದು 2. ಶಸ್ತ್ರಾಗಾರದಲ್ಲಿ ಚಕ್ರರತ್ನ ಉದ್ಭವಿಸಿದ್ದು 3. ಗಂಡು ಮಗುವಾದದ್ದು. ಇಷೆಲ್ಲಾ ಖುಷಿಯ ಸುದ್ದಿ ಕೇಳಿ ಭರತನಿಗೆ ಗರ್ವ ಹೆಚ್ಚಿತ್ತು. ಹೀಗಾಗಿ ಚಕ್ರ ರತ್ನದ ಸಹಾಯದಿಂದ ಆರು ಖಂಡಗಳನ್ನು ಜಯಿಸುತ್ತಾನೆ. ಬಳಿಕ ಅಯೋಧ್ಯೆಗೆ ಬರುತ್ತಾನೆ. ಆದರೆ ಚಕ್ರರತ್ನ ಮಾತ್ರ ಅಯೋಧ್ಯೆ ಪ್ರವೇಶ ಮಾಡದೆ ನಿಲ್ಲುತ್ತೆ. ಹೊರಗಿನ ಶತ್ರುಗಳು ನಿನಗೆ ಮಣಿದಿದ್ದಾರೆ. ಆದರೆ ಒಳಗಿನ ನಿನ್ನ ತಮ್ಮಂದಿರು ಮಣಿಯಲಿಲ್ಲ. ತಮ್ಮಂದಿರು ತನ್ನ ಮುಂದೆ ಸೋಲದೆ ತಾನು ಚಕ್ರವರ್ತಿಯಾಗಲು ಸಾಧ್ಯವಿಲ್ಲ ಎನ್ನುವುದು ಭರತನ ಅರಿವಿಗೆ ಬರುತ್ತದೆ.
ಇದನ್ನೂ ಓದಿ: ದೈವಾರಾಧನೆ ಎಂಬ ವಿಸ್ಮಯ ಜಗತ್ತಿನ ಒಂದು ನೋಟ; ಯಾರು ಈ ದೈವಗಳು?
ಆಗ ತಮ್ಮಂದಿರಿಗೆ ಯುದ್ಧದ ಸಂದೇಶವನ್ನು ಕಳುಹಿಸುತ್ತಾನೆ. ಆದರೆ ಬಾಹುಬಲಿ ಹೊರತು ಪಡಿಸಿ ಇತರ ಸಹೋದರರೆಲ್ಲಾ ಋಷಭನಾಥನಲ್ಲಿಗೆ ತೆರಳಿ ದೀಕ್ಷೆ ಪಡೆಯುತ್ತಾರೆ. ಬಾಹುಬಲಿ ಮಾತ್ರ ಯುದ್ಧಕ್ಕೆ ನಿಲ್ಲುತ್ತಾನೆ. ಅಣ್ಣ-ತಮ್ಮನ ಯುದ್ಧದಿಂದ ಸಾವಿರಾರು ಸೈನಿಕರು ಸಾಯಬಾರದು ಎಂಬ ಕಾರಣಕ್ಕೆ ಅಣ್ಣ-ತಮ್ಮನ ನಡುವೆ ಮಾತ್ರ ಯುದ್ಧ ನಡೆಯುತ್ತೆ. ಮಲ್ಲಯುದ್ಧ, ದೃಷ್ಟಿಯುದ್ಧ, ಜಲಯುದ್ಧ ಸೇರಿದಂತೆ ಮೂರು ಧರ್ಮಯುದ್ಧಗಳಲ್ಲಿಯೂ ಬಾಹುಬಲಿ ಗೆಲ್ಲುತ್ತಾನೆ.
ಅಂತಿಮವಾಗಿ ತನ್ನ ಅಣ್ಣನನ್ನು ಮೇಲೆತ್ತಿ ಗಿರಗಿರನೆ ತಿರುಗಿಸಿ ನೆಲಕ್ಕಪ್ಪಳಿಸಲು ಮುಂದಾಗುತ್ತಿದ್ದಂತೆ ಆತನ ಮನಸ್ಸಿನಲ್ಲಿ ಪಶ್ಚಾತ್ತಾಪ ಕಾಡಲು ಆರಂಭಿಸುತ್ತೆ. ಅಣ್ಣನನ್ನ ಕೆಳಗಿಳಿಸಿ ನೋಡುತ್ತಾನೆ. ಎಲ್ಲವನ್ನೂ ಸೋತು ನಿಂತ ಅಣ್ಣನ ಮುಖ ಮನಸನ್ನು ಹಿಂಡಿ ಹಿಪ್ಪೆ ಮಾಡಿದಂತಾಗುತ್ತೆ. ಇದೇ ವೇಳೆ ಭರತ ತನ್ನ ತಮ್ಮ ನೆಡೆಗೆ ತನ್ನ ಚಕ್ರರತ್ನವನ್ನು ಬಿಡುತ್ತಾನೆ. ಆಗ ಚಕ್ರರತ್ನವು ಬಾಹುಬಲಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಬಂದು ನಿಲ್ಲುತ್ತದೆ. ಕೊನೆಗೆ ಬಾಹುಬಲಿ ತಾನು ಗೆದ್ದ ರಾಜ್ಯವನ್ನು ಅಣ್ಣನಿಗೆ ಹಿಂದಿರುಗಿಸುತ್ತಾನೆ.
ರಾಜ್ಯಲೋಭ, ಅಧಿಕಾರ ಮೋಹ ಮನುಷ್ಯನನ್ನು ಎಂಥ ಕೀಳುಮಟ್ಟಕ್ಕೆ ಇಳಿಸುತ್ತದೆ ಎಂದು ಭಾವಿಸಿದ ಬಾಹುಬಲಿ ವಿರಕ್ತನಾಗಿ ತಾನು ಗೆದ್ದ ಸಕಲ ಸಂಪತ್ತನ್ನೂ ಅಣ್ಣ ಭರತನಿಗೆ ಒಪ್ಪಿಸಿ ತಪಸ್ಸಿಗೆ ನಿಲ್ಲುತ್ತಾನೆ. ಆದರೆ ಅಣ್ಣ ಭರತನ ನೆಲದಲ್ಲಿ ನಿಂತಿರುವೆ ಎನ್ನುವ ಪಾಪ ಕಾಡಿ ಅಲ್ಲಿಂದಲೂ ಓಡುತ್ತಾನೆ. ತಾನು ತೊಟ್ಟ ಬಟ್ಟೆ, ಆಭರಣವನ್ನೆಲ್ಲ ಕಿತ್ತೆಸೆದು ದಗಂಬರ ಸನ್ಯಾಸಿಯಾಗುತ್ತಾನೆ.
ಶಾಂತ ಮುಖ ಭಾವ, ಅರೆ ತೆರೆದ ಕಣ್ಣುಗಳು, ನೀಳವಾದ ಕೈ ಬೆರಳುಗಳು, ನಿಜವೇನೋ ಅನ್ನಿಸುವಂತೆ ಕೆತ್ತಿರುವ ಕಾಲಿನ ಬೆರಳುಗಳು, ಗುಂಗುರು ಕೂದಲು, ನೀಳ ನಾಸಿಕ, ಹುತ್ತದ ಮಧ್ಯೆ ನಿಂತ ಭಂಗಿ, ಮೈ ತುಂಬ ಹಬ್ಬಿರುವ ಬಳ್ಳಿಯ ಚಿತ್ರಗಳು. ಒಂದು ಕ್ಷಣ ತಲೆ ಎತ್ತಿ ನಮಸ್ಕರಿಸಬೇಕು ಎನಿಸುವ ಬೃಹತ್ ಆಕೃತಿ. ಇದು ಶ್ರವಣಬೆಳಗೊಳದಲ್ಲಿರುವ 57 ಅಡಿ ಎತ್ತರದ ಗೊಮಟೇಶ್ವರ ಪ್ರತಿಮೆ. ಇದನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ ಎಂಬುವುದು ವಿಶೇಷ. ಅಲ್ಲದೆ ಈ ಪ್ರತಿಮೆಯ ಪಾದದ ಎತ್ತರವೇ 2.8 ಅಡಿ ಇದೆ. ವಿಶ್ವದ ಅತಿ ಎತ್ತರದ ನಿಂತಿರುವ ಪ್ರತಿಮೆಗಳಲ್ಲಿ ಇದೂ ಬಂದು.
ಗೊಮಟೇಶ್ವರ ಪ್ರತಿಮೆಯನ್ನು ಗಂಗಾ ರಾಜವಂಶದ ಆಳ್ವಿಕೆಯಲ್ಲಿ ಮಂತ್ರಿಯಾಗಿದ್ದ, ಜೈನ ಧರ್ಮ ಹಾಗೂ ಗೊಮ್ಮಟೇಶ್ವರನ ಆರಾಧಕನಾಗಿದ್ದ ಚಾವುಂಡರಾಯರು ಕ್ರಿ.ಶ 10 ನೇ ಶತಮಾನದಲ್ಲಿ ನಿರ್ಮಿಸಿದರು ಎನ್ನಲಾಗುತ್ತೆ. ಹಾಘೂ ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನಾದ ಅರಿಷ್ಟ ನೇಮಿ ಎಂಬ ಶಿಲ್ಪಿ ಗೊಮಟೇಶ್ವರ ವಿಗ್ರಹವನ್ನು ಕೆತ್ತಿದನೆಂದು ಹೇಳಲಾಗುತ್ತೆ. ಇನ್ನು ಈ ಗೊಮಟೇಶ್ವರ ಪ್ರತಿಮೆ ಇರುವುದು ವಿಂಧ್ಯಗಿರಿ ಬೆಟ್ಟದ ತುದಿಯಲ್ಲಿ. ವಿಂಧ್ಯಗಿರಿ ಎದುರು ಚಂದ್ರಗಿರಿ ಬೆಟ್ಟವಿದೆ. ಚಂದ್ರಗಿರಿಯ ಮೇಲ್ಭಾಗದಲ್ಲಿ ಸುಮಾರು 14 ವಿವಿಧ ಜೈನ ಬಸದಿಗಳನ್ನು ಕಾಣಬಹುದು. ಒದೆಗಲ್ಲ ಬಸದಿ, ತ್ಯಾಗದ ಕಂಬ, ಗೊಮ್ಮಟೇಶ್ವರ, ಭರತೇಶ್ವರರ ವಿಗ್ರಹ, ಶಿಲಾ ಶಾಸನಗಳು, ಬಂಡೆಯ ಮೇಲೆ ಕೆತ್ತಿರುವ ತೀರ್ಥಂಕರರು, ಗುಳ್ಳೆ ಕಾಯಿ ಅಜ್ಜಿಯ ಮಂಟಪ, ವಿಗ್ರಹಗಳು ಕಣ್ಮನ ಸೊಳೆಯುತ್ತವೆ.
ಚಾವುಂಡರಾಯ ಸ್ವತಃ ಸಾಹಿತಿ ಆಗಿದ್ದ. ಕವಿಗಳ ಆಶ್ರಯದಾತನೂ, ಬೆಳಗೊಳದ ಬೃಹನ್ಮೂರ್ತಿಯನ್ನು ಕಡೆಸಿದ ಕೀರ್ತಿಗೂ ಭಾಜನನಾಗಿದ್ದ. ಆತ ಜೈನಪುರಾಣದ 63 ಜನ ಮಹಾಪುರುಷರ ಚರಿತೆಯನ್ನು ಅ ಕನ್ನಡ ಭಾಷೆಯಲ್ಲಿ ಬರೆದ ಮೊದಲ ಸಾಹಿತಿ. ‘ತ್ರಿಷಷ್ಟಿ ಲಕ್ಷಣ ಮಹಾಪುರಾಣ’ (ಕ್ರಿ.ಶ. 987) ಈತನ ಕೃತಿ. ಇದೇ ಚಾವುಂಡರಾಯ ಬೆಳಗೊಳದ ಇಂದ್ರಬೆಟ್ಟದ ಮೇಲೆ 58 ಅಡಿಗಳ ಎತ್ತರದ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ್ದು ಚಾವುಂಡರಾಯನ ತಾಯಿ ಕಾಳಲಾದೇವಿ ಅವರು ಭರತನಿಂದ ಪೌದನಪುರದಲ್ಲಿ ಸ್ಥಾಪಿತವಾಗಿದ್ದ ಬಾಹುಬಲಿಯ ದರ್ಶನವನ್ನು ಮಾಡಬೇಕು ಎಂಬ ಆಸೆ ಹೊಂದಿದ್ದರು. ಹೀಗಾಗಿ ಅತ್ತ ಪ್ರಯಾಣ ಹೊರಟು ಶ್ರವಣಬೆಳಗೊಳದಲ್ಲಿ ಮಾರ್ಗಮಧ್ಯ ತಂಗಿದ್ದರು. ಆದರೆ ಪೌದನಪುರದ ಬಾಹುಬಲಿ ಅರಣ್ಯಾವೃತನಾಗಿ ಕುಕ್ಕುಟಸರ್ಪಗಳಿಂದ ಸುತ್ತುವರೆಯಲ್ಪಟ್ಟು ಅಲ್ಲಿಗೆ ಹೋಗಲು, ನೋಡಲು ಅಸಾಧ್ಯ ಎಂದು ಆತ್ಮಜನರಿಂದ ತಿಳಿಯುತ್ತದೆ. ಆಗ ಚಾವುಂಡರಾಯ ತನ್ನ ತಾಯಿಯ ಅಪೇಕ್ಷೆಯನ್ನು ನೆರವೇರಿಸುವುದಕ್ಕಾಗಿ ಬೆಳಗೊಳದಲ್ಲಿಯೇ ಈ ಬೃಹನ್ ಮೂರ್ತಿಯನ್ನು ಮಾಡಿಸಿದನೆಂದು ಹೇಳಲಾಗುತ್ತೆ.
58 ಅಡಿ ಎತ್ತರ, ಪಾದದ ಬಳಿ ಸುಮಾರು 40 ಅಡಿ ಅಗಲ ಮತ್ತು ಸುಮಾರು 1,000 ಟನ್ ತೂಕವುಳ್ಳ ಗೊಮ್ಮಟೇಶ್ವರನನ್ನು ವಿಂಧ್ಯಾಗಿರಿ ಬೆಟ್ಟದ ಮೇಲೆ ನಿಲ್ಲಿಸಿದ್ದು ಹೇಗೆ ಎಂಬ ಬಗ್ಗೆ ಹಲವು ಚರ್ಚೆಗಳಿವೆ. ಈ ಪೈಕಿ ಒಂದು ಗೊಮ್ಮಟೇಶ್ವರನನ್ನು ಅಲ್ಲೇ ಏಕ ಶಿಲೆಯಿಂದ ಕೆತ್ತಲಾಗಿದೆ. ಆದರೆ ಇಲ್ಲಿ ಅಚ್ಚರಿ ಎನಿಸುವ ವಿಚಾರ ಎಂದರೆ ಬಾಹುಬಲಿಯನ್ನು ಕೆತ್ತಲು ಬಳಸಿರುವ ಶಿಲೆಯು ಬಿಳಿಯದ್ದಾಗಿದೆ. ವಿಂಧ್ಯಗಿರಿ ಮತ್ತು ಅದರ ಸುತ್ತಮುತ್ತಲೂ ಇರುವ ಎಲ್ಲಾ ಬೆಟ್ಟಗಳಲ್ಲಿ ಕಪ್ಪು ಶಿಲೆಗಳು ಮಾತ್ರ ಕಂಡುಬಂದಿವೆ.
ಒಮ್ಮೆ ಚಾವುಂಡರಾಯನಿಗೆ ಕನಸಿನಲ್ಲಿ ಬಂದ ಯಕ್ಷಿಣಿ, ಚಿಕ್ಕ ಬೆಟ್ಟದ ಮೇಲೆ ನಿಂತು ದೊಡ್ಡ ಬೆಟ್ಟಕ್ಕೆ ಬಾಣವನ್ನು ಬಿಡು ಅಲ್ಲಿ ನಿಮಗೆ ಬಾಹುಬಲಿಯ ದರ್ಶನವಾಗುತ್ತದೆ ಎಂದು ಹೇಳುತ್ತಾಳೆ. ಅದರಂತೆ ಚಾವುಂಡರಾಯನು ಒಂದು ಬಾಣವನ್ನು ಬಿಡುತ್ತಾನೆ. ಆಗ ಅಲ್ಲಿದ್ದ ಶಿಲೆಯ ಮೇಲೆ ಬಾಹುಬಲಿಯ ಸುಂದರವಾದ ಚಿತ್ರವು ಮೂಡಿತು. ನಂತರ ಚಾವುಂಡರಾಯನು ಮಹಾ ಶಿಲ್ಪಿಯನ್ನು ಕರೆಸಿ ಅದೇ ಬಂಡೆಯಿಂದ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿದ ಎನ್ನುವ ಕಥೆಯನ್ನು ಗೊಮ್ಮಟೇಶ್ವರನ ಸಾನಿಧ್ಯದಲ್ಲೇ ಬರೆದಿದ್ದಾರೆ. ಈ ಗೊಮ್ಮಟೇಶ್ವರ ವಿಗ್ರಹ 20 ಕಿ.ಮೀ ದೂರದಿಂದಲೂ ಕಾಣುತ್ತದೆ.
ಇನ್ನು ಚಾವುಂಡರಾಯನು ಶಿಲ್ಪವನ್ನು ಕೆತ್ತಿಸಿದ ನಂತರ ಅದಕ್ಕೆ ಮಹಾಮಸ್ತಾಕಾಭಿಷೇಕ ಮಾಡಲು ಕುಂಭಗಟ್ಟಲೆ ಕ್ಷೀರವನು ಶೇಖರಿಸಿದ್ದ. ಅಭಿಷೇಕ ಪ್ರಾರಂಭ ಮಾಡಲು ಕುಂಭಗಳನ್ನೆತ್ತಿ ಗೊಮ್ಮಟನ ನೆತ್ತಿಯ ಮೇಲೆ ಸುರಿಯುತ್ತಾನೆ. ತಲೆಯ ಮೇಲಿನಿಂದ 1008 ಕಲಶಗಳಿಂದ ನೀರು, ಹಾಲು, ಕಬ್ಬಿನ ಹಾಲು, ಗಂಧ ಮತ್ತು ಕೇಸರಿಗಳನ್ನು ಅಭಿಷೇಕ ಮಾಡಿದರೂ ತಲೆಯಿಂದ ಪಾದದವರೆಗೂ ಪೂರ್ಣಾಭಿಷೇಕವಾಗಲ್ಲ.
ಇದರಿಂದ ವಿಚಲಿತನಾದ ಚಾವುಂಡರಾಯನು ಅಭಿಷೇಕ ಪೂರೈಸುವ ವಿಧಾನಕ್ಕಾಗಿ ಚಿಂತಿಸತೊಡಗಿದ. ಆಗ ಚಿಕ್ಕಗುಳ್ಳೆ ಕಾಯಿ ತುಂಬ ಹಾಲು ತುಂಬಿಕೊಂಡು ಬಬ್ಬ ಮುದುಕಿಯು ಬಂದು ಅವನ ಮುಂದೆ ನಿಂತುಕೊಳ್ಳುತ್ತಾರೆ. ಗೊಮ್ಮಟನ ಮಸ್ತಕಾಭಿಷೇಕವನ್ನು ತಾನು ಪೂರ್ಣಗೊಳಿಸಿ ಕೊಡುವುದಾಗಿ ಹೇಳುತ್ತಾಳೆ. ಇದು ನಂಬಲು ಅಸಾಧ್ಯವಾದರೂ ಬೇರೆ ದಾರಿ ಇಲ್ಲದೆ ಚಾವುಂಡರಾಯನು ಅಜ್ಜಿಗೆ ಒಂದು ಅವಕಾಶ ನೀಡುತ್ತಾನೆ.
ಚಾವುಂಡರಾಯನ ಒಪ್ಪಿಗೆ ಮೇರೆಗೆ ಅಜ್ಜಿ ತಾನು ತಂದಿದ್ದ ಗುಳ್ಳೆ ಕಾಯಿಯನ್ನು ಎತ್ತಿಕೊಂಡು ಅದರಲ್ಲಿದ್ದ ಹಾಲನ್ನು ಗೊಮ್ಮಟನ ಮಸ್ತಕದ ಮೇಲೆ ಸುರಿಯುತ್ತಾಳೆ. ಹನಿಹನಿಯಾಗಿ ತೊಟ್ಟಿಕ್ಕಿದ ಹಾಲು ತೊರೆಯಾಗಿ ಹರಿದು ಗೊಮ್ಮಟನ ಪಾದ ಸೇರುತ್ತೆ. ಮೂರ್ತಿಯ ಇಡೀ ದೇಹದ ಮೇಲೆ ಹರಿದು ಅಭಿಷೇಕ ಪೂರ್ಣಗೊಳುತ್ತೆ. ಇದರಿಂದ ಆಶ್ಚರ್ಯ ಚಕಿತನಾದ ಚಾವುಂಡರಾಯ ಅಜ್ಜಿಯ ಮೇಲೆ ಸಂಶಯಪಟ್ಟಿದಕ್ಕೆ ಪ್ರಾಯಶ್ಚಿತ್ತ ಬೇಡುತ್ತಾನೆ. ಬಳಿಕ ಆ ಅಜ್ಜಿ ಬೇರಾರೂ ಅಲ್ಲದೆ ಯಕ್ಷಿಪದ್ಮಾವತಿಯೇ ಆ ರೂಪದಲ್ಲಿ ಕಾಣಿಸಿಕೊಂಡು, ತನ್ನ ಸಮಸ್ಯೆಯನ್ನು ನಿವಾರಿಸಿದಳೆಂದು ಚಾವುಂಡರಾಯ ಕಂಡುಕೊಳ್ಳುತ್ತಾನೆ. ಗುಳ್ಳೆ ಕಾಯಿ ಅಜ್ಜಿಯ ವಿಗ್ರಹವನ್ನು ಸಹ ಬಾಹುಬಲಿಯ ವಿಗ್ರಹದ ಮುಂದೆ ನಾವು ನೋಡಬಹುದು.
ಗೊಮ್ಮಟೇಶ್ವರನಿಗೆ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ, ಮಹಾ ಮಜ್ಜನ ಉತ್ಸವ ನಡೆಯುತ್ತದೆ. ನೂರಾರು ಕೊಡಗಳಲ್ಲಿ ಎಳನೀರು, ಅರಿಶಿನದ ಮುದ್ದೆ, ಕುಂಕುಮ, ಕಬ್ಬಿನ ಹಾಲು, ಹಾಲು, ಅಕ್ಕಿಹಿಟ್ಟು, ಮೂಲಿಕೆಗಳಿಂದ ಮಾಡಿದ ಕಷಾಯ, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರಿ, ಹೂವುಗಳು ಮತ್ತು ಬೆಲೆಬಾಳುವ ಹರಳುಗಳನ್ನು ವಿಗ್ರಹದ ಮೇಲಿನಿಂದ ಹಾಕಿ ಅಭಿಷೇಕ ಮಾಡಲಾಗುತ್ತೆ. ಅಭಿಷೇಕ ಮಾಡಲು ಅರ್ಚಕರುಗಳು ಮೇಲೆ ಹತ್ತುತ್ತಾರೆ. ಹೆಲಿಕಾಪ್ಟರ್ ನಿಂದ ಹೂಮಳೆ ಸುರಿಸುವ ಕ್ಷಣಗಳು ಅದ್ಭುತವಾಗಿರುತ್ತದೆ. ಇದನ್ನು ನೋಡಲು ದೇಶ-ವಿದೇಶದಿಂದ ಲಕ್ಷಾಂತರ ಮಂದಿ ಶ್ರವಣಬೆಳಗೊಳಕ್ಕೆ ಆಗಮಿಸುತ್ತಾರೆ. ಕಳೆದ ಬಾರಿ 2018ರಲ್ಲಿ ನಡೆದಿತ್ತು. ಈಗ 2030ರಲ್ಲಿ ನಡೆಯಲಿದೆ.
In images : The #Mahamastakabhisheka of #Bahubali #Gommateshwara, a ancient ritual that happens once in 12 years, began at #Shravenabelagola today. This is the 88th in the series which started in Circa 981 AD pic.twitter.com/Ihi7byYmCe
— PIB in Karnataka (@PIBBengaluru) February 17, 2018
ಕರ್ನಾಟಕದಲ್ಲಿ ಒಟ್ಟು 5 ಬಾಹುಬಲಿಯ ಪ್ರತಿಮೆಗಳಿವೆ. ಒಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ 42 ಅಡಿ ಎತ್ತರದ ಗೊಮ್ಮಟೇಶ್ವರನ ಪ್ರತಿಮೆ. ಇನ್ನೊಂದು ಧರ್ಮಸ್ಥಳದಲ್ಲಿರುವ 39 ಅಡಿ ಎತ್ತರದ ಏಕಶಿಲಾ ಪ್ರತಿಮೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ 35 ಅಡಿ ಎತ್ತರದ ಬಾಹುಬಲಿಯ ಏಕಶಿಲಾ ಪ್ರತಿಮೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೊಮ್ಮಟಗಿರಿಯಲ್ಲಿ 20 ಅಡಿ ಎತ್ತರದ ಗೊಮ್ಮಟೇಶ್ವರನ ಏಕಶಿಲಾ ವಿಗ್ರಹವನ್ನು ನಾವು ಕಾಣಬಹುದು.
ಪಂಪ, ರತ್ನ, ಕುವೆಂಪು, ಗೋವಿಂದ ಪೈ ಸೇರಿದಂತೆ ನೂರಾರು ಕವಿಗಳು, ವಿದ್ವಾಂಸರು, ಇತಿಹಾಸಗಾರರು ಬಾಹುಬಲಿ ಬಗ್ಗೆ ಸಾಕಷ್ಟು ಬರೆದಿದ್ದಾರೆ. ನೂರಾರು ಶಾಸನಗಳಲ್ಲಿ ಗೊಮ್ಮಟೇಶ್ವರನ ಬಲಿದಾನದ ಬಗ್ಗೆ ವಿವರಣೆಗಳನ್ನು ನಾವು ಕಾಣಬಹುದು. ಚಾವುಂಡರಾಯನಿಗೆ ಗೊಮ್ಮಟನೆಂಬ ಬಿರುದಿದ್ದು ಬಾಹುಬಲಿಯನ್ನು ಆತ ಕೆತ್ತಿಸಿದ ಎಂಬ ಕಾರಣಕ್ಕೆ ಬಾಹುಬಲಿ ವಿಗ್ರಹಕ್ಕೆ ಗೊಮ್ಮಟೇಶ್ವರ ಎಂಬ ಹೆಸರು ಬಂತು ಎಂದು ಕೆಲ ಸಂಶೋಧನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಪ್ರೀಮಿಯಂ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Sat, 20 July 24