ದೈವಾರಾಧನೆ ಎಂಬ ವಿಸ್ಮಯ ಜಗತ್ತಿನ ಒಂದು ನೋಟ; ಯಾರು ಈ ದೈವಗಳು?
Daivaradhane: ಓ.... ದೈವ ಬೇಕಲ್ಲ ನಿನಗೆ, ಪಂಜುರ್ಲಿ ದೈವ ಬೇಕಲ್ಲ ನಿನಗೆ ಎಂದು ಕಾಂತಾರ ಸಿನಿಮಾದಲ್ಲಿ ದೈವ ನರ್ತಕ ರಾಜನನ್ನು ಕೇಳುವ ಪರಿಯ ನೋಡಿದ ಎಲ್ಲರೂ ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಇದು ಕರಾವಳಿ ಜನರನ್ನು ಹೊರತು ಪಡಿಸಿ ಬೇರೆಲ್ಲರಿಗೂ ದೈವದ ಬಗ್ಗೆ ಕುತೂಹಲ ಮೂಡುವಂತೆ ಮಾಡಿತ್ತು. ದೈವಾರಾಧನೆ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಆಧ್ಯಾತ್ಮಿಕ ನೃತ್ಯ ಮತ್ತು ಪೂಜಾ ವಿಧಾನ. ಕನ್ನಡದ ಕಾಂತರಾ ಸಿನಿಮಾದ ನಂತರ ಭೂತ ಕೋಲ, ಧೈವಾರಾಧನೆ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ದೈವಾರಾಧನೆ ಹುಟ್ಟಿ ಬಂದದ್ದು ಹೇಗೆ? ತುಳು ನಾಡಿದ ಜನ ದೈವಗಳಿಗೆ ಇಷ್ಟೊಂದು ಮಹತ್ವ ನೀಡುವುದೇಕೆ? ಇಲ್ಲಿದೆ ಮಾಹಿತಿ.
ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈ ದಕ್ಷಿಣಮ್| ಈ ಸಾಲು ವಿವರಿಸುವಂತೆ, ದಕ್ಷಿಣ ಸಮುದ್ರದ ಉತ್ತರಕ್ಕೆ ಹಾಗೂ ಹಿಮವತ್ ಪರ್ವತದ ದಕ್ಷಿಣಕ್ಕೆ ಇರುವ ಭಾರತ ದೇಶದ ಬೇರೆಲ್ಲ ಪ್ರಾಂತ್ಯಗಳಿಗಿಂತ ನಮ್ಮ ತುಳುನಾಡು ಎಲ್ಲಾ ರೀತಿಯಲ್ಲೂ ವಿಭಿನ್ನ. ಇಲ್ಲಿನ ಜನರಲ್ಲಿ ದೇವರ ಆರಾಧನೆ ಜೊತೆಗೆ ದೈವಾರಾಧನೆ, ಯಕ್ಷಗಾನದಂತಹ ಸಂಸ್ಕೃತಿ, ಆಚರಣೆಗಳು ಹುಟ್ಟಿನಿಂದಲೇ ಮೈಗಂಟಿಕೊಂಡು ಬಂದಿವೆ. ಅದರಲ್ಲೂ ಇಲ್ಲಿನ ಜನರನ್ನು ಮಾತನಾಡಿಸಿದರೆ ಸಾಕು, ಅವರ ಬಾಯಲ್ಲಿ ಬರುವ ಉತ್ತರ ಒಂದೇ. ಎಲ್ಲವೂ ನಾವು ನಂಬಿದ ಭೂತ, ನಾಗ, ದೈವದೇವರುಗಳ ದಯೆ ಎನ್ನುತ್ತಾರೆ. ದೈವಾರಾಧನೆ ಇಲ್ಲಿನ ಜನರ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ದೈವಗಳನ್ನು ತುಳುನಾಡಿನ ರಕ್ಷಕರು ಎಂದು ಭಾವಿಸಲಾಗಿದೆ.
ದೈವಾರಾಧನೆ ಸ್ವರೂಪ ಕಳೆದುಕೊಳ್ಳುತ್ತಿದೆಯಾ?
ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಏರಿಸಿದ್ದ ಕಾಂತಾರ ಸಿನಿಮಾದ ನಂತರ ದೈವಾರಾಧನೆಗೆ ಮತ್ತಷ್ಟು ಪುಷ್ಠಿ ಸಿಕ್ಕಿತ್ತು. ದೈವಗಳ ಮೇಲೆ ಜನ ಆಸಕ್ತಿ ಬೆಳೆಸಿಕೊಂಡರು. ರೀಲ್ಸ್, ನಾಟಕ, ಧಾರವಾಹಿಗಳಲೆಲ್ಲ ದೈವನರ್ತನದ ಚಿತ್ರೀಕರಣ ನಡೆಯಲು ಶುರುವಾಯ್ತು. ಇದೇ ವೇಳೆ ದೈವಾರಾಧನೆಯ ಬಗ್ಗೆ ಒಂದಷ್ಟು ವಾದ, ಪ್ರತಿವಾದಗಳು ಕೂಡ ಕೇಳಿ ಬಂದವು. ನಮ್ಮ ತುಳುವ ಆರಾಧನೆ ಪ್ರಕೃತಿ ಕೇಂದ್ರಿತ, ಅವೈದಿಕ ಆಚರಣೆ, ನಮ್ಮ ಆರಾಧನೆ ಜಾನಪದ, ಪುರೋಹಿತಶಾಹಿಗಳು ಈ ಆರಾಧನಾ ಕ್ರಮದ ದಿಕ್ಕು ತಪ್ಪಿಸಿ ವೈದಿಕ ಪದ್ಧತಿಯನ್ನು ಇದರ ಮೇಲೆ ಹೇರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ದೈವಾರಾಧನೆಯನ್ನು ಇಷ್ಟ ಬಂದಂಗೆ ಯಾರು ಬೇಕಾದ್ರು ನಟಿಸುವಂತಿಲ್ಲ. ಅದಕ್ಕೆ ಆದರದೇ ಆದ ಕೆಲವು ಕ್ರಮಗಳನ್ನು ಪಾಲಿಸಬೇಕು ಎಂದು ದೈವಾರಾಧಕರು ವಾದಿಸಿದರು.
ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಈ ಆರಾಧನೆ ಕಾಲದಿಂದ ಕಾಲಕ್ಕೆ ಸರ್ವೇಸಹಜವಾದ ಅಲ್ಪಸ್ವಲ್ಪ ಬದಲಾವಣೆಗಳನ್ನು ಕಂಡಿರಬಹುದಾದರೂ ಆರಾಧನೆಯ ಮೂಲ ತತ್ವಕ್ಕೆ ಕುಂದಾಗದಂತೆ ಹಿರಿಯರು ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ಅದರ ಪಾವಿತ್ರ್ಯತೆಯನ್ನು ನಾವು ಹಾಳು ಮಾಡಬಾರದು ಎಂದು ಅನೇಕರು ವಾದಿಸಿದ್ದಾರೆ.
ದೈವಾರಾಧನೆ ಒಂದು ಪಾರಮಾರ್ಥಿಕ ವಿಚಾರ. ಪಾರಮಾರ್ಥಿಕ ವಿಚಾರವನ್ನು ತಿಳಿಯಲು ಹೊರಟಾಗ ಅದನ್ನು ಸಾಮಾಜಿಕ, ರಾಜಕೀಯ, ವರ್ಗಸಂಘರ್ಷದಂತಹ ಲೌಕಿಕ ದೃಷ್ಟಿಕೋನದಲ್ಲಿ ಇದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವುದು ಮೂರ್ಖತನ. ಈ ರೀತಿ ನೋಡಿದರೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಆರಾಧನೆಗಳನ್ನು ಶಾಸ್ತ್ರಗಳ ತಳಹದಿಯ ಮೇಲೆ ನೋಡಿದಾಗ ಮಾತ್ರ ಅದು ತನ್ನ ಒಳಗನ್ನು ತೋರ್ಪಡಿಸುತ್ತದೆ ಎಂದು ದೈವಾರಾಧನೆ ಬಗ್ಗೆ ಬಹಳಷ್ಟು ತಿಳಿದುಕೊಂಡಿರುವ ಶ್ರೀವೆಂಕಟೇಶ್ ಕರ್ಕೇರರು ತಮ್ಮ ಪ್ರಜ್ಞಾನಂ ಬ್ರಹ್ಮ ಎಂಬ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ಇವರ ಪ್ರಕಾರ ದೈವಾರಾಧನೆ ತುಳುವರನ್ನು ಜಾತಿ ಪಂಗಡಗಳ ಭೇದ ಮರೆಸಿ ಒಂದಾಗಿ ಇರಿಸಿರುವ ಅಂಟು. ಇಲ್ಲಿ ಪ್ರತಿಯೊಂದು ಕುಟುಂಬಕ್ಕೂ ಅವರದ್ದೇ ಆದ ದೈವಗಳಿರುತ್ತವೆ. ಆದರೂ ತುಳುವರು ತಮ್ಮ ಊರಿನ (ಜಾಗದ/ ಗ್ರಾಮದ/ ಮಾಗಣೆಯ/ ಸೀಮೆಯ) ದೈವಗಳಿಗೂ ಅಷ್ಟೇ ಶ್ರದ್ಧಾ ಭಕ್ತಿಗಳಿಂದ ನಡೆದುಕೊಂಡು ಬರುತ್ತಾರೆ. ದೈವಗಳ ಯಾವುದೇ ಕೆಲಸವಿದ್ದರೂ ಎಲ್ಲರ ಒಪ್ಪಿಗೆ, ಸಹಕಾರ ಅನಿವಾರ್ಯ. ಈ ಮೂಲಕ ದೈವಗಳು ಎಲ್ಲರನ್ನೂ ಒಟ್ಟುಗೂಡಿಸಿವೆ.
ತುಳು ನಾಡಿನಲ್ಲಿ ದೈವಾರಾಧನೆಗೇಕೆ ಹೆಚ್ಚು ಪ್ರಾಮುಖ್ಯತೆ?
ದೈವಾರಾಧನೆ ಎಂಬುವುದು ತುಳುನಾಡಿದ ಮೂಲ ಆರಾಧನ ಪರಂಪರೆ. ಯಾವ ರೀತಿ ವೇದಗಳು, ಇತರೆ ಆರಾಧನೆಗಳು ಹುಟ್ಟುಕೊಂಡವೋ ಅದೇ ರೀತಿ ದೈವಾರಾಧನೆ ಹುಟ್ಟಿಕೊಂಡಿದೆ. ಇದು ಮನುಷ್ಯನ ದೈಹಿಕ ಹಾಗು ಮಾನಸಿಕ ವ್ಯಾದಿಗೆ ಮೂಲ ತುಳುವ ಕಂಡುಕೊಂಡ ವ್ಯವಸ್ಥೆಯೇ ದೈವಾರಾಧನೆ. ಪ್ರಕೃತಿಯಲ್ಲಿನ 108 ವಿಧದ ರೋಗಗಳಿಗೆ ಸಾವಿರದ ಎಂಟು ನೂರಕ್ಕೂ ಹೆಚ್ಚು ಗಿಡ ಮೂಲಿಕೆಗಳನ್ನು ಕಂಡು ಕೊಂಡು ಅದನ್ನು ಹಾಗೇ ನೀಡದೆ, ಅದಕ್ಕೆ ಭಯ ಭಕ್ತಿಯಿಂದ ಕೊಡಲು ಆರಾಧನೆ, ನಂಬಿಕೆಯನ್ನು ಕಟ್ಟಿಕೊಂಡು ಈ ಆರಾಧನೆ ನಡೆಯುತ್ತಿದೆ. ಇದು ಭೂತಾರಾಧನೆ ಅಲ್ಲ, ಸತ್ಯಾರಾಧನೆ ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ, ದೈವಾರಾಧಕ ದಯಾನಂದ ಕತ್ತಲ್‍ಸಾರ್ ತಿಳಿಸಿದರು.
ತುಳುವರ ಆಡುಭಾಷೆ ತುಳು. ಈ ಭಾಷೆಗೆ ಸುಮಾರು 2500 ವರ್ಷಗಳ ಇತಿಹಾಸವಿದೆ. ಅಲ್ಲದೆ ತುಳು ಸ್ವಂತ ಲಿಪಿಯನ್ನು ಹೊಂದಿರುವ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ದೈವಾರಾಧನೆ ಎಂಬುವುದು ತುಳುನಾಡಿಗೆ ಮಾತ್ರ ಸೀಮಿತವಾದ ಒಂದು ವಿಶಿಷ್ಠ ಆರಾಧನೆ. ದೈವಗಳ ಆರಾಧನೆಯೇ ಕರಾವಳಿಯ ಬಹುಮುಖ್ಯ ಆಚರಣೆ ಮತ್ತು ಕಲೆ ಎಂದರೆ ತಪ್ಪಾಗಲಾರದು. ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲೊಂದಾದ ನಾಗಾರಾಧನೆಯಂತೆಯೇ ದೈವಾರಾಧನೆಯೂ ಒಂದು ವಿಶಿಷ್ಟ ಆಚರಣೆ. ಇಲ್ಲಿ ದೇವರ ಗುಡಿಗಳಂತೆ ದೈವಗಳಿಗೆ ಗುಡಿ, ಮಂದಿರಗಳನ್ನು ನಾವು ಕಾಣಬಹುದು.
ದೈವಗಳ ವಾಸಸ್ಥಾನಗಳನ್ನು ಭೂತಸ್ಥಾನ, ದೈವಸ್ಥಾನ, ಆಲಡೆ, ಭೂತದ ಕೊಟ್ಟಿಗೆ, ಮಾಡ ಎಂದು ಕರೆಯಲಾಗುತ್ತೆ. ಈ ದೈವ ಕೋಣೆಗಳಲ್ಲಿ ದೈವಗಳಿಗೆ ಸಂಬಂಧಪಟ್ಟ ಮೂರ್ತಿಗಳನ್ನು ಇರಿಸಿ(ದೈವಗಳ ಭಂಡಾರ) ಅವುಗಳಿಗೆ ಪ್ರತಿ ದಿನ ಹೂ ಅರ್ಪಿಸಿ, ಗಿಂಡೆ (ಕಂಚಿನ ಪಾತ್ರೆ)ಯಲ್ಲಿ ನೀರು ಇಟ್ಟು ದೀಪ ಹಚ್ಚಿ ಪೂಜಿಸಲಾಗುತ್ತೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ, ಸೇವೆಗಳನ್ನು ನಡೆಸಲಾಗುತ್ತೆ. ತುಳುನಾಡ ಜನರು ವರ್ಷಕ್ಕೊಮ್ಮೆ ಅಥವಾ ವಿಶೇಷ ಸಂದರ್ಭಗಳಲ್ಲಿ ಪರ್ವಸೇವೆ ಅಥವಾ ಕೋಲ-ನೇಮ ನಡೆಸುತ್ತಾರೆ. ಸೌರಮಾನ ಆಷಾಢದಲ್ಲಿ ದೈವಾರಾಧನೆ ನಡೆಯುವುದಿಲ್ಲ.
ಈ ಆರಾಧನೆಗಳು ಶೈವ-ಶಾಕ್ತೇಯ ಸ್ವರೂಪದ್ದಾಗಿವೆ. ನಾಗರಿಕತೆ ಆರಂಭವಾಗುವ ಮೊದಲೇ ಆದಿಮಾನವನು ತಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು, ಪ್ರಕೃತಿಯ ನಿಗೂಢತೆಯನ್ನು, ಪ್ರಕೃತಿ ವಿಕೋಪಗಳು, ಪ್ರಾಣಿ ಪಕ್ಷಿಗಳು, ಸರೀಸೃಪಗಳಿಗೆ ಮೂರ್ತ ರೂಪಕೊಟ್ಟು ಭಯ ಭಕ್ತಿಯಿಂದ ನಡೆದುಕೊಂಡು ಬಂದಿದ್ದರು. ಈ ಆಚರಣೆಗಳೇ ಕಾಲಕ್ರಮೇಣವಾಗಿ ಒಂದು ರೂಪ ತಾಳಿ ಮುಂದೆ ನಾಗಾರಾಧನೆ ಮತ್ತು ಅರ್ವಾಚೀನದ ದೇವತಾರಾಧನೆಗಳಾಗಿರಬಹುದು.
ದೈವ ಪದ ಬಂದದ್ದು ಹೇಗೆ?
ದೈವ ಎಂಬುವುದು ಸಂಸ್ಕೃತದ ‘ದಿವು’ ಧಾತುವಿನಿಂದ ಬಂದಿರುವ ಪದ. ದಿವು ಎಂದರೆ ತೇಜೋಪುಂಜ, ಬೆಳಕು, ಜ್ಯೋತಿ. ಯಾವುದು ನಮ್ಮ ಬದುಕಿನ ದಾರಿಗೆ ಬೆಳಕಾಗಿ ನಮ್ಮ ಗುರಿಯನ್ನು ಮುಟ್ಟಲು ಸಹಕಾರಿಯಾಗುತ್ತೋ ಅದೇ ದಿವು. ದೈವಗಳು ಧರ್ಮದ ದಾರಿಗೆ ಬೆಳಕಾಗಿ ನಡೆಸುವುದಷ್ಟೇ ಅಲ್ಲ, ಧರ್ಮದ ದಾರಿಯಲ್ಲಿ ನಮ್ಮ ಅಂಗರಕ್ಷಕರಂತೆಯೂ ಇರುತ್ತವೆ.
ಮಂಗಳೂರು, ಉಡುಪಿ, ಕಾಸರಗೋಡಿನ ಕೆಲ ಪ್ರದೇಶಗಳಲ್ಲಿ ನಾವು ದೈವಾರಾಧನೆಯನ್ನು ಕಾಣಬಹುದು. ನಮ್ಮಲ್ಲಿ ಸುಮಾರು 500ರಿಂದ 2 ಸಾವಿರದಷ್ಟು ದೈವಗಳಿವೆ ಎನ್ನಲಾಗುತ್ತೆ. ಆದರೆ ಶಕ್ತಿಯೊಂದೆ ನಾಮ ಹಲವು. ಹೀಗಾಗಿ ಒಂದೇ ದೈವಕ್ಕೆ ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ ಎಂದು ಕೆಲವರು ತಿಳಿಸಿದ್ದಾರೆ. ದೈವಗಳು ತಮ್ಮ ಸ್ವರೂಪ ಮತ್ತು ಪ್ರಾದೇಶಿಕತೆಗನುಗುಣವಾಗಿ ನಾಮದೇಯಗಳನ್ನು ಹೊಂದಿವೆ. ದೈವಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ.
-
- ಪ್ರಾಣಿರೂಪದಲ್ಲಿರುವ ದೈವಗಳು. ಉದಾ; ಹುಲಿದೈವ, ಪಂಜುರ್ಲಿ(ಹಂದಿಭೂತ), ಹಾಯಿಗುಳಿ, ನಂದಿಕೋಣ
- ಮನುಷ್ಯರಾಗಿದ್ದು ಅಸಾಮಾನ್ಯ ಶೌರ್ಯ ಸಾಹಸವನ್ನು ಮೆರೆದು ಅಕಾಲಿಕ ಮತ್ತು ಅಸಹಜ ಮರಣ ಹೊಂದಿ ದೈವಗಳು ಉದಾ: ಕಲ್ಕುಡ, ಕಲ್ಲುರ್ಟಿ, ಕೋಟಿಚೆನ್ನಯ, ಕಾಂತಾಬಾರೆ-ಬುದಾಬಾರೆ.
- ವೈದಿಕ ಪುರಾಣಗಳ ಸಂಬಂಧವನ್ನು ಹೊಂದಿರುವ (ಈಶ್ವರ ಪಾರ್ವತಿಯರ ಗಣಗಳು) ದೈವಗಳು. ಉದಾ: ಕೊಡಮಣಿತ್ತಾಯ, ವೀರಭದ್ರ, ಭಗವತಿ.
ಜಾತಿ-ಧರ್ಮ ಮೀರಿದ ದೈವಾರಾಧನೆ
ಇಲ್ಲಿ ವಿಶೇಷವೆಂದರೆ ದೈವಾರಾಧನೆಗೆ ಯಾವುದೇ ಜಾತಿ, ಧರ್ಮದ ಗಡಿ ರೇಖೆ ಇಲ್ಲ. ಉಲ್ಲಾಳದಲ್ಲಿ ದೈವ ಮಸೀದಿಗೆ ಭೇಟಿ ನೀಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಮುಸ್ಲಿಮರು ಆಲಿಭೂತವನ್ನು ಆರಾಧಿಸುತ್ತಾರೆ. ಇಲ್ಲಿ ಕ್ರೈಸ್ತ, ಮುಸ್ಲಿಮರ ದೈವಗಳನ್ನೂ ಕಾಣಬಹುದು.
ತುಳುವರ ಮೂಲ ದೇವರು “ಬೆಮ್ಮೆರ್” ಬೆರ್ಮೆ ಎಂಬ ದೈವ ಬ್ರಹ್ಮನ ಪ್ರತಿರೂಪ. ಈ ದೈವಕ್ಕೆ ನಾಲ್ಕು ಮುಖ ಮತ್ತು ನಾಲ್ಕು ಕೈಗಳು, ಕೈಗಳಲ್ಲಿ ಖಡ್ಗ, ಡಮರು ಕಪಾಲ ಮತ್ತು ಕಠಾರಿ ಮೊದಲಾದ ಆಯುಧಗಳಿರುತ್ತವೆ.
Also Read: ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ
ದೈವಾರಾಧನೆಗಿದೆ ವಿಶಿಷ್ಟ ಉಡುಪು
ತುಳುನಾಡಿನಲ್ಲಿ ಆರಾಧಿಸಲ್ಪಡುವ ದೈವಗಳ ರೌದ್ರಭಾವನೆಗೆ ಅನುಗುಣವಾಗಿ ಕುಣಿತದ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ದೈವವನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಪಾತ್ರಿ ಅಥವಾ ಮಾನಿ ಎನ್ನುತ್ತಾರೆ. ದೈವದ ವೇಷ ಹಾಕಿಕೊಂಡು ದೈವವನ್ನು ಪ್ರತ್ಯಕ್ಷೀಕರಿಸುವ ದೈವ ನರ್ತಕ ಅಥವಾ ದೈವಕಲಾವಿದರನ್ನು ದೈವಕಟ್ಟುವವರು ಎನ್ನುತ್ತಾರೆ. ಒಂದೊಂದು ದೈವಕ್ಕೂ ಅದಕ್ಕೊಪ್ಪುವ ಅಲಂಕಾರ, ವೇಷ-ಭೂಷಣ, ಮುಖ ವರ್ಣಿಕೆ ಇರುತ್ತದೆ. ಮೈಗೆ ಕೆಂಪುಬಟ್ಟೆ, ನಡುವಿಗೆ ನೆರಿಗೆಯುಳ್ಳ ಲಂಗ, ತಲೆಗೆ ಕಿರೀಟ (ಅಣೆ), ಕಾಲಿಗೆ ಗಗ್ಗರ, ಸೊಂಟಕ್ಕೆ ದಟ್ಟಿ, ತೋಳಿಗೆ ವಂಕಿ, ಕೈಗೆ ಬಳೆ, ಎದೆಗೆ ಕಂಚಿನ ರಕ್ಷೆ, ಕಿವಿಗೆ ಮತ್ತು ಹಣೆಗೆ ಅಲಂಕಾರ ಇರುತ್ತದೆ. ಆಯಾ ದೈವದ ಮುಖವಾಡ ಧರಿಸಿ ಕುಣಿದು ಆರಾಧಿಸಲಾಗುತ್ತದೆ. ಬತ್ತ, ಅಕ್ಕಿ, ಬತ್ತದ ಅರಳು, ಎಳನೀರು, ತೆಂಗಿನಕಾಯಿ, ಅಡಿಕೆ, ಹೊಂಬಾಳೆ, ತೆಂಗಿನ ಗರಿ—ಇವು ದೈವಾರಾಧನೆಯ ಮುಖ್ಯ ವಸ್ತುಗಳು. ಎಲ್ಲ ರೀತಿಯ ಭೂತ ಕಟ್ಟುವಾಗಲೂ ಕೈಯಲ್ಲಿ ದೀವಟಿಗೆಯಿರುತ್ತದೆ.
ದೈವ ನರ್ತನ ಕೆಲವರಿಗಷ್ಟೇ ಸೀಮಿತ
ಪರಿಶಿಷ್ಟ ವರ್ಗಕ್ಕೆ ಸೇರಿದ ಪರವ, ಪಂಬದ, ನಲಿಕೆ ಎಂಬ ಜನಾಂಗದವರಷ್ಟೇ ದೈವ ನರ್ತಕರಾಗಲು ಸಾಧ್ಯ. ನಿರ್ದಿಷ್ಟ ದೈವಗಳಿಗೆ ನಿರ್ದಿಷ್ಟ ಪಂಗಡಗಳ ಕಲಾವಿದರಿಂದ ದೈವಗಳ ಪಾತ್ರ ನಿರ್ವಹಣೆ ಮಾಡಬೇಕಾಗುತ್ತೆ. ಇಂಥವರೇ ಇಂತಹ ದೈವವನ್ನು ಪೂಜಿಸಬೇಕೆಂಬ ನಿಯಮವಿದೆ. ದೈವ ನರ್ತಕರು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತೆ. ಭಕ್ತರು ದೈವ ನರ್ತಕನಲ್ಲೇ ದೈವವನ್ನು ಕಾಣುತ್ತಾರೆ. ಆತನಲ್ಲೇ ತಮ್ಮ ಅಭಿಲಾಷೆಗಳನ್ನು ಹೇಳಿಕೊಳ್ಳುತ್ತಾರೆ. ಕನ್ನಡ ಮಾತನಾಡುವ ಪ್ರದೇಶದಲ್ಲಿ ದೈವಗಳಿಗೆ ಪೂಜೆ ಸಲ್ಲಿಸುವವರು ಬ್ರಾಹ್ಮಣರಲ್ಲಿ ವೈದ್ಯರೆಂಬ ಒಂದು ಪಂಗಡಕ್ಕೆ ಸೇರಿದವರಾಗಿರುತ್ತಾರೆ. ನೇಮ ಹೆಚ್ಚಾಗಿ ರಾತ್ರಿ ನಡೆಯತ್ತದೆ.
ದೈವಾರಾಧನೆ ಆಚರಣೆ ಹೇಗೆ?
ದೈವಾರಾಧನೆಯನ್ನು ಯಾವಾಗ ಬೇಕೆಂದರೆ ಆಗ ಮಾಡಲಾಗದು. ಅದಕ್ಕೆ ಸಮಯವನ್ನು ಗುರುತಿಸಿ ತಯಾರಿಯೊಂದಿಗೆ ಮಾಡಲಾಗುತ್ತೆ. ನೇಮಕ್ಕೆ ಕೆಲವು ದಿನಗಳ ಮುಂಚೆ ಕೋಳಿಕುಂಟ ಎಂಬ ವಿಧಿಯನ್ನು ಮಾಡಲಾಗುತ್ತೆ. ಆ ದಿನ ನೇಮಕ್ಕಾಗಿ ಬಾಳೆಗೊನೆ ಕಡಿಯುವ ಗೊನೆಮುಹೂರ್ತ ಎಂಬ ಕ್ರಮ ಇದೆ (ಕೋಳಿಕುಂಟವಾದ ಮೇಲೆ ಆ ಊರನ್ನು ಬಿಟ್ಟು ಯಾರೂ ದೂರ ಪ್ರಯಾಣ ಕೈಗೊಳ್ಳಬಾರದೆಂಬ ಕಟ್ಟಳೆ ಇದೆ). ಊರ ಜನವರ್ಗದ ಪ್ರತಿನಿಧಿಗಳು, ದೈವದ ಸೇವೆಗೆ ಸಂಬಂಧಪಟ್ಟ ಪೂಜಾರಿ ಹಾಗೂ ಕೆಲವು ವ್ಯಕ್ತಿಗಳೂ ಸಕಲ ಬಿರುದಾವಳಿಗಳಿಂದ ದೈವದ ಭಂಡಾರವನ್ನು (ಆಯುಧ, ಮೊಗ ಮುಂತಾದ ಪೂಜಾ ಸಾಮಗ್ರಿಗಳನ್ನು) ಭೂತಸ್ಥಾನಕ್ಕೆ ಒಯ್ಯುತ್ತಾರೆ. ಉತ್ಸವದ ಸಂದರ್ಭದಲ್ಲಿ ಆಯಾ ದೈವದ ಹುಟ್ಟುಕಟ್ಟುಗಳನ್ನು ಭೂತಕ್ಕೆ ಕಟ್ಟುವವರೂ ಅವರ ಸಂಗಡಿಗರೂ ತೆಂಬರೆ ಎಂಬ ವಾದ್ಯದ ಬಡಿತದೊಂದಿಗೆ ರಾಗವಾಗಿ ಹಾಡುತ್ತಾರೆ. ಒಂದೇ ವೇಳೆ ಎರಡು ಅಥವಾ ಮೂರು ಭೂತಗಳು ಕಾಣಿಸಿಕೊಳ್ಳಬಹುದು. ಬೇರೆ ಬೇರೆ ದೈವಗಳನ್ನು ಒಬ್ಬನೇ ವ್ಯಕ್ತಿ ಒಂದಾದ ಮೇಲೆ ಒಂದರಂತೆ ಆವೇಶ ಬರಿಸಿಕೊಳ್ಳಬಹುದು.
ನೇಮದ ವೇಳೆ ಕಟ್ಟುವ ದೈವವೇಷಗಳು ಆಯಾ ದೈವದ ಸ್ವಭಾವ ಸ್ವರೂಪಗಳಿಗೆ ತಕ್ಕುದಾಗಿರುತ್ತದೆ. ಮುಖವರ್ಣಿಕೆ, ಉಡುಪು ತೊಡುಪು, ಅಣಿಗಳಲ್ಲಿ (ಬೆನ್ನುಹಿಂದಕ್ಕೆ ಕಟ್ಟಿ ಕೊಳ್ಳುವ ಅಗಲವಾದ ರಚನೆ) ಸಾಕಷ್ಟು ವೈವಿಧ್ಯವಿರುತ್ತದೆ. ಕುಣಿತದ ವೈಖರಿಯಲ್ಲೂ ಇದೇ ರೀತಿ ಬದಲಾವಣೆಗಳಿರುತ್ತವೆ. ನೇಮಕ್ಕೆ ಸಂಬಂಧಪಟ್ಟಂತೆ ವಾಲಸಿರಿ (ಹೊರಸವಾರಿ), ಬಂಡಿ ಮೊದಲಾದ ಸಮಾರಂಭಗಳೂ ಜರಗುತ್ತವೆ. ವಾಲ ಸಿರಿ ದೈವಸ್ಥಾನದ ಆವರಣದ ಹೊರಗೆ ನಡೆಯುತ್ತದೆ.
ಎಲ್ಲ ದೈವಸ್ಥಾನಗಳಲ್ಲಿ ಬಂಡಿ ಇರಬೇಕೆಂದಲ್ಲ. ಬಂಡಿ ಇದ್ದರೆ ಅದನ್ನು ಸಿಂಗರಿಸಿ ಎಳೆಯುತ್ತಾರೆ. ಬಂಡಿಗಳಲ್ಲಿ ಹುಲಿ, ಹಂದಿ, ಕುದುರೆ ಮುಂತಾದವುಗಳ ಮೇಲೆ ಕುಳಿತಿರುವ ದೈವಗಳ ವಿಗ್ರಹಗಳಿರುತ್ತವೆ. ವಿಗ್ರಹಗಳಿಲ್ಲದಿದ್ದಲ್ಲಿ ದೈವವೇಷವನ್ನು ತೊಟ್ಟ ವ್ಯಕ್ತಿಯೇ ಕುಳಿತುಕೊಳ್ಳುತ್ತಾನೆ. ನೇಮದ ಅಂಗವಾಗಿ ತಪ್ಪಂಗಾಯಿ, ಸೊಟೆದಾರೆ ಮೊದಲಾದ ವಿನೋದಗಳೂ ಕೋಳಿ ಅಂಕವೂ ನಡೆಯುತ್ತದೆ. ದೈವಗಳಲ್ಲಿಯೂ ಸೀಮೆಯ ರಾಜಂದೈವ, ಗ್ರಾಮದ ದೈವ, ಜಾಗದ ದೈವ, ಕುಟುಂಬದ ದೈವ, ಮನೆಯ ದೈವ—ಹೀಗೆ ಪ್ರತ್ಯೇಕವಾದ ವ್ಯವಸ್ಥೆ ಇದೆ. ಕೆಲವೊಮ್ಮೆ ವಿಶಿಷ್ಟ ಕಾರಣಗಳಿಗಾಗಿ ಧರ್ಮನೇಮ ಎಂಬ ವಿಶೇಷೋತ್ಸವವನ್ನು ಜರಗಿಸುವುದುಂಟು. ಅದರ ಅಂಗವಾಗಿ ಅನ್ನಸಂತರ್ಪಣೆಯೂ ನಡೆಯುತ್ತದೆ. ದೈವದ ಮುಂದೆ ಯಾರೂ ಚಿಕ್ಕವರು-ದೊಡ್ಡವರಿಲ್ಲ. ದೈವಗಳು ಎಲ್ಲರನ್ನೂ ಒಂದೇ ರೀತಿ ಭಾವಿಸು ಆಶೀರ್ವದಿಸುತ್ತವೆ. ಇನ್ನು ನಾವು ನಂಬುವ ದೇವರಿಗೆ ಹರಕೆ ನೀಡುವಂತೆ ದೈವಕ್ಕೂ ಹರಕೆ ನೀಡುತ್ತಾರೆ. ಕೋಲ ಕೊಡುವ, ನೇಮೊ ಮಾಡುವ, ತಂಬಿಲ, ಅಗೆಲ್ ಬಡಿಸುವ ಕ್ರಮ ನಡೆದುಕೊಂಡು ಬಂದಿದೆ. ಜೊತೆಗೆ ನೇಮ, ಕೋಲದ ವೇಳೆ ದೈವಕ್ಕೆ ತಮ್ಮ ಸಮಸ್ಯೆ ಹೇಳಿ ಅವರಿಂದ ಪರಿಹಾರ ಪಡೆಯುವುದು, ನ್ಯಾಯ ಪಂಚಾಯ್ತಿ ಮಾಡಿಸುವುದೂ ಉಂಟು.
ದೈವಾರಾಧನೆ ವೀಕ್ಷಣೆಗೆ ಮಹಿಳೆಯರ ನಿರ್ಬಂಧ
ದೈವಾರಾಧನೆ ಎಂಬುವುದು ಅಬ್ಬರದ ಆರಾಧನೆ. ಅಲ್ಲಿನ ವಾದನ, ಶಬ್ಧ, ರಂಗ ಪರಿಕಲ್ಪನೆ, ಅವೇಷ ಇವೆಲ್ಲವೂ ಅಂದಿನ ಮಹಿಳೆಯರ ದೇಹ ಪರಿಸ್ಥಿತಿ, ಸ್ತ್ರಿತ್ವಕ್ಕೆ ಹೊಂದು ಕೊಳ್ಳುತ್ತಿರಲಿಲ್ಲ. ಋತುಸ್ರಾವದಂತಹ ಸೂತಕಗಳಿಂದಾಗಿ ಅಂದಿನ ಕಾಲದಲ್ಲೇ ಕೆಲವು ಅಬ್ಬರದ ದೈವಾರಾಧನೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿತ್ತು. ಆದರೆ ಅಬ್ಬರವಿಲ್ಲದ ಕೆಲವು ದೈವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿದೆ. ಇಲ್ಲಿ ಮಹಿಳೆಯನ್ನು ದೂರವಿಡುವುದು ಅಂತಲ್ಲ. ಬದಲಿಗೆ ಆಕೆಯ ರಕ್ಷಣೆಗಾಗಿ ಈ ಪದ್ಧತಿ ಮಾಡಿರೋದು.
ತುಳುನಾಡು ಸ್ತ್ರೀ ಪ್ರಧಾನವಾದ್ದು, ಇಲ್ಲಿ ಪುರುಷರು ಎಂತಹ ದೊಡ್ಡ ಜಾತ್ರೆ, ನೇಮ, ಉತ್ಸವ ಮಾಡಿದರೂ ದೈವಗಳಿಗೆ ಹಾಲೆರೆಯೋದು ಮಹಿಳೆನೇ. ಮನೆಯ ಯಜಮಾನತಿಯೇ ದೈವಕ್ಕೆ ಹಾಲು ನೀಡಬೇಕೆಂದು ಸೂತ್ರದ ಮೂಲ್ಯ. ದೈವಾರಾಧನೆಯಲ್ಲಿ ಹೆಣ್ಣು ಪಾಲ್ಗೊಳ್ಳಬಾರದು ಎಂಬ ಭೇದ ನಮ್ಮಲ್ಲಿಲ್ಲ. ಬದಲಿಗೆ ಹೆಣ್ಣಿನ ರಕ್ಷಣೆಗಾಗಿ ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ, ದೈವಾರಾಧಕ ದಯಾನಂದ ಕತ್ತಲ್‍ಸಾರ್ ಟಿವಿ9 ಡಿಜಿಟಲ್ಗೆ ವಿವರಿಸಿದರು.
ದೇವತಾರಾಧನೆ ಹಾಗೂ ದೈವತಾರಾಧನೆಗಿರುವ ವ್ಯತ್ಯಾಸವೇನು?
ದೇವತಾರಾಧನೆ ಹಾಗೂ ದೈವತಾರಾಧನೆಗೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಒಂದೆ. ದೇವತಾರಾಧನೆಯಲ್ಲೂ ಪ್ರಾಕೃತಿಕ ಶಕ್ತಿಯನ್ನು ದೇವರೆಂದು ಪೂಜಿಸುವುದಿದೆ (ಶಿವ, ವಿಷ್ಣು ಇತ್ಯಾದಿ). ಅದೇ ರೀತಿ ವ್ಯಕ್ತಿ ಹೋಗಿ ಶಕ್ತಿ ಆದದನ್ನೂ ನಾವು ಪೂಜಿಸುತ್ತೇವೆ (ರಾಮ, ಕೃಷ್ಣ). ವ್ಯಕ್ತಿ ಹೋಗಿ ಶಕ್ತಿ ಆದದನ್ನೂ ನಾವು ದೇವರುಗಳ ಅಂಶ ಎಂದು ಪೂಜಿಸುತ್ತೇವೆ. ಆದರೆ ಇಲ್ಲಿ ಆರಾಧನೆಯಲ್ಲಿ ವ್ಯತ್ಯಾಸವಿದೆ ಎಂದರು.
ಇನ್ನಷ್ಟು ಪ್ರೀಮಿಯಂ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:44 pm, Thu, 4 July 24