ಹಾಸನ ನ.15: ವರ್ಷಕ್ಕೆ ಒಮ್ಮೆ ದರ್ಶನ ಕರುಣಿಸುವ, ಇಷ್ಟಾರ್ಥಗಳನ್ನು ಸಿದ್ದಿಸುವ ಹಾಸನದ (Hassan) ಅಧಿದೇವತೆ ಹಾಸನನಾಂಬೆಯ (Hasanamba) ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ನವೆಂಬರ್ 2 ರಂದು ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರದಿದ್ದು, ಇಂದು (ನ.15) ಕೊನೆ ದಿನ ಸಾರ್ವಜನಿಕ ದರ್ಶನಕ್ಕೆ ನಿಷೇಧಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಬಾಗಿಲು ಮುಚ್ಚಲಿದ್ದು, ಈಗಾಗಲೆ ಸಾರ್ವಜನಿಕ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಕಳೆದ 12 ದಿನಗಳಿಂದ ಅಪಾರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡಿ, ಆಶೀರ್ವಾದ ಪಡೆದರು. ಕಳೆದ 12 ದಿನಗಳಲ್ಲಿ 13 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದು 5.80 ಕೋಟಿ ರೂ. ಆದಾಯ ಹರಿದು ಬಂದಿದೆ.
ಇದೇ ಮೊದಲ ಬಾರಿಗೆ ಸಾಗರೋಪಾದಿಯಲ್ಲಿ ಬಂದ ಭಕ್ತ ಸಮೂಹ ಶಕ್ತಿದೇವತೆಯನ್ನ ಕಣ್ತುಂಬಿಕೊಂಡರೆ ಸಾರ್ವಜನಿಕ ದರ್ಶನದ ಕೊನೆಯ ದಿನವಾದ ಮಂಗಳವಾರ ಹಲವು ಶಾಸಕರು, ಮಾಜಿ ಸಚಿವರುಗಳು ಹಾಗೂ ಅಧಿಕಾರಿಗಳು ದೇವಿ ದರ್ಶನ ಪಡೆದು ಪುನೀತರಾದರು.
ಹಾಸನಾಂಬೆಯ ಸಾರ್ವಜನಿಕ ದರ್ಶನದ ಕೊನೆಯ ದಿನವಾದ ಮಂಗಳವಾರ ಅಪಾರ ಭಕ್ತರು ದೇವಿಯ ದರ್ಶನ ಪಡೆದುಕೊಂಡರು. ಮುಂಜಾನೆ 4 ಗಂಟೆಯಿಂದಲೇ ಸರತಿ ಸಾಲುಗಳಲ್ಲಿ ನಿಂತ ಭಕ್ತ ಸಮೂಹ ಶ್ರದ್ದಾ ಭಕ್ತಿಯಿಂದ ಬಂದು ದೇವಿಯ ಆಶೀರ್ವಾದ ಪಡೆದುಕೊಂಡರು. ಈ ಬಾರಿ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಯಾಗಿದ್ದರಿಂದ ಭಾರೀ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಹಾಸನಾಂಬೆ ದರ್ಶನಕ್ಕೆ ಬಂದಿದ್ದರು.
ಮಹಿಳಾ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡು ಬಂತು. ಭಕ್ತರ ಜೊತೆಗೆ ನಾಡಿನ ಹಲವು ಗಣ್ಯರು ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡರು. ಕುಟುಂಬ ಸಮೇತವಾಗಿ ಬಂದು ಹಾಸನಾಂಬೆ ದರ್ಶನ ಮಾಡಿದ ಮಾಜಿ ಸಚಿವ ವಿಜಯಶಂಕರ್ ನಾಡಿನ ಜನತೆಗೆ ಒಳಿತಾಗಲಿ ಎಂದು ಹಾರೈಸಿದರೇ, ಕೊನೆಯ ದಿನ ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರು ದೇವಿಯ ಆಶೀರ್ವಾದ ಪಡೆದು ಖುಷಿ ಹಂಚಿಕೊಂಡರು. ಇದುವರೆಗೆ ಹಾಸನಾಂಬೆ ದರ್ಶನಕ್ಕೆ ಬರಲು ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ. ಲಕ್ಷ ಲಕ್ಷ ಭಕ್ತರು ಬಂದ ದರ್ಶನ ಪಡೆದರು. ಏನೂ ಸಮಸ್ಯೆ ಆಗದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಪಡಿಸಿದರು.
ಇದನ್ನೂ ಓದಿ: ಕೇವಲ 7 ದಿನಗಳಲ್ಲಿ ಹಾಸನಾಂಬೆಗೆ ಕೋಟಿ ಕೋಟಿ ಆದಾಯ: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೆಚ್ಚು ಹಣ ಸಂಗ್ರಹ
ಈ ವರ್ಷ ನವೆಂಬ್ 2ರ ಗುರುವಾರ ದೇವಿಯ ಗರ್ಭಗುಡಿ ಬಾಗಿಲನ್ನು ತೆರೆದು ನವೆಂಬರ್ 3ರಿಂದ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಭಕ್ತರ ದರ್ಶನದ 12ನೇ ದಿನವಾದ ಮಂಗಳವಾರ ಕೂಡ ಭಕ್ತರ ದಂಡೇ ಹಾಸನದತ್ತ ಹರಿದು ಬಂದಿತ್ತು. ದೇಶದ ವಿವಿಧಡೆಗಳಿಂದ ಆಗಮಿಸಿದ್ದ ಭಕ್ತರು ಭಕ್ತಿ ಭಾವದಿಂದ ಹಾಸನಾಂಬೆಯ ಆಶೀರ್ವಾದ ಪಡೆದುಕೊಂಡರು. ಬೇಡಿದ ವರವ ಕರುಣಿಸುವ, ಇಷ್ಟಾರ್ಥ ಸಿದ್ದಿಸುವ ತಾಯಿಗೆ ಮೊರೆಯಿಟ್ಟು ಪುನೀತರಾದರು.
ಇದುವರೆಗೆ ಹಾಸನಾಂಬೆ ಇತಿಹಾಸದಲ್ಲಿ ದಾಖಲೆ ಎಂಬಂತೆ ಈಬಾರಿ 11 ದಿನ ಪೂರ್ಣಗೊಂಡ ಬಳಿಕ 13 ಲಕ್ಷದ 40 ಸಾವಿರ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದರೇ 1 ಸಾವಿರ ರೂ. ಮೌಲ್ಯದ ಟಿಕೇಟ್, 300 ರೂ. ಮೌಲ್ಯದ ಟಿಕೇಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಒಟ್ಟು ಇದುವರೆಗೆ 5 ಕೋಟಿ 80 ಲಕ್ಷ ಆದಾಯ ದೇಗುಲಕ್ಕೆ ಬಂದಿದೆ.
ಇದುವರೆಗೆ ನಾಡಿನ ಮುಖ್ಯಮಂತ್ರಿ, ಹೈಕೋರ್ಟ್ ನ್ಯಾಯಾದೀಶರುಗಳು, ಸಚಿವರು, ಮಾಜಿ ಸಚಿವರು, ಶಾಸಕರು, ಸಾಧು ಸಂತರುಗಳು ಸೇರಿದಂತೆ ನಾಡಿನ ಹಲವು ವಿಭಾಗದ ಗಣ್ಯಾತಿ ಗಣ್ಯರು ಹಾಸನಾಂಬೆಯ ದರ್ಶನ ಪಡೆದರು. ಉತ್ಸವ ಈ ವರ್ಷ ಒಟ್ಟು 14 ದಿನಗಳು ನಡೆದಿದ್ದು 12 ದಿನಗಳ ದರ್ಶನೋತ್ಸವದಲ್ಲಿ ದಾಖಲೆ ನಿರ್ಮಾಣವಾಗಿದೆ.
ಇಂದು (ನ.15) ಅಧಿಕೃತವಾಗಿ ಹಾಸನಾಂಬೆ ಉತ್ಸವ ಸಂಪನ್ನಗೊಳ್ಳಲಿದೆ. ಮಧ್ಯಾಹ್ನ 12ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:05 am, Wed, 15 November 23