ಹಾಸನ: ಜಿಲ್ಲೆಯಲ್ಲೊಂದು ಅಮಾನವೀಯ (Inhuman) ಕೃತ್ಯ ಬೆಳಕಿಗೆ ಬಂದಿದೆ. ಕೂಲಿ (Coolie) ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿ ಕ್ರೌರ್ಯ ಮೆರೆದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅಣ್ಣೇನಹಳ್ಳಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬ 55 ಜನ ಕಾರ್ಮಿಕರನ್ನು ಒಂದೆಡೆ ಬಂಧನದಲ್ಲಿಟ್ಟಿದ್ದ. ಅಕ್ರಮವಾಗಿ ಬಂಧನದಲ್ಲಿಟ್ಟು ಬಲವಂತದಿಂದ ದುಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ದಾಳಿ ನಡೆಸಿದ ಅರಸೀಕೆರೆ ಗ್ರಾಮಾಂತರ ಪೊಲೀಸರು ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಕಾರ್ಮಿಕರು ಕೂಲಿ ಅರಸಿ ಹೊರ ಜಿಲ್ಲೆಗಳಿಂದ ಬಂದಿದ್ದರು.
ಪೊಲೀಸರು 50 ಪುರುಷರು, 10 ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ. ಮುನೇಶ್ ಶುಂಠಿ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ. ಕೆಲಸ ಮುಗಿದ ಕೂಡಲೇ ಶೆಡ್ನಲ್ಲಿ ಕೂಡಿ ಹಾಕುತ್ತಿದ್ದ ಎಂಬ ಆರೋಪ ಕೇಳಿಬಂದಿದ್ದು, ತಲೆಮರೆಸಿಕೊಂಡಿರುವ ಮುನೇಶ್ಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.
ಎಸ್ಪಿ ಶ್ರೀನಿವಾಸ್ಗೌಡ ಸೂಚನೆ ಮೇರೆಗೆ ದಾಳಿ ನಡೆಸಿದ ಡಿವೈಎಸ್ಪಿ ಅಶೋಕ್, ಸರ್ಕಲ್ ಇನ್ಸ್ಪೆಕ್ಟರ್ ವಸಂತ್ಕುಮಾರ್, ಸಬ್ಇನ್ಸ್ಪೆಕ್ಟರ್ ಲಕ್ಷ್ಮಣ್ ನೇತೃತ್ವದ ತಂಡ ಕಾರ್ಮಿಕರನ್ನು ಬಂಧನ ಮುಕ್ತಗೊಳಿಸಿದ್ದಾರೆ.
ಅನ್ಯ ಜಾತಿಯ ಪ್ರೀತಿಗೆ ಪೋಷಕರ ವಿರೋಧ:
ಧಾರವಾಡ: ಅನ್ಯ ಜಾತಿಯ ಪ್ರೀತಿಗೆ ಪೋಷಕರು ವಿರೋಧ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿಷ ಸೇವಿಸಿದ್ದ ಪ್ರೇಮಿಗಳು ಸಾವನ್ನಪ್ಪಿದ್ದಾರೆ. ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ಯುವತಿ ಸಾವನ್ನಪ್ಪಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಯುವಕ ಇಂದು ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಸಾವಿತ್ರಿ ಮುತ್ತಪ್ಪ ಮತ್ತು ಮಲ್ಲಪ್ಪ ದುರ್ಗಪ್ಪ ಮಾದರ ವಿಷ ಸೇವಿಸಿದ್ದ ಪ್ರೇಮಿಗಳು. ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸಾವಿತ್ರಿ, ಮಲ್ಲಪ್ಪ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಮನೆಯವರು ಬೇರೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದರಿಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಿಸದೆ ಇಬ್ಬರೂ ಸಾವನ್ನಪ್ಪಿದ್ದು, ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ; ಧಾರವಾಡದ 4ನೇ ಹೆಚ್ಚುವರಿ ನ್ಯಾಯಾಲಯದಲ್ಲಿಂದು ಸಾಕ್ಷಿಗಳ ವಿಚಾರಣೆ
Published On - 10:32 am, Tue, 5 April 22