ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ; ಧಾರವಾಡದ 4ನೇ ಹೆಚ್ಚುವರಿ ನ್ಯಾಯಾಲಯದಲ್ಲಿಂದು ಸಾಕ್ಷಿಗಳ ವಿಚಾರಣೆ

ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ; ಧಾರವಾಡದ 4ನೇ ಹೆಚ್ಚುವರಿ ನ್ಯಾಯಾಲಯದಲ್ಲಿಂದು ಸಾಕ್ಷಿಗಳ ವಿಚಾರಣೆ
ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ

ಮಾರ್ಚ್ 17 ರಂದು ಧಾರವಾಡದ 4ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಐವರು ಆರೋಪಿಗಳನ್ನು ಪೊಲೀಸರು ಕರೆತಂದಿದ್ದರು. ಈ ವೇಳೆ ದೂರುದಾರರಾಗಿರೋ ಕಲಬುರ್ಗಿ ಅವರ ಮಗಳು ರೂಪದರ್ಶಿ ಅವರು ಹಂತಕರನ್ನು ಗುರುತಿಸಿದರು. ಇನ್ನು ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಕೂಡ ಅವತ್ತು ನಡೆದಿದ್ದ ಘಟನೆ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

TV9kannada Web Team

| Edited By: Ayesha Banu

Apr 05, 2022 | 10:06 AM

ಧಾರವಾಡ: ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರನ್ನು ಗುಂಡಿಟ್ಟು ಕೊಂದು ಈಗ ಏಳು ವರ್ಷಗಳೇ ಕಳೆದು ಹೋಗಿವೆ. ಕಲಬುರ್ಗಿ ಹತ್ಯೆಯ ಬಳಿಕ ನಾಡಿನ ಮತ್ತೋರ್ವ ವಿಚಾರವಾದಿ ಗೌರಿ ಲಂಕೇಶರನ್ನು ಸಹ ಇದೇ ರೀತಿ ಗುಂಡಿಟ್ಟು ಕೊಲ್ಲಲಾಗಿತ್ತು. ಆ ಬಳಿಕ ನಡೆದ ಎಸ್ಐಟಿ ತನಿಖೆಯಲ್ಲಿ ಗೌರಿ ಲಂಕೇಶ ಹತ್ಯೆಯ ಜೊತೆಗೆ ಕಲಬುರ್ಗಿ ಹಂತಕರನ್ನು ಬಂಧಿಸಲಾಗಿತ್ತು. ಸದ್ಯ ಸುದೀರ್ಘ ಅವಧಿಯ ಬಳಿಕ ಈಗ ಆರೋಪಿಗಳ ಪ್ರಮುಖ ವಿಚಾರಣೆ ಧಾರವಾಡ ನ್ಯಾಯಾಲಯದಲ್ಲಿ ಆರಂಭಗೊಂಡಿದೆ. ಇಂದು ಕೂಡ ಧಾರವಾಡದ 4ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ನಡೆಯಲಿದೆ.

ಒಟ್ಟು ಆರು ಆರೋಪಿಗಳ ವಿಚಾರಣೆ ಈ ಪ್ರಕರಣದ ಪ್ರಮುಖ ಆರೋಪಿಗಳಾದ ಗಣೇಶ ಮಿಸ್ಕಿನ್, ಅಮುಲ್ ಕಾಳೆ, ಅಮಿತ್ ಬದ್ದಿ, ವಾಸುದೇವ ಸೂರ್ಯವಂಶಿ, ಪ್ರವೀಣ ಚತುರ್ ಮತ್ತು ಶರತ್ ಕಲಾಸ್ಕರ್ ನ್ನು ಈ ಹಿಂದೆಯೇ ವಿಚಾರಣೆ ಮಾಡಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಎರಡು ವರ್ಷ ಭೌತಿಕ ಕಲಾಪಗಳೇ ನಡೆದಿರಲಿಲ್ಲ. ಎಲ್ಲ ಆರೋಪಿಗಳನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕವೇ ಸಾಕ್ಷಿಗಳ ಮುಂದೆ ಮುಖಾಮುಖಿಯಾಗಿಸಿ ವಿಚಾರಣೆ ನಡೆಸಬೇಕಿತ್ತು. ಹೀಗಾಗಿ ಮಾರ್ಚ್ 17 ರಂದು ಧಾರವಾಡದ 4ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಐವರು ಆರೋಪಿಗಳನ್ನು ಪೊಲೀಸರು ಕರೆತಂದಿದ್ದರು. ಈ ವೇಳೆ ದೂರುದಾರರಾಗಿರೋ ಕಲಬುರ್ಗಿ ಅವರ ಮಗಳು ರೂಪದರ್ಶಿ ಅವರು ಹಂತಕರನ್ನು ಗುರುತಿಸಿದರು. ಇನ್ನು ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಕೂಡ ಅವತ್ತು ನಡೆದಿದ್ದ ಘಟನೆ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಮಾರ್ಚ್ 17, 2022 ರಂದು ನಡೆದಿದ್ದ ವಿಚಾರಣೆಯಲ್ಲಿ ಏನಿತ್ತು? 2015ರ ಆಗಸ್ಟ್ 30ರಂದು ಬೆಳಗಿನ ಜಾವ ಕಲಬುರ್ಗಿಯವರು ಕಲ್ಯಾಣ ನಗರದಲ್ಲಿನ ತಮ್ಮ ಮನೆಯಲ್ಲಿ ಕುಳಿತಿದ್ದಾಗ, ಮನೆಗೆ ಬಂದ ಆಗಂತುಕರು ಬಾಗಿಲು ಬಡೆದಿದ್ದರು. ಆಗ ಹೊರಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆಯೇ ಕಲಬುರ್ಗಿಯವರ ತಲೆಗೆ ಗುಂಡು ಹೊಡೆದು ಆರೋಪಿಗಳು ಬೈಕ್ ಮೇಲೆ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಗುಂಡು ಹೊಡೆದವರು ಹುಬ್ಬಳ್ಳಿ ಮೂಲದ ಗಣೇಶ ಮಿಸ್ಕಿನ್ ಆನ್ನೋದು ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಮನೆಯಲ್ಲಿದ್ದ ಕಲಬುರ್ಗಿಯವರ ಪುತ್ರಿ ರೂಪದರ್ಶಿಯವರಿಗೆ ಆರೋಪಿಗಳನ್ನು ಗುರುತಿಸುವಂತೆ ಸೂಚಿಸಲಾಗಿತ್ತು. ಇದಕ್ಕೂ ಮೊದಲು ಅಂದು ನಡೆದ ಘಟನೆಯನ್ನು ನ್ಯಾಯಾಧೀಶರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಪುತ್ರಿ ರೂಪದರ್ಶಿ, ತಂದೆಯನ್ನು ನೆನೆದು ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದ್ದರು.

ಅಂದು ಗುಂಡು ಹೊಡೆದು ಹೋಗಿದ್ದ ಗಣೇಶ ಮಿಸ್ಕಿನ್‌ನನ್ನು ಗುರುತಿಸಿದ್ದ ವೇಳೆಯೂ ರೂಪದರ್ಶಿ ಕಣ್ಣೀರು ಹಾಕಿದ್ದರು. ಕಣ್ಣೀರು ಹಾಕುತ್ತಲೇ ಆಕ್ರೋಶದಿಂದ ಇವನೇ ಗುಂಡು ಹೊಡೆದಿದ್ದು ಅಂತಾ ಹೇಳಿದ್ದರು. ಇನ್ನು ಮಿಸ್ಕಿನ್ ಗುಂಡು ಹೊಡೆದಿದ್ರೆ, ಹೊರಗಡೆ ರಸ್ತೆಯಲ್ಲಿ ಬೈಕ್ ಮೇಲೆ ಮತ್ತೋರ್ವ ಆರೋಪಿ ಪ್ರವೀಣ ಚತುರ ಇದ್ದ. ಆತನೇ ಮಿಸ್ಕಿನ್‌ನನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಅದನ್ನೂ ಸಹ ರೂಪದರ್ಶಿ ಗುರುತಿಸಿದ್ದರು. ಈ ವಿಚಾರದ ಕುರಿತು ಸಮಗ್ರವಾದ ವಾದ-ವಿವಾದ ನಡೆದ ಬಳಿಕ ಕಲಬುರ್ಗಿಯವರ ಪತ್ನಿ ಉಮಾದೇವಿಯವರ ಸಾಕ್ಷ್ಯದ ವಿಚಾರಣೆಯನ್ನೂ ಸಹ ನಡೆಸಲಾಗಿತ್ತು. ಈ ವೇಳೆ ಸಾಕ್ಷಿಗಳನ್ನು ಏಕಕಾಲಕ್ಕೆ ಕ್ರಾಸ್ ಮಾಡಲು ತಮಗೆ ಸಿಆರ್‌ಪಿಸಿ 231 ಸೆಕ್ಷನ್ ಅಡಿಯಲ್ಲಿ ಅನುವು ಮಾಡಿಕೊಡುವಂತೆ ಅರ್ಜಿ ಸಹ ಸಲ್ಲಿಸಿದ್ದರು. ಈ ಮಧ್ಯೆ ವಿಚಾರಣೆಯಲ್ಲಿ ಕಲಬುರ್ಗಿಯವರು ಕೊಲೆ ನಡೆದ ಸಮಯದಲ್ಲಿ ಹಾಕಿಕೊಂಡಿದ್ದ ಶರ್ಟ್, ಬನಿಯನ್, ಪ್ಯಾಂಟ್, ಗುಂಡುಗಡಿಗೆ ಸೇರಿದಂತೆ ಅಂದಿನ ಕೆಲವೊಂದು ವಸ್ತುಗಳನ್ನು ಸಹ ನ್ಯಾಯಾಧೀಶರ ಮಧ್ಯೆ ಹಾಜರುಪಡಿಸಲಾಗಿತ್ತು.

ಎಸ್.ಐ.ಟಿ. ತಂಡದ ಅದ್ಭುತ ಕೆಲಸ ಒಟ್ಟಾರೆಯಾಗಿ ಕಲಬುರ್ಗಿಯವರ ಹತ್ಯೆ ನಡೆದಾಗ ಅವರನ್ನು ವಿಚಾರವಾದಿ ಅನ್ನೋ ಕಾರಣಕ್ಕಾಗಿಯೇ ಹತ್ಯೆ ಮಾಡಲಾಗಿದೆ ಅನ್ನೋ ದೊಡ್ಡ ಮಟ್ಟದ ಕೂಗು ಎದ್ದಿತ್ತು. ಮೇಲಾಗಿ ಮಹಾರಾಷ್ಟ್ರದ ವಿಚಾರವಾದಿ ದಾಬೋಲ್ಕರ, ಕಲಬುರ್ಗಿ ಹಾಗೂ ಗೌರಿ ಲಂಕೇಶ ಮೂರೂ ಹತ್ಯೆಗಳಲ್ಲಿ ಸಾಮ್ಯತೆಯೂ ಇತ್ತು. ಆದರೆ ಕಲಬುರ್ಗಿ ಹತ್ಯೆ ನಡೆದ ಬಳಿಕ ಅನೇಕ ವರ್ಷಗಳವರೆಗೆ ಆರೋಪಿಗಳು ಪತ್ತೆಯಾಗಿರಲಿಲ್ಲ. ಸಿಓಡಿ ತನಿಖೆ ಮಾಡುತ್ತಲೇ ಇತ್ತು. ಆದರೆ ಗೌರಿ ಲಂಕೇಶ ಹತ್ಯೆಯ ತನಿಖೆ ಕೈಗೊಂಡ ಎಸ್ಐಟಿಯವರೇ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕವೇ ಕಲಬುರ್ಗಿ ಹತ್ಯೆ ಕೇಸ್ ಗೆ ತಿರುವು ಸಿಕ್ಕಿತ್ತು. ಕೊರೊನಾ ಕಾರಣಕ್ಕೆ ಎರಡು ವರ್ಷ ವಿಳಂಬವಾಗಿ ವಿಚಾರಣೆ ಆರಂಭವಾಗಿದೆ. ಇಡೀ ಪ್ರಕರಣದ ವಿಚಾರಣೆ ಸಾಕಷ್ಟು ವಿಚಾರಗಳನ್ನು ಒಳಗೊಂಡಿರೋ ಕಾರಣಕ್ಕೆ ಸುದೀರ್ಘವಾದ ವಿಚಾರಣೆ ಇನ್ನೂ ಮುಂದುವರೆಯಲಿದ್ದು, ಇಂದು ಕೂಡ ವಿಚಾರಣೆ ಮುಂದುವರೆಯಲಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ

ಇದನ್ನೂ ಓದಿ: ಖ್ಯಾತ ಸಂಶೋಧಕರನ್ನು ಮರೆತೇ ಹೋದ ಸರ್ಕಾರ; ಡಾ.ಎಂ.ಎಂ.ಕಲಬುರ್ಗಿ ಹೆಸರಿನ ಸಂಶೋಧನಾ ಕೇಂದ್ರ ಸ್ಥಾಪನೆಗೆ ನಿರ್ಲಕ್ಷ್ಯ

ದೇಹದಲ್ಲಿರುವ ನಂಜಿನಾಂಶವನ್ನು ಹೊರಹಾಕಲು ಈ ಆಹಾರವನ್ನು ಸೇವಿಸಿ

Follow us on

Related Stories

Most Read Stories

Click on your DTH Provider to Add TV9 Kannada