ಹಾಸನ, ಆ.07: ಹಲವು ದಿನಗಳ ಆತಂಕದ ಬಳಿಕ ಶಿರಾಡಿಘಾಟ್(Shiradighat) ಸಂಚಾರಕ್ಕೆ ಮುಕ್ತವಾಗಿದ್ದು, ದಿನದ 24 ಗಂಟೆಯೂ ಎಲ್ಲಾ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಲೆನಾಡಿನಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ವಾಹನಗಳ ಓಡಾಟಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಹಲವು ಭಾರಿ ಗುಡ್ಡ ಕುಸಿದಿದ್ದ ಸ್ಥಳದಲ್ಲಿ ಮಣ್ಣನ್ನು ತೆರವು ಮಾಡಿ ಆತಂಕ ನಿವಾರಣೆ ಮಾಡಲಾಗಿದೆ. ಈ ಹಿನ್ನಲೆ ವಾಹನಗಳು ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಇನ್ನು ಹಲವು ವಾಹನಗಳ ಮೇಲೆ ಮಣ್ಣು ಕುಸಿದಿದ್ದು, ಗುಡ್ಡ ಕುಸಿದಿದ್ದರಿಂದ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ವಾಹನಗಳ ಓಡಾಟದ ಬಗ್ಗೆ ಸಕಲೇಶಪುರ ಎಸಿ ಶೃತಿ ಅವರು ಮಾಹಿತಿ ನೀಡಿದ್ದಾರೆ. ‘ಎರಡು ದಿನದಿಂದ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ರೆಸ್ಕ್ಯೂ ಟೀಂ ನಿಯೋಜನೆ ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು, ಎನ್ಹೆಚ್ ಟೀಂ ದಿನದ 24 ಗಂಟೆಯೂ ಸ್ಥಳದಲ್ಲಿರಲಿದೆ. ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದರು.
ಇದನ್ನೂ ಓದಿ:ಶಿರಾಡಿ ಘಾಟಿಗೆ ಸಿದ್ದರಾಮಯ್ಯ ಭೇಟಿ: ಭೂ ಕುಸಿತದ ಬಗ್ಗೆ ಸ್ಥಳೀಯರ ಅಭಿಪ್ರಾಯ ಕೇಂದ್ರಕ್ಕೆ ತಿಳಿಸುತ್ತೇನೆಂದ ಸಿಎಂ
ಇತ್ತ ಜುಲೈ.26 ರಿಂದ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ಬಂದ್ ಆಗಿತ್ತು. ಕಿ.ಮೀ ನಂ.63ರಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದ್ದ ಹಿನ್ನಲೆ ಇಲಾಖೆ ಕಾರ್ಮಿಕರು ಬರೋಬ್ಬರಿ 11 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಆ.05 ರಂದು ಹಳಿ ಮರುಸ್ಥಾಪಿಸಿದ್ದರು. ಕೇವಲ ಸಣ್ಣಪುಟ್ಟ ದುರಸ್ತಿ ಕೆಲಸಗಳು ಮಾತ್ರ ಬಾಕಿ ಇತ್ತು. ಈ ಹಿನ್ನಲೆ ಗೂಡ್ಸ್ ರೈಲುಗಳ ಸಂಚಾರಕ್ಕಷ್ಟೇ ಅವಕಾಶ ನೀಡಲಾಗಿದೆ. ಶೀಘ್ರದಲ್ಲಿಯೇ ರೈಲುಗಳ ಪುನರ್ ಸಂಚಾರ ಸಾಧ್ಯತೆ ನಿರೀಕ್ಷೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Wed, 7 August 24