ಹಾಸನ: ಹಾಸನಾಂಬೆಯ ದೇವಾಲಯ (Hasanabe Temple) ದರ್ಶನಕ್ಕೆ ಇಂದು ಕೊನೆಯ ದಿನವಾಗಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (C T Ravi) ದೇಗುಲದ ಬಳಿ ಗಿಳಿ ಶಾಸ್ತ್ರ (Parrot Astrology) ಕೇಳಿದ್ದಾರೆ. ಹಾಸನಾಂಬೆಯ ದರ್ಶನ ಪಡೆದು ವಾಪಸ್ ಬರೋ ವೇಳೆ ಬಿಜೆಪಿ ನಾಯಕ ಭವಿಷ್ಯ ಕೇಳಿದ್ದಾರೆ. ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಸಾಗಿ ಬಂದು ಸಿ.ಟಿ. ರವಿ ಇಂದು ಬೆಳಗ್ಗೆ ಶಾಸ್ತ್ರ ಕೇಳಿದರು. ಮೊದಲಿಗೆ ಶಾಸ್ತ್ರ ಹೇಳುವವನ ಹೆಸರು, ಊರು, ಎಷ್ಟು ವರ್ಷದಿಂದ ಈ ವೃತ್ತಿಯನ್ನು ಮಾಡುತ್ತಿದ್ದೀರಾ ಎಂದು ರವಿ ವಿಚಾರಿಸಿದರು.
ಬಳಿಕ ಸಿಟಿ ರವಿಯವರಿಗೆ ಭವಿಷ್ಯ ಹೇಳಿದ ಜ್ಯೋತಿಷಿ ನಿಮ್ಮ ಕೈ ರೇಖೆ ಚೆನ್ನಾಗಿದೆ. ಎಲ್ಲೇ ಹೋದರೂ ಅನ್ನ ಸಿಗುತ್ತದೆ. ಬಟ್ಟೆ, ಅನ್ನಕ್ಕೆ ನಿಮಗೆ ತೊಂದರೆಯಿಲ್ಲ. ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಶಾಸ್ತ್ರ ಹೇಳಿದ ಆತ. ನಿಮ್ಮ ಆರೋಗ್ಯ ಹಾಗೂ ನೀವು ಮಾಡುವ ಕೆಲಸದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ. ದಾನ ಧರ್ಮ ಮಾಡೋದ್ರಲ್ಲಿ ಉದಾರತೆ ಬೇಡ, ತಿಥಿ ಊಟ ಮಾಡೋದಕ್ಕೆ ಹೋಗಬೇಡಿ. ಹೀಗೆ ಶಾಸ್ತ್ರ ನೋಡಿ ಸಾಲು ಸಾಲು ವಿಚಾರಗಳನ್ನ ಆ ವ್ಯಕ್ತಿ ಹೇಳಿದರು.
ಭಾರತ ಮೌಲ್ಯಗಳ ಆಧಾರದಲ್ಲಿ ರೂಪಿತಗೊಂಡಿರುವ ರಾಷ್ಟ್ರ
ಇನ್ನು ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಸಂಜಾತ ರಿಷಿ ಸುನಕ್ ಆಯ್ಕೆ ವಿಚಾರ ಪ್ರಸ್ತಾಪಿಸಿ, ಯಾವ ಜನ ಭಾರತೀಯರಿಗೆ ಆಳುವ ಯೋಗ್ಯತೆ ಇಲ್ಲ ಅಂದಿದ್ರೋ ಇಂದು ಅವರ ದೇಶವನ್ನೇ ಆಳುವ ಯೋಗ್ಯತೆಯೂ ಇದೆ ಅನ್ನೋದನ್ನು ರಿಷಿ ಸುನಕ್ ಮೂಲಕ ತೋರಿಸಿದ್ದೇವೆ; ಸವಾಲುಗಳನ್ನು ಎದುರಿಸಿ ನಮ್ಮ ಸಾಮರ್ಥ್ಯ ಏನು ಅನ್ನೋದನ್ನ ತೋರಿಸಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಭಾರತ ಮೂಲದ ರಿಷಿ ಸೊನಕ್ ಆಯ್ಕೆಯಾಗಿರುವುದಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 1947 ರಲ್ಲಿ ಅಂದಿನ ಪ್ರಧಾನಮಂತ್ರಿ ಆಗಿದ್ದಂತಹ ವಿನ್ಸ್‌ಟಂಟ್ ಚರ್ಚಿಲ್ ಭಾರತೀಯರಿಗೆ ಭಾರತವನ್ನು ಆಳುವ ಯೋಗ್ಯತೆ ಇಲ್ಲ. ಅವರು ನಿಸ್ವಾರ್ಥದಿಂದ ಆಳ್ವಿಕೆ ನಡೆಸೋದಿಲ್ಲ. ಭಾರತ ಹತ್ತಾರು ಹೋಳುಗಳಾಗುತ್ತೆ, ಯಾರಿಗೂ ಸಾಮರ್ಥ್ಯವಿಲ್ಲ ಎಂಬಂತಹ ಮಾತುಗಳನ್ನು ಹೇಳಿದ್ದರು.
ಆದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಾವು ನಮ್ಮಲ್ಲಿ ಇರುವ ವಿವಿಧತೆಯನ್ನು ಏಕತೆಯಾಗಿ ಪರಿವರ್ತಿಸಿ ಸಮರ್ಥವಾಗಿ ಸವಾಲುಗಳನ್ನು ಮೆಟ್ಟಿ ಭಾರತ 75 ವರ್ಷಗಳ ಗಟ್ಟಿಯಾಗಿ ನಿಂತಿದೆ. ಜಗತ್ತಿನ ಅತ್ಯಂತ ಭಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಜನರ ಆಶಯಕ್ಕೆ ತಕ್ಕಂತೆ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯುತ್ತಿದೆ. ಸಾಮಾನ್ಯ ಛಾಯ್ವಾಲಾ ಕೂಡ ದೇಶದ ಪ್ರಧಾನಮಂತ್ರಿ ಆಗುವಂತಹ ಸೌಭಾಗ್ಯವನ್ನು ಕಂಡಿದೆ. ಅಷ್ಟು ಮಾತ್ರವಲ್ಲ, ಜಗತ್ತು ಸಂಕಷ್ಟದಲ್ಲಿ ಇದ್ದಾಗ ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ವ್ಯಾಕ್ಸಿನ್ ಕೊಡುವು ಮೂಲಕ ನೆರೆಹೊರೆಯ ರಾಷ್ಟ್ರಗಳ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಭಾರತ ಕೇವಲ ತನ್ನ ಬಗ್ಗೆ ಮಾತ್ರ ಆಲೋಚನೆ ಮಾಡೋದಿಲ್ಲ. ಜಗತ್ತಿನ ಬಗ್ಗೆ ಆಲೋಚನೆ ಮಾಡುತ್ತೆ ಅನ್ನುವ ಸಂದೇಶವನ್ನೂ ಕೊಟ್ಟಿದೆ.
ಭಾರತ ಮೌಲ್ಯಗಳ ಆಧಾರದಲ್ಲಿ ರೂಪಿತಗೊಂಡಿರುವ ರಾಷ್ಟ್ರ, ಈ ಮೌಲ್ಯಗಳಿಗೆ ಯಾವತ್ತು ಸೋಲಿಲ್ಲ. ಮೌಲ್ಯಗಳಿಗೆ ಹಿಂಜರಿತ ಬರಬಹುದು, ಸೋಲು ಯಾವತ್ತೂ ಬರಲು ಸಾಧ್ಯವಿಲ್ಲ. ಸುಳ್ಳು ವಿಜೃಂಭಿಸಬಹುದು, ಆದರೆ ಸತ್ಯದ ಮುಂದೆ ಅದು ಸೋಲಲೇಬೇಕು. ಭಾರತವನ್ನು ಮಣಿಸುವ ಎಲ್ಲಾ ಪ್ರಯತ್ನಕ್ಕೂ ನಾವು ಉತ್ತರವನ್ನು ಕೊಟ್ಟಿದ್ದೇವೆ. ಸವಾಲುಗಳನ್ನು ಎದುರಿಸಿದ್ದೇವೆ, ನಮ್ಮ ಸಾಮರ್ಥ್ಯ ಏನು ಅನ್ನೋದನ್ನ ತೋರಿಸಿದ್ದೇವೆ. ನಾನು ರಿಷಿ ಸೊನಕ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ
Published On - 1:14 pm, Wed, 26 October 22