Arasikere: ಮೇಕಪ್ ಯಡವಟ್ಟು, ಮದುವೆಯೇ ರದ್ದು! ಹಸೆಮಣೆ ಏರಬೇಕಿದ್ದ ಯುವತಿ ಮೇಕಪ್ ಮಾಡಿಸಿಕೊಂಡು ಅವಾಂತರ

Bridal make up: ಮೇಕಪ್ ಅಂತಾ ಮುಗಿಬೀಳೋ ಹೆಣ್ಣುಮಕ್ಕಳು ಕೊಂಚ ಯಡವಟ್ಟಾದ್ರು ಏನಾಗುತ್ತೆ ಎನ್ನೋದಕ್ಕೇ ಹಾಸನದ ಇದೊಂದು ಘಟನೆ ಸಾಕ್ಷಿಯಾಗಿದೆ. ಇನ್ನೊಂದು ವಾರ ಇರುವಾಗ ಮದುಮಗಳ ಬಾಳಲ್ಲಿ ನಡೆದ ಈ ಮೇಕಪ್ ಯಡವಟ್ಟು ಕಹಾನಿ ಮದುವೆಯನ್ನೇ ಮುಂದೂಡುವಂತೆ ಮಾಡಿದೆ.

Arasikere: ಮೇಕಪ್ ಯಡವಟ್ಟು, ಮದುವೆಯೇ ರದ್ದು! ಹಸೆಮಣೆ ಏರಬೇಕಿದ್ದ ಯುವತಿ ಮೇಕಪ್ ಮಾಡಿಸಿಕೊಂಡು ಅವಾಂತರ
ಮೇಕಪ್ ಯಡವಟ್ಟು, ಮದುವೆಯೇ ರದ್ದು
ಸಾಧು ಶ್ರೀನಾಥ್​

Updated on: Mar 04, 2023 | 6:47 AM

ನೀವು ಪದೇ ಪದೆ ಬ್ಯೂಟಿ ಪಾರ್ಲರ್ ಗೆ ಹೋಗ್ತೀರಾ.. ಫೇಷಿಯಲ್ ಮೇಕಪ್ ಅಂತಾ ಅಂದವಾಗಿ ಕಾಣೋಕೆ ತರಹೇವರಿ ಮೇಕಪ್ ಮಾಡಿಸಿಕೊಳ್ತೀರಾ… ಒಂದು ಕ್ಷಣ ಯೋಚಿಸಿ… ಈ ಸ್ಟೋರಿ ನೋಡಿ. ಹಾಸನದಲ್ಲಿ ಇನ್ನೊಂದೇ ವಾರಕ್ಕೆ ಹಸೆಮಣೆ ಏರಬೇಕಿದ್ದ ಮದುಮಗಳು (Bride) ಅಂದವಾಗಿ ಕಾಣಿಸಬೇಕು ಅಂತಾ ಮಾಡಿಸಿದ ಅದೊಂದು ಫೇಷಿಯಲ್ (Make up) ಆಕೆಯ ಬಾಳಿನಲ್ಲಿ ಅಲ್ಲೋಕ ಕಲ್ಲೋಲವನ್ನೇ ಮಾಡಿದೆ. ನೀಶ್ಚಯವಾಗಿದ್ದ ಮದುವೆಯೇ ರದ್ದಾಗಿದ್ದರೆ, ಆಕೆ ಆಸ್ಪತ್ರೆ ಸೇರಿ ಪರದಾಡಿದ್ದಾಳೆ! ಒಂದು ಮೇಕಪ್ (Facial, Beauty Parlour) ಎರಡು ಕುಟುಂಬಗಳನ್ನ ಕಣ್ಣೀರಿಡುವಂತೆ ಮಾಡಿದ್ದು ಅಷ್ಟಕ್ಕೂ ಈ ಮೇಕಪ್ ಸ್ಟೋರಿಯಲ್ಲಿ ಆಗಿದ್ದೇನು, ಮದುವೆ ನಿಂತಿದ್ದು ಯಾಕೆ ಈ ಸ್ಟೋರಿ ನೋಡಿ! ಬ್ಯೂಟಿ ಹೆಚ್ಚಿಸಲು ಮಾಡಿಸಿದ ಮೇಕಪ್ ನಿಂದ ಮಹಾ ಯಡವಟ್ಟು… ಮದುಮಗಳಿಗೆ ಮಾಡಿದ ಫೇಷಿಯಲ್ ನಲ್ಲಿ ಅವಾಂತರ ಹಸೆಮಣೆ ಏರಬೇಕಿದ್ದ (Marriage) ಯುವತಿಯ ಬಾಳಲ್ಲಿ ಅಲ್ಲೋಲಕಲ್ಲೋಲ… ಮದುವೆ ಕ್ಯಾನ್ಸಲ್… ಹುಡುಗಿ ಆಸ್ಪತ್ರೆ ಪಾಲು. ಹೌದು ಹಾಸನ ಜಿಲ್ಲೆ (Hassan) ಅರಸೀಕೆರೆ (Arasikere) ತಾಲ್ಲೂಕಿನಲ್ಲಿ ನಡೆದಿರೋ ಇದೊಂದು ಘಟನೆ ಇಡೀ ದೇಶದಲ್ಲಿ ಸದ್ದುಮಾಡುತ್ತಿದೆ.

ಈಗ ಮನೆಯ ಯಾವುದೇ ಕಾರ್ಯಕ್ರಮ ಇರಲಿ, ಮದುವೆ ಇರಲಿ.. ಎಂತಹುದೇ ಶುಭ ಸಮಾರಂಭ ಇರಲಿ ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೋಗೋದು.. ಅಲ್ಲಿ ಫೇಷಿಯಲ್ ಅಂತಾ ಕಾಂತಿ ಹೆಚ್ಚಿಸಿಕೊಳ್ಳೋ ಟ್ರೀಟ್ಮೆಂಟ್ ಮಾಡಿಸಿಕೊಳ್ಳೋದು ಮಾಮೂಲಿ… ಇನ್ನು ಮದುಮಗಳು ಅಂದ್ರೆ ಕೇಳಬೇಕಾ? ಅರಸೀಕೆರೆ ತಾಲ್ಲೂಕಿನ ಆ ಯುವತಿಗೆ ಮೊನ್ನೆಗೆ ಅಂದರೆ ಮಾರ್ಚ್ 2ಕ್ಕೆ ಮದುವೆ ನಿಶ್ಚಯವಾಗಿತ್ತು.

ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಮದುಮಗಳು ಅರಸೀಕೆರೆ ನಗರದ ಅದೊಂದು ಬ್ಯೂಟಿ ಪಾರ್ಲರ್ ಗೆ ಹೋಗಿ ಮದುವೆ ದಿನದ ಮೇಕಪ್ ಗೆ ಆರ್ಡರ್ ಮಾಡಿ, 10 ದಿನದ ಮೊದಲೇ ಮುಖದ ಕಾಂತಿ ಹೆಚ್ಚಿಸಿಕೊಳ್ಳೋಕೆ ಫೇಷಿಯಲ್ ಮಾಡಿಸಿಕೊಂಡಿದ್ದರು. ಮುಖ ಸ್ವಲ್ಪ ಫೇರ್ ಆಗಲಿ ಅಂತಾ ಮಾಡಿದ ಫೇಷಿಯಲ್ ಮರುದಿನ ಆಕೆಯ ಮುಖವನ್ನೇ ವಿಕಾರ ಮಾಡಿಬಿಟ್ಟಿದೆ!

ಇಡೀ ಮುಖ ಕಪ್ಪಾಗಿ ಸುಟ್ಟಂತೆ ಆಗಿದ್ದು ಮದುಮಗಳು ಹಾಗೂ ಇಡೀ ಕುಟುಂಬ ಆತಂಕಗೊಂಡಿದೆ. ಕೂಡಲೆ ಅರಸೀಕೆರೆಯ ಶಿವಕುಮಾರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮದುಮಗಳ ಮುಖ ಸಂಪೂರ್ಣ ವಿರೂಪಗೊಂಡಿದ್ದರಿಂದ ನಿಶ್ಚಯವಾಗಿದ್ದ ಮದುವೆ ದಿನಾಂಕವನ್ನು ರದ್ದುಮಾಡಿ ಮದುವೆಯನ್ನ ಮುಂದೂಡಲಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬ್ಯೂಟಿಷಿಯನ್ ಹಾಗೂ ಮದುಮಗಳ ಕಡೆಯವರ ರಾಜಿ ಸಂದಾನದಿಂದ ಪ್ರಕರಣ ಇತ್ಯರ್ಥವಾಗಿದೆಯಾದರೂ ನಡೆದಿರೋ ಘಟನೆಯ ಫೋಟೋಗಳು, ಎಲ್ಲೆಡೆ ವೈರಲ್ ಆಗಿದ್ದು ದೊಡ್ಡ ಸದ್ದುಮಾಡುತ್ತಿವೆ

ಶುಭ ಸಮಾರಂಭ ಅಂದ್ರೆ ಮೇಕಪ್ ಅಂತಾ ಮುಗಿಬೀಳೋ ಹೆಣ್ಣುಮಕ್ಕಳು ಕೊಂಚ ಯಡವಟ್ಟಾದ್ರು ಏನಾಗುತ್ತೆ ಎನ್ನೋದಕ್ಕೇ ಹಾಸನದ ಇದೊಂದು ಘಟನೆ ಸಾಕ್ಷಿಯಾಗಿದೆ. ಮದುವೆಗೆ ಇನ್ನೊಂದು ವಾರ ಇರುವಾಗ ಮದುಮಗಳ ಬಾಳಲ್ಲಿ ನಡೆದ ಈ ಮೇಕಪ್ ಯಡವಟ್ಟು ಕಹಾನಿ ಒಂದೆಡೆ ಬ್ಯೂಟಿಷಿಯನ್ ರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ, ಮದುಮಗಳು ಮದುವೆಯನ್ನೇ ಮುಂದೂಡುವಂತೆ ಮಾಡಿದೆ.

ವೈದ್ಯರು ಚಿಕಿತ್ಸೆ ನೀಡಿದ್ದು ಇದು ಕೆಮಿಕಲ್ ರಿಯಾಕ್ಷನ್ ನಿಂದ ಆಗೋ ಅವಾಂತರಗಳು ಹಾಗಾಗಿ ಬ್ಯೂಟಿಷಿಯನ್ ಗಳು ತಮ್ಮ ಬಳಿ ಬರೋ ಗ್ರಾಹಕರ ಬಗ್ಗೆ ತಿಳಿದುಕೊಂಡು ಮೇಕಪ್ ಮಾಡಬೇಕು. ಆಗ ಇಂತಹ ಎಡವಟ್ಟು ಆಗೋದಿಲ್ಲ, ಅವರು ಈ ಹಿಂದೆ ಬಳಸುತ್ತಿದ್ದ ಮೇಕಪ್ ಗಳು ಯಾವುವು? ಅವರ ಚರ್ಮದ ಗುಣ ಎಂತಹದ್ದು? ಏನಾದ್ರು ಅಲರ್ಜಿ ಇದೆಯಾ? ಹೀಗೆ ಎಲ್ಲಾ ಮಾಹಿತಿ ಪಡೆದು ಮೇಕಪ್ ಮಾಡಿದ್ರೆ ಇಂತಹ ಅನಾಹುತಗಳು ಆಗೋದಿಲ್ಲ.

ಸದ್ಯ ಈ ಯುವತಿ ಚಿಕಿತ್ಸೆ ಬಳಿಕ ಅರೋಗ್ಯವಾಗಿ ಇದ್ದಾರೆ. ಇನ್ನು ಎರಡು ಮೂರು ವಾರದಲ್ಲಿ ಅವರ ಮುಖ ಮೊದಲಿನಂತೆ ಆಗಲಿದ್ದು ಯಾವುದೇ ಸಮಸ್ಯೆ ಇಲ್ಲ, ಆದರೆ ಬ್ಯೂಟಿ, ಮೇಕಪ್ ಅಂತಾ ತಲೆ ಕೆಡಸಿಕೊಳ್ಳೋ ಮೊದಲು ಆತುರ ಮಾಡದೆ ಆಲೋಚಿಸಿ ಅಂತಾರೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ. ಶಿವಕುಮಾರ್.

ಒಟ್ನಲ್ಲಿ ಮದುವೆ ದಿನ ತಾನು ಅಂದವಾಗಿ ಕಾಣಬೇಕು ಅಂತಾ ಮಾಡಿಸಿಕೊಂಡ ಮೇಕಪ್ ಆಕೆಯ ಬಾಳಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆಗಿರೋ ಯಡವಟ್ಟು ಅರಿತ, ಸ್ವಂತ ಸಂಬಂಧಿಕರೇ ಆದ ವರನ ಕಡೆಯವರು ಮದುವೆ ದಿನಾಂಕ ಮುಂದೂಡಿ ಮದುವೆ ಮಾಡಿಕೊಳ್ಳಲು ಒಪ್ಪಿದ್ದು ಪ್ರಕರಣ ಸುಖಾಂತ್ಯವಾದಂತಾಗಿದೆ.

ವರದಿ: ಮಂಜುನಾಥ್ ಕೆ.ಬಿ, ಟಿವಿ9, ಹಾಸನ

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us