ಅನುಮಾನ ಉಳಿಸಿಯೇ ಆನೆ ಅಂತ್ಯಕ್ರಿಯೆ: ಮಣ್ಣಲ್ಲಿ‌ ಮಣ್ಣಾಯ್ತಾ ಅರ್ಜುನನ ಸಾವಿನ ರಹಸ್ಯ…!

Elephant Arjuna death: ಆನೆ ಅರ್ಜುನನಿಗೆ ಸಾವಿರಾರು ಜನರು ಕಣ್ಣೀದಿನಿಂದ ವಿದಾಯ ಹೇಳಿದ್ದಾರೆ. ಹೋಗಿ ಬಾ ದೊರೆ ಎಂದು ಭಾವುಕ ಬೀಳ್ಕೊಡುಗೆ ನೀಡಿದ್ದಾರೆ. ಇನ್ನು ಮಾವುತರ ಗೋಳಾಟ, ಆಕ್ರಂದನ ಮುಗಿಲು ಮುಟ್ಟಿತ್ತು. ಇದರ ನಡುವೆ ಸಕಲ ಸರ್ಕಾರಿ ಗೌರವಗೊಂದಿಗೆ ಅರ್ಜುನನ ಅಂತ್ಯಕ್ರಿಯೆ ಮಾಡಲಾಗಿದೆ. ಆದ್ರೆ, ಅರ್ಜುನ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಅರ್ಜುನನ ಸಾವಿನ ರಹಸ್ಯ ಮಣ್ಣಲ್ಲಿ ಮಣ್ಣಾಗಿದೆ.

ಅನುಮಾನ ಉಳಿಸಿಯೇ ಆನೆ ಅಂತ್ಯಕ್ರಿಯೆ: ಮಣ್ಣಲ್ಲಿ‌ ಮಣ್ಣಾಯ್ತಾ ಅರ್ಜುನನ ಸಾವಿನ ರಹಸ್ಯ...!
ಅರ್ಜುನ ಆನೆ
Edited By:

Updated on: Dec 06, 2023 | 8:40 AM

ಹಾಸನ, (ಡಿಸೆಂಬರ್ 06): ಸಾಕಾನೆ ಅರ್ಜುನನ (elephant arjuna)ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮಹಾ ಪ್ರಮಾದ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಲಿಗೆ ಗುಂಡೇಟು ಬಿದ್ದು ಅರ್ಜುನ ನೆಲಕ್ಕುರುಳಿದ್ದ. ಆಗ ಕಾಡಾನೆ ಕೋರೆಯಿಂದ ತಿವಿದು ಸಾಯಿಸಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಅರ್ಜುನನ ಸಾವಿನ ಬಗ್ಗೆ ಸ್ವತಃ ಮಾವುತನೇ ಅನುಮಾನ ವ್ಯಕ್ತಪಡಿಸಿದರೂ ಸಹ ತಲೆ ಕೆಡಿಸಿಕೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳು ಆತುರಾತುರವಾಗಿ ಗುಂಡಿಗೆ ಹಾಕಿ ಮಣ್ಣು ಮುಚ್ಚಿದ್ದಾರೆ.

ಅರ್ಜುನನ ದೇಹಕ್ಕೆ ಗುಂಡೇಟು ತಗುಲಿದೆ ಎಂಬ ಅನುಮಾನ ಇದ್ದರೂ ಸಹ ವಿಸ್ತ್ರತ ಮರಣೋತ್ತರ ಪರೀಕ್ಷೆ ನಡೆಯಲಿಲ್ಲ. ಅದಿಕಾರಿಗಳು ಕೇವಲ ಬಾಹ್ಯ ಮರಣೋತ್ತರ ಪರೀಕ್ಷೆ ನಡೆಸಿ ಕೈತೊಳೆದುಕೊಂಡಿದ್ದಾರೆ. ಅಲ್ಲದೇ ಕನಿಷ್ಟ ಅರ್ಜನನ ಮೃತದೇಹದ ಮತ್ತೊಂದು ಭಾಗವನ್ನು ನೋಡದೇ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಇದರೊಂದಿಗೆ ಅರ್ಜುನ ಸಾವಿನ ರಹಸ್ಯ ಮಣ್ಣಲ್ಲಿ ಮಣ್ಣಾಗಿದೆ.

ಇದನ್ನೂ ಓದಿ: ಮೈಸೂರು, ಹಾಸನ ಜಿಲ್ಲೆಯಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಗೆ ಸ್ಮಾರಕ ನಿರ್ಮಾಣ; ಈಶ್ವರ ಖಂಡ್ರೆ ನೇತೃತ್ವದ ಸಭೆಯಲ್ಲಿ ನಿರ್ಧಾರ

ಮೃತಪಟ್ಟ ವೇಳೆ ದೇಹದ ಎಡಭಾಗದ ಎರಡು ಕಾಲುಗಳನ್ನು ಮೇಲೆ ಮಾಡಿ ಬಿದ್ದಿದ್ದ. ಅರ್ಜುನನ ಬಲ‌ಕಾಲಿಗೆ ಗುಂಡೇಟು ಬಿದ್ದಿತ್ತು. ಗುಂಡೇಟು ತಗುಲಿದ ಬಳಿಕ ಅರ್ಜುನ ಬಲ ಹೀನನಾದ, ಬಳಿಕ ಕಾಡಾನೆ ಜೊತೆ ಹೋರಾಟ ಸಾದ್ಯವಾಗಲಿಲ್ಲ ಎಂದು ಮಾವುತ ವಿನು ಹಾಗೂ ಕಾವಾಡಿಗ ಅನಿಲ್ ಹೇಳಿದ್ದಾರೆ. ಇದರಿಂದ ಅರ್ಜುನನ ಸಾವಿಗೆ ಗುಂಡೇಟು ಒಂದು ಕಾರಣ ಇರಬಹುದಾ ಎಂಬ ಅನುಮಾನ ಇದ್ದರೂ ಕೂಡ ಮರಣೋತ್ತರ ಪರೀಕ್ಷೆ ನಡೆಯಲಿಲ್ಲ. ಮೃತದೇಹದ ಮತ್ತೊಂದು ಮಗ್ಗುಲು ಹೊರಳಿಸಿ ನೋಡೋ ಬಗ್ಗೆಯೂ ಅಧಿಕಾರಿಗಳು ಕ್ರಮ ವಹಿಸಿಲ್ಲ. ಬದಲಾಗಿ ಅರ್ಜುನ ಮೃತಪಟ್ಟು ಬಿದ್ದ ಸ್ಥಿತಿಯಂತೆಯೇ ಗುಂಡಿಗಿಳಿಸಿದ್ದಾರೆ.

ಕೇವಲ ದಂತ ತೆಗೆದು, ದೇಹದ ಒಂದು ಭಾಗದ ಬಾಹ್ಯ ಪರೀಕ್ಷೆ ನಡೆಸಿ ಇದೇ ಮರಣೋತ್ತರ ಪರೀಕ್ಷೆ ಎನ್ನುತ್ತಿದ್ದಾರೆ. ಆದರೆ ಕನಿಷ್ಠ ಜನರ ಅನುಮಾನ ದೂರಮಾಡಲಾದರೂ ಸೂಕ್ತ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಸದ ಅಧಿಕಾರಿಗಳು, ದಸರಾ ಆನೆ, ಅಂಬಾರಿ ಆನೆ ಎನ್ನೋ ನೆಪ ಹೇಳಿ ಅನುಮಾನ ಉಳಿಸಿಯೇ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳ ನಡೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಉನ್ನತ ತನಿಖೆಯಾಗಬೇಕೆಂದು ಜನರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ