ಮನೆಗೆ ಬೀಗ ಜಡಿದ ಖಾಸಗಿ ಫೈನಾನ್ಸ್​: ವಾರದಿಂದ ಬೀದಿ ಬದಿಯೇ ವೃದ್ಧ ದಂಪತಿ ವಾಸ!

ಹಾಸನದಲ್ಲಿ ಖಾಸಗಿ ಫೈನಾನ್ಸ್ ಅಮಾನವೀಯ ಕೃತ್ಯದಿಂದ ವೃದ್ಧ ದಂಪತಿ ಬೀದಿಪಾಲಾಗಿದ್ದಾರೆ. ಮಗನ ಕ್ಯಾನ್ಸರ್ ಚಿಕಿತ್ಸೆಗೆ ಪಡೆದ 2 ಲಕ್ಷ ಸಾಲ ಮರುಪಾವತಿ ವಿಳಂಬಕ್ಕೆ ಫೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಜಡಿದಿದ್ದು, ವಾರದಿಂದ ಕೊರೆಯುವ ಚಳಿಯಲ್ಲಿ ವೃದ್ಧರು ಬೀದಿಯಲ್ಲೇ ವಾಸಿಸುವಂತಾಗಿದೆ. ಸಾಲ ಕಟ್ಟಲು ಸಮಯ ಕೋರಿ ದಂಪತಿ ಕಣ್ಣೀರಿಟ್ಟಿದ್ದು, ಸಾರ್ವಜನಿಕರ ನೆರವಿಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಸಾಲ ನೀಡಿದ್ದ ಹಣ ವಾಪಸ್ಸು ಕೇಳಿದಕ್ಕೆ ಮಹಿಳೆ ಮೇಲೆ ಹಲ್ಲೆ ಆರೋಪ ಹುಣಸೂರಲ್ಲಿ ಕೇಳಿಬಂದಿದೆ.

ಮನೆಗೆ ಬೀಗ ಜಡಿದ ಖಾಸಗಿ ಫೈನಾನ್ಸ್​: ವಾರದಿಂದ ಬೀದಿ ಬದಿಯೇ ವೃದ್ಧ ದಂಪತಿ ವಾಸ!
ವೃದ್ಧ ದಂಪತಿ
Edited By:

Updated on: Jan 18, 2026 | 10:02 AM

ಹಾಸನ, ಜನವರಿ 18: ರಾಜ್ಯದಲ್ಲಿ ಖಾಸಗಿ ಫೈನಾನ್ಸ್​​ಗಳ ಹಾವಳಿ ಮಿತಿ ಮೀರುತ್ತಿದ್ದು, ಮನೆಗೆ ಬೀಗ ಜಡಿದ ಪರಿಣಾಮ ವೃದ್ಧ ದಂಪತಿ ಬೀದಿಗೆ ಬಂದ ಅಮಾನವೀಯ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಸಾಲ ಕಟ್ಟಿಲ್ಲ ಎಂದು ವೃದ್ಧ ದಂಪತಿ ಸಣ್ಣಯ್ಯ(80), ಜಯಮ್ಮ(75)ರನ್ನ ಫೈನಾನ್ಸ್​​ ಸಿಬಂದಿ ಹೊರಹಾಕಿದ್ದು, ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ವಾಸಮಾಡಬೇಕಾದ ಸ್ಥಿತಿ ಉದ್ಭವಿಸಿದೆ. ಕೋರ್ಟ್ ಆದೇಶ ಎಂದು ಮನೆ ಹಾಗೂ ಕೊಟ್ಟಿಗೆಗೂ ಬೀಗ ಹಾಕಿರುವ ಆರೋಪ ಕೇಳಿಬಂದಿದೆ.

2023ರಲ್ಲಿ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಮನೆ ಅಡಮಾನ ಇಟ್ಟು ಖಾಸಗಿ ಫೈನಾನ್ಸ್​ ಬಳಿ 2 ಲಕ್ಷ ರೂ. ಸಾಲವನ್ನು ವೃದ್ಧ ದಂಪತಿ ಪಡೆದಿದ್ದರು. ಒಂದು ವರ್ಷ ಸಾಲದ ಕಂತುಕೂಡ ಕಟ್ಟಿದ್ದರು ಎನ್ನಲಾಗಿದ್ದು, ಫೈನಾನ್ಸ್ ಕಂಪನಿಯ ಅಮಾನವೀಯ ಕೃತ್ಯಕ್ಕೆ ಜನರ ಆಕ್ರೋಶ ವ್ಯಕ್ತವಾಗಿದೆ. ಒಂದು ವಾರದಿಂದ ಮನೆಯ ಹೊರಗೇ ವಾಸ ಮಾಡ್ತಿರೋ ದಂಪತಿ, ನಾವು ಸಾಲ ಕಟ್ಟುತ್ತೇವೆ ಸಮಯ ಕೊಡಿ ಎಂದು ಕೈ ಮುಗಿದು ಅಂಗಲಾಚುತ್ತಿದ್ದಾರೆ. ಜೊತೆಗೆ ಸಾಲ ತೀರಿಸಲು ತಮಗೆ ಯಾರಾದರೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಚೋರ್​​ ಮಗ ಚಂಡಾಳ್​​ ಅಪ್ಪ; ದೇಗುಲದಲ್ಲಿ ಕದ್ದು ಸಿಕ್ಕಿಬಿದ್ದ ಐನಾತಿಗಳು!

ಸಾಲ ನೀಡಿದ್ದ ಹಣ ವಾಪಸ್ಸು ಕೇಳಿದಕ್ಕೆ ಹಲ್ಲೆ ಆರೋಪ

ಸಾಲ ನೀಡಿದ್ದ ಹಣ ವಾಪಸ್ಸು ಕೇಳಿದಕ್ಕೆ ಸಂಬಂಧಿಕರಿಂದ ಮಹಿಳೆ ಮೇಲೆ ಹಲ್ಲೆ ಆರೋಪ ಹುಣಸೂರು ತಾಲೂಕಿನ ಹಳೆ ವಾರಂಚಿ ಗ್ರಾಮದಲ್ಲಿ ಕೇಳಿಬಂದಿದೆ. ನೀಲಮ್ಮ ಎಂಬ ಮಹಿಳೆ ಮೇಲೆ ಹಲ್ಲೆ ರವಿ, ಅಂಕಿತ, ರೋಷನ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಹಲ್ಲೆಗೊಳಗಾದ ನೀಲಮ್ಮ ಪತಿ ಶಿವರಾಜ್ ಭಾರತೀಯ ಸೇನೆಯಲ್ಲಿದ್ದು, ತಮ್ಮ ಸಂಬಂಧಿ ರವಿ ಪತ್ನಿ ಲೀಲಾವತಿಗೆ 10 ಸಾವಿರ ಹಣವನ್ನು ನೀಡಿದ್ದರು. ಹೀಗಾಗಿ ಪತಿ ನೀಡಿರುವ ಹಣ ಹಿಂತಿರುಗಿ ನೀಡುವಂತೆ ನೀಲಮ್ಮ ಕೇಳಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಏಕಾಏಕಿ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ನೀಲಮ್ಮ ತಲೆಗೆ ಪೆಟ್ಟಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.