ಹಾಸನ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಉಲ್ಬಣ: ಜಾತ್ರೆ, ಸಂತೆ ನಿಷೇಧ
ಈಗಾಗಲೇ ಕಾಲುಬಾಯಿ ಜ್ವರದಿಂದ ನೂರಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಹೀಗಾಗಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಾತ್ರೆ, ಸಂತೆ ನಿಷೇಧಿಸಲಾಗಿದೆ.
ಹಾಸನ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಉಲ್ಬಣಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಟೋಬರ್ 13ರವರೆಗೆ ಜಾತ್ರೆ ಮತ್ತು ಸಂತೆ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣ, ಅರಸೀಕೆರೆ, ಅರಕಲಗೂಡು, ಬೇಲೂರು, ಹಾಸನ, ಸಕಲೇಶಪುರ ತಾಲ್ಲೂಕುಗಳಲ್ಲಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಕಾಲುಬಾಯಿ ಜ್ವರದಿಂದ ನೂರಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಹೀಗಾಗಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಾತ್ರೆ, ಸಂತೆ ನಿಷೇಧಿಸಲಾಗಿದೆ.
ಹಾಸನ ಮತ್ತು ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಚೆಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಕಳೆದ ಮೇ ತಿಂಗಳಲ್ಲಿ ಕೋಲಾರ ತಾಲ್ಲೂಕು ಪುರಹಳ್ಳಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಹಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. ಕೋಲಾರ ಜಿಲ್ಲೆಯಲ್ಲಿ ಸರಿಸುಮಾರು 1,86,285 ಹಸುಗಳು ಸೇರಿದಂತೆ, 2,15,533 ಜಾನುವಾರುಗಳಿವೆ.
ಈ ಪೈಕಿ ಕಾಲು ಬಾಯಿ ರೋಗ ಜಿಲ್ಲೆಯ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಪಶುಸಂಗೋಪನಾ ಇಲಾಖೆ ಈಗಾಗಲೇ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಿದೆ, ಹೀಗಿದ್ದರೂ ಕೆಲವು ರೈತರು ಲಸಿಕೆ ಹಾಕಿಸಿದರೆ ಹಾಲು ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಲಸಿಕೆ ಹಾಕಿಸದೆ ನಿರ್ಲಕ್ಷ್ಯ ವಹಿಸುತ್ತಾರೆ ಪರಿಣಾಮ ಜಿಲ್ಲೆಯ ಕೆಲವು ಹಸುಗಳಲ್ಲಿ ಕಾಲುಬಾಯಿ ರೋಗ ಕಂಡುಬಂದಿದೆ.
ಈ ರೋಗ ಗಾಳಿಯ ಮೂಲಕವೂ ಹರಡುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ಹಸುಗಳಲ್ಲಿ ಕಾಲುಬಾಯಿ ರೋಗ ಹರಡುವ ಆತಂಕ ಎದುರಾಗಿದೆ. ಇದೇ ಕಾಲುಬಾಯಿ ರೋಗಕ್ಕೆ 2013ರಲ್ಲಿ ಜಿಲ್ಲೆಯ ಸಾವಿರಾರು ಹಸುಗಳು ಸಾವನ್ನಪ್ಪಿದ್ದವು. ಹೀಗಾಗಿ ಇಂತಹ ಕಹಿ ಘಟನೆ ಮತ್ತೆ ಮರುಕಳಿಸಿದರೆ ನಷ್ಟವಾಗುವತ್ತದೆ. ಸೂಕ್ತ ಕಾಲಕ್ಕೆ ಕಾಲು ಬಾಯಿ ರೋಗ ಹರಡದಂತೆ ಪಶು ಸಂಗೋಪನಾ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಒಟ್ಟಾರೆ ಮತ್ತೆ ಜಿಲ್ಲೆಯಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು, ಅದು ವ್ಯಾಪಕವಾಗಿ ಹರಡುವ ಮುನ್ನವೇ ಪಶುಸಂಗೋಪನಾ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅದರ ನಿಯಂತ್ರಣ ಮಾಡಬೇಕಿದೆ. ಇಲ್ಲವಾದಲ್ಲಿ ಜಿಲ್ಲೆಯ ಹೈನೋದ್ಯಮಕ್ಕೆ ಮತ್ತೆ ಆತಂಕ ಎದುರಾಗುವ ಸಾಧ್ಯತೆ ಇದೆ.
(Foot Mouth Disease for Animals in Hassan District DC Cancels all Fares)
ಇದನ್ನೂ ಓದಿ: ಕೋಲಾರದಲ್ಲಿ ಮತ್ತೆ ಕಾಣಿಸಿಕೊಂಡಿದೆ ಕಾಲುಬಾಯಿ ರೋಗ; ಜಾನುವಾರುಗಳ ರಕ್ಷಣೆ ಮಾಡುವಂತೆ ರೈತರ ಆಗ್ರಹ
ಇದನ್ನೂ ಓದಿ: ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಜಾನುವಾರಗಳು; ಕಾಲುಬಾಯಿ ರೋಗದಿಂದ ಕಂಗಾಲಾದ ಆನೆಕಲ್ ರೈತರು