ಹಾಸನ: ಪ್ರತಿಯೊಬ್ಬ ಮನುಷ್ಯನೂ ತನ್ನ ಹುಟ್ಟಿದ ಹಬ್ಬವನ್ನ ಒಂದಲ್ಲ ಒಂದು ರೀತಿಯಲ್ಲಿ ಸಂಭ್ರಮಿಸುತ್ತಾನೆ. ಕೇಕ್ ಕತ್ತರಿಸಿ, ಪಾರ್ಟಿಮಾಡಿ, ತನ್ನ ಆಪ್ತರ ಜೊತೆಗೆ ಖುಷಿ ಹಂಚಿಕೊಳ್ತಾನೆ. ಆದ್ರೆ ಹಾಸನದ ಅಶ್ವಪ್ರಿಯರು ತಮ್ಮ ಪ್ರೀತಿಯ ಮುದ್ದಾದ ಕುದುರೆಗೂ ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬ ಆಚರಿಸಿ ಪ್ರಾಣಿಪ್ರೀತಿ ಮೆರೆದಿದ್ದಾರೆ. ಹಾಸನ ನಗರದ ರೈಲ್ವೆ ಕ್ವಾಟ್ರಸ್ ನಲ್ಲಿರೋ ರಾಂಫರ್ ಹೆಸರಿನ ಈ ಅಪರೂಪದ ಕುದುರೆಗೆ ಈಗ 7ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.
ನಿನ್ನೆ ರಾತ್ರಿ ಸಂಭ್ರಮದಿಂದ ತಮ್ಮ ನೆಚ್ಚಿನ ಕುದುರೆಗೆ ಅಲಂಕಾರ ಮಾಡಿ, ಪುಟಾಣಿ ಮಕ್ಕಳು ಮಹಿಳೆಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದ್ರು. ಕುದುರೆ ಅಂದ್ರೆ ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡೋ ಹಾಸನದ ಐಟಿ ಉದ್ಯೋಗಿ ವಾಸುದೇವ್, ರೈಲ್ವೆ ಇಲಾಖೆಯ ಬಲರಾಮ್, ಸಾರಿಗೆ ಇಲಾಖೆಯ ಸಮೀರ್, ರಬ್ಬು, ಗೃಹಿಣಿ ಉಮಾ ಹೀಗೆ ಐವರು ಸೇರಿ ಒಂದು ಕುದುರೆಯನ್ನ ಖರೀದಿ ಮಾಡಿ ತಂದು ಅಕ್ಕರೆಯಿಂದ ಸಲಹುತ್ತಿದ್ದಾರೆ. ಮನೆ ಮಗುವಿನಂತೆ ಆರೈಕೆ ಮಾಡಿ ರೈಡ್ ಮಾಡುತ್ತಾ ಕುದುರೆಯನ್ನ ಸಾಕುತ್ತಿದ್ದಾರೆ. ಮೂಲತಃ ಮಾಹಾರಾಷ್ಟ್ರದ ಸಾರಂಗ್ ಖೆಡ್ ಎಂಬಲ್ಲಿ 12 ಲಕ್ಷಕೊಟ್ಟು ಖರೀದಿಮಾಡಿ ಹಾಸನಕ್ಕೆ ಎರಡು ವರ್ಷಗಳ ಹಿಂದೆ ತರಲಾಗಿದ್ದು ಕುದುರೆ ಸವಾರಿ ಇಷ್ಟಪಡೋರಿಗೆ ಹಾರ್ಸ್ ರೇಡಿಂಗ್ ಹೇಳಿಕೊಡೋ ಜೊತೆಗೆ ಪ್ರಾಣಿ ಪ್ರೀತಿಯನ್ನ ಹರಡಲಾಗುತ್ತಿದೆ.
ರಾಂಫರ್ಗೆ ಏಳನೇ ಹುಟ್ಟು ಹಬ್ಬ
ರಾಂಫರ್ ಕುದುರೆಗಳಲ್ಲಿಯೇ ಅಪರೂಪದ ತಳಿ, ಮಹಾರಾಜ ಮಹಾರಾಣಾ ಪ್ರತಾಪ್ ಬಳಸುತ್ತಿದ್ದ ಕುದುರೆ ಜಾತಿಯದ್ದೆ ತಳಿ ಇದಾಗಿದ್ದು ಸದ್ಯ ದಕ್ಷಿಣ ಭಾರತದಲ್ಲೇ ಈ ಕುದುರೆ ಅತ್ಯಂತ ಎತ್ತರದ್ದು ಎನ್ನಲಾಗಿದೆ. ಸುಮಾರು 64 ಇಂಚು ಎತ್ತರವಿರೋ ಈ ಕುದುರೆ ನೋಡೋಕೆ ಆಕರ್ಶಕವಾಗಿದೆ. ತಿಂಗಳಿಗೆ 15ರಿಂದ 20ಸಾವಿರ ಖರ್ಚುಮಾಡಿ ಈ ಕುದುರೆ ಪ್ರಿಯರು ತಮ್ಮ ನೆಚ್ಚಿನ ಕುದುರೆಯನ್ನ ಸಲಹುತ್ತಿದ್ದಾರೆ. ರೇಡಿಂಗ್ ಗೆ ಹೇಳಿಮಾಡಿಸಿದಂತಾ ಕುದುರೆ ಇದಾಗಿದ್ದು ಇದರ ಹುಟ್ಟಿದ ದಿನವನ್ನು ಕೂಡ ಬರೆದಿಡಲಾಗಿದೆ. ಅದರ ಪ್ರಕಾರ ಮಾರ್ಚ್ 15 ರಾಂಪರ್ ಹುಟ್ಟಿದ ದಿನವಾಗಿದ್ದು, ಮಾರ್ಚ್ 19ರಂದು ಮನೆ ಮಂದಿ, ಸ್ನೇಹಿತರು, ಆಪ್ತರು ಎಲ್ಲರೂ ಸೇರಿ ಮುದ್ದಿನ ಕುದುರೆಗೆ ಅಲಂಕಾರ ಮಾಡಿ, ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದ್ರು. ಕುದುರೆಗೂ ಕೇಕ್ ಕತ್ತರಿಸಿ ಸಂಭ್ರಮಿಸಿದ ಅಶ್ವ ಪ್ರಿಯರು ತಮ್ಮ ಪ್ರೀತಿಯ ಕುರುದರೆಯನ್ನ ಕೊಂಡಾಡಿದ್ರು.
ಮಾಲೀಕನಿಗೆ ಪ್ರಾಣ ಕೊಡೋ ಕುದುರೆ
ಕುದುರೆಗಳಲ್ಲಿಯೇ ಅತ್ಯಂತ ಖ್ಯಾತಿಯಾದ ಮಾರ್ವರಿ ಥಳಿಯ ಕುದುರೆ ವೈಯಕ್ತಿಕ ಬಳಕಗೆ ಹೇಳಿ ಮಾಡಿಸಿದ ಕುದುರೆ, ಒಮ್ಮೆ ಈ ಕುದುರೆ ಮಾಲೀಕನಿಗೆ ಒಗ್ಗಿಕೊಂಡರೆ ಮಾಲೀಕ ಹೇಳೋವರೆಗೂ ಓಡೋದನ್ನ ನಿಲ್ಲಿಸೋದಿಲ್ಲವಂತೆ. ತನ್ನ ಪ್ರಾಣ ಹೋಗೋವರೆಗೂ ಮಾಲೀಕನ ಜೊತೆಗೆ ನಿಲ್ಲುತ್ತಂತೆ ಅಷ್ಟೊಂದು ವಿಶಿಷ್ಟ ಗುಣದ ಕುದುರೆ ಥಳಿ ಮಾರ್ವರಿ, ರಾಜ ಮಹರಾಜರು ಕೂಡ ಇದೇ ಥಳಿಯ ಕುದುರೆಗಳನ್ನ ಬಳಸುತ್ತಿದ್ದರು, ಅದ್ರಲ್ಲೂ ಯುದ್ದದ ವೇಳೆಯಲ್ಲಿ ಎತ್ತರದ, ಕಟ್ಟು ಮಸ್ತಾದ ಕುದುರೆಗಳಿದ್ದರೆ ರಾಜರು ರಣ ರಂಗದಲ್ಲಿ ವೀರಾವೇಶದಿಂದ ಹೊರಾಡಲು ಕುದುರೆಗಳೇ ಆಸರೆಯಾಗುತ್ತಿದ್ದವು. ಈಗ ಯುದ್ದಕ್ಕೆ ಕುದುರೆಗಳನ್ನ ಬಳಸದಿದ್ದರು ಫ್ಯಾಷನ್ ಗಾಗಿ ಹಲವರು ವೈಯಕ್ತಿಕವಾಗಿ ಕುದುರೆಗಳನ್ನ ಸಾಕುತ್ತಾರೆ. ಹಾಸನದ ಈ ಐವರು ಸ್ನೇಹಿತರಿಗೂ ಕೂಡ ಕುದುರೆ ಎಂದರೆ ಅಚ್ಚುಮೆಚ್ಚು ಹಾಗಾಗಿಯೇ ಕುದುರೆ ಖರೀದಿಸಿ ತರಬೇಕು ಆ ಕುದುರೆ ವಿಶಿಷ್ಟವಾಗಿರಬೇಕು ಎಂದು 12 ಲಕ್ಷ ಖರ್ಚುಮಾಡಿ ಕುದುರೆ ತಂದು ನಿತ್ಯವೂ ರೇಡ್ ಮಾಡುತ್ತಾ ಕುದುರೆಯನ್ನ ಸಲಹೋ ಜೊತೆಗೆ ಕುದುರೆ ಬಳಕೆಯ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.
ಫಿಟ್ನೆಸ್ ಗೂ ಅನುಕೂಲ ಹಾರ್ಸ್ ರೇಡಿಂಗ್
ಕುದುರೆ ರೇಡ್ ಮಾಡೋರು ಅರೋಗ್ಯವಾಗಿರ್ತಾರೆ. ಯಾವುದೇ ಪ್ರತ್ಯೇಕ ವ್ಯಾಯಾಮ, ರನ್ನಿಂಗ್ ಅವಶ್ಯಕತೆ ಇರೋದಿಲ್ಲ, ನಿತ್ಯವೂ ಹಾರ್ಸ್ ರೇಡಿಂಗ್ ಮಾಡಿದ್ರೆ ಫಿಟ್ಸೆಸ್ ಚನ್ನಾಗಿರೋ ಜೊತೆಗೆ ಮನುಷ್ಯನ ಅರೋಗ್ಯ ಕೂಡ ಹೆಚ್ಚಾಗುತ್ತೆ, ಹಾರ್ಟ್ ಅಟ್ಯಾಕ್ ನಂತಹ ಖಾಯಿಲೆಗಳು ಹತ್ತಿರ ಸುಳಿಯೋದಿಲ್ಲ ಎನ್ನೋದು ಹಾರ್ಸ್ ಪ್ರಿಯರ ಅಭಿಪ್ರಾಯ ಹಾಗಾಗಿಯೇ ಕುದುರೆ ಸವಾರಿ ಒಂದು ಹವ್ಯಾಸಮಾಡಿಕೊಂಡರೆ ಅರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಅನುಕೂಲ ಎನ್ನೋದು ಕುದುರೆ ಪ್ರಿಯರ ಮಾತು.
ನಾವು ಹಾಸನ್ ಹಾರ್ಸ್ ಲವರ್ಸ್ ಗ್ರೂಪ್ ಮಾಡಿಕೊಂಡು ಕುದುರೆ ರೇಡ್ ಮಾಡುತ್ತೇವೆ. ನಾವೆಲ್ಲಾ ಒಟ್ಟಿಗೇ ಸೇರಿ ಕುದುರೆ ಖರೀದಿ ಮಾಡಿದೆವು, ಮಹಾರಾಣ ಪ್ರತಾಪ್ ಬಳಸುತ್ತಿದ್ದ ಥಳಿಯ ಕುದುರೆ ಇದು. ಇದು ಮಾಲೀಕನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡೋ ನಂಬಿಕಸ್ತ ಕುದುರೆ ಇದು ನಮ್ಮ ಬಳಿ ಇರೋ ಅತಿ ದೊಡ್ಡ ಕುದುರೆ ಇದು 64 ಇಂಚು ಎತ್ತರದ ಕುದುರೆ ಇದಾಗಿದ್ದು ನಾವು ಕೇವಲ ಫಿಟ್ನೆಸ್ ಹಾಗು ಒತ್ತಡದ ಜೀವನ ದಿಂದ ಮುಕ್ತಿ ಪಡೆಯಲು ಕುದುರೆ ಸವಾರಿ ಮಾಡುತ್ತಿದ್ದು ನಮ್ಮ ಪ್ರೀತಿಯ ಕುದು್ರೆಗೆ ಹುಟ್ಟು ಹಬ್ಬ ಆಚರಣೆ ಮಾಡಿದ್ದು ನಮಗೂ ಖೂಷಿಯಾಗಿದೆ ಎಂದು ಐಟಿ ಉದ್ಯೋಗಿ, ವಾಸುದೇವ್ ತಿಳಿಸಿದ್ದಾರೆ.
ನಾನು ಚಿಕ್ಕಂದಿನಲ್ಲಿ ಅಜಯ್ ವಿಜಯ್ ಸಿನಿಮಾ ನೋಡಿ ಕುದುರೆ ರೇಡ್ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ಅಂದಿನಿಂದ ಕುದುರೆ ಓಡಿಸಬೇಕು ಎನ್ನೋ ಆಸೆ ಇತ್ತು ಹಾಗಾಗಿ ಗೆಳೆಯರ ಜೊತೆಗೆ ಸೇರಿ ಮಹಾರಾಷ್ಟ್ರದ ಸಾರಂಗ್ ಖೇಡ್ ನಿಂದ ಕುದುರೆ ಖರೀದಿಮಾಡಿ ತಂದೆವು, ಕುದುರೆ ರೇಡ್ ಮಾಡೋದ್ರಿಂದ ಉತ್ತಮ ಅರೋಗ್ಯವಂತ ಜೀವನ ನಮ್ಮದಾಗುತ್ತೆ ಎಂದು ರೈಲ್ವೆ ಉದ್ಯೋಗಿ, ಬಲರಾಂ ಹೇಳಿದ್ರು.
ಒಟ್ನಲ್ಲಿ ಮಹಾರಾಷ್ಟ್ರದಲ್ಲಿ ಹುಟ್ಟಿ ಹಾಸನಕ್ಕೆ ಬಂದು ಕುದುರೆ ಪ್ರಿಯ ಅಚ್ಚು ಪೆಚ್ಚಿನ ರಾಂಪರ್ ಆಗಿರೋ ಮಾರ್ವರಿ ಥಳಿಯ ಕುದುರೆಗೆ ಹುಟ್ಟು ಹಬ್ಬದ ಸಂಭ್ರಮ, ತಮ್ಮಿಷ್ಟದ ಕುದುರೆಯನ್ನ ಮನೆ ಮಗನಂತೆ ಸಿಂಗರಿಸಿ, ಎಲ್ಲರನ್ನೂ ಒಟ್ಟುಗೂಡಿಸಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದ ಗೆಳೆಯರ ಬಳಕದ ಪ್ರಾಣಿ ಪ್ರೀತಿ ನಿಜಕ್ಕು ಮೆಚ್ಚುವಂತದ್ದು.
ವರದಿ: ಮಂಜುನಾಥ್-ಕೆ.ಬಿ, ಟಿವಿ9 ಹಾಸನ
ಇದನ್ನೂ ಓದಿ: SA vs BAN: ಕ್ವಿಂಟನ್ ಡಿಕಾಕ್ ಸಿಡಿಲಬ್ಬರದ ಅರ್ಧಶತಕ: ಕೆಎಲ್ ರಾಹುಲ್ ಫುಲ್ ಖುಷ್
ಭಾರತದ ವಿದೇಶಾಂಗ ನೀತಿ ಉತ್ತಮವಾಗಿದೆ ಎಂದು ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್
Published On - 9:40 pm, Sun, 20 March 22