ಭಾರತದ ವಿದೇಶಾಂಗ ನೀತಿ ಉತ್ತಮವಾಗಿದೆ ಎಂದು ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಮಲಕಂಡ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖಾನ್, "ಮೇ ಆಜ್ ಹಿಂದೂಸ್ತಾನ್ ಕೋ ದಾದ್ ದೇತಾ ಹೂಂ (ನಾನು ಇಂದು ಭಾರತಕ್ಕೆ ಸಲ್ಯೂಟ್ ಮಾಡುತ್ತೇನೆ). ಅದು ಯಾವಾಗಲೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಉಳಿಸಿಕೊಂಡಿದೆ" ಎಂದು ಹೇಳಿದರು.

ಪಾಕಿಸ್ತಾನದ (Pakistan) ಪ್ರಧಾನಿ ಇಮ್ರಾನ್ ಖಾನ್ (Imran Khan) ಭಾನುವಾರ ಭಾರತ ಮತ್ತು ಅದರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಮಲಕಂಡ್‌ನಲ್ಲಿ(Malakand) ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖಾನ್, “ಮೇ ಆಜ್ ಹಿಂದೂಸ್ತಾನ್ ಕೋ ದಾದ್ ದೇತಾ ಹೂಂ (ನಾನು ಇಂದು ಭಾರತಕ್ಕೆ ಸಲ್ಯೂಟ್ ಮಾಡುತ್ತೇನೆ). ಅದು ಯಾವಾಗಲೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಉಳಿಸಿಕೊಂಡಿದೆ” ಎಂದು ಹೇಳಿದರು. “ಭಾರತವು ಅಮೆರಿಕದೊಂದಿಗೆ ಕ್ವಾಡ್ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದೆ. ಆದರೆ ಇನ್ನೂ ಅದು ತನ್ನನ್ನು ತಟಸ್ಥ ಎಂದು ಕರೆಯುತ್ತದೆ. ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾದಿಂದ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಏಕೆಂದರೆ ಭಾರತದ ವಿದೇಶಾಂಗ ನೀತಿ ತನ್ನ ಜನರಿಗಾಗಿದೆ” ಎಂದು ಪಾಕಿಸ್ತಾನದ ವೆಬ್‌ಸೈಟ್ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಖಾನ್ ಹೇಳಿಕೆಯನ್ನು ಉಲ್ಲೇಖಿಸಿದೆ. ಜನವರಿಯಲ್ಲಿ ಇಮ್ರಾನ್ ಖಾನ್ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಉತ್ಕರ್ಷಕ್ಕಾಗಿ ಭಾರತವನ್ನು ಹೊಗಳಿದ್ದರು ಮತ್ತು ಹೂಡಿಕೆಗಳನ್ನು ಆಕರ್ಷಿಸುವ ನೀತಿಗಳನ್ನು ಶ್ಲಾಘಿಸಿದರು. ಮಾರ್ಚ್ 25 ರಂದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆಯಲಿರುವ ಜಂಟಿ ವಿರೋಧ ಪಕ್ಷದ ಅವಿಶ್ವಾಸ ನಿರ್ಣಯದ ನಡುವೆ ಇಮ್ರಾನ್ ಖಾನ್ ಅವರ ಹೇಳಿಕೆ ಬಂದಿದೆ. ಅವರ ಪಕ್ಷ ಪಿಟಿಐನ ಗಣನೀಯ ಸಂಖ್ಯೆಯ ಶಾಸಕರು ಸರ್ಕಾರದ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ನಂಬಲಾಗಿದೆ.
ತಮ್ಮ ಭಾಷಣದಲ್ಲಿ 69 ವರ್ಷದ ರಾಜಕಾರಣಿ ಅವರು ಭಿನ್ನಮತೀಯ ಶಾಸಕರನ್ನು ‘ಕರುಣಾಮಯಿ’ ತಂದೆಯಾಗಿ ಕ್ಷಮಿಸಲು ಸಿದ್ಧ ಎಂದು ಹೇಳಿದರು. “ಪಕ್ಷದ ಮಡಿಲಿಗೆ ಹಿಂತಿರುಗಿ ಅಥವಾ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಿ” ಎಂದು ಖೈಬರ್-ಪಖ್ತುಂಖ್ವಾ ನಗರದಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಹೇಳಿದ್ದಾರೆ.
ಇತ್ತ ಇಮ್ರಾನ್ ಖಾನ್ ಅವರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿವೆ ಮತ್ತು ಖಾನ್ ಸಾಹೇಬರ ಸರ್ಕಾರ ಪತನಗೊಳ್ಳುವುದು ಖಚಿತ ಎನ್ನಲಾಗುತ್ತಿದೆ. ಪಾಕಿಸ್ತಾನದಲ್ಲಂತೂ ರಾಜಕೀಯ ವಿಪ್ಲವ ಶುರುವಾಗಿದೆ. ಏತನ್ಮಧ್ಯೆ, ಪಾಕಿಸ್ತಾನದ ಆಡಳಿತ ಪಕ್ಷ ತೆಹ್ರೀಕ್-ಎ-ಇನ್ಸಾಫ್ ನ (ಪಿಟಿಐ) ಸಂಸ್ಥಾಪಕ ಸದಸ್ಯರಾಗಿರುವ ನಜೀಬ್ ಹರೂನ್) ಅವರು ಶನಿವಾರ ಹೇಳಿಕೆಯೊಂದನ್ನು ನೀಡಿ, ದೇಶದಲ್ಲಿ ಎದ್ದಿರುವ ರಾಜಕೀಯ ತಲ್ಲಣ ಶಮನಗೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಇಮ್ರಾನ್ ಖಾನ್ ಅವರು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಎಂದಿದ್ದಾರೆ ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜಿಯೋ ಟಿವಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹರೂನ್ ಅವರು, ‘ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ಸ್ಥಾನವನ್ನು ತ್ಯಜಿಸಿ ಪಿಟಿಐ ಪಕ್ಷದ ಮತ್ತೊಬ್ಬ ಸದಸ್ಯನನ್ನು ಆ ಸ್ಥಾನಕ್ಕೆ ನಿಯುಕ್ತಿ ಮಾಡಬೇಕು,’ ಎಂದು ಹೇಳಿದರು.
‘ಪ್ರಸ್ತುತವಾಗಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಬಗೆಹರಿದು ಮುಂದೆ ಸಾಗಬೇಕೆಂದರೆ ಇದೊಂದೇ ಮಾರ್ಗ ಇರೋದು,’ ಎಂದು ಹರೂನ್ ಹೇಳಿದ್ದಾರೆ.
‘ರಾಜಕೀಯ ಅಸ್ಥಿರತೆಯಿಂದ ದೇಶ ಕಂಗೆಟ್ಟಿದೆ, ಇದನ್ನು ಮುಂದುವರಿಯಲು ಬಿಡಬಾರದು, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ಹಟಮಾರಿ ಧೋರಣೆಯನ್ನು ತ್ಯಜಿಸಿ ಪಕ್ಷದ ಮತ್ತೊಬ್ಬ ಸದಸ್ಯನನ್ನು ಪ್ರಧಾನ ಮಂತ್ರಿಯಾಗಿ ಘೋಷಿಸಬೇಕು,’ ಎಂದು ಅವರು ಟಿವಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ ಅಂತ ವರದಿಯಾಗಿದೆ.
ಇಮ್ರಾನ್ ಖಾನ್ ಅವರ ಸರ್ಕಾರ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ದಿನಾಂಕ ಸಮೀಪವಾಗುತ್ತಿದ್ದಂತೆಯೇ ಆಡಳಿತ ಪಕ್ಷ ಪಿಟಿಐನ ಹಲವಾರು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರು ಪಕ್ಷದೊಂದಿಗೆ ತಾವು ಬಾಂಧವ್ಯ ಕಡಿದುಕೊಂಡಿರುವುದಾಗಿ ಹೇಳುತ್ತಿದ್ದು ಮುಂದಿನ ಚುನಾವಣೆಯಲ್ಲಿ ಪಿಟಿಐ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಅಷ್ಟು ಮಾತ್ರವಲ್ಲ ಖಾನ್ ಸಂಪುಟದ ಮೂವರು ಸಚಿವರು ಈಗಾಗಲೇ ಸರ್ಕಾರದಿಂದ ಹೊರಬಂದಿದ್ದಾರೆ ಎಂದು ಒಬ್ಬ ಸದಸ್ಯ ಹೇಳಿದ್ದಾರೆ.
ಇದನ್ನೂ ಓದಿ: Video: ಪಾಕಿಸ್ತಾನದ ಸಿಯಾಲ್ಕೋಟ್ ಸೇನಾ ನೆಲೆಯಲ್ಲಿ ಭಯಂಕರ ಸ್ಫೋಟ; ತೀವ್ರ ಬೆಂಕಿ, ಆವರಿಸಿದ ದಟ್ಟ ಹೊಗೆ




