ಒಬ್ಬ ಹೊರಗೆ ಮತ್ತೊಬ್ಬ ಕಾರಿನೊಳಗೆ, ಹಾಸನದಲ್ಲಿ ಬೆಚ್ಚಿ ಬೀಳಿಸಿದ ಗುಂಡಿನ ಸದ್ದು: ಆಗಿದ್ದೇನು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 20, 2024 | 9:19 PM

ಹಾಡಹಗಲೇ ಹಾಸನ ನಗರದಲ್ಲಿ ನಡೆದಿರೊ ಗುಂಡಿನದಾಳಿಯಲ್ಲಿ ಇಬ್ಬರು ಬಲಿಯಾಗಿದ್ದು, ರಿಯಲ್ ಎಸ್ಟೇಟ್ ಉದ್ಮಮಿಗಳಾಗಿದ್ದ ಪರಿಚಿತರಿಬ್ಬರ ನಡುವೆ ನಡೆದ ಕಲಹದಲ್ಲಿ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಗುಂಡಿಕ್ಕಿ ಹತ್ಯೆಗೈದು ಬಳಿಕ ಕಾರಿನೊಳಗೆ ತಾನೂ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೋಟಿ ಕೋಟಿ ವ್ಯವಹಾರ ಮಾಡುತ್ತಿದ್ದ ಪರಿಚಿತರಿಬ್ಬರ ನಡುವೆ ಶುರುವಾಗಿದ್ದ ಆಸ್ತಿ ವೈಶಮ್ಯ, ಕೊಲೆಯಲ್ಲಿ ಅಂತ್ಯವಾಯ್ತಾ ಎನ್ನೋ ಅನುಮಾನ ವ್ಯಕ್ತವಾಗಿದ್ದು, ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರೆ, ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಕೂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಬಳಿಕ ಗುಂಡಿನ ದಾಳಿ ಹಿಂದಿನ ಅಸಲಿ ಸತ್ಯ ಬಯಲಾಗಲಿದೆ.

ಒಬ್ಬ ಹೊರಗೆ ಮತ್ತೊಬ್ಬ ಕಾರಿನೊಳಗೆ, ಹಾಸನದಲ್ಲಿ ಬೆಚ್ಚಿ ಬೀಳಿಸಿದ ಗುಂಡಿನ ಸದ್ದು: ಆಗಿದ್ದೇನು?
ಹಾಸನದಲ್ಲಿ ಬೆಚ್ಚಿ ಬೀಳಿಸಿದ ಗುಂಡಿನ ಸದ್ದು
Follow us on

ಹಾಸನ, ಜೂ.20: ಹಲವು ವರ್ಷಗಳ ಬಳಿಕ ಹಾಸನ(Hassan) ನಗರದಲ್ಲಿ ಗುಂಡಿನ ಮೊರೆತ ಕೇಳಿ ಬಂದಿದೆ. ಹಾಡಹಗಲೇ ನಗರದ ಹೃದಯಭಾಗ, ಜನವಸತಿ ಪ್ರದಶದಲ್ಲೇ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದಾರೆ. ಹೊಯ್ಸಳ ನಗರ ಬಡಾವಣೆಯ ಒಂದನೇ ಕ್ರಾಸ್ ನಲ್ಲಿ ಘಟನೆ ನಡೆದಿದ್ದು, ಕಾರಿನ ಒಳಗೆ ಆಶಿಫ್ ಅಲಿ ತುರವಿ(48) ಮೃತದೇಹ ಪತ್ತೆಯಾಗಿದ್ದರೆ, ಕಾರಿನ ಹೊರಗೆ ಹಾಸನ ಮೂಲದ ಶುಂಟಿ ವ್ಯಾಪಾರಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಶರಾಫತ್ ಅಲಿ(50) ಮೃತದೇಹ ಪತ್ತೆಯಾಗಿದೆ.

ಆಗಿದ್ದೇನು?

ಬೆಂಗಳೂರು ಮೂಲದ ಆಶಿಫ್ ಅಲಿ ತುರವಿ ಹಾಸನದ ಶರಾಫತ್ ಜೊತೆ ಸೇರಿ ರಿಲಯ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರಂತೆ, ಹೊಯ್ಸಳ ನಗರ ಬಡಾವಣೆಯಲ್ಲಿ ನಿವೇಶನವೊಂದರ ಸಂಬಂಧ ಇಬ್ಬರ ನಡುವೆ ವಿರಸ ಇದ್ದ ಬಗ್ಗೆ ಮಾಹಿತಿ ಇದ್ದು, ಇಂದು ಮಧ್ಯಾಹ್ನ ಅಲ್ಲಿಗೆ ಬಂದಿದ್ದ ಇಬ್ಬರ ನಡುವೆ ವಾಗ್ವಾದ ನಡೆದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ, ಮಾತು ವಿಕೋಪಕ್ಕೆ ತಿರುಗಿ ಒಬ್ಬರ ಮೇಲೆ ಇನ್ನೊಬ್ಬ ಗುಂಡು ಹಾರಿಸಿ ಹತ್ಯೆಗೈದು ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:ಗುಂಡಿನ ದಾಳಿ ಪ್ರಕರಣದಲ್ಲಿ ಸಲ್ಮಾನ್​ ಖಾನ್​ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ಕಾರಿನ ಹೊರಗೆ ಶರಾಫತ್ ಅಲಿ ಮೃತದೇಹ ಬಿದ್ದಿರೋದ್ರಿಂದ ಹಾಗು ಕಾರಿನೊಳಗೆ ಆಶಿಫ್ ಅಲಿ ಮೃತದೇಹದ ಸಮೀಪವೇ ಪಿಸ್ತೂಲ್ ಪತ್ತೆಯಾಗಿರೋದ್ರಿಂದ ಶರಾಫತ್​ನನ್ನ ಹತ್ಯೆಗೈದ ಬಳಿಕ ಆಶಿಫ್ ತಾನೂ ತಲೆಗೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹಾಸನ ಬಡಾವಣೆ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ‘ಶರಾಫತ್ ಹಾಗು ಆಶಿಫ್ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಇದ್ದ ಬಗ್ಗೆ ಮಾಹಿತಿ ಇದೆ. ಆದ್ರೆ, ಘಟನೆಗೆ ಕಾರಣ ಏನು ಎನ್ನೋ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಮೂಲತಃ ಬಿಹಾರದವರಾಗಿರುವ ಶರಾಫತ್ ಅಲಿ ಕುಟುಂಬ, ಅವರ ತಾತನ ಕಾಲದಲ್ಲೇ ಹಾಸನಕ್ಕೆ ಬಂದು ನೆಲೆಸಿದ್ದರಂತೆ. ಶುಂಠಿ ವ್ಯವಹಾರ ನಡೆಸುತ್ತಿದ್ದ ಶರಾಫತ್, ರಿಯಲ್ ಎಸ್ಟೇಟ್ ಉದ್ಯಮಕ್ಕೂ ಕೈ ಹಾಕಿದ್ದರು. ಇವರಿಗೆ ಜೊತೆಯಾಗಿದ್ದ ಬೆಂಗಳೂರು ಮೂಲದವರಾಗಿರುವ ಹಾಗು ಹಾಸನದ ಅಳಿಯನೂ ಆಗಿರುವ ಆಸಿಫ್ ಅಲಿ ತುರವಿ ಒಟ್ಟಿಗೇ ಸೆರಿ ವ್ಯವಹಾರ ಮಾಡೊಕೆ ಶುರುಮಾಡಿದ್ದರು. ಆದ್ರೆ, ಇಬ್ಬರ ನಡುವೆ ಪರಸ್ಪರ ಗುಂಡಿಹಾರಿಸಿಕೊಳ್ಳುವಷ್ಟು ವೈರತ್ವ ಏನಿತ್ತು ಎನ್ನುವುದು ಈಗ ನಿಗೂಡವಾಗಿದೆ.

ಇದನ್ನೂ ಓದಿ:ಮಾಲೆಗಾಂವ್​ನಲ್ಲಿ ಎಐಎಂಐಎಂ ನಾಯಕನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಮಧ್ಯಾಹ್ನ 1-30ರ ಸುಮಾರಿಗೆ ಶರಾಫತ್ ಕಾರಿನಲ್ಲೇ ಬಂದ ಇಬ್ಬರು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಬಳಿಕ ಗುಂಡುಹಾರಿದ ಸದ್ದುಕೇಳಿ ಸ್ಥಳೀಯರು ಹೊರ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಹಾಸನ ಎಸ್ಪಿ ಮಹಮದ್ ಸುಜೀತಾ ಸ್ಥಳ ಪರಿಶೀಲನೆ ನಡೆಸಿ ಘಟನೆಯಲ್ಲಿ ಬೇರೆ ಯಾರ ಕೈವಾಡ ಇದ್ದ ಬಗ್ಗೆ ಶಂಕೆ ಇಲ್ಲ. ಕಾರಿನೊಳಗೆ ಪಿಸ್ತೂಲ್ ಪತ್ತೆಯಾಗಿದ್ದು ಒಬ್ಬರ ಮೇಲೆ ಗುಂಡು ಹಾರಿಸಿ ಬಳಿಕ ಮತ್ತೊಬ್ಬರು ಗುಂಡು ಹಾರಿಸಿಕೊಂಡ ಬಗ್ಗೆ ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ಬಂದ ಶರಾಫತ್ ಕುಟುಂಬ ಸದಸ್ಯರ ಆಕ್ರಂದ ಮುಗಿಲು ಮುಟ್ಟಿತ್ತು, ದೊಡ್ಡ ಮಟ್ಟದ ಶುಂಠಿ ವ್ಯಾಪಾರಿಯಾಗಿದ್ದ ಶರಾಫತ್, ದೊಡ್ಡ ವ್ಯವಹಾರ ನಡೆಸುತ್ತಿದ್ದರು. ಇಬ್ಬರ ನಡುವೆ ವ್ಯವಹಾರ ಚನ್ನಾಗಿಯೇ ಇತ್ತು. ಆದ್ರೆ, ಇಂದಿನ ಘಟನೆಗೆ ಕಾರಣ ಏನು ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಬೆಂಗಳೂರು ನಗರದಲ್ಲಿ ಆಸಿಫ್ ಅಲಿ ಪಿಸ್ತೂಲ್ ಲೈಸೆನ್ಸ್ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದ್ರೆ, ಅದೇ ಪಿಸ್ತೂಲ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎನ್ನೋದು ಹೆಚ್ಚಿನ ತನಿಖೆಯಿಂದ ಬಯಲಾಗಬೇಕಿದೆ.

ಸ್ಥಳದಲ್ಲಿ ಬೆರಳಚ್ಚು ತಜ್ಞರು, ಎಫ್.ಎಸ್ ಎಲ್ ಟೀಂ ಪರಿಶೀಲನೆ ನಡೆಸಿದ್ದು ಗುಂಡಿನ ದಾಳಿ ಹಿನ್ನೆಲೆಯಲ್ಲಿ ಬ್ಯಾಲೆಸ್ಟಿಕ್ ತಜ್ಫರ ಮೂಲಕವೂ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇಬ್ಬರ ನಡುವೆ ಎಲ್ಲವೂ ಚನ್ನಾಗಿತ್ತು, ಆದ್ರೆ, ಇಂತಹ ಘಟನೆ ಯಾಕಾಯ್ತು ಎನ್ನುವ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ. ಒಟ್ನಲ್ಲಿ ಜಿಲ್ಲಾ ಕೇಂದ್ರ ಹಾಸನ ನಗರದ ಹೃದಯಭಾಗದಲ್ಲಿ ಹಾಡಹಗಲೇ ನಡೆದ ಭೀಕರ ಹತ್ಯೆ ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ. ಕೋಟಿ ಕೋಟಿ ವ್ವವಹಾರ ಮಾಡುತ್ತಾ ಯಾರೊಂದಿಗೂ ವಿರಸ ಇಲ್ಲದೆ ಜೀವನ ಸಾಗಿಸುತ್ತಿದ್ದ ಶರಾಫತ್ ಅಲಿಯನ್ನ ಆಸಿಫ್ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಾವಿನ ಹಿಂದೆ ಆಸ್ತಿ ವ್ಯವಹಾರ ಇದೆಯಾ, ಅಥವಾ ವೈಯಕ್ತಿಕ ದ್ವೇಷ ಇದೆಯಾ ಎನ್ನೊದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ