ಹಾಸನಾಂಬ ದೇವಿ ದರ್ಶನ ಅಂತ್ಯ: ದಾಖಲೆಯ 20 ಲಕ್ಷ ಭಕ್ತರಿಂದ ದರ್ಶನ

| Updated By: ವಿವೇಕ ಬಿರಾದಾರ

Updated on: Nov 03, 2024 | 8:04 AM

ಹಾಸನದ ಹಾಸನಾಂಬ ದೇವಿಯ ದರ್ಶನವು ನವೆಂಬರ್ 3 ರಂದು ಅಂತ್ಯಗೊಂಡಿತು. ಒಂಬತ್ತು ದಿನಗಳಲ್ಲಿ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ವಿಶ್ವರೂಪ ದರ್ಶನ ನಡೆಯುತ್ತದೆ. ಈ ವರ್ಷ ದಾಖಲೆಯ ಸಂಖ್ಯೆಯ ಭಕ್ತರು ಆಗಮಿಸಿ ದೇವಿಯ ಆಶೀರ್ವಾದ ಪಡೆದರು.

ಹಾಸನಾಂಬ ದೇವಿ ದರ್ಶನ ಅಂತ್ಯ: ದಾಖಲೆಯ 20 ಲಕ್ಷ ಭಕ್ತರಿಂದ ದರ್ಶನ
ಹಾಸನಾಂಬ
Follow us on

ಹಾಸನ, ನವೆಂಬರ್​ 03: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ (Hassan) ಅಧಿದೇವತೆ ಹಾಸನನಾಂಬ (Hasanamba) ದೇವಿ ದರ್ಶನ ಅಂತ್ಯವಾಗಿದೆ. ಇಂದು (ನ.03) ಹಾಸನಾಂಬ ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಹೀಗಾಗಿ ದೇವಾಲಯದ ಆವರಣ ಭಕ್ತರಿಂದ ತುಂಬಿ ತುಳುಕುತ್ತಿದೆ. ವಿಶ್ವರೂಪ ದರ್ಶನ ಬಳಿಕ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ​​ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಶಾಸಕ ಸ್ವರೂಪ್‌, ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಎಸ್​​ಪಿ ಮೊಹಮ್ಮದ್​ ಸುಜಿತಾ ಮತ್ತು ಎಸಿ ಮಾರುತಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಬಂದ್​ ಮಾಡಲಾಗುತ್ತದೆ.

ಅಕ್ಟೋಬರ್​ 24 ಗುರುವಾರ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್​ 25 ರಿಂದ ನವೆಂಬರ್​ 03 ನಸುಕಿನ ಜಾವ 6 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಒಂಬತ್ತು ದಿನಗಳಲ್ಲಿ ದಾಖಲೆಯ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದರು. ಮತ್ತು ಹಾಸನಾಂಬ ದೇಗುಲಕ್ಕೆ 9 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದು ಬಂದಿದೆ.

ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಭಕ್ತರು ದೇವಿಯ ದರ್ಶನ ಪಡೆದರು. ದರ್ಶನದ ಕೊನೆಯ ದಿನವಾದ ಶನಿವಾರ ಹಲವು ಶಾಸಕರು, ಮಾಜಿ ಸಚಿವರುಗಳು ಹಾಗೂ ಅಧಿಕಾರಿಗಳು ದೇವಿ ದರ್ಶನ ಪಡೆದು ಪುನೀತರಾದರು.

ಇದನ್ನೂ ಓದಿ: ಹಾಸನಾಂಬ ದೇಗುಲದ ಇತಿಹಾಸ ಮತ್ತು ಸಪ್ತ ಮಾತೃಕೆಯರು ಇಲ್ಲಿ ನೆಲೆಸಿದ್ದು ಹೇಗೆ? ಇಲ್ಲಿದೆ ಮಾಹಿತಿ

ದೀಪವಾವಳಿ ಹಬ್ಬ ಇದ್ದರೂ ಕೂಡ ನಾಡಿನ ಮೂಲೆ ಮೂಲೆಯಿಂದ ಬಂದಿದ್ದ ಭಕ್ತರು ಸರತಿ ಸಾಲುಗಳಲ್ಲಿ ನಿಂತು ಶ್ರದ್ದಾ ಭಕ್ತಿಯಿಂದ ಬಂದು ದೇವಿಯ ಆಶೀರ್ವಾದ ಪಡೆದುಕೊಂಡ​ರು. ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ಸಂಖ್ಯೆಯಲ್ಲಿ ಭಕ್ತರು ಶಕ್ತಿ ದೇವತೆಯನ್ನು ಕಣ್ತುಂಬಿಕೊಂಡರು. ದೇವಿಯ ಗರ್ಭಗುಡಿಯೊಳಗಿನ ಆರದ ದೀಪವನ್ನು ನೋಡಿ ಪುನೀತರಾದರು.

ಹಾಗೇ ನಾಡಿನ ಹಲವು ಗಣ್ಯರು ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಧರ್ಮೇಂದ್ರ ಸೇರಿದಂತೆ ಹಲವು ಶಾಸಕರು ಕುಟುಂಬ ಸಮೇತವಾಗಿ ಬಂದು ಹಾಸನಾಂಬೆ ದರ್ಶನ ಪಡೆದರು. ಜೊತೆಗೆ ಧಾರ್ಮಿಕ ಗುರುಗಳು ಕೂಡ ದೇವಿಯ ಆಶೀರ್ವಾದಕ್ಕೆ ಪಾತ್ರರಾದರು.

ಹಾಸನಾಂಬ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಕಲ ರೀತಿ ತಯಾರಿ ಮಾಡಿಕೊಂಡಿತ್ತು. ಪ್ರತಿಯೊಂದಕ್ಕೂ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗಿತ್ತು. ಆದರೂ ಕೂಡ ಅಕ್ಟೋಬರ್ 31ರಂದು ದೇವಿ ದರ್ಶನಕ್ಕೆ ಬಂದಿದ್ದ ಜನಸಾಗರ ಹಲವು ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ವಿವಿಐಪಿ, ವಿಐಪಿ ಪಾಸ್ ರದ್ದು ಮಾಡಿ ಎಲ್ಲರಿಗೂ ಧರ್ಮ ದರ್ಶನಕ್ಕೆ ಅವಕಾಶ ನೀಡಿದ್ದರಿಂದ ಗೊಂದಲ ನಿವಾರಣೆ ಆಯಿತು.

ಮುಖ್ಯಮಂತ್ರಿಗಳು, ಹೈಕೋರ್ಟ್ ನ್ಯಾಯಾದೀಶರುಗಳು, ಸಚಿವರು, ಮಾಜಿ ಸಚಿವರು, ಶಾಸಕರು, ಸಾಧು ಸಂತರುಗಳು ಸೇರಿ ಸಮಾಜದ ಹಲವು ಕ್ಷೇತ್ರದ ಗಣ್ಯಾತಿ ಗಣ್ಯರು ಹಾಸನಾಂಬೆಯ ದರ್ಶನ ಪಡೆದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ