ಹಾಸನ, (ನವೆಂಬರ್ 03): ಹಾಸನದ (Hassan) ಅಧಿದೇವತೆ. ವರ್ಷಕ್ಕೊಮ್ಮೆ ದರ್ಶನ ಕರುಣಿಸೋ ಹಾಸನಾಂಬೆ(Hassanamba) ನೋಡುವ ಭಾಗ್ಯ ಮತ್ತೆ ಕೂಡಿ ಬಂದಿದೆ. ಇಂದಿನಿಂದ 12 ದಿನ ಸಾರ್ವಜನಿಕರಿಗೆ ಹಾಸನಾಂಬೆಯ ದರ್ಶನೋತ್ಸವ ಶುರುವಾಗಲಿದ್ದು, ಹಾಸನಾಂಬೆ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. 24 ಗಂಟೆಯೂ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ 10 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆಯುವ ನಿರೀಕ್ಷೆ ಇದೆ. ಹೀಗಾಗಿ ದೇವಿ ದರ್ಶನ ಪಡೆಯಲು ಹಾಸನ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಮಾಡಿದೆ.
ಹಾಸನದ ಅಧಿದೇವತೆ, ನಾಡಿನ ಶಕ್ತಿ ದೇವತೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಹಾಸನಾಂಬೆಯ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ದೇಗುಲದ ಬಾಗಿಲು ಓಪನ್ ಆಗಿದ್ದು, ಹಾಸನಾಂಬೆ ಸನ್ನಿಧಿ ಬಗೆಬಗೆಯ ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿದೆ. ವಿದ್ಯುತ್ ದೀಪಾಲಂಕಾರಗಳು ಮೆರುಗು ಹೆಚ್ಚಿಸಿವೆ. 1 ವರ್ಷದ ಬಳಿಕ ಹಾಸನಾಂಬೆಯ ದರ್ಶನ ಮಾಡುತ್ತೇವೆ ಎನ್ನುವ ಖುಷಿ ಮನೆ ಮಾಡಿದೆ. ಒಟ್ಟು 14 ದಿನ ಹಾಸನಾಂಬೆಯ ಉತ್ಸವ ನಡೆಯಲಿದೆ.
ಇದನ್ನೂ ಓದಿ: ಹಾಸನಾಂಬೆ: ವರ್ಷಕ್ಕೆ ಒಮ್ಮೆಯೇ ಬಾಗಿಲು ತೆರೆಯುವ ಹಾಸನಾಂಬೆ ದೇಗುಲದ ವಿಶೇಷತೆ ಏನು, ಇತಿಹಾಸ ಇಲ್ಲಿದೆ
ಈ ಬಾರಿ ಶಕ್ತಿ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಸುಮಾರು 10 ಕಿಲೋ ಮೀಟರ್ ಉದ್ದದ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿ VIP, VVIP, ವಿಶೇಷ ನೇರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಕ್ಯೂ ಆರ್ ಕೋಡ್ ವ್ಯವಸ್ಥೆ, ಕಾಣಿಕೆ ಹಾಕಲು ಇ ಹುಂಡಿಯನ್ನ ಸಹಾ ವ್ಯವಸ್ಥೆ ಮಾಡಲಾಗಿದೆ.
ಇನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ರಂಗೋಲಿ ಸ್ಪರ್ಧೆ, ಹೆಲಿ ಟೂರಿಸಂ ವ್ಯವಸ್ಥೆಯೂ ಇದೆ. ಇಂದು ಮೊದಲ ದಿನವಾಗಿದ್ದು, ಸಾರ್ವಜನಿಕರಿಗೆ ದೇವಿಯ ದರ್ಶನ ಇರಲ್ಲ.. ನಾಳೆ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಸಿಗಲಿದೆ. ಹಾಸನಾಂಬೆ ದರ್ಶನಕ್ಕೆ ಭಕ್ತರು ಕಾತುರರಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ