
ಹಾಸನ, ಅಕ್ಟೋಬರ್ 06: ಹಾಸನದ (Hassan) ಅಧಿದೇವತೆ ಹಾಸನಾಂಬೆಯ ವಾರ್ಷಿಕ ದರ್ಶನೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಹಾಸನ ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ವರ್ಷ ಅಕ್ಟೋಬರ್ 9ರಿಂದ 23ರವರೆಗೆ ಹಾಸನಾಂಬೆ ಉತ್ಸವ (Hasanamba Utsav) ನಡೆಯಲಿದೆ. ಅ. 10ರಿಂದ 22ರ ತನಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರಲಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ನಗರದಲ್ಲಿ ನಡೆದ ಹಾಸನ ಜನಪ್ರತಿನಿಧಿಗಳ ಜೊತೆ ಸಚಿವ ಕೃಷ್ಣಭೈರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಾಗೂ ಕೊನೆಯ ದಿನ ಪೂಜೆಗಷ್ಟೇ ಸೀಮಿತ. ಈ ವರ್ಷ 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ದಿನಕ್ಕೆ ಒಂದು ಸಾವಿರ ಪಾಸ್ ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.
ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅವಧಿ ಮುಗಿದ ಬಳಿಕ ವಿಐಪಿ ಗೇಟ್ಗೆ ಬೀಗ ಹಾಕುತ್ತೇವೆ. ವಿಐಪಿಗಳು ಕುಟುಂಬಕ್ಕೆ ಸಮೇತವಾಗಿ ಬನ್ನಿ, ಆದರೆ ತಮ್ಮ ಜೊತೆ ಹೆಚ್ಚು ಜನರನ್ನು ಕರೆದುಕೊಂಡು ಬರಬೇಡಿ. ಒಂದು ವೇಳೆ ಕರೆದುಕೊಂಡು ಬಂದರು ಸಾರ್ವಜನಿಕರ ಜೊತೆ ದರ್ಶನ ಮಾಡಲಿ. ಕೊನೆಯ 2 ದಿನ ಯಾವುದೇ ವಿಐಪಿ ದರ್ಶನ ಇರಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಹೇಲಿದ್ದಾರೆ.
ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಹೈಟೆಕ್ ಸ್ಪರ್ಶ: ವಾಟ್ಸಾಪ್ ಚಾಟ್ ಮೂಲಕವೇ ಪಡೆಯಿರಿ ಟಿಕೆಟ್, ಮಾಹಿತಿ
ರಾಜ್ಯಪಾಲರು, ಸಿಎಂ, ಡಿಸಿಎಂ, ಮಾಜಿ ಪ್ರಧಾನಿಗಳು, ಮುಖ್ಯ ನ್ಯಾಯಾಧೀಶರು ಸೇರಿದಂತೆ ನೇರವಾಗಿ ದೇವಸ್ಥಾನಕ್ಕೆ ಹೋಗಬೇಕು. ಆದರೆ ಉಳಿದ ಜನಪ್ರತಿನಿಧಿಗಳು, ವಿಐಪಿಗಳು ಹಾಸನದ ಐಬಿಗೆ ಬರಬೇಕು. ಅಲ್ಲಿಂದ ವಾಹನದಲ್ಲಿ ಕರೆದುಕೊಂಡು ಹೋಗಿ ದರ್ಶನ ಮಾಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಮತ್ತು ಹೊರರಾಜ್ಯದಿಂದಲೂ ಜನರು ಬರುತ್ತಾರೆ. ಬಂದವರನ್ನು ಅತಿಥಿಗಳಂತೆ ನಡೆಸಿಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಸಾರ್ವಜನಿಕರ ದರ್ಶನ ನಿರಂತರವಾಗಿರಬೇಕು. ಈ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಿದ್ದೇವೆ. ಜಾನಪದ ಕಲೆಗಳ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡಲಿದ್ದೇವೆ. ಆ ಮೂಲಕ ಭಕ್ತರಿಗೆ ಜಾನಪದ ಕಲೆಗಳ ದರ್ಶನವಾಗಲಿದೆ ಎಂದರು.
ಒಂದು ವೇದಿಕೆಯನ್ನು ಸ್ಥಳೀಯ ಹಾಸನದ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು. ಭಕ್ತರಿಗೆ ದೇವಿಯ ದರ್ಶನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸವಿಯಬಹುದು. ಈ ಬಾರಿ ಹೆಲಿ ಟೂರಿಸಂ ಆರಂಭಿಸಲಿದ್ದೇವೆ. ಸ್ಥಳೀಯ ಕರಕುಶಲ ವಸ್ತು ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಇದು ಸ್ಥಳೀಯ ಮಹಿಳಾ ಸಬಲೀಕರಣಕ್ಕೆ ಸಹಾಯಕವಾಗಲಿದೆ ಎಂದಿದ್ದಾರೆ.
ಇನ್ನು ಭಕ್ತರ ಸುರಕ್ಷಿತೆ ಬಹಳ ಮುಖ್ಯ, ಎಐ, ಡ್ರೋಣ್ ತಂತ್ರಜ್ಞಾನ ಬಳಕೆ ಮಾಡುತ್ತಿದ್ದೇವೆ. ಕಂಟ್ರೋಲ್ ರೂಂ, ಸಿಸಿಟಿವಿ ಅಳವಡಿಸಿದ್ದೇವೆ. 250 ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಫೇಸ್, ಹೆಡ್ ಕೌಂಟಿಂಗ್ ಎಐ ಸಿಸಿಟಿವಿ ಅಳವಡಿಕೆ ಮಾಡುತ್ತಿದ್ದೇವೆ. ಸುಮಾರು ಎರಡು ಸಾವಿರ ಪೊಲೀಸರು ನಿಯೋಜನೆ ನೀಡಲಾಗುವುದು.
ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವ ತಯಾರಿಯಲ್ಲಿ ಭಾರೀ ಅಕ್ರಮ; ದೇವರಾಜೇಗೌಡ ಆರೋಪ
ಸಾರ್ವಜನಿಕರಿಗೆ 300 ರೂ ಮತ್ತು 1 ಸಾವಿರ ರೂ. ಟಿಕೆಟ್ ಇದೆ. ಪಾಸ್ಗಳಿಗೆ ಹೆಚ್ಚು ಒತ್ತಡ ಇತ್ತು. ಪಾಸ್ ತೆಗೆದುಕೊಂಡು ಬರುವವರ ಸಂಖ್ಯೆ ಹೆಚ್ಚಾಗಿತ್ತು. ಇದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ತಾಳ್ಮೆ ಪರೀಕ್ಷೆ ಮಾಡಬಾರದು. ಹೀಗಾಗಿ ಪಾಸ್ಗಳಿಗೆ ನಿಯಂತ್ರಣ ಹೇರಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.