AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hassan Accident: ಯಾವ ದೇವರಿಗೂ ಕಣ್ಣಿಲ್ಲ, ಎಲ್ರೂ ಹೋಗ್​ಬಿಟ್ರು; ನಿಲ್ಲುತ್ತಿಲ್ಲ ಮಕ್ಕಳ ಶವ ಕಂಡವರ ಕಣ್ಣೀರು

ಒಂದು ದೊಡ್ಡ ಕುಟುಂಬವೇ ಹೀಗೆ ಹಠಾತ್ ಎಂದು ಕಣ್ಮರೆಯಾಗಿರುವುದು ಸಂಬಂಧಿಕರು, ಗೆಳೆಯರು, ಗ್ರಾಮಸ್ಥರಲ್ಲಿ ಆಘಾತ ಉಂಟು ಮಾಡಿದೆ.

Hassan Accident: ಯಾವ ದೇವರಿಗೂ ಕಣ್ಣಿಲ್ಲ, ಎಲ್ರೂ ಹೋಗ್​ಬಿಟ್ರು; ನಿಲ್ಲುತ್ತಿಲ್ಲ ಮಕ್ಕಳ ಶವ ಕಂಡವರ ಕಣ್ಣೀರು
ಅರಸೀಕೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ಟಿಟಿ ವಾಹನ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Oct 16, 2022 | 10:15 AM

Share

ಹಾಸನ: ಅರಸೀಕೆರೆ ತಾಲ್ಲೂಕು ಬಾಣಾವರದ ಗಾಂಧಿನಗರ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಧರ್ಮಸ್ಥಳದ ಮಂಜುನಾಥೇಶ್ವರ, ಕುಕ್ಕೆ ಕ್ಷೇತ್ರದ ಸುಬ್ರಹ್ಮಣ್ಯ ಹಾಗೂ ಹಾಸನದ ಹಾಸನಾಂಬೆಯ ದರ್ಶನ, ಪೂಜೆಯ ನಂತರ ಸಂತೃಪ್ತ ಭಾವದಿಂದ ಮನೆಗೆ ಹಿಂದಿರುಗಬೇಕಿದ್ದವರು ಬಾರದ ಲೋಕಕ್ಕೆ ತೆರಳಿದ್ದಾರೆ. ಒಂದು ದೊಡ್ಡ ಕುಟುಂಬವೇ ಹೀಗೆ ಹಠಾತ್ ಎಂದು ಕಣ್ಮರೆಯಾಗಿರುವುದು ಸಂಬಂಧಿಕರು, ಗೆಳೆಯರು, ಗ್ರಾಮಸ್ಥರಲ್ಲಿ ಆಘಾತ ಉಂಟು ಮಾಡಿದೆ.

ಅಪಘಾತದ ಸ್ಥಳದಲ್ಲಿ ‘ಟಿವಿ9’ ಜೊತೆಗೆ ಮಾತನಾಡಿದ ಮೃತರ ಸಂಬಂಧಿ ರವಿಕುಮಾರ್, ಇವರೆಲ್ಲರೂ ಶುಕ್ರವಾರ (ಅ 14) ಹಿರಿಯರ ಪೂಜೆ ಮುಗಿಸಿ ಶನಿವಾರ ಬೆಳಿಗ್ಗೆ ಧರ್ಮಸ್ಥಳಕ್ಕೆ ಹೋದರು. ಹೋಗುವ ಮೊದಲು ಮನೆಯ ಕೆಲಸಗಳನ್ನು ಮುಗಿಸಿ, ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಅಪಘಾತದಲ್ಲಿ ಸಾವನ್ನಪ್ಪಿರುವ ಚೈತ್ರಾ ಹೊರಡುವ ಮೊದಲು ತನ್ನ ಗಂಡ, ಅಪ್ಪ, ಅಜ್ಜ, ಅಜ್ಜಿ ಎಲ್ಲರಿಗೂ ಪೂಜೆ ಮಾಡಿ ಹೋದಳು. ಬರುವಾಗ ಹೀಗೆ ಆಗುತ್ತೆ ಎಂದು ಯಾರಿಗೆ ತಾನೇ ಗೊತ್ತು ಎಂದು ಅವರು ಕಣ್ಣೀರಾದರು.

‘ಯಾವ ದೇವರಿಗೂ ಕಣ್ಣಿಲ್ಲ ಸಾರ್. ದೇವರನ್ನು ದೂರೋದೋ ಅಥವಾ ಗ್ರಹಚಾರವನ್ನ ದೂರೋದೋ, ಏನು ಮಾಡೋದು’ ಎಂದು ಅವರು ಅಳಲು ಆರಂಭಿಸಿದರು. ‘ನಾವೆಲ್ಲರೂ ಒಂದೇ ಕುಟುಂಬದ ರಕ್ತ ಸಂಬಂಧಿಗಳು. ಸಮರ್ಥನಿಗೆ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಟ್ಟಿದ್ದೇವು. ನನ್ನ ತಮ್ಮ ಎರಡು ವರ್ಷದ ಹಿಂದೆ ಕೋವಿಡ್​ನಿಂದ ತೀರಿಕೊಂಡಿದ್ದ. ಇವತ್ತು ಅವನ ಮಕ್ಕಳು ತೀರಿಕೊಂಡಿದ್ದಾರೆ. ಇಂಥ ಪರಿಸ್ಥಿತಿ ಯಾವ ಕುಟುಂಬಕ್ಕೂ ಬರಬಾರದು‌’ ಎಂದು ಅವರು ಅಳಲು ಆರಂಭಿಸಿದರು.

ಮಾರ್ಗಸೂಚಿ ಫಲಕ ನಾಪತ್ತೆ

ಭೀಕರ ಸರಣಿ ಅಪಘಾತ ಕಂಡು ಸುತ್ತಮುತ್ತಲ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಮುಂಜಾನೆಯಿಂದಲೇ ಸಾವಿರಾರು ಜನರು ಸ್ಥಳಕ್ಕೆ ದೌಡಾಯಿಸಿದ್ದು ಭೀಕರ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಿಲ್ಲ. ಸರಣಿ ಅಪಘಾತಕ್ಕೆ ಈ ನಿರ್ಲಕ್ಷ್ಯವೂ ಕಾರಣ ಎಂದು ಸ್ಥಳದಲ್ಲಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು.

ಟಿಟಿ ಅಪ್ಪಚ್ಚಿ

ಅಘತಾತದ ತೀವ್ರತೆಗೆ ಟಿಟಿ ವಾಹನವು ಗುರುತು ಸಿಗದಂತೆ ಅಪ್ಪಚ್ಚಿಯಾಗಿದೆ. ಎದುರು ಬರುತ್ತಿದ್ದ ಹಾಲಿನ ಟ್ಯಾಂಕರ್​ಗೆ ಟಿಟಿ ಮೊದಲು ಡಿಕ್ಕಿ ಹೊಡೆಯಿತು. ಅದಕ್ಕೆ ಹಿಂದಿನಿಂದ ಬಂದ್ ಕೆಎಸ್​ಆರ್​ಟಿಸಿ ಬಸ್ ಸಹ ಗುದ್ದಿದಾಗ ನಡುವೆ ಸಿಲುಕಿದ ಟಿಟಿ ನಜ್ಜುಗುಜ್ಜಾಯಿತು. ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ 14 ಮಂದಿ ಇನ್ನೆರೆಡು ಕಿಲೋಮೀಟರ್ ಸಂಚರಿಸಿದ್ದರೆ ಇವರು ಸ್ವಗ್ರಾಮ ಸಾಲಾಪುರ ತಲುಪುತ್ತಿದ್ದರು.

ಪ್ರಲ್ಹಾದ ಜೋಶಿ, ಎಚ್​ಡಿಕೆ ಸಂತಾಪ

ಅರಸೀಕೆರೆ ಸಮೀಪ ಸಂಭವಿಸಿರುವ ಅಪಘಾತಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

‘ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ. ಅಪಘಾತದಲ್ಲಿ ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ‘ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದ್ದಾರೆ.

ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ‘ಜಿಲ್ಲಾಧಿಕಾರಿಗಳು ಆಸ್ಪತ್ರೆಯಲ್ಲಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಲು ಕ್ರಮ ವಹಿಸಿ, ತಕ್ಷಣ ಸಂಬಂಧಿಕರಿಗೆ ಹಸ್ತಾಂತರ ಮಾಡಬೇಕು. ಗಾಯಾಳುಗಳಿಗೆ ಉಚಿತ, ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರಿಗೆ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

Published On - 10:15 am, Sun, 16 October 22