ಹಾಸನ ಬಳಿ ಭೀಕರ ಅಪಘಾತ: 4 ಮಕ್ಕಳು ಸೇರಿದಂತೆ 9 ಜನ ಸಾವು
ಧರ್ಮಸ್ಥಳಕ್ಕೆ ಹೋಗಿ ವಾಪಸ್ ಆಗುತ್ತಿದ್ದ ಟಿಟಿ ವಾಹನ ಅಪಘಾತಕ್ಕೀಡಾಗಿದ್ದು, ಮಕ್ಕಳು ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ.
ಹಾಸನ: ಸ್ವಾಮಿ ಮಂಜುನಾಥನ ದರ್ಶನ ಪಡೆದುಕೊಂಡು ಇನ್ನೇನು ಮನೆ ಸೇರಬೇಕು ಎನ್ನುವಷ್ಟರಲ್ಲೇ ಜವರಾಯ ಅಟ್ಟಹಾಸ ಮೆರೆದಿದ್ದು, 9 ಮಂದಿ ದುರ್ಮರಣ ಹೊಂದಿದ್ದಾರೆ. ಮೃತರದಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ. ಕೆಎಸ್ಆರ್ಟಿ ಬಸ್, ಟಿಟಿ ವಾಹನ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಟೆಂಪೋ ಟ್ರಾವೆಲರ್ನಲ್ಲಿದ್ದ 4 ಮಕ್ಕಳು ಸೇರಿದಂತೆ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿ ಗಾಂಧಿ ನಗರ ಗ್ರಾಮದ ಬಳಿ ಶನಿವಾರ ತಡರಾತ್ರಿ ಈ ದುರಂತ ಸಂಭವಿಸಿದೆ.
ಒಟ್ಟು ಟಿಟಿ ವಾಹನದಲ್ಲಿ 14 ಮಂದಿ ಧರ್ಮಸ್ಥಳಕ್ಕೆ ತೆರಳಿದ್ದರು. ಮಂಜುನಾಥನ ಮುಂದೆ ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಂಡು ಆಶೀರ್ವಾದ ಪಡೆದು ಅಲ್ಲಿಂದ ವಾಪಸ್ ಆಗಿದ್ದರು. ಇನ್ನೇನು ಐದಾರು ಕಿಲೋಮೀಟರ್ನಲ್ಲಿ ಮನೆಗೆ ಸೇರೋ ಮೊದಲೇ ಈ ದುರಂತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಘೋರ ದುರಂತ ಸಂಭವಿಸಿದ್ದು, ಲಾರಿ ಬಸ್ ಮಧ್ಯೆ ಸಿಲುಕಿ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಾಳಕ್ಕೆ ಬಾಣಾವರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರ ವಿವರ
ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50).
ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:54 am, Sun, 16 October 22