Hassan Accident: ಅವಳು ಫ್ರೆಂಡ್, ಇವರು ಮಾವ, ಇದಿನ್ನೂ ಮಗು; ಅಯ್ಯೋ ದೇವರೇ ಇದೇನು ಮಾಡಿದೆ… ಶವಸಂಸ್ಕಾರದ ವೇಳೆ ಕಣ್ಣೀರಕೋಡಿ
ಟ್ಯಾಂಕರ್ ಒನ್ ವೇಯಲ್ಲಿ ಏಕೆ ಬಂತು ಎನ್ನುವುದೇ ಯಕ್ಷಪ್ರಶ್ನೆ. ಘಟನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ನ್ಯೂನತೆ ಕೂಡ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ.
ಹಾಸನ: ಅರಸೀಕೆರೆ ತಾಲ್ಲೂಕು ಬಾಣಾವರ ಸಮೀಪ ಶನಿವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಮಕ್ಕಳೂ ಸೇರಿ ಒಂಭತ್ತು ಜನರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಬಾಣಾವರದ ಕೋಟೆ ಬೀದಿ ಬಳಿ ಇರುವ ಮೃತ ಚೈತ್ರಾ ಮನೆಗೆ ಹಾಸನ ಶಾಸಕ ಪ್ರೀತಮ್ ಗೌಡ ಭೇಟಿ ನಿಡಿ ಪುಟಾಣಿ ಮಕ್ಕಳ ಅಂತಿಮ ದರ್ಶನ ಪಡೆದರು. ಈ ವೇಳೆ ನೆರೆದಿದ್ದವರೆಲ್ಲರೂ ಬಿಕ್ಕಿಬಿಕ್ಕಿ ಅಳಲು ಆರಂಭಿಸಿದ್ದರಿಂದ ಕರುಳು ಹಿಂಡುವ ಭಾವುಕ ಸನ್ನಿವೇಶ ಸೃಷ್ಟಿಯಾಯಿತು.
‘ಸರ್ಕಾರ ಪರಿಹಾರ ನೀಡಿದರೂ ಈ ದುಃಖವನ್ನು ಭರಿಸಲು ಆಗುವುದಿಲ್ಲ. ಆದರೆ ಸರ್ಕಾರ ಮುಂದೆ ಇಂಥ ದುರ್ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಏನಾದರೂ ಮಾಡಿ ಎಂದು ಮನವಿ ಮಾಡುತ್ತಿದ್ದೇವೆ. ಟ್ಯಾಂಕರ್ ಒನ್ ವೇಯಲ್ಲಿ ಏಕೆ ಬಂತು ಎನ್ನುವುದೇ ಯಕ್ಷಪ್ರಶ್ನೆ. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಘಟನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ನ್ಯೂನತೆ ಕೂಡ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಮಾಡುತ್ತೇವೆ ಎಂದು ವಿವರಿಸಿದರು.
ಬಾಣಾವರ ಸಮೀಪದ ದೊಡ್ಡೇನಹಳ್ಳಿ ಗ್ರಾಮದಲ್ಲಿಯೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಮಂಜುಳಾ-ಸಂತೋಷ್ ದಂಪತಿ ಮಕ್ಕಳಾದ ಸಾಮಂತ, ಧ್ರುವ ಅಂತ್ಯಸಂಸ್ಕಾರ ನೆರವೇರಿತು. ಗಂಭೀರವಾಗಿ ಗಾಯಗೊಂಡಿರುವ ತಾಯಿ ಮಂಜುಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಜುಳಾ ಅವರ ತಾಯಿ ನೀಲಮ್ಮ ಅಂತ್ಯಕ್ರಿಯೆ ಸಾಲಾಪುರದಲ್ಲಿ ನಡೆಯಿತು. ಸಾಲಾಪುರದಲ್ಲಿ ದೊಡ್ಡಯ್ಯ, ಭಾರತಿ, ವಂದನಾ, ಲೀಲಾವತಿ ಅಂತ್ಯಕ್ರಿಯೆ ನಡೆಯಿತು.
ಅಪಘಾತ ಸಂಭವಿಸಿದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು. ಟ್ಯಾಂಕರ್ ಚಾಲಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಮತ್ತಿಬ್ಬರು ಮಕ್ಕಳಾದ ಸೃಷ್ಟಿ ಮತ್ತು ಸಮರ್ಥ ಅವರ ಅಂತ್ಯಕ್ರಿಯೆ ಬಾಣಾವರದಲ್ಲಿ ನಡೆಯಿತು. ಜಾತಿ, ಧರ್ಮ ಲೆಕ್ಕಿಸದೇ ಸಾವಿರಾರು ಜನರು ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಕುರುಬ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.
ಮಾನವೀಯತೆ ಮೆರೆದ ಪೊಲೀಸರು
ಅರಸೀಕೆರೆ ಅಪಘಾತ ಪ್ರಕರಣದ ನಂತರ ಮೃತದೇಹಗಳನ್ನು ಶವಾಗಾರದಿಂದ ಮನೆಗಳಿಗೆ ಕಳಿಸುವಲ್ಲಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಶವಗಳನ್ನು ಕೊಂಡೊಯ್ಯಲು ಸ್ಥಳಕ್ಕೆ ಪಿಕ್ಅಪ್ ವಾಹನ ಬಂದಿತ್ತು. ಆದರೆ ಅದರಲ್ಲಿ ಶವಗಳನ್ನು ಕಳಿಸಲು ನಿರಾಕರಿಸಿದ ಪೊಲೀಸರು ಆಂಬುಲೆನ್ಸ್ಗಳನ್ನು ತರಿಸಿ, ಎಲ್ಲ ಶವಗಳನ್ನು ಅದರಲ್ಲಿಯೇ ಗ್ರಾಮಗಳಿಗೆ ಕಳಿಸಿಕೊಟ್ಟರು.
ಗೆಳತಿಯ ನೆನೆದು ಕಣ್ಣೀರಿಟ್ಟ ಒಡನಾಡಿಗಳು
ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ವಂದನಾ (20) ಅಂತಿಮ ದರ್ಶನಕ್ಕೆಂದು ಬಂದಿದ್ದ ಸ್ನೇಹಿತೆಯರು ಗೆಳತಿಯ ಪರಿಸ್ಥಿತಿ ಕಂಡು ಕಣ್ಣೀರಿಟ್ಟರು. ಹಾಸನದ ಎನ್ಡಿಆರ್ಕೆ ಕಾಲೇಜಿನಲ್ಲಿ ವಂದನಾ ನರ್ಸಿಂಗ್ ಓದುತ್ತಿದ್ದರು. ಇನ್ನೊಂದು ವರ್ಷ ಓದು ಮುಂದುವರಿಸಿದ್ದರೆ ವಂದನಾ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಕೆಲಸಕ್ಕೆ ಸೇರಿ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ವಂದನಾ ಅವರಿಗಿತ್ತು ಎಂದು ಗೆಳತಿಯರು ಹೇಳಿದರು.
2 ಲಕ್ಷ ಪರಿಹಾರ
ಅಪಘಾತದಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
Published On - 3:29 pm, Sun, 16 October 22