ಹಾಸನ, ನವೆಂಬರ್ 9: ಎಷ್ಟೇ ತಡಕಾಡಿದರೂ ಸರಿಯಾದ ರಸ್ತೆ ಸಿಗುವುದಿಲ್ಲ, ಏನೇ ಪ್ರಯಾಸ ಪಟ್ಟರೂ ಗುಂಡಿ ತಪ್ಪಿಸಿ ವಾಹನ ಚಲಾಯಿಸಲು ಆಗಲ್ಲ! ಇದು ಯಾವುದೋ ಹಳ್ಳಿಗಾಡಿನ ರಸ್ತೆ ಅಲ್ಲವೇ ಅಲ್ಲ. ಇಡೀ ಜಗತ್ತೆ ಕಣ್ಣರಳಿಸಿ ನೋಡೋ, ಭೂಮಂಡಲದ ಇತಿಹಾಸ ಪ್ರಿಯರು ಒಮ್ಮೆಯಾದರೂ ಬಂದು ಹೋಗಲೇಬೇಕು ಎಂದು ಹಂಬಲಿಸುವ ಶಿಲ್ಪ ಕಲೆಗಳ ತವರಾದ ಹಾಸನ ಜಿಲ್ಲೆಯ ಐತಿಹಾಸಿಕ ಚನ್ನಕೇಶವಸ್ವಾಮಿ ದೇಗುಲ ಇರುವ ಬೇಲೂರಿನ ರಸ್ತೆ.
ಬೇಲೂರು ಹಳೆಬೀಡು ಯುನೆಸ್ಕೋ ಪಟ್ಟಿಗೆ ಸೇರುವ ಮೂಲಕ ದಶಕಗಳ ಕನಸು ನನಸಾಗಿ ವರ್ಷ ತುಂಬಿದೆ. ಯುನೆಸ್ಕೋ ಪಟ್ಟಿಗೆ ಸೇರಿದರೆ ಈ ಎರಡೂ ಪಟ್ಟಣಗಳಿಗೆ ವಿಶ್ವದರ್ಜೆಯ ಸೌಲಭ್ಯಗಳು ದೊರೆಯಲಿವೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಸೌಲಭ್ಯ ಹಾಗಿರಲಿ, ಇರುವ ಸೌಲಭ್ಯಗಳು ಕೂಡ ಮೂಲೆ ಸೇರಿ ಹೋಗುತ್ತಿವೆ.
ಹಾಸನದಿಂದ ಬೇಲೂರಿಗೆ ತೆರಳುವ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿ 373 ಎಂದು ನಾಮಕರಣ ಮಾಡಲಾಗಿದೆಯಾದರೂ ಇದ್ದ ರಸ್ತೆ ಅತಿಯಾದ ವಾಹನ ದಟ್ಟಣೆಯಿಂದ ಸಂಪೂರ್ಣ ಕಿತ್ತು ಹೋಗಿದೆ. 35 ಕಿಲೋಮಿಟರ್ ಪ್ರಯಾಣ ಅತ್ಯಂತ ದುರಸ್ತವಾಗಿದೆ. ದಶಕಗಳ ಹಿಂದೆ ನಿರ್ಮಾಣ ಮಾಡಿದ್ದ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ದೊಡ್ಡ ದೊಡ್ಡ ಗುಂಡಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ಗುಂಡಿ ಬಿದ್ದಾಗ ಹೊಂಡ ಮುಚ್ಚುವ ನಾಟಕ ಮಾಡುವ ಅಧಿಕಾರಿಗಳ ಅಸಡ್ಡೆಯಿಂದ ಕೇವಲ ವಾಹನ ಸವಾರರು ಮಾತ್ರವಲ್ಲ, ಈ ಭಾಗದ ಜನರು ಕೂಡ ಪರಿತಪಿಸುವಂತಾಗಿದೆ.
ಬೇಲೂರಿನ ಚನ್ನಕೇಶವಸ್ವಾಮಿ ದೇಗುಲ ಶಿಲ್ಪಕಲೆಯಿಂದಲೇ ಜಗದ್ವಿಖ್ಯಾತವಾಗಿದೆ. ಇಲ್ಲಿನ ವಾಸ್ತು ಶಿಲ್ಪ, ಸೋಜಿಗ ಎನಿಸುವ ಸೂಕ್ಷ್ಮ ಕೆತ್ತನೆಗಳು, ಬರೊಬ್ಬರಿ 800 ವರ್ಷಗಳ ಹಿಂದೆಯೇ ಶಿಲ್ಪಿಗಳ ಕೈಚಳಕದಲ್ಲಿ ಮೂಡಿದ ವಾಸ್ತು ಶಿಲ್ಪದಿಂದಲೇ ಇಡೀ ಜಗತ್ತನ್ನ ತನ್ನತ್ತ ಸೆಳೆಯುವ ಬೇಲೂರು ಹಳೆಬೀಡುಗಳು ಭೂಮಂಡಲದ ಪ್ರವಾಸಿ ಭೂಪಟದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿವೆ. ಅದಕ್ಕೆ ಸಿಕ್ಕ ಗೌರವ ಎಂಬಂತೆ, ವರ್ಷದ ಹಿಂದೆ ಯುನೆಸ್ಕೋ ಮಾನ್ಯತೆಯೂ ಸಿಕ್ಕಿದೆ. ಆದ್ರೆ ಇಲ್ಲಿಗೆ ತೆರಳಲು ಸರಿಯಾದ ರಸ್ತೆಯಿಲ್ಲದೆ ಜನರು ಪರಿತಪಿಸುವಂತಾಗಿದೆ.
ಹಾಸನದಿಂದ ಬೇಲೂರಿನ ಮೂಲಕ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಸೇರಿ ಹಲವು ಜಿಲ್ಲೆಗಳಿಗೆ ಜನರು ಓಡಾಡುತ್ತಾರೆ. ವಾರಾಂತ್ಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಾರೆ. ಇಷ್ಟಿದ್ದರೂ ಇಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ 373 ಎಂದು ನಾಮಕರಣ ಮಾಡಲಾಗಿದ್ದು, ಕೇಂದ್ರ ಸರ್ಕಾರ 650 ಕೋಟಿ ಹಣ ನೀಡಿ ಟೆಂಡರ್ ಕೂಡ ಕರೆದಾಗಿದೆ. ಆದರೆ, ಇನ್ನೂ ಭೂಸ್ವಾದೀನ ಪ್ರಕ್ರಿಯೆ ಆಗದೆ ಸಮಸ್ಯೆ ಎದುರಾಗಿದೆ.
ಹಾಸನದಿಂದ ಬೇಲೂರು ಕಡೆಗೆ ಸಂಪೂರ್ಣ ತೆರಳುವ 18 ಕಿಲೋಮೀಟರ್ ರಸ್ತೆ ಸಂಪೂರ್ಣ ಹಾಳಾಗಿದೆ. ಸಮಸ್ಯೆ ಬಗ್ಗೆ ಮಾತನಾಡಿರುವ ಬೇಲೂರು ಶಾಶಕ ಎಚ್ಕೆ ಸುರೇಶ್, ಈಗಾಗಲೆ ಟೆಂಡರ್ ಆಗಿದೆ. ಅಧಿಕಾರಿಗಳನ್ನು ನಮ್ಮದೇ ಕಾರಿನಲ್ಲಿ ಕರೆದೊಯ್ದು ಸಮಸ್ಯೆ ಬಗ್ಗೆ ವಿವರಿಸಲಾಗಿದೆ. ಶೀಘ್ರವಾಗಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ. ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನಾಂಬೆ ಹುಂಡಿ ಎಣಿಕೆ: 9 ದಿನದಲ್ಲಿ 12.63 ಕೋಟಿ ರೂ. ಹಣ, 51 ಗ್ರಾಂ ಚಿನ್ನ
ಒಟ್ಟಿನಲ್ಲಿ ವಿಶ್ವ ವಿಖ್ಯಾತ ಶಿಲ್ಪಕಲೆಗಳ ತವರು, ವಾಸ್ತು ಶಿಲ್ಪದ ನೆಲೆಬೀಡು, ಹೊಯ್ಸಳರಾಳಿದ ಗಂಡೆದೆಯ ಸಾಮ್ರಾಜ್ಯ ಎಂದೆಲ್ಲಾ ಕರೆಸಿಕೊಳ್ಳುವ ಬೇಲೂರು ಹಳೆಬೀಡುಗಳು ವಿಶ್ವ ಮಾನ್ಯತೆ ಸಿಕ್ಕರೂ ಕೂಡ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ. ಮೊದಲ ಆದ್ಯತೆಯಾಗಿ ಕನಿಷ್ಠ ರಸ್ತೆಯನ್ನಾದರೂ ಶೀಘ್ರವಾಗಿ ನಿರ್ಮಾಣ ಮಾಡಿ ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ