ಹಾಸನ ನರ್ಸಿಂಗ್ ಕಾಲೇಜು ಗಡ್ಡ ವಿವಾದ: ತಪ್ಪು ಮುಚ್ಚಿಕೊಳ್ಳಲು ವಿಷಯ ಬೇರೆ ತರ ತಿರುಚಿದ್ದಾರೆ ಎಂದ ಪ್ರಾಂಶುಪಾಲ
ಪ್ರಾಶುಂಪಾಲರು ಗಡ್ಡ ತೆಗೆದು ಬನ್ನಿ ಎಂದಿದ್ದಕ್ಕೆ ಹೊಳೆನರಸಿಪುರ ನರ್ಸಿಂಗ್ ಕಾಲೇಜು ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಏಕೆ ಸೂಚನೆ ನೀಡಲಾಗಿತ್ತು ಎಂಬುವುದನ್ನು ತಿಳಿಸಿದ್ದಾರೆ.
ಹಾಸನ, ನವೆಂಬರ್ 10: ಗಡ್ಡ (Beard) ತೆಗೆಯುವಂತೆ ಸೂಚನೆ ನೀಡಿರುವ ವಿಚಾರವಾಗಿ ಹೊಳೆನರಸೀಪುರ ನರ್ಸಿಂಗ್ ಕಾಲೇಜಿನ (Holenarasipur Nursing College) ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ನರ್ಸಿಂಗ್ ಕೋರ್ಸ್ ಆಗಿರುವುದರಿಂದ ಕ್ಲಿನಕಲ್ ಲ್ಯಾಬ್‌ನಲ್ಲಿ ಗಡ್ಡ ಬಿಟ್ಟುಕೊಂಡು ಭಾಗವಹಿಸಿದರೆ ಸಮಸ್ಯೆಯಾಗುತ್ತದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಗಡ್ಡ ತೆಗೆಯುವಂತೆ ಹೇಳಿದ್ದೇವೆ. ಕೇವಲ ಮುಸ್ಲಿಂ ಯುವಕರಿಗೆ ಮಾತ್ರ ಗಡ್ಡ ತೆಗೆಯುವಂತೆ ಹೇಳಿಲ್ಲ ಎಂದು ಹೇಳಿದರು.
ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಜಮ್ಮು-ಕಾಶ್ಮೀರದ 13 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕಾಲೇಜಿಗೆ ಸರಿಯಾಗಿ ಬರುತ್ತಿರಲಿಲ್ಲ. ಗಡ್ಡ ಬಿಟ್ಟುಕೊಂಡು, ಕೊಳೆಯಾದ ಬಟ್ಟೆ ತೊಟ್ಟುಕೊಂಡು ಬರುತ್ತಿದ್ದರು. ಶೂ ಬದಲು ಚಪ್ಪಲಿ ಹಾಕಿಕೊಂಡು ವಿಚಿತ್ರವಾಗಿ ಬರುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ: ಗಡ್ಡ ತೆಗೆಯುವಂತೆ ಕಾಲೇಜು ಆಡಳಿತ ಮಂಡಳಿ ಸೂಚನೆ: ಅಸಮಾಧಾನ ಹೊರ ಹಾಕಿದ ಮುಸ್ಲಿಂ ವಿದ್ಯಾರ್ಥಿಗಳು
ಹೀಗಾಗಿ, ಕ್ಲಿನಿಕಲ್ ಇನ್ಸ್‌ಟ್ರಕ್ಟರ್ ವಿಜಯಕುಮಾರ್ ಈ 13 ವಿದ್ಯರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಗಡ್ಡ ತೆಗೆದು, ಚಪ್ಪಲಿ ಹಾಕಿಕೊಂಡು ಸರಿಯಾಗಿ ಬನ್ನಿ ಅಂತ ಮೂರು ದಿನ ಸೂಚನೆ ನೀಡಿದರೂ ವಿದ್ಯಾರ್ಥಿಗಳು ಮಾತು ಕೇಳುತ್ತಿರಲಿಲ್ಲ ಎಂದು ತಿಳಿಸಿದರು.
ನಮ್ಮ ಕಾಲೇಜಿನ ನಿಯಮದ ಪ್ರಕಾರ, ಶಿಸ್ತಿಗೆ ಮೊದಲ ಆದ್ಯತೆ ನೀಡಲಾಗಿದೆ. ಕ್ಲಿನಿಕಲ್ ಲ್ಯಾಬ್ಗೆ ಎಂಟು ಗಂಟೆಗೆ ಬರುವ ಬದಲು 10-11 ಗಂಟೆಗೆ ಬೇಕಾಬಿಟ್ಟಿ ಬರುತ್ತಿದ್ದರು. ಅಲ್ಲದೇ ವಿದ್ಯಾರ್ಥಿಗಳ ಹಾಜರಾತಿ ಈ ಕಡಿಮೆ ಇದೆ. ಇದೆಲ್ಲವನ್ನು ಪ್ರಶ್ನಿಸಿದಾಗ ಮತ್ತು ಗಡ್ಡ ತೆಗೆಯುವಂತೆ ಹೇಳಿದ್ದಕ್ಕೆ, ತಮ್ಮ ತಪ್ಪು ಮುಚ್ಚಿಕೊಳ್ಳಲು ವಿಷಯವನ್ನು ಬೇರೆ ತರ ತಿರುಚಿದ್ದಾರೆ. ಈ ವಿವಾದವನ್ನು ಸೃಷ್ಟಿಸಿದ್ದಾರೆ ಎಂದರು.
ಇನ್ನು, ಈ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದಂತೆ ಕಾಲೇಜಿಗೆ ಡಿವೈಎಸ್ಪಿ ಶಾಲೂ ಹಾಗು ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು.
ಮುಸ್ಲಿಂ ವಿದ್ಯಾರ್ಥಿಗಳ ಉದ್ಧಟತನ: ಮುತಾಲಿಕ್
ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ಇದು ಮುಸ್ಲಿಂ ವಿದ್ಯಾರ್ಥಿಗಳ ಉದ್ಧಟತನವಾಗಿದೆ. ನಿಯಮ ಪಾಲನೆ ಮಾಡದೆ ಇದ್ದರೆ ಸಸ್ಪೆಂಡ್ ಮಾಡಬೇಕು. ನಿಯಮ ಬಿಟ್ಟು ನಡೆದುಕೊಳ್ಳಲು ಇದು ಆಫ್ಘನ್, ಪಾಕಿಸ್ತಾನ ಅಲ್ಲ. ವಿದ್ಯಾರ್ಥಿಗಳು ಕಾಲೇಜಿನ ನಿಯಮದ ಪ್ರಕಾರ ನಡೆದುಕೊಳ್ಳಬೇಕು. ನಿಯಮ ಪಾಲಿಸದಿದ್ದರೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಾರದು ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ