ಹಾಸನ ಡಿಸಿಗೆ ಮನೇಕಾ ಗಾಂಧಿ ದೂರು, ಗನ್ ಇದೆ ಎಂದು ಪೌರುಷದ ಮಾತುಗಳನ್ನಾಡಿದ ಮಾಜಿ ಶಾಸಕ ವಿಶ್ವನಾಥ್‌ಗೆ ನೋಟಿಸ್‌

| Updated By: ರಮೇಶ್ ಬಿ. ಜವಳಗೇರಾ

Updated on: Dec 24, 2022 | 4:28 PM

ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಹಾಸನ ಜಿಲ್ಲಾಧಿಕಾರಿಗೆ ನೀಡಿದ ದೂರಿನ ಮೇರೆಗೆ ಸಕಲೇಶಪುರ ಮಾಜಿ ಶಾಸಕ, ಬಿಜೆಪಿ ನಾಯಕ ಎಚ್.ಎಂ.ವಿಶ್ವನಾಥ್​ಗೆ ಸಂಕಷ್ಟ ಎದುರಾಗಿದೆ.

ಹಾಸನ ಡಿಸಿಗೆ ಮನೇಕಾ ಗಾಂಧಿ ದೂರು, ಗನ್ ಇದೆ ಎಂದು ಪೌರುಷದ ಮಾತುಗಳನ್ನಾಡಿದ ಮಾಜಿ ಶಾಸಕ ವಿಶ್ವನಾಥ್‌ಗೆ ನೋಟಿಸ್‌
ಮನೇಕಾ ಗಾಂಧಿ ಮತ್ತು ಎಚ್.ಎಂ.ವಿಶ್ವನಾಥ್
Follow us on

ಹಾಸನ: ಆನೆಗಳು ದಾಳಿಗೆ ಯತ್ನಿಸಿದರೆ ಅವುಗಳ ಮೇಲೆ ಗುಂಡು ಹಾರಿಸುತ್ತೇನೆ ಎಂದು ಹೇಳಿರುವ ಮಾಜಿ ಶಾಸಕ ವಿಶ್ವನಾಥ್ (HM Vishwanath)​ ಹಾಗೂ ಅವರ ಕುಟುಂಬದವರ ಬಳಿ ಇರುವ ಆಯುಧಗಳ ಪರವಾನಗಿ ರದ್ದು ಮಾಡುವಂತೆ ಹಾಸನ ಜಿಲ್ಲಾಧಿಕಾರಿ ಅರ್ಚನಾ.ಎಂ.ಎಸ್.ಗೆ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ಪರಿಸರವಾದಿಯೂ ಆಗಿರುವ ಮೇನಕಾ ಗಾಂಧಿ (Maneka Gandhi) ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ವಿಶ್ವನಾಥ್​ಗೆ ಹಾಸನ ಜಿಲ್ಲಾಧಿಕಾರಿ(Hassan DC) ನೊಟೀಸ್ ಜಾರಿ ನೀಡಿದ್ದಾರೆ.

ವಿಶ್ವನಾಥ್​ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸುವಂತೆ, ಸಾರ್ವಜನಿಕವಾಗಿ ಆಡಿದ ಮಾತಿಗೆ ಸಾರ್ವಜನಿಕರ ಕ್ಷಮೆ ಕೇಳುವಂತೆ ಆಗ್ರಹಿಸಿ ಮೇನಕಾ ದೂರು ನೀಡಿದ್ದಾರೆ. ದೂರಿನ ಅನ್ವಯ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್‌ಗೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ 7 ದಿನಗಳ ಒಳಗೆ ಆಯುಧ ಮತ್ತು ಪರವಾನಗಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ನೋಟೀಸ್ ಮೂಲಕ ಸೂಚನೆ ನೀಡಿದ್ದಾರೆ.

ನವೆಂಬರ್ 7 ರಂದು ಕಾಡಾನೆ ಮಾನವ ಸಂಘರ್ಷ‌ ನಿಯಂತ್ರಣ ಅಧ್ಯಯನಕ್ಕೆ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದ ಉನ್ನತಮಟ್ಟದ ಅಧಿಕಾರಿಗಳ ತಂಡವು ಬಾಗೆ ಗ್ರಾಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಡಾನೆ ಸಂತ್ರಸ್ತರು, ಸಂಘ ಸಂಸ್ಥೆಗಳ ಮುಖಂಡರ ಜೊತೆ ಅಧಿಕಾರಿಗಳು ಸಭೆ ನಡೆಸಿದ್ದರು. ಸಭೆಯಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್‌ ಆಕ್ರೋಶಗೊಂಡು, ನೀವು ಬೆಂಗಳೂರಿಗೆ ಹೋಗಿ ಕೊಡೋ ರಿಪೋರ್ಟ್ ಬೇರೆ ಆದ್ರೆ, ನಾನು ಮೂರು ಗನ್ ತರಿಸಿದ್ದೇನೆ ನನಗೆ ಡಬಲ್ ಬ್ಯಾರೆಲ್ ಗನ್ ಲೈಸನ್ಸ್ ಇದೆ. ನನ್ನ ತೋಟಕ್ಕೆ ಹೋದಾಗ ಅಟ್ಯಾಕ್ ಮಾಡಲು ಆನೆ ಬಂದರೆ ಶೂಟ್ ಮಾಡುತ್ತೇನೆ. ನನ್ನನ್ನು ಕೊಲ್ಲಲು ಬಂದರೆ ನಾನು ಆನೆಯನ್ನು ಕೊಲ್ಲುತ್ತೇನೆ. ನೀವು ಬೇಕಿದ್ರೆ ನನ್ನ ಅರೆಸ್ಟ್ ಮಾಡಿ ಎಂದು ಹೇಳಿದ್ದರು.

ಆ ಹೇಳಿಕೆ ಇದೀಗ ವಿಶ್ವನಾಥ್​ ಅವರಿಗೆ ಸಂಕಷ್ಟ ತಂದೊಡ್ಡಿದ್ದು, ಆಯುಧ ಮತ್ತು ಪರವಾನಗಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಹಾಸನ ಜಿಲ್ಲಾಧಿಕಾರಿ ನೊಟೀಸ್ ಜಾರಿ ಮಾಡಿದ್ದಾರೆ. ಅಲ್ಲದೇ ಎಫ್​ಐಆರ್ ದಾಖಲಾಗುವ ಭೀತಿ ಎದುರಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ