ಹಾಸನ ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ ಘಮಲು; ಪೊಲೀಸರ ದಿಢೀರ್ ದಾಳಿಯಲ್ಲಿ ಪತ್ತೆಯಾಯ್ತು ಮಾದಕ ವಸ್ತು, ಮೊಬೈಲ್ ಫೋನ್​ಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 19, 2023 | 6:52 PM

ಹಾಸನದ ಜಿಲ್ಲಾ ಕಾರಾಗೃಹದಲ್ಲಿ ನಿನ್ನೆ(ಆ.18) ರಾತ್ರಿ ಪೊಲೀಸರು ದಿಢೀರ್ ದಾಳಿ ನಡೆಸಿದಾಗ ಅಕ್ರಮವಾಗಿ ಬಳಸುತ್ತಿದ್ದ 7 ಸ್ಮಾರ್ಟ್ ಫೋನ್ ಸೇರಿ, 18 ಮೊಬೈಲ್ ಹಾಗೂ ಗಾಂಜಾ ಕೂಡ ಪತ್ತೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಇದರ ಹಿಂದೆ ಜೈಲು ಅಧಿಕಾರಿ, ಸಿಬ್ಬಂದಿಗಳ ಕೈವಾಡವೂ ಇದೆಯಾ ಎನ್ನುವ ಶಂಕೆ ವ್ಯಕ್ತವಾಗಿದೆ.

ಹಾಸನ ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ ಘಮಲು; ಪೊಲೀಸರ ದಿಢೀರ್ ದಾಳಿಯಲ್ಲಿ ಪತ್ತೆಯಾಯ್ತು ಮಾದಕ ವಸ್ತು, ಮೊಬೈಲ್ ಫೋನ್​ಗಳು
ಹಾಸನ ಜಿಲ್ಲಾ ಕಾರಾಗೃಹ
Follow us on

ಹಾಸನ, ಆ.19: ಜಿಲ್ಲಾ ಕಾರಾಗೃಹದಲ್ಲಿ(District Jail) ನೂರಾರು ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳಿದ್ದಾರೆ. ಜೈಲಿನೊಳಗೆ ಯಾರಿಗೂ ಕೂಡ ಮೊಬೈಲ್ ಬಳಕೆಗೆ ಅವಕಾಶ ಇಲ್ಲವೇ ಇಲ್ಲ. ಆದ್ರೆ, ಕಿ ಪ್ಯಾಡ್ ಫೋನ್ ಜೊತೆಗೆ ಕೆಲವರು ಸ್ಮಾರ್ಟ್ ಆಂಡ್ರೈಡ್ ಫೋನ್​ಗಳನ್ನೇ ಹೊಂದಿದ್ದಾರೆ. ಅವರು ಜೈಲಿನೊಳಗೆ ಇದ್ದುಕೊಂಡೇ ತಮ್ಮ ಇನ್​ಸ್ಟಾಗ್ರಾಮ್​ ಪ್ರೋಫೈಲ್ ಅಪ್ಡೇಟ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಸಿಕ್ಕ ಒಂದು ಸಣ್ಣ ಸುಳಿವು ಆಧರಿಸಿ ದಾಳಿ ನಡೆಸಿದ ಪೊಲೀಸರಿಗೆ ಶಾಕ್ ಆಗುವಂತೆ ಅಲ್ಲಿ ಸ್ಮಾರ್ಟ್ ಫೋನ್ ಜೊತೆಗೆ 20 ಗ್ರಾಂ ಗಾಂಜಾ (Ganja) ಪತ್ತೆಯಾಗಿದೆ. ಹೌದು, ನಿನ್ನೆ(ಆ.19) ರಾತ್ರಿ 11 ಗಂಟೆ ಸುಮಾರಿನಲ್ಲಿ ಹಾಸನದ ಪೊಲೀಸ್ ಇಲಾಖೆ ವತಿಯಿಂದ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಬರೊಬ್ಬರಿ7 ಸ್ಮಾರ್ಟ್ ಫೋನ್ ಸೇರಿ 18 ಮೊಬೈಲ್​​ಗಳು ಪತ್ತೆಯಾಗಿದ್ದು, ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ಈ ಹಿಂದೆ ದಾಳಿ ವೇಳೆ ಪತ್ತೆಯಾಗಿದ್ದ ಕಿಪ್ಯಾಡ್ ಫೋನ್

ಹೌದು, ಈ ಹಿಂದೆ ಜನವರಿ ತಿಂಗಳಲ್ಲಿ ದಾಳಿ ನಡೆಸಿದಾಗ ಒಂದೆರಡು ಕಿಪ್ಯಾಡ್ ಫೋನ್ ಪತ್ತೆಯಾಗಿತ್ತು. ಆದರೆ, ಅದಾದ ಬಳಿಕವೂ ಕೂಡ ಜೈಲು ಸಿಬ್ಬಂದಿ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದು ನಿಜವಾಗಿಯೂ ಜೈಲು ಅಧಿಕಾರಿಗಳ ಕಣ್ಣು ತಪ್ಪಿಸಿ ಆಗಿರುವ ಘಟನೆಯೇ. ಜೈಲಿನೊಳಗೆ ಇದ್ದುಕೊಂಡು ಅಲ್ಲಿನ ಸಿಬ್ಬಂದಿಗೆ ಗೊತ್ತೇ ಆಗದಂತೆ ಸ್ಮಾರ್ಟ್ ಫೋನ್ ಬಳಕೆ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ. ಈ ಎಲ್ಲ ಬೆಳವಣಿಗೆ ಹಿಂದೆ ಜೈಲು ಅಧಿಕಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಇರುವುದು ಮೇಲ್ನೋಟಕ್ಕೆ ಖಾತ್ರಿಯಾಗುತ್ತಿದೆ. ಹಾಗಾಗಿಯೇ ಈ ಬಗ್ಗೆ ವಿಚಾರಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದ್ದು, ತಪ್ಪು ಕಂಡರೆ ಅಲ್ಲಿನ ಸಿಬ್ಬಂದಿಗಳ ವಿರುದ್ದ ಕೂಡ ಕೇಸ್ ದಾಖಲಿಸಲಾಗುತ್ತೆ ಎಂದು ಎಸ್ಪಿ ಹರಿರಾಮ್ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:Crime News: ಜೈಲಿನಲ್ಲಿದ್ದ ಸ್ನೇಹಿತನ ಬಿಡಿಸಿಕೊಳ್ಳಲು ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಮನೆಗಳ್ಳರ ಬಂಧನ

ಒಟ್ಟಿನಲ್ಲಿ ತಪ್ಪು ಮಾಡಿ ಜೈಲಿಗೆ ಬಂದವರ ಮನ ಪರಿವರ್ತನೆ ಮಾಡಿ ಅವರು ಮುಂದೆ ಭವಿಷ್ಯದಲ್ಲಿ ಸಮಾಜ ಕಂಠಕರಾಗದಂತೆ ತಿದ್ದು ತಿಳಿಹೇಳುವ ಕೇಂದ್ರವಾಗಬೇಕಿದ್ದ ಜೈಲುಗಳು, ಕ್ರಿಮಿನಲ್​ಗಳನ್ನು ಮತ್ತಷ್ಟು ಕ್ರಿಮಿನಲ್ ಗಳಾಗಿ ಟ್ರೈನ್ ಮಾಡುವ ಕೇಂದ್ರ ಆಗುತ್ತಿದೆಯಾ ಎನ್ನುವ ಆತಂಕ ಎದುರಾಗಿದ್ದು, ಸಂಬಂಧಪಟ್ಟವರು ಈ ಬಗ್ಗೆ ಗಂಭೀರ ಕ್ರಮಗಳ ಮೂಲಕ ಜೈಲಲ್ಲಿ ಆಗುತ್ತಿರುವ ಅನಾಹುತಗಳಿಗೆ ಬ್ರೇಕ್ ಹಾಕಿ ಜೊತೆಗೆ ಇಂತಹದ್ದಕ್ಕೆಲ್ಲ ಕಾರಣ ಆಗುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ