ಹಾಸನ: ವೈದ್ಯರಿಂದ ಮಹತ್ವದ ಸಾಧನೆ; ರಕ್ತನಾಳದ ಊತಕ್ಕೆ ಅತ್ಯಾಧುನಿಕ ಅನ್ಯೂರಿಸಂ ಚಿಕಿತ್ಸೆ ನೀಡುವಲ್ಲಿ ಯಶಸ್ವಿ

ದೇಹದಲ್ಲಿ ಎಲ್ಲೆಡೆ ರಕ್ತನಾಳಗಳು ಇರುವಂತೆ ಮೆದುಳಿನಲ್ಲಿಯೂ ಕೂಡ ರಕ್ತನಾಳಗಳಿವೆ. ಈ ರಕ್ತನಾಳದಲ್ಲಿ ಊತ ಕಾಣಿಸಿಕೊಂಡು ನೇರವಾಗಿ ಹರಿದು ಹೋಗಬೇಕಾದ ರಕ್ತ ಊತವಿರುವ ಕಡೆ ಶೇಕರಣೆ ಆಗುವುದಕ್ಕೆ ಶುರುವಾಗುತ್ತದೆ. ದಿನ ಕಳೆದಂತೆ ಅದು ಭಾರೀ ತಲೆನೋವಿಗೆ ಕಾರಣವಾದರೆ, ಆ ರಕ್ತನಾಳಕ್ಕೆ ಹೊಂದಿಕೊಂಡ ಅಂಗದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.

ಹಾಸನ: ವೈದ್ಯರಿಂದ ಮಹತ್ವದ ಸಾಧನೆ; ರಕ್ತನಾಳದ ಊತಕ್ಕೆ ಅತ್ಯಾಧುನಿಕ ಅನ್ಯೂರಿಸಂ ಚಿಕಿತ್ಸೆ ನೀಡುವಲ್ಲಿ ಯಶಸ್ವಿ
ಹಾಸನದ ವೈದ್ಯರಿಂದ ಮಹತ್ವದ ಸಾಧನೆ
Follow us
TV9 Web
| Updated By: preethi shettigar

Updated on:Sep 19, 2021 | 8:43 AM

ಹಾಸನ: ದೇಹದ ಯಾವುದಾದರು ಭಾಗದಲ್ಲಿ ಗೆಡ್ಡೆಗಳಾದರೆ, ಅದು ದೇಹದ ಒಳಗೆ ಗೆಡ್ಡೆ ಬೆಳೆದು ಮಾರಣಾಂತಿಕವಾಗಿ ಪರಿಣಮಿಸಿದರೆ ಅದನ್ನು ಪತ್ತೆಮಾಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಗಳನ್ನು ರಕ್ಷಣೆ ಮಾಡುವುದನ್ನು ನೋಡಿದ್ದೇವೆ. ಇತ್ತೀಚೆಗೆ ಅತ್ಯಾಧುನಿಕವಾಗಿ ಹೃದಯ ಚಿಕಿತ್ಸೆಗಳಲ್ಲಿ ರಕ್ತನಾಳಗಳ ಮೂಲಕ ಸ್ಟಂಟ್ ಅಳವಡಿಕೆ ಎಲ್ಲೆಡೆ ಪ್ರಚಲಿತಕ್ಕೆ ಬಂದುಬಿಟ್ಟಿದೆ. ಆದರೆ ಮೆದುಳಿನಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಲ್ಲ, ಆ ಮೂಲಕ ಪಾರ್ಶ್ವವಾಯು ಕಾಯಿಲೆಗೆ ಕಾರಣವಾಗಬಹುದಾದ ರಕ್ತನಾಳದ ಊತಕ್ಕೆ ಅತ್ಯಾಧುನಿಕ ಅನ್ಯೂರಿಸಂ ಚಿಕಿತ್ಸೆ ಬಂದಿದೆ.

ಹಾಸನ ಸೇರಿ ಸುತ್ತಮುತ್ತ ಜಿಲ್ಲೆಗಳಲ್ಲೆ ಪ್ರಪ್ರಥಮಬಾರಿಗೆ ಇಂತಹದ್ದೊಂದು ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದ ಹೆಗ್ಗಳಿಕೆಗೆ ಹಾಸನ ವೈದ್ಯರು ಪಾತ್ರವಾಗಿದ್ದಾರೆ. ಹಾಸನದ ಖಾಸಗಿ ಸ್ಪರ್ಶ ಆಸ್ಪತ್ರೆಯ ವೈದ್ಯರ ತಂಡ ಇಂತಹ ಮಹತ್ ಸಾಧನೆ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದೆ. ತಮ್ಮ ಎಡಗಣ್ಣನ್ನು ಬಿಡಲಾರದ ಸ್ಥಿತಿ ಹಾಗೂ ಅತ್ಯಂತ ಭೀಕರ ತಲೆನೋವಿನಿಂದ ಬಳಲುತ್ತಿದ್ದ 59 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಕೂಡಲೆ ಅವರಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಿದ ವೈದ್ಯರ ತಂಡ ಮೆದುಳಿನಲ್ಲಿ ರಕ್ತನಾಳ ಊತವನ್ನು ಗುರುತಿಸಿದ್ದಾರೆ. ರೋಗಿಕಡೆಯವರ ಒಪ್ಪಿಗೆ ಪಡೆದು ಕೂಡಲೆ ಅತ್ಯಾಧುನಿಕ ಚಿಕಿತ್ಸೆಗೆ ತಯಾರಿಮಾಡಿಕೊಂಡ ತಂಡ ಎರಡೇ ದಿನದಲ್ಲಿ ಈ ಫ್ಲೋ ಡೈವರ್ಟರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರೈಸಿ, ಎರಡೇ ದಿನದಲ್ಲಿ ಮಹಿಳೆಯನ್ನು ಡಿಸ್ಚಾರ್ಜ್ ಮಾಡಿದ್ದಾರೆ.

ಏನಿದು ರಕ್ತನಾಳದ ಊತ? ಒತ್ತಡದ ಜೀವನದಿಂದ ಹಾಗೂ ಕೆಲವೊಮ್ಮೆ ಅನುವಂಶಿಕವಾಗಿಯೂ ಈ ಕಾಯಿಲೆ ಬರುವುದಿದೆ. ಆದರೆ ಇತ್ತೀಚಿನ ದಿನಗಳಲ್ಲಿ 45 ರಿಂದ 50ವರ್ಷ ದಾಟಿದ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾರ್ಶ್ವವಾಯು ಕಾಯಿಲೆ ಪತ್ತೆಯಾಗುತ್ತಿದೆ. ಇದು ಕೆಲವೇಳೆ ಮಾರಣಾಂತಿಕವಾದರೆ, ಇನ್ನು ಕೆಲವೇಳೆ ಶಾಶ್ವತವಾಗಿ ದೇಹ ಊನವಾಗುವಂತೆ ಮಾಡುತ್ತದೆ. ಆದರೆ ಆರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಸಂಪೂರ್ಣಗುಣಮುಖವಾಗುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ.

ದೇಹದಲ್ಲಿ ಎಲ್ಲೆಡೆ ರಕ್ತನಾಳಗಳು ಇರುವಂತೆ ಮೆದುಳಿನಲ್ಲಿಯೂ ಕೂಡ ರಕ್ತನಾಳಗಳಿವೆ. ಈ ರಕ್ತನಾಳದಲ್ಲಿ ಊತ ಕಾಣಿಸಿಕೊಂಡು ನೇರವಾಗಿ ಹರಿದು ಹೋಗಬೇಕಾದ ರಕ್ತ ಊತವಿರುವ ಕಡೆ ಶೇಕರಣೆ ಆಗುವುದಕ್ಕೆ ಶುರುವಾಗುತ್ತದೆ. ದಿನ ಕಳೆದಂತೆ ಅದು ಭಾರೀ ತಲೆನೋವಿಗೆ ಕಾರಣವಾದರೆ, ಆ ರಕ್ತನಾಳಕ್ಕೆ ಹೊಂದಿಕೊಂಡ ಅಂಗದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಒಂದೊಮ್ಮೆ ಈ ಊತದ ಭಾಗ ಒಡೆದು ಹೋದರೆ ಅದೇ ಪಾರ್ಶ್ವವಾಯು ಅಥವಾ ಇನ್ನಿತರ ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತದೆ. ಇಂತಹ ರಕ್ತನಾಳದ ಊತವನ್ನು ಕಂಡು ಹಿಡಿದು ಅದಕ್ಕೆ ಯಾವುದೇ ಗಾಯಮಾಡದೆ ಕೇವಲ ರಕ್ತನಾಳಗಳ ಮೂಲಕವೇ ಊತಗೊಂಡ ಮೆದುಳಿನ ರಕ್ತನಾಳಕ್ಕೆ ಫ್ಲೋ ಡೈವರ್ಟರ್ ಅಳವಡಿಕೆ ಮಾಡಿ ಅಪಾಯದಿಂದ ಪಾರು ಮಾಡಲಾಗುತ್ತದೆ.

ಮೊದಲನೇ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದ ಆರು ಜನ ವೈದ್ಯರ ತಂಡ ಹಾಸನದ ಸ್ಪರ್ಶ ಆಸ್ಪತ್ರೆಯ ಈ ಯಶಸ್ವಿ ಚಿಕಿತ್ಸೆ ಇದೀಗ ಇಂತಹ ಚಿಕಿತ್ಸೆಗಾಗಿ ರೋಗಿಗಳು ಬೆಂಗಳೂರಿನಂತ ದೊಡ್ಡ ದೊಡ್ಡ ನಗರಗಳಿಗೆ ಹೋಗದಂತೆ ತಕ್ಷಣ ಇಲ್ಲಿಯೇ ಚಿಕಿತ್ಸೆ ಒದಗಿಸುವ ನಿರೀಕ್ಷೆ ಹುಟ್ಟಿಸಿದೆ. ಆಸ್ಪತ್ರೆಯ ನುರಿತ ಇಂಟರ್ ವೆನ್ಷನಲ್ ರೇಡಿಯಾಲಜಿಸ್ಟ್ ಆಗಿರುವ ಡಾ.ಬಾಸ್ಕರ್​, ನರರೋಗ ತಜ್ಞರಾದ ಡಾ.ಪ್ರೀತಂ ಹಾಗೂ ಡಾ.ಗುಣಾಲ್, ಕ್ಷ ಕಿರಣ ತಜ್ಞರಾದ ಡಾ.ವಿಜಯ್, ಅರವಳಿಕೆ ತಜ್ಞರಾದ ಡಾ.ಚುಚೇಂಧ್ರ ಮತ್ತು ಇಂಟೆನ್ಸಿವಿಸ್ಟ್ ಡಾ|ಪ್ರೇಮಾ ಅವರನ್ನೊಳಗೊಂಡ ವೈದ್ಯರ ತಂಡ ಹಾಸನ ಪ್ರಾಂತ್ಯದಲ್ಲಿ ನಡೆದ ಮೊಟ್ಟ ಮೊದಲ ಫ್ಲೋ ಡೈವರ್ಟರ್ ಅಳವಡಿಕೆಯ ಅನ್ಯೂರಿಸಂ ಅನ್ನು ಯಶಸ್ವಿಯಾಗಿ ಪೂರೈಸಿ ಸಾವಿನಂಚಿನಲ್ಲಿದ್ದ ಮಹಿಳೆಯ ಜೀವ ಉಳಿಸಿದ್ದಾರೆ. ಅದೂ ಒಂದೇ ಒಂದು ಸೂಜಿಮೊನೆಯಷ್ಟು ರಂದ್ರದ ಮೂಲಕ ಚಿಕಿತ್ಸೆ ನೀಡಿದ್ದಾರೆ.

ಚಿಕಿತ್ಸೆ ಹೇಗೆ?  ಏನಿದು ಫ್ಲೋ ಡೈವರ್ಟರ್? ರಕ್ತನಾಳದ ಊತದ ಲಕ್ಷಣಗಳು ಅಂದರೆ ಇಂಟರ್ ವೆನ್ಷನಲ್ ರೇಡಿಯಾಲಜಿಸ್ಟ್ ಡಾ.ಬಾಸ್ಕರ್ ಅವರು ಹೇಳುವ ಪ್ರಕಾರ, ತಲೆನೋವು, ವಾಂತಿ, ಸುಸ್ತಾಗುವಿಗೆ,ತೆಲೆ ಸುತ್ತುವುದು ಹಾಗೂ ತಲೆಯೊಳಗೆ ಸಿಡಿಲು ಬಡಿದಷ್ಟು ನೋವಿನ ಅನುಭವ ಆಗುತ್ತಿದ್ದರೆ ಆಗ ಮೆದುಳಿನ ರಕ್ತನಾಳದಲ್ಲಿ ಊತ ಇರಬಹುದು ಎಂದು ಶಂಕಿಸಬಹುದು. ಆದರೂ ತಜ್ಞ ವೈದ್ಯರು ಪರೀಕ್ಷೆ ನಡೆಸಿ ಕಾಯಿಲೆ ಪತ್ತೆಮಾಡುತ್ತಾರೆ. ಇನ್ನು ಮೆದುಳಿನ ರಕ್ತನಾಳದಲ್ಲಿ ಉಬ್ಬುವಿಕೆ ಇದ್ದರೆ ಮೊದಲೆಲ್ಲಾ ತಲೆಯ ಮೆದುಳಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಓಪನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈಗ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದ್ದು, ಆಧುನಿಕ ಕ್ಯಾತ್ ಲ್ಯಾಬ್​ಗಳಲ್ಲಿ ವಿದೇಶಗಳಿಂದ ಆಮದುಮಾಡಿಕೊಂಡ ಈ ಫ್ಲೋ ಡೈವರ್ಟರ್ ಅನ್ನು, ಸಮಸ್ಯೆ ಇರುವ ವ್ಯಕ್ತಿಯ ಕಾಲಿನ ರಕ್ತನಾಳದ ಮೂಲಕ ಮೆದುಳಿಗೆ ತಲುಪಿಸಲಾಗುತ್ತದೆ. ಅಲ್ಲಿ ರಕ್ತನಾಳ ಉಬ್ಬಿರುವ ಕಡೆಗೆ ಈ ಫ್ಲೋ ಡೈವರ್ಟರ್ ಅನ್ನು ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಹೀಗೆ ಫ್ಲೋ ಡೈವರ್ಟರ್ ಅಳವಡಿಸಿದ ಎರಡೇ ದಿನದಲ್ಲಿ ರೋಗಿಯು ಸಂಪೂರ್ಣ ಗುಣಮುಖರಾಗುತ್ತಾರೆ. ಒಂದೇ ಒಂದು ಹನಿ ರಕ್ತಸ್ರಾವ ಇಲ್ಲದೆ, ನೋವಿಲ್ಲದೆ ಫ್ಲೋ ಡೈವರ್ಟರ್ ಅಳವಡಿಕೆ ಕಾರ್ಯ ಮುಗಿಸಲಾಗುತ್ತದೆ. ಹಾಲಿ ಮಾರುಕಟ್ಟೆಯಲ್ಲಿ ಒಂದು ಪ್ಲೋ ಡೈವರ್ಟಎ್​ಗೆ 5 ಲಕ್ಷ ಬೆಲೆಯಿದ್ದು, ಈ ಮಾದರಿಯ ಒಂದು ಶಸ್ತ್ರ ಚಿಕಿತ್ಸೆಗೆ 8 ರಿಂದ 9 ಲಕ್ಷ ಖರ್ಚಾಗಬಹುದು ಎಂದು ಇಂಟರ್ ವೆನ್ಷನಲ್ ರೇಡಿಯಾಲಜಿಸ್ಟ್ ಡಾ.ಭಾಸ್ಕರ್ ಎಂ.ವಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಹಾಸನದಲ್ಲಿ ಇದುವರೆಗೂ ಯಾವುದೇ ವೈದ್ಯರು ಪ್ರಯತ್ನ ಮಾಡಿರದ ಅತ್ಯಂತ ದುಬಾರಿಯಾದ, ಅನ್ಯೂರಿಸಂ ಫ್ಲೋ ಡೈವರ್ಟರ್ ಅಳವಡಿಕೆಯನ್ನು ಖಾಸಗಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಪೂರೈಸಿರೋದು ಈ ಭಾಗದ ಜನರಿಗೂ ಹತ್ತಿರದಲ್ಲಿ, ತಕ್ಷಣಕ್ಕೆ, ಪ್ರಾಣ ರಕ್ಷಕ ಚಿಕಿತ್ಸೆ ಸಿಗುತ್ತದೆ ಎನ್ನುವ ವಿಶ್ವಾಸ ಮೂಡಿಸಿದೆ. ಸದ್ಯ ವಿದೇಶಗಳಿಂದ ಮಾತ್ರವೇ ಆಮದಾಗುತ್ತಿರುವ ಈ ಫ್ಲೋ ಡೈವರ್ಟರ್​ಗಳು  ಸ್ಥಳೀಯವಾಗಿ ಲಭ್ಯವಾದರೆ, ಅದೂ ಸರ್ಕಾರಿ ಆಸ್ಪತ್ರೆಗಳಲ್ಲೂ ಕಡಿಮೆ ವೆಚ್ಚದಲ್ಲಿ ಇಂತಹ ಚಿಕಿತ್ಸೆ ಸಿಕ್ಕರೆ, ಖಂಡಿತಾ ಅರೋಗ್ಯ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಯಾದಂತೆ ಆಗಲಿದೆ.

ಕೆಲ ವರ್ಷಗಳಿಂದ ತಲೆ ನೋವು ಬರುತ್ತಿತ್ತು. ಕಳೆದ ಒಂದು ತಿಂಗಳಿನಿಂದ ಈ ನೋವು ಸಹಿಸುವುದಕ್ಕೆ ಸಾಧ್ಯವಾಗದಷ್ಟು ಆಗೋಕೆ ಶುರುವಾಗಿತ್ತು. ಹೀಗಾಗಿ ನನ್ನ ಎಡಗಣ್ಣನ್ನು ತೆರೆಯೋಕೆ ಆಗುತ್ತಿರಲಿಲ್ಲ. ಹಾಸನದಲ್ಲಿ ಒಳ್ಳೇ ಚಿಕಿತ್ಸೆ ಸಿಗುತ್ತೆ ಎಂದು ಅಳಿಯಾ ಹಾಗು ಮಗಳು ಇಲ್ಲಿಗೆ ಕರೆತಂದರು. ಡಾ. ಭಾಸ್ಕರ್ ಅವರು ಪರೀಕ್ಷೆ ಮಾಡಿದರು. ಮೆದುಳಿನಲ್ಲಿ ರಕ್ತನಾಳದ ಊತ ಇರೋದು ಪತ್ತೆಮಾಡಿ ಆಪರೇಷನ್ ಮಾಡಿದ್ದಾರೆ. ಈಗ ಚೆನ್ನಾಗಿದ್ದೇನೆ. ವೈದ್ಯರು ಚೆನ್ನಾಗಿ ಚಿಕಿತ್ಸೆ ಮಾಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

ವರದಿ: ಮಂಜುನಾಥ್. ಕೆ.ಬಿ

ಇದನ್ನೂ ಓದಿ: ಇಸ್ರೇಲ್​​ನಲ್ಲಿ ಮೊದಲ ಬಾರಿಗೆ ಸಯಾಮಿ ಅವಳಿ ಬಾಲಕಿಯರು, ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಮುಖಾಮುಖಿಯಾದರು!

ಬಳ್ಳಾರಿ: ವಿಮ್ಸ್​ನ ವೈದ್ಯರ ತಂಡದಿಂದ ನೂತನ ಸಾಧನೆ; ಬೃಹತ್ ಗಾತ್ರದ ಅಂಡಾಶಯದ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ

Published On - 8:37 am, Sun, 19 September 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್