ಹಾಸನ, ಅಕ್ಟೋಬರ್ 24: ಹಾಸನದ ಹಾಸನಾಂಬ ದೇಗುಲದ ಗರ್ಭಗುಡಿ ಬಾಗಿಲು ಗುರುವಾರ ಮಧ್ಯಾಹ್ನ ತೆರೆಯಲಾಯಿತು. ಅರಸು ವಂಶಸ್ಥರು ಬಾಳೆ ಗಿಡ ಕಡಿದ ನಂತರ ಬಾಗಿಲು ತೆರೆಯಲಾಯಿತು. ಇಂದಿನಿಂದ ನವೆಂಬರ್ 3ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ನಾಳೆಯಿಂದ ನವೆಂಬರ್ 2 ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಚಿವ ರಾಜಣ್ಣ, ಶಾಸಕ ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ಹಾಸನ ಡಿಸಿ, ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ತೆರೆಯಲಾಯಿತು.
ಹಾಸನಾಂಬ ಜಾತ್ರೆಗೆ ಕೆಲವು ದಿನಗಳಿಂದ ಸಿದ್ಧತೆಗಳು ಭರದಿಂದ ಸಾಗಿದ್ದವು. ಸದ್ಯ ವಿಶೇಷ ಹೂವಿನ ಅಲಂಕಾರದಿಂದ ದೇವಸ್ಥಾನ ಕಂಗೊಳಿಸುತ್ತಿದೆ.
ಹಾಸನಾಂಬ ದೇವಾಲಯದಲ್ಲಿ ಗರ್ಭಗುಡಿ ಬಾಗಿಲು ವರ್ಷದಲ್ಲಿ ಒಂದು ಬಾರಿ ಮಾತ್ರ ತೆರೆಯುವುದು ವಿಶಿಷ್ಟ ಸಂಪ್ರದಾಯವಾಗಿದೆ. ಪ್ರತೀ ವರ್ಷ ಅಶ್ವಯುಜ ಮಾಸದ ಅಷ್ಟಮಿಯ ದಿನ ಬಾಗಿಲು ತೆರೆಯಲಾಗುತ್ತದೆ. ಸಾಮಾನ್ಯವಾಗಿ ಇದು ದೀಪಾಳಿ ಹಬ್ಬದ ಸಮಯದಲ್ಲಿ ಬರುತ್ತದೆ. ಈ ಸಂದರ್ಭದಲ್ಲಿ ಪ್ರತಿ ವರ್ಷ ಒಂದು ವಾರ ಸಾರ್ವಜನಿಕರ ದರ್ಶನಕ್ಕೆ ಬಾಗಿಲು ತೆರೆಯಲಾಗುತ್ತದೆ. ಈ ಸಮಯದಲ್ಲಿ ದೇವಿಯ ಆಶೀರ್ವಾದವನ್ನು ಪಡೆಯುವುದರಿಂದ ಬಾಳಿನಲ್ಲಿ ಸಮೃದ್ಧಿ ಮತ್ತು ಸಂತೋಷ ಉಂಟಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ವರ್ಷದ ಉಳಿದ ಭಾಗಗಳಲ್ಲಿ, ದೇವಾಲಯವು ಮುಚ್ಚಿರುತ್ತದೆ. ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ಬೆಳಗಿದ ದೀಪ, ಅಕ್ಕಿ, ನೀರು ಮತ್ತು ಹೂಗಳನ್ನು ಒಳಗೆ ಇಡಲಾಗುತ್ತದೆ. ಗಮನಾರ್ಹವಾಗಿ, ಅವುಗಳು ಮುಂದಿನ ವರ್ಷ ದೇವಾಲಯವನ್ನು ಮತ್ತೆ ತೆರೆಯುವಾಗ ತಾಜಾ ಆಗಿರುತ್ತವೆ ಮತ್ತು ದೀಪವು ಆಗಲೂ ಉರಿಯುತ್ತಿರುತ್ತದೆ. ಇದು ಭಕ್ತರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.
ಕಳೆದ ಬಾರಿ ಶಕ್ತಿ ಯೋಜನೆಯ ಪರಿಣಾಮ ಕಾರಣದಿಂದ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಹಾಗು ಭಕ್ತರು ಆಗಮಿಸಿದ್ದರು. ಬರೊಬ್ಬರಿ 14 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಹಾಗಾಗಿ ಈ ವರ್ಷ ಕೂಡ ಸುಮಾರು 20ರಿಂದ 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯೊಂದಿಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 10 ಕಿಲೋಮೀಟರ್ ಉದ್ದದ ಬ್ಯಾರಿಕೇಡ್ ವ್ಯವಸ್ಥೆ, ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೆರಳಿನ ವ್ಯವಸ್ಥೆ, ಗಣ್ಯರು ಅತಿ ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಸುಗಮ ದರ್ಶನಕ್ಕೆ ಕ್ಯೂ ಆರ್ ಕೋಡ್ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿಶೇಷ ದರ್ಶನಕ್ಕೆ ಪಾಸ್ ಪಡೆಯುವವರು, ಹಣ ನೀಡಿ ವಿಶೇಷ ಪಾಸ್ ಪಡೆದು ದರ್ಶನ ಮಾಡ ಬಯಸುವವರಿಗಾಗಿ ಕ್ಯೂ ಆರ್ ಕೋಡ್ ಒಳಗೊಂಡ ಪಾಸ್ ಮಾಡಲಾಗಿದ್ದು ಅವರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಸುವ ಸಾಧ್ಯತೆ ಹಿನ್ನೆಲೆಯಲ್ಲಿ ದಿನದ 24 ಗಂಟೆಯೂ ಕೂಡ ದೇವಿ ದರ್ಶನಕ್ಕೆ ಅವಕಾಶ ಇದ್ದು, ಅದಕ್ಕಾಗಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಲಿಪೊಲೀಸರು ಕಂದಾಯ ಇಲಾಖೆ ಸಿಬ್ಬಂದಿ, ಹಾಗೂ ಸ್ವಯಂಸೇವಕರನ್ನು ಸನ್ನದ್ಧಗೊಳಿಸಲಾಗಿದೆ.
ಸಾಮಾನ್ಯವಾಗಿ ಹಾಸನಾಂಬ ದೇಗುಲದಲ್ಲಿ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಬಾರಿ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮಾತ್ರವಲ್ಲದೆ, ನೈವೇದ್ಯದ ಸಮಯ ಹೊರತುಪಡಿಸಿ ಉಳಿದಂತೆ ಎಲ್ಲಾ ಅವಧಿಯಲ್ಲೂ (ದಿನ ಪೂರ್ತಿ) ದರ್ಶನಕ್ಕೆ ಅವಕಾಶವಿದೆ.
ನೇರ ದರ್ಶನ ಪಡೆಯ ಬಯಸುವ ಭಕ್ತರಿಗೆ 1000 ರೂ. ಟಿಕೆಟ್ 300 ರೂ. ಟಿಕೆಟ್ ಹಾಗೂ ವಿಶೇಷ ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹಾಗೂ ಸಾಮಾನ್ಯ ಭಕ್ತರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ದೇಗುಲವನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಇಡೀ ದೇಗುಲದ ಆವರಣ ನಳ ನಳಿಸುವಂತೆ ಮಾಡಲಾಗಿದೆ. ಹಲವು ಹೈಟೆಕ್ ವ್ಯವಸ್ಥೆಗಳೊಂದಿಗೆ ಈ ವರ್ಷದ ಹಾಸನಾಂಬೆ ಉತ್ಸವ ಆರಂಭವಾಗಿದೆ.
ಈ ಬಾರಿ ಹಾಸನಾಂಬೆ ಉತ್ಸವವನ್ನು ಜನೋತ್ಸವವಾಗಿ ಆಚರಣೆ ಮಾಡಲಾಗುತ್ತಿದ್ದು, ಹಾಸನಾಂಬೆ ಉತ್ಸವ ರಾಜ್ಯಮಟ್ಟದ ನೃತ್ಯಸ್ಪರ್ದೆ, ಹಾಟ್ ಏರ್ ಬಲೂನ್ ವ್ಯವಸ್ಥೆ, ಹಾಸನ ಜಿಲ್ಲೆಯ ಐತಿಹಾಸಿಕ ಹಾಗೂ ಪ್ರಾಕೃತಿಕ ತಾಣ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಟೂರ್, ಡಬಲ್ ಡೆಕ್ಕರ್ ಬಸ್ ಮೂಲಕ ಹಾಸನದ ಚಿತ್ತಾಕರ್ಷಕ ಲೈಟಿಂಗ್ ನೋಡಲು ವ್ಯವಸ್ಥೆ ಮಾಡಲಾಗಿದೆ. ದಸರಾ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಇಂದಿನಿಂದ ಇಡೀ ಹಾಸನ ನಗರ ದೀಪಾಲಂಕಾರದಿಂದ ಜಗಮಗಿಸಲಿದೆ.
ಇದನ್ನೂ ಓದಿ: ಇಂದು ಹಾಸನಾಂಬ ದೇಗುಲ ಬಾಗಿಲು ಓಪನ್: 9 ದಿನ ದರ್ಶನಕ್ಕೆ ಅವಕಾಶ, ಆನ್ಲೈನ್ ಬುಕ್ಕಿಂಗ್ ಲಭ್ಯ
ಮೊದಲ ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇಲ್ಲ. ಮರುದಿನ, ಅಂದರೆ ಶುಕ್ರವಾರ ಮುಂಜಾನೆ 6 ಗಂಟೆಯಿಂದ ದರ್ಶನಕ್ಕೆ ಅವಕಾಶನೀಡಲಾಗುತ್ತದೆ. ನಂತರದ ದಿನಗಳಲ್ಲಿ ನೈವೇದ್ಯದ ಸಮಯ ಹೊರತುಪಡಿಸಿ ಉಳಿದಂತೆ ಎಲ್ಲಾ ಅವಧಿಯಲ್ಲೂ ಕೂಡ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡ ನಾಲ್ವರು ಎಎಸ್ಪಿ ಮಟ್ಟದ ಅದಿಕಾರಿಗಳು ಸೇರಿ ಸುಮಾರು 1200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Thu, 24 October 24