ಹಾಸನ, ಫೆಬ್ರವರಿ 21: ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು (Land) ಕಬಳಿಸಿ ಲೇಔಟ್ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ. 1970 ಕ್ಕೂ ಹಿಂದೆ ಸಿದ್ದಯ್ಯ ಎಂಬುವರಿಗೆ ಕುಳುವಾಡಿಕೆ ಹಿನ್ನೆಲೆಯಲ್ಲಿ ಹಾಸನ (Hassan) ತಾಲೂಕಿನ ಕೊಂತಗೌಡನನಹಳ್ಳಿ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 373ಕ್ಕೆ ಹೊಂದಿಕೊಂಡಿರುವ ಸರ್ವೆ ನಂ 2ರಲ್ಲಿ 4.31 ಎಕರೆ ಭೂಮಿ ಮಂಜೂರಾಗಿತ್ತು. ಅವಿವಾಹಿತ ಸಿದ್ದಯ್ಯ ಹಾಗು ಆತನ ಸಹೋದರ ತಿಮ್ಮಯ್ಯ ಮರಣ ನಂತರ, 2015 ರಲ್ಲಿ ಸಿದ್ದಯ್ಯ ಎಂಬ ಬೇರೋಬ್ಬರ ಹೆಸರಿಗೆ ಖಾತೆ ಬದಲಯಿಸಲಾಗಿದೆ. ಅಲ್ಲದೆ ಸಿದ್ದಯ್ಯ ಹಾಗೂ ಆತನ ಇನ್ನೊಬ್ಬ ಸಹೋದರನ ಇಬ್ಬರು ಮಕ್ಕಳ ಹೆಸರಿನಲ್ಲಿ ನಕಲಿ ದಾಖಲೆ (Fake Documents) ಸೃಷ್ಟಿಸಲಾಗಿದೆ.
ಅಧಿಕಾರಿಗಳು ಹಾಗೂ ಭೂ ಮಾಫಿಯಾ ದಂಧೆಕೋರರು ಜಂಟಿಯಾಗಿ ಭೂ ದಂಧೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಭೂಮಿಯನ್ನು 2017ರಲ್ಲಿ ಕೆ.ಆರ್. ಲಕ್ಷ್ಮಿಕಾಂತ್ ಎಂಬುವರು ಖರೀದಿಸಿದ್ದಾರೆ. ಲಕ್ಷ್ಮಿಕಾಂತ್ ಈಗಾಗಲೇ ಭೂ ಪರಿವರ್ತಿಸಿ ಸುಮಾರು 94 ಸೈಟ್ ನಿರ್ಮಿಸಿ ಮಾರಾಟ ಮಾಡಿದ್ದಾನೆ.
ಇದನ್ನೂ ಓದಿ: ಹೆಚ್ಡಿ ಕೋಟೆ: ಭೂ ಕಬಳಿಕೆ ಆರೋಪ, ನಾಲ್ವರು ಅಧಿಕಾರಿಗಳು ಅಮಾನತು
ಅಕ್ರಮವಾಗಿ ಮಂಜೂರು ಮಾಡಿಸಿಕೊಂಡು ಕೊಟ್ಯಾಂತರ ರೂ. ಆದಯ ಮಾಡಿಕೊಂಡಿದ್ದಾನೆ. ಲಕ್ಷ್ಮೀಕಾಂತ್ ಜೊತೆ ದೊಡ್ಡ ದೊಡ್ಡ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಕ್ರಯವನ್ನು ರದ್ದುಗೊಳಿಸುವಂತೆ ಗ್ರಾಮಸ್ಥರ ಒತ್ತಾಯಿಸಿದ್ದು, ಭೂಮಿಯನ್ನು ಗೋಮಾಳವಾಗಿ ಮಾರ್ಪಡಿಸಿ ಗ್ರಾಮಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ದಕ್ಷಿಣ ಕರ್ನಾಟಕದ ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಅಗ್ರಸ್ಥಾನದಲ್ಲಿದೆ.ಜಿಲ್ಲೆಯಾದ್ಯಂತ ಎರಡು ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಸಿಗುವುದು ಕಷ್ಟವಾಗಿದೆ ಎಂದು ಜಿಲ್ಲಾ ನೋಡಲ್ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಹೇಳಿದ್ದರು.ಕಟಾರಿಯಾ ಅವರು ಗುರುವಾರದಿಂದ ಜಿಲ್ಲೆಯಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ನಂತರ ಅಧಿಕಾರಿಗಳ ಜತೆ ಸಭೆಯಲ್ಲಿ ಮಾತನಾಡಿ, ಗೋಮಾಳ ಜಮೀನು ಸೇರಿದಂತೆ ಹಲವು ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಟಾರಿಯಾ ಮಾತನಾಡಿ, ನಿಯಮಾವಳಿ ಉಲ್ಲಂಘಿಸಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ 48 ಪ್ರಕರಣಗಳಿವೆ. ಒಂಬತ್ತು ತಹಶೀಲ್ದಾರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಜೈಲಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ