ಹಾಸನ, ಜುಲೈ 22: ಮಲೆನಾಡು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಸಕಲೇಶಪುರ ತಾಲೂಕಿನ ಆನೆಮಹಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ (Shiradi Ghat) ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ. ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ತಡೆಗೋಡೆ ನಿರ್ಮಾಣ ಮಾಡದೆ ರಸ್ತೆ ಅಗಲೀಕರಣ ಮಾಡಿರುವುದರಿಂದ ಮಣ್ಣು ಕುಸಿದಿದೆ. ಪ್ರತಿನಿತ್ಯ ಶಿರಾಡಿಘಾಟ್ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅವೈಜ್ಞಾನಿಕ ಕಾಮಗಾರಿಯಿಂದ ಸವಾರರಿಗೆ ತೊಂದರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದ್ದು, ದುರಂತ ಸಂಭವಿಸುವುದಕ್ಕೂ ಮುನ್ನ ಸುರಕ್ಷತಾ ಕ್ರಮಕೈಗೊಳ್ಳುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಕೂಡ ಧಾರಾಕಾರ ಮಳೆಯಿಂದ ನದಿಗಳು ಪ್ರವಾಹದ ಮಟ್ಟ ಮೀರಿವೆ. ತುಂಗಾ ಭದ್ರಾ, ಹೇಮಾವತಿ ನದಿಗಳ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಗೆ ಕೆಲವೇ ಅಡಿ ಬಾಕಿಯಿದೆ. ಧಾರಾಕಾರ ಮಳೆ ಮುಂದುವರೆದರೆ ಮೊದಲು ಕಳಸದಿಂದ ಹೊರನಾಡಿಗೆ ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಲಿದೆ. ಕುದುರೆಮುಖ, ಕಳಸ ಭಾಗಗಳಲ್ಲಿಯೂ ಸಹ ಮಳೆ ಸುರಿಯುತ್ತಿದೆ.
ಕೊಡಗು ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರೆದ ಪರಿಣಾಮ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಮಡಿಕೇರಿ-ಮಾಂದಲಪಟ್ಟಿ ರಸ್ತೆ ಸಂಪರ್ಕ ಕಡಿತವಾಗಿದ್ದು, ಮಾಂದಲಪಟ್ಟಿಗೆ ತೆರಳಲಾಗದೆ ಪ್ರವಾಸಿಗರು ಪರದಾದುವಂತಾಗಿದೆ. ರಸ್ತೆಗೆ ಬಿದ್ದ ಮರಗಳನ್ನು ಅರಣ್ಯ ಇಲಾಖೆ, ಸೆಸ್ಕ್ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿಯೂ ಮಳೆ ಅಬ್ಬರ ಜೋರಾಗಿದ್ದು, ವರದಾ ನದಿ ನೀರಿನ ಮಟ್ಟ ಗಂಟೆಗೆ ಎರಡು ಅಡಿ ಹೆಚ್ಚಳವಾಗಿದೆ. ಹಾಗಾಗಿ ಹಾವೇರಿ ನಗರ ಮತ್ತು ಕಳಸೂರು ಗ್ರಾಮದ ಮಧ್ಯ ಸಂಪರ್ಕ ಕಟ್ ಆಗಿದೆ. ಸವಣೂರು, ಲಕ್ಷ್ಮಶ್ವರ ಹಾಗೂ ಗದಗದಿಂದ ಹಾವೇರಿಗೆ ಬರಲು ಇದ್ದ ಶಾರ್ಟ್ ಕಟ್ ರಸ್ತೆ ಸದ್ಯ ಬಂದ ಆಗಿದೆ.
ಇದನ್ನೂ ಓದಿ: ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳ ಬೆಳಗಾವಿ ಜಿಲ್ಲೆಯ 14 ಸೇತುವೆಗಳು ಮುಳುಗಡೆ
ನದಿ ದಡದ ಗ್ರಾಮಗಳಲ್ಲಿ ಜಿಲ್ಲಾಡಳಿತದಿಂದ ಜಾಗೃತಿ ಮೂಡಿಸದ ಹಿನ್ನೆಲೆ ನದಿ ತುಂಬಿ ಹರಿಯುತ್ತಿದ್ದರು ನದಿ ದಾಟಲು ಜನ ಹುಚ್ಚು ಸಾಹಸ ಮಾಡುತ್ತಿದ್ದಾರೆ. ನದಿ ದಡದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ಇನ್ನೊಂದು ನಾಲ್ಕು ದಿನ ಹೀಗೆ ಮಳೆ ಬಂದರೆ ಕೊಳುರು ಗ್ರಾಮ ಸಂಪೂರ್ಣ ಜಲಾವೃತ ಆಗುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.