ಮಳೆಗಾಲದಲ್ಲೇ ಬತ್ತಿದ ಹೇಮಾವತಿ ಒಡಲು: ಭವಿಷ್ಯದಲ್ಲಿ ಕುಡಿಯುವ ನೀರಿಗೆ ಶುರುವಾಗಲಿದೆಯಾ ಹಾಹಾಕಾರ?

| Updated By: ಗಂಗಾಧರ​ ಬ. ಸಾಬೋಜಿ

Updated on: Sep 20, 2023 | 11:11 PM

Hassan News: ಹಾಸನ ಜಿಲ್ಲೆಯ ಗೊರೂರು ಸಮೀಪ ಇರುವ ಕಾವೇರಿಕೊಳ್ಳದ ಪ್ರಮುಖ ಜಲಾಶಯ ಹೇಮಾವತಿಯಲ್ಲಿ ನೀರಿನ ಸಂಗ್ರಹ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಐವತ್ತು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ನೀರಿನ ಸಂಗ್ರಹ ಸೆಪ್ಟೆಂಬರ್​ನಲ್ಲಿಇರೋದು ಭವಿಷ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗುವ ಆತಂಕ ಎದುರಾಗಿದೆ.

ಮಳೆಗಾಲದಲ್ಲೇ ಬತ್ತಿದ ಹೇಮಾವತಿ ಒಡಲು: ಭವಿಷ್ಯದಲ್ಲಿ ಕುಡಿಯುವ ನೀರಿಗೆ  ಶುರುವಾಗಲಿದೆಯಾ ಹಾಹಾಕಾರ?
ಬರಿದಾಗುತ್ತಿದೆ ಹೇಮಾವತಿ ಒಡಲು
Follow us on

ಹಾಸನ, ಸೆಪ್ಟೆಂಬರ್​ 20: ಪಶ್ಚಿಮಘಟ್ಟದ ತಪ್ಪಲಿನ ಹಸಿರ ನಾಡು ಹಾಸನದಲ್ಲೂ ಈ ಬಾರಿ ಭೀಕರ ಬರಗಾಲ ಕಾಡುತ್ತಿದೆ, ಎಲ್ಲೆಲ್ಲೂ ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತಿದ್ದರೆ ಮಳೆ ಸುರಿಯುತ್ತಿದ್ದ ಮುಂಗಾರಿನಲ್ಲಿ ಬಿರು ಬಿಸಿಲು ಜನರನ್ನ ಕಂಗೆಡಿಸಿದೆ. ಕಾವೇರಿಕೊಳ್ಳದ ಪ್ರಮುಖ ಜಲಾಶಯ ಹೇಮಾವತಿ (Hemavathi river) ಯಲ್ಲಿ ನೀರಿನ ಸಂಗ್ರಹ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಐವತ್ತು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ನೀರಿನ ಸಂಗ್ರಹ ಸೆಪ್ಟೆಂಬರ್​ನಲ್ಲಿಇರೋದು ಭವಿಷ್ಯದಲ್ಲಿ ಕುಡಿಯೋ ನೀರಿಗೂ ಹಾಹಾಕಾರ ಸೃಷ್ಟಿಯಾಗುವ ಆತಂಕ ಎದುರಾಗಿದೆ. 37 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇದೀಗ ಕೇವಲ 17 ಟಿಎಂಸಿ ನೀರಿದ್ದು ತಮಿಳುನಾಡಿಗೂ ಇಲ್ಲಿಂದ ನೀರು ಬಿಟ್ಟರೆ ನಮ್ಮ ಗತಿಯೇನು ಎನ್ನೋ ಭೀತಿ ಶುರುವಾಗಿದೆ.

ಹಾಸನ ಜಿಲ್ಲೆಯ ಗೊರೂರು ಸಮೀಪ ಇರುವ ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಹೇಮಾವತಿಯಲ್ಲಿ ನೀರಿನ ಪ್ರಮಾಣ ದಿನೇ ದಿನೆ ಕುಸಿದು ಹೋಗುತ್ತಿದೆ. ಜುಲೈ ಅಂತ್ಯದ ವೇಳೆಯಲ್ಲಿ 31 ಟಿಎಂಸಿ ನೀರಿದ್ದ ಜಲಾಶಯದಲ್ಲಿ ಕೇವಲ ಒಂದುವರೆ ತಿಂಗಳಲ್ಲಿ ಕೇವಲ 17 ಟಿಎಂಸಿಗೆ ಕುಸಿದಿರೋದು ಮಳೆಗಾಲದಲ್ಲಿಯೇ ಜಲಾಶಯ ಬರಡಾಗೋ ಆತಂಕ ಎದುರಾಗಿದೆ. ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಒದಗಿಸುವ ಹೇಮಾವತಿ ಜಲಾಶಯ ಗರಿಷ್ಟ 2922 ಅಡಿ ನೀರು ಅಂದರೆ ಬರೊಬ್ಬರಿ 37 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಯುನೆಸ್ಕೋ ಪಟ್ಟಿಗೆ ಸೇರಿದ ಹೊಯಸ್ಸಳರ ವಾಸ್ತುಶಿಲ್ಪ: ಇವರ ಕಾಲದ 3 ದೇವಾಲಯಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ತಿಳಿಯಿರಿ

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2921 ಅಡಿ ಅಂದರೆ 37 ಟಿಎಂಸಿ ನೀರಿತ್ತು, ಆದರೆ ದುರಾದೃಷ್ಟವಶಾತ್ ಈ ವರ್ಷ ಮಳೆಗಾಲದಲ್ಲಿಯೇ ಜಲಾಶಯದಲ್ಲಿ ಕೇವಲ 2896 ಅಡಿ ಅಂದರೆ ಕೇವಲ 17 ಟಿಎಂಸಿ ನೀರು ಮಾತ್ರ ಇದೆ. ಇದರಲ್ಲಿ ಬಳಕೆಗೆ ಉಳಿದಿರುವುದು ಕೇವಲ 13 ಟಿಎಂಸಿಯಾಗಿದ್ದು ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಾಹಣ ಪ್ರಾಧಿಕಾರ ತೀರ್ಪು ನೀಡಿರೋದು ಈ ಭಾಗದ ಜನರನ್ನು ಆತಂಕ್ಕೀಡುಮಾಡಿದೆ.

ತಮಿಳುನಾಡಿಗೆ ನೀರು ಹರಿಸಲೆಂದೇ ಕಳೆದ ಒಂದುವರೆತಿಂಗಳಿನಿಂದ ನದಿಗೆ ನೀರು ಹರಿಸುತ್ತಿದ್ದು ಇಂದು ಕೂಡ 1300 ಕ್ಯುಸೆಕ್ ನೀರು ನದಿಗೆ ಹರಿದು ಹೋಗುತ್ತಿದ್ದು ಕಾವೇರಿ ಒಡಲು ಸೇರುತ್ತಿದೆ. ಹೇಮಾವತಿಯನ್ನೇ ನಂಬಿದ ಲಕ್ಷಾಂತರ ರೈತರು ಈ ವರ್ಷದ ಬೆಳೆ ಏನಾಗುತ್ತೋ ಏನೋ ಎನ್ನೋ ಆತಂಕದಲ್ಲಿದ್ದರೆ, ಉಸ್ತುವಾರಿ ಸಚಿವ ರಾಜಣ್ಣ ಇತ್ತ ಸುಳಿದಿಲ್ಲ ಎನ್ನೋ ಜನರ ಆಕ್ರೊಶಕ್ಕೆ ಉತ್ತರ ನೀಡಿರೋ ಕಾಂಗ್ರೆಸ್​ ಶಾಶಕ ಶಿವಲಿಂಗೇಗೌಡ ಈ ಬಗ್ಗೆ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸೋದಾಗಿ ಹೇಳಿದ್ದಾರೆ.

ಜಿಲ್ಲೆಯ ಮಲೆನಾಡು ಹಾಗು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾದ್ರೆ ಹೇಮಾವತಿ ಜಲಾಶಯ ತುಂಬಿ ಹರಿಯುತ್ತೆ 2018ರಿಂದ 2022ರ ವರೆಗೆ ಸತತವಾಗಿ ಐದು ವರ್ಷ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿ ನೂರಾರು ಟಿಎಂಸಿ ನೀರು ಕಾವೇರಿಯತ್ತ ಹರಿದು ಹೋಗಿತ್ತು ಅಷ್ಟೇ ಅಲ್ಲದೆ ಹಾಸನ ತುಮಕೂರು, ಮಂಡ್ಯ ಜಿಲ್ಲೆಯ ನೂರಾರು ಕೆರೆಗಳು ಭರ್ತಿಯಾಗಿ ಅಂತರ್ಜಲ ವೃದ್ದಿಗೂ ಕಾರಣವಾಗಿತ್ತು.

ಇದನ್ನೂ ಓದಿ: ಹಾಸನ: ಆಸ್ಪತ್ರೆಯಲ್ಲಿ ವ್ಯಕ್ತಿ ಹಠಾತ್ ಸಾವು, ಕರ್ತವ್ಯ ಲೋಪ ಎಸಗಿದ ವೈದ್ಯ ಅಮಾನತು

ಆದರೆ ಈ ವರ್ಷ ಮುಂಗಾರು ಮಳೆ ಕೊರತೆಯಾಗಿದೆ, ಹಾಸನ ಜಿಲ್ಲೆಯಲ್ಲಿ ಸೆಪ್ಟೆಂಬರ್ ವೇಳೆಗೆ ವಾಡಿಕೆಯಂತೆ 844 ಮಿಲಿಮೀಟರ್ ಮಳೆಸುರಿಯಬೇಕಿತ್ತು, ಆದರೆ ಕೇವಲ 615 ಮಿಲಿಮೀಟರ್ ಮಳೆ ಮಾತ್ರ ಆಗಿದೆ, ಮಳೆ ಹಾಗೂ ಹೇಮಾವತಿ ನದಿ ನೀರನ್ನ ನಂಬಿ ಜಿಲ್ಲೆಯಲ್ಲಿ ವಾಡಿಕೆಯಂತೆ 245569 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನ ಬೆಳೆಯಲಾಗುತ್ತೆ, ಆಗಾಗ ಸುರಿದ ಅಲ್ಪ ಪ್ರಮಾಣದ ಮಳೆ ಹಾಗೂ ಜಲಾಶಯದಿಂದ ಕಾಲುವೆ ಮೂಲಕ ಹರಿದ ನೀರನ್ನೆ ನಂಬಿ ರೈತರು 231469 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯನ್ನ ಬಿತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಬಿತ್ತನೆಯಾಗಿರೋ ಬಹುಭಾಗದ ಮೆಕ್ಕೆಜೋಳ ಸಂಪೂರ್ಣವಾಗಿ ನಾಶವಾಗಿ ಹೋಗಿದೆ.

ಬಿರು ಬಿಸಲಿನಿಂದ ಜೋಳದ ಬೆಳೆ ಒಣಗಿಹೋಗಿದೆ, ರಾಗಿ ದ್ವಿದಳ ಧಾನ್ಯ ಬೆಳೆಗಳು ಕೂಡ ನಾಶವಾಗಿ ಹೋಗಿದೆ, ಇನ್ನು ಭತ್ತ ಬೆಳೆದ ರೈತರ ಪಾಡಂತೂ ಹೇಳ ತೀರದಾಗಿದ್ದು ಈಗ ಮಳೆ ಸುರಿದರೂ ಕೂಡ ಬೆಳೆ ಉಳಿಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಈಗ ಜಲಾಶಯಕ್ಕೆ 4596 ಕ್ಯುಸೆಕ್ ಒಳಹರಿವು ಇದ್ದು ಜಲಾಶಯದಿಂದ 1300 ಕ್ಯುಸೆಕ್ ನೀರನ್ನ ಹರಿಯಬಿಡಲಾಗಿದೆ. ಆದರೆ ದಿನೇ ದಿನೆ ಜಲಾಶಯದಿಂದ ನೀರು ಖಾಲಿಯಾಗುತ್ತಿದೆ, ಕೇವಲ ಒಂದುವರೆ ತಿಂಗಳಲ್ಲಿ 15 ಟಿಎಂಸಿ ನೀರು ಖಾಲಿಯಾಗಿದ್ದು ಇನ್ನು ಉಳಿದಿರೋ 13 ಟಿಎಂಸಿ ನೀರು ಖಾಲಿಯಾದರೆ ಈ ವರ್ಷದ ಬೇಸಿಗೆಯಲ್ಲಿ ಕುಡಿಯೋ ನೀರಿಗೆ ತತ್ವರ ಶುರುವಾಗುವ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ತೆಲೆ ದೂರೋ ಆತಂಕ ಇದೆ.

ತಮಿಳುನಾಡಿಗೆ ನೀರು ಹರಿಸಬೇಕು ಅಂದರೆ ಹೇಮಾವತಿಯಿಂದ ನೀರು ಹರಿಯಲೇ ಬೇಕು, ಇಲ್ಲಿಂದ ನೀರು ಹರಿದ್ರೆ ಜಲಾಶಯ ಇನ್ನೊಂದೆರಡುವಾರದಲ್ಲಿ ಸಂಪೂರ್ಣ ಬರಿದಾಗಿ ಹೋಗುತ್ತೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಜಿಲ್ಲೆಯಲ್ಲಿ ಜಲಕ್ಷಾಮ ಸೃಷ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.