ಮಳೆ ಹೊಡೆತಕ್ಕೆ ಹಾಸನದಲ್ಲಿ ಜನಜೀವನ ಅಸ್ತವ್ಯಸ್ತ: ಮಂಗಳೂರು-ಬೆಂಗಳೂರು ರಸ್ತೆ ಕುಸಿತ

ಹಾಸನ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತ ಸಂಭವಿಸಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಎರಡು ಕಡೆ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿನ ಭೂಕುಸಿತದಿಂದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯಿಂದಾಗಿ ಕೆರೆ ಕೋಡಿಗಳು ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ.

ಮಳೆ ಹೊಡೆತಕ್ಕೆ ಹಾಸನದಲ್ಲಿ ಜನಜೀವನ ಅಸ್ತವ್ಯಸ್ತ: ಮಂಗಳೂರು-ಬೆಂಗಳೂರು ರಸ್ತೆ ಕುಸಿತ
ರಸ್ತೆಗೆ ಕುಸಿಯುತ್ತಿರುವ ಮಣ್ಣು
Updated By: ಗಂಗಾಧರ​ ಬ. ಸಾಬೋಜಿ

Updated on: May 25, 2025 | 2:01 PM

ಹಾಸನ, ಮೇ 25: ಅವಧಿಗೂ ಮುನ್ನ ಕರ್ನಾಟಕದಲ್ಲಿ ಮುಂಗಾರು ಮಳೆ (rain) ಶುರುವಾಗಿದೆ. ನೈರುತ್ಯ ಮಾನ್ಸೂನ್ ಮಾರುತಗಳು ರಾಜ್ಯವನ್ನು ಪ್ರವೇಶಿಸಿವೆ. ನಿರಂತರ ಬಿರುಗಾಳಿ ಮಳೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಇದೀಗ ಶಿರಾಡಿ ಘಾಟ್ ರಸ್ತೆಯಲ್ಲಿ (Shiradi Ghat Road) ಎರಡು ಕಡೆ ಭೂ ಕುಸಿತ ಉಂಟಾಗಿದೆ. ಬೆಂಗಳೂರು ಟು ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರಸ್ತೆಗೆ ಮಣ್ಣು ಕುಸಿಯುತ್ತಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಸಕಲೇಶಪುರ ತಾಲೂಕಿನ ದೋಣಿಗಾಲ್ ಮತ್ತು ಅಡ್ಡನಗುಡ್ಡದ ಬಳಿ ಶಿರಾಡಿ ಘಾಟ್ ರಸ್ತೆಯಲ್ಲಿ ಎರಡು ಕಡೆ ಭೂ ಕುಸಿತ ಉಂಟಾಗಿದೆ. ವಾಹನ‌ ಸವಾರರಲ್ಲಿ ಆತಂಕ ಶುರುವಾಗಿದೆ.

ಇದನ್ನೂ ಓದಿ: ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ: ಈ ಮಾರ್ಗದಲ್ಲಿ ಸಂಚರಿಸುವವರೇ ಎಚ್ಚರ

ಇದನ್ನೂ ಓದಿ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಸಸ್ಯ ಕಾಶಿ ಲಾಲ್ ಬಾಗ್​ನಲ್ಲಿ ನೆಲಕ್ಕುರುಳಿದ 150 ವರ್ಷದ ಹಳೆ ವೃಕ್ಷ
ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ವಿಷಕಾರಿ ನೊರೆ ಹಾವಳಿ: ಆತಂಕ
ಕರ್ನಾಟಕದ ಕರಾವಳಿ ಸೇರಿ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್

ತಡೆಗೋಡೆ ನಿರ್ಮಿಸಿದ್ದರು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಣ್ಣು ಕುಸಿಯುತ್ತಿದೆ. ಹೀಗಾಗಿ ಮರಗಳು ನೆಲಕ್ಕೆ ಉರುಳುತ್ತಿದ್ದು, ಅಪಾರ ಮೌಲ್ಯದ ಕಾಫಿ ಬೆಳೆ ನಾಶವಾಗಿದೆ. ಇನ್ನು ವೀಕೆಂಡ್ ಹಿನ್ನೆಲೆ ಶಿರಾಡಿಘಾಟ್​ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿದೆ. ಆದರೆ ಭೂ ಕುಸಿತದಿಂದ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

60 ಎಕರೆ ಜಮೀನಿಗೆ ನುಗ್ಗಿದ ಕೆರೆ ನೀರು

ಇನ್ನು ವರುಣನ ಅಬ್ಬರಕ್ಕೆ ಕೆರೆ ಕೋಡಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿರುವ ಘಟನೆ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದಲ್ಲಿ ನಡೆದಿದೆ. ಗದ್ದೆ, ತೆಂಗಿನ ತೋಟಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣ ಬೆಳೆ ಹಾನಿ ಆಗಿದೆ. ಅಂದಾಜು 60 ಎಕರೆ ಜಮೀನಿಗೆ ಕೆರೆ ನೀರು ನುಗ್ಗಿದ್ದು, ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಉಂಟಾಗಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ ಸೇರಿ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್​, ಮುಂಗಾರು ಅಬ್ಬರ ಶುರುವಾಯ್ತಾ?

ಸಕಲೇಶಪುರ, ಆಲೂರು, ಬೇಲೂರು, ಹಾಸನದಲ್ಲಿ ಬಿರುಗಾಳಿಯೊಂದಿಗೆ ಎಡೆಬಿಡದೆ ಮಳೆ ಸುರಿಯುತ್ತಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳುತ್ತಿವೆ. ಸಕಲೇಶಪುರ, ಬೇಲೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಬಾರಿ ಮಳೆಯಿಂದಾಗಿ ರಸ್ತೆ ಕಾಣದಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.