ಒಂದು ಸೈಟ್ ಮೂರು ವಿವಾದ; ಬಿಜೆಪಿ ಜಿಲ್ಲಾಧ್ಯಕ್ಷರಿಂದ ಅತಿಕ್ರಮ ಪ್ರವೇಶಿಸಿ ಕಾಂಪೌಂಡ್ ನಿರ್ಮಾಣ, ಆರೋಪದ ಬಗ್ಗೆ ಹೆಚ್.ಕೆ.ಸುರೇಶ್ ಸ್ಪಷ್ಟನೆ
ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ, ಬೇಲೂರು ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ವಿರುದ್ಧ ದಂಪತಿಗಳು ಮಾಡಿರೋ ವಿಡಿಯೋ ವೈರಲ್ ಆಗಿದೆ. ಹಾಗಾಗಿಯೇ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ, ತಮ್ಮ ಮೇಲೆ ಆರೋಪ ಬಂದಿರೋ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಜೆಪಿ ಜಿಲ್ಲಾಧ್ಯಕ್ಷರು, ತಮ್ಮ ಮೇಲೆ ಆರೋಪ ಮಾಡಿರೋ ದಂಪತಿಗಳ ವಿರುದ್ಧವೇ ದೂರಿದ್ದಾರೆ.
ಹಾಸನ: ನಮಗೆ ಯಾರು ಬೆಂಬಲ ಇಲ್ಲಾ, ಪೊಲೀಸರಿಗೆ ದೂರು ನೀಡಿದ್ರೆ ಸ್ಪಂದನೆ ಮಾಡುತ್ತಿಲ್ಲ. ಮಾಧ್ಯಮದವರೇ ನಮಗೆ ನ್ಯಾಯ ಕೊಡಿಸಿ. ನಮಗೆ ಆಗುತ್ತಿರೋ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಹಾಸನ ಜಿಲ್ಲೆ ಬೇಲೂರು ಪಟ್ಟಣದ ರಾಮಗುಪ್ತ ಸುಧಾ ದಂಪತಿಯವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 80 ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿರೋ ಜಾಗದಲ್ಲಿ ಈಗ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಅವರು ಮೂರು ವರ್ಷಗಳ ಹಿಂದೆ ಇಲ್ಲಿ ಭೂಮಿ ಖರೀದಿ ಮಾಡಿ, ಕೃಷ್ಣ ಮೂರ್ತಿ ಎಂಬುವವರ ಮೂಲಕ ಜಾಗವನ್ನು ಅತಿಕ್ರಮಣ ಮಾಡಿ ಅವರ ಕಾಂಪೌಂಡ್ ಒಡೆದು ನಮ್ಮ ಜಾಗದಲ್ಲಿ ಕೊಠಡಿ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ, ಕೋರ್ಟ್ ಸ್ಟೇ ಕೋಡ ನೀಡಿದೆ, ಪೊಲೀಸರಿಗೆ ದೂರು ನೀಡಿದ್ರೆ ಕ್ರಮ ಕೈಗೊಳ್ಳುತ್ತಿಲ್ಲ, ಪುರಸಭೆಯವರಿಗೆ ಮನವಿ ಮಾಡಿದ್ರು ಏನೂ ಕ್ರಮ ವಹಿಸಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅಳತೆ ಮಾಡೋದಾಗಿ ಪುರಸಭೆ ಅಧಿಕಾರಿಗಳು ಭರವಸೆ ನೀಡಿದ್ದರು ಸರ್ವೆ ಕಾರ್ಯಕ್ಕೂ ಮೊದಲೆ ದೌರ್ಜನ್ಯಮಾಡಿ ಅತಿಕ್ರಮ ಮಾಡಿ ಕೆಲಸ ಮಾಡುತ್ತಿದ್ದಾರೆ. ಇವರು ಅಧಿಕಾರಕ್ಕೆ ಬರದೇ ಹೀಗೆ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಇನ್ನು ಇವರು ಅಧಿಕಾರಕ್ಕೆ ಬಂದರೆ ಯಾವ ರೀತಿ ಕಾನೂನು ಉಲ್ಲಂಘನೆ ಮಾಡಬಹುದು ಎಂದು ಪ್ರಶ್ನೆ ಮಾಡಿರೋ ರಾಮಗುಪ್ತ ಹಾಗು ಸುಧಾ ದಂಪತಿ ನಮಗೆ ಯಾವ ಅಧಿಕಾರಿಗಳು ಕೂಡ ನ್ಯಾಯ ಕೊಟ್ಟಿಲ್ಲ, ಹಾಗಾಗಿ ನಾವು ವಿಡಿಯೋ ಮಾಡಿದ್ದೇವೆ, ಮಾಧ್ಯಮಗಳು ನಮಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡಿದ್ದಾರೆ. ದಂಪತಿಯ ಎರಡು ನಿಮಿಷಗಳ ಈ ವಿಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ. ಕೈ ಮುಗಿಯುತ್ತೇವೆ ನಮಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿರೋ ದಂಪತಿಗಳ ಅಳಲು ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಟೀಕೆಗೂ ಕಾರಣವಾಗಿದೆ.
ಪಿತ್ರಾರ್ಜಿತವಾಗಿ ಬಂದ ನಮ್ಮ ಭೂಮಿಯನ್ನ ಕೃಷ್ಣಮೂರ್ತಿ ಸಹಾಯ ಪಡೆದು ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಕಬಳಿಸಲು ಯತ್ನ ಮಾಡಿದ್ದಾರೆ. ನಮಗೆ ಯಾವ ಅಧಿಕಾರಿಗಳು ರಕ್ಷಣೆ ನೀಡುತ್ತಿಲ್ಲ ಮಾಧ್ಯಮಗಳೇ ನ್ಯಾಯ ಕೊಡಿಸಿ ಎಂದು ರಾಮಗುಪ್ತ ಪತ್ನಿ ಸುಧಾ ಅಂಗಲಾಚಿದ್ದಾರೆ.
ಏನಿದು ಭೂ ವ್ಯಾಜ್ಯ ಬೇಲೂರು ಪಟ್ಟಣದ ಕೋಟೆ ಬೀದಿಯಲ್ಲಿ ರಾಮಗುಪ್ತ ಸುಧಾ ದಂಪತಿಗಳ ಭೂಮಿ ಇದೆ. ಆ ಸ್ಥಳದಲ್ಲಿ ಮನೆ ಕಟ್ಟಿಕೊಂಡಿರೋ ದಂಪತಿಗಳು ಕಳೆದ ಹಲವು ವರ್ಷಗಳಿಂದ ಈ ಜಾಗದಲ್ಲಿಯೇ ನೆಲೆಸಿದ್ದಾರೆ. ರಾಮಗುಪ್ತ ಪ್ರಕಾರ 80 ವರ್ಷಗಳಿಂದಲೂ ಇದು ನಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿ ಎನ್ನೋದು ಅವರ ವಾದ. ಇವರ ಮನೆಯ ಪಕ್ಕದೇ ಕೃಷ್ಣಮೂರ್ತಿ ಎಂಬುವವರ ಜಾಗವಿದೆ. ಕೃಷ್ಣಮೂರ್ತಿಯವರಿಗೆ ಸೇರಿದ ಭೂಮಿಯಲ್ಲ 2017ರಲ್ಲಿ ಖರೀದಿ ಮಾಡಿರೋ ಬಿಜೆಪಿ ಜಿಲ್ಲಾಧ್ಯಕ್ಷರು ಅಲ್ಲಿ ಒಂದು ಮನೆ ಮಾಡಿದ್ದು, ಖಾಲಿಜಾಗವನ್ನು ಹಾಗೆ ಉಳಿಸಿಕೊಂಡಿದ್ದಾರೆ. ಸುರೇಶ್ ರಿಗೆ ಸ್ಪಲ್ಪ ಪ್ರಮಾಣದ ಭೂಮಿ ಮಾರಾಟ ಮಾಡಿದರೂ ಇನ್ನೂ ಅಲ್ಪಭಾಗ ಭೂಮಿಯನ್ನ ಕೃಷ್ಣ ಮೂರ್ತಿ ಉಳಿಸಿಕೊಂಡಿದ್ದಾರೆ. ಈಗ ರಾಮಗುಪ್ತ ಮನೆಯ ಕಡೆಗೆ ಇರೋ ಖಾಲಿ ನಿವೇಶದ ಕಡೆಗೆ ಇದ್ದ ಕಾಂಪೌಂಡ್ ಕೆಡವಿ ನಮಗೆ ಸೇರಬೇಕಾದ ಭೂಮಿಯ ಕಡೆಗೆ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಇದು ಹುಲ್ಲಹಳ್ಲೀ ಸುರೇಶ್ ಕೃಷ್ಣಮೂರ್ತಿ ಜೊತೆಗೆ ಸೇರಿಕೊಂಡು ನಡೆಸುತ್ತಿರೋ ಹುನ್ನಾರ ಎನ್ನೋದು ರಾಮಗುಪ್ತ ಆರೋಪ. ಸದ್ಯ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ, ವಿಚಾರಣೆಯೂ ನಡೆಯುತ್ತಿದೆ. ಇದೇ ತಿಂಗಳ 11ರಂದು ಕೋರ್ಟ್ ತಾತ್ಕಾಲಿಕ ತಡೆಯನ್ನೂ ನೀಡಿದೆ ಎಂದು ಹೇಳುತ್ತಿರೋ ನೊಂದ ದಂಪತಿ ಕೋರ್ಟ್ ಆದೇಶವನ್ನು ದಿಕ್ಕರಿಸಿ ಹೀಗೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಯಾರದ್ದೋ ವ್ಯಾಜ್ಯ ನನ್ನ ಮೇಲೆ ಆರೋಪ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ, ಬೇಲೂರು ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ವಿರುದ್ಧ ದಂಪತಿಗಳು ಮಾಡಿರೋ ವಿಡಿಯೋ ವೈರಲ್ ಆಗಿದೆ. ಹಾಗಾಗಿಯೇ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ, ತಮ್ಮ ಮೇಲೆ ಆರೋಪ ಬಂದಿರೋ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಜೆಪಿ ಜಿಲ್ಲಾಧ್ಯಕ್ಷರು, ತಮ್ಮ ಮೇಲೆ ಆರೋಪ ಮಾಡಿರೋ ದಂಪತಿಗಳ ವಿರುದ್ಧವೇ ದೂರಿದ್ದಾರೆ. ನಮ್ಮ ಮನೆಯ ಪಕ್ಕದಲ್ಲಿ ಓರ್ವ ಬ್ರಾಹ್ಮಣರು ಇದ್ದಾರೆ ಅವರ ಭೂಮಿಯನ್ನ ಈ ರಾಮಗುಪ್ತ ಕಬಳಿಸಿದ್ದಾರೆ. ಇವರಿಬ್ಬರ ಜಗಳ ಬಗೆಹರಿಸಲು ನಾನೆ ಕರೆದು ಮಾತನಾಡಿದ್ದೇನೆ, ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ನನ್ನ ಬಲಿಪಶು ಮಾಡಿದ್ದಾರೆ. ನಾನು ಒಂದೇ ಒಂದು ಪರ್ಸೆಂಟ್ ಆಸ್ತಿಯನ್ನ ಅತಿಕ್ರಮಣ ಮಾಡಿಲ್ಲ. ನಾನು ಖರೀದಿ ಮಾಡಿರೋ ಭೂಮಿಯಲ್ಲಿ ನಾನು ಸಾರ್ವಜನಿಕರ ಉದ್ದೇಶಕ್ಕೆ ಅನುಮೂಲ ಆಗುವಂತೆ ವ್ಯವಸ್ಥೆ ಮಾಡಿದ್ದೇನೆ. ಹಾಗಾಗಿ ನನ್ನ ಏಳಿಗೆ ಸಹಿಸದ ಕೆಲವರು ಹೀಗೆ ಈ ದಂಪತಿಯಿಂದ ಹೇಳಿಸಿದ್ದಾರೆ. ಇಲ್ಲಿ ಭೂಮಿ ಕಬಳಿಸೋ ಅಗತ್ಯ ನನಗಿಲ್ಲ, ಇಲ್ಲಿ ಕೇಸ್ ಇರೋದು ಕೃಷ್ಣ ಮೂರ್ತಿ ಮತ್ತು ರಾಮಗುಪ್ತ ನಡುವೆ ವಿವಾದ ಇದೆ.
ಆದ್ರೆ ಪಕ್ಕದಲ್ಲಿ ವಾಸವಾಗಿರೊ ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ದಿನೇ ದಿನೆ ನನ್ನ ಹೆಸರು ಪ್ರಚಲಿತಕ್ಕೆ ಬರುತ್ತಿದೆ. ಹಾಗಾಗಿಯೇ ರಾಜಕೀಯವಾಗಿ ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ ಎನ್ನೋದು ಬಿಜೆಪಿ ಜಿಲ್ಲಾಧ್ಯಕ್ಷರ ಆರೋಪವಾಗಿದೆ. ಯಾರೇ ಬೇಕಿದ್ರು ಸ್ಥಳ ಪರಿಶೀಲನೆ ನಡೆಸಬಹುದು. ಆ ಸ್ಥಳದಲ್ಲಿ ನಾನು ಯಾವುದೆ ಕಟ್ಟಡವನ್ನಾಗಲಿ, ಕಾಂಪೌಂಡನ್ನಾಗಲಿ ಕಟ್ಟುತ್ತಿಲ್ಲ ನನಗೂ ಈ ಪ್ರಕಣಕ್ಕೂ ಸಂಬಂಧವೇ ಇಲ್ಲ ಎನ್ನೋ ಮೂಲಕ ತಮ್ಮ ಮೇಲಿನ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕೃಷ್ಣಮೂರ್ತಿ ಎಂಬುವವರು ನಾನು 70 ವರ್ಷಗಳಿಂದ ಈ ಭೂಮಿಯ ಸ್ವಾದೀನದಲ್ಲಿ ಇದ್ದೇನೆ. ರಾಮಗುಪ್ತ ಹಾಗು ಅವರ ಹೆಂಡತಿ ಮಕ್ಕಳು ವಿನಾಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆ. ನಾವು ಯಾರ ಭೂಮಿಯನ್ನೂ ಅತಿಕ್ರಮಣ ಪ್ರವೇಶಮಾಡಿಲ್ಲ. ನಮ್ಮ ಹಕ್ಕನ್ನು ನಾವು ಕೇಳಲು ಹೋದರೆ ನಮಗೆ ಕೀಟಲೆ ಮಾಡುತ್ತಿದ್ದಾರೆ ನಮಗೆ ರಕ್ಷಣೆ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಸದ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕ ಎಂದು ಗುರ್ತಿಸಿಕೊಂಡಿರೋ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಮೇಲಿನ ದಂಪತಿಗಳ ಆರೋಪ ಭಾರೀ ಚರ್ಚೆಗೆ ಕಾರಣವಾಗಿದ್ದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ, ಈ ನಡುವೆ ಶುರುವಾಗಿರೋ ಆರೋಪ ಪ್ರತ್ಯಾರೋಪಗಳು ಹಲವು ಅನುಮಾನಗಳಿಗೆ ಎಡೆಮಾಡಿದೆ.
ವರದಿ: ಮಂಜುನಾಥ್ ಕೆ.ಬಿ, ಟಿವಿ9 ಹಾಸನ