ಹಾಸನ: ವರದಕ್ಷಿಣೆ ಕಿರುಕುಳ ಆರೋಪ ನವವಿವಾಹಿತೆ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹಾಸನದಲ್ಲಿ ನಡೆದಿದೆ. ಪೂಜಾ(22) ಮೃತ ಮಹಿಳೆ.
ಆಗಸ್ಟ್ 5ರಂದು ಹಾಸನ ಜಿಲ್ಲೆ ಸಕಲೇಶಪುರದ ಸೇತುವೆಯ ಮೇಲಿಂದ ಬಿದ್ದು ಪೂಜಾ ಮೃತಪಟ್ಟಿದ್ದರು. ನಂತರ ನಾಲ್ಕು ದಿನಗಳ ಹುಡುಕಾಟದ ಬಳಿಕ ಹೇಮಾವತಿ ನದಿಯಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಪೂಜಾಳ ಮೃತದೇಹ ಪತ್ತೆ ಹಚ್ಚಿದ್ದಾರೆ. ಮಗಳ ಮೃತದೇಹ ಸಿಗದ ವೇಳೆ ದಿನವೂ ನದಿಯ ಬಳಿ ಬಂದು ಪೂಜಾಳ ಪೋಷಕರು ಕಣ್ಣೀರಿಡುತ್ತಿದ್ದರು. ಸದ್ಯ ನಾಲ್ಕು ದಿನಗಳ ಬಳಿಕ ಇಂದು ಮೃತದೇಹ ಪತ್ತೆಯಾಗಿದೆ. ಮಗಳ ಮೃತದೇಹ ನೋಡಿದ ಪೋಷಕರ ಆಕ್ರಂದನ ಮುಗಿಳು ಮುಟ್ಟಿದೆ.
ಮಗಳನ್ನ ಅಳಿಯ ಅಶ್ವತ್ಥ್ ನದಿಗೆ ತಳ್ಳಿ ಕೊಲೆ ಮಾಡಿದ್ದಾನೆಂದು ಪೋಷಕರು ಆರೋಪ ಮಾಡಿದ್ದಾರೆ. ಪೂಜಾಳ ಸಾವಿನ ಕೆಲ ದಿನಗಳ ಹಿಂದೆ ಪತಿ ಮನೆಯವರಿಂದ ಕಿರುಕುಳವಾಗ್ತಿದೆ ಎಂದು ಪೂಜಾ ತನ್ನ ಮನೆಯವರ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಳಂತೆ. ಹೀಗಾಗಿ ಇದೇ ವಿಚಾರವಾಗಿ ಮಾತನಾಡಲು ಪೂಜಾ ಪತಿ ಅಶ್ವತ್ಥ್ ಮನೆಗೆ ಪೋಷಕರು ಬಂದಿದ್ದರು. ಪೋಷಕರು ಮನೆಗೆ ಬರುತ್ತಿದ್ದಂತೆ ಅಶ್ವತ್ಥ್ ಮನೆ ಬಿಟ್ಟು ಓಡಿಹೋಗಿದ್ದ. ಈ ವೇಳೆ ಅಶ್ವತ್ಥ್‌ನನ್ನು ಕರೆತರುವುದಾಗಿ ಹೇಳಿ ಪೂಜಾ, ಪತಿಯನ್ನು ಹಿಂಬಾಲಿಸಿ ಹೋಗಿದ್ದಳು. ಈ ವೇಳೆ ಪತಿಯೇ ಪೂಜಾಳನ್ನು ನದಿಗೆ ತಳ್ಳಿದ್ದಾಗಿ ಪೋಷಕರು ಆರೋಪ ಮಾಡಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ ಹಾಗೂ ಸಕಲೇಶಪುರ ತಾಲೂಕಿನ ರಾಮನ ಹಳ್ಳಿ ಗ್ರಾಮದ ಅಶ್ವಥ್ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮಗಳ ಮೃತದೇಹ ಕಂಡು ಪೂಜಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮಕ್ಕೆ ನಿರೂಪಕರನ್ನು ಬದಲಿಸಿ; ಸಿಎಂ ನಿವಾಸದ ಬಳಿ ಏಕಾಂಗಿಯಾಗಿ ಮಹಿಳೆ ಪ್ರತಿಭಟನೆ