ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ: ಸಿನಿಮಾ ಸ್ಟೈಲ್​​ನಲ್ಲಿ ನಡೀತು ಹತ್ಯೆ!

ಶಬರಿಮಲೆ ಯಾತ್ರೆಯಿಂದ ಹಿಂದಿರುಗಿದ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಹಾಸನದ ಆಲೂರು ತಾಲೂಕಿನಲ್ಲಿ ನಡೆದಿದೆ. ಎರಡನೇ ಮದುವೆಯನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೊದಲ ಹೆಂಡತಿಯನ್ನು ವ್ಯಕ್ತಿ ಹತ್ಯೆ ಮಾಡಿದ್ದಾನೆ. ಬಳಿಕ ಶವವನ್ನು ಆರೋಪಿ ನದಿಗೆ ಎಸೆದಿದ್ದು, ಜ. 10ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ: ಸಿನಿಮಾ ಸ್ಟೈಲ್​​ನಲ್ಲಿ ನಡೀತು ಹತ್ಯೆ!
ಆರೋಪಿ ಕುಮಾರ್​​ ಮತ್ತು ಮೃತ ಮಹಿಳೆ ರಾಧಾ.
Edited By:

Updated on: Jan 13, 2026 | 12:30 PM

ಹಾಸನ, ಜನವರಿ 13: ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ‌ ಪತ್ನಿಯನ್ನ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ರಾಧಾ(40) ಮೃತ ದುರ್ದೈವಿಯಾಗಿದ್ದು, ಶವವನ್ನು ಪತಿ ನದಿಗೆ ಎಸೆದಿದ್ದ ಎನ್ನಲಾಗಿದೆ. ಜನವರಿ 10ರರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

22 ವರ್ಷಗಳ ಹಿಂದೆ ಕುಮಾರ ಜೊತೆ ರಾಧಾ ವಿವಾಹವಾಗಿತ್ತು. ಆದರೆ ತನ್ನ ಮೇಲೆ ಕುಮಾರ ಅನುಮಾನ ಪಡುತ್ತಿದ್ದ ಕಾರಣ ಕಳೆದ 8 ವರ್ಷಗಳಿಂದ ಪತಿಯಿಂದ ರಾಧಾ ಬೇರೆಯಾಗಿ ವಾಸ ಮಾಡುತ್ತಿದ್ದರು. ಈ ನಡುವೆ ಜನವರಿ ಮೊದಲ ವಾರ ಕುಮಾರ್​​ ಶಬರಿಮಲೆಗೆ ತೆರಳಿದ್ದ. ಇರುಮುಡಿ ಕಟ್ಟುವಾಗ ಪತ್ನಿ ಸ್ಥಾನದಲ್ಲಿ ಬೇರೆ ಮಹಿಳೆಯಿಂದ ಪೂಜೆ ನಡೆದಿರುವ ಕಾರಣ ಈ ವಿಚಾರವನ್ನು ಪ್ರಶ್ನಿಸಲು ತಾನು ವಾಸವಿದ್ದ ಹಾಸನದ ಆಡುವಳ್ಳಿಯಿಂದ ಯಡೂರು ಗ್ರಾಮಕ್ಕೆ ರಾಧಾ ಬಂದಿದ್ದರು. ಇದೇ ವಿಚಾರವಾಗಿ ಜ.10ರ ರಾತ್ರಿ 10.30ರ ಸಮಯದಲ್ಲಿ ಕುಮಾರ ಮತ್ತು ರಾಧಾ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ರಾಧಾ ಕಪಾಳಕ್ಕೆ ಕುಮಾರ ಹೊಡೆದಿದ್ದ ಕಾರಣ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು.

ಇದನ್ನೂ ಓದಿ: ಪತ್ನಿಗೆ ವಂಚಿಸಿ ಟೆಕ್ಕಿ ಪತಿ ಅಕ್ರಮ ಸಂಬಂಧ; ಪ್ರೇಯಸಿ ಜೊತೆ ಪಲ್ಲಂಗದಲ್ಲಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ!

ಪೊಲೀಸರಿಗೆ ತಾನೇ ಮಾಹಿತಿ ನೀಡಿದ ಆರೋಪಿ

ಘಟನೆ ಬಳಿಕ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ರಾಧಾ ಶವಕ್ಕೆ ಬಟ್ಟೆ ಸುತ್ತಿ ಅದನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಹಾಸನ ಹೊರವಲಯದ ಕಂದಲಿ ಬಳಿ ಹರಿಯುವ ಯಗಚಿ ನದಿಗೆ ಕುಮಾರ ಬಿಸಾಡಿದ್ದ. ಬಳಿಕ ಘಟನೆ ಬಗ್ಗೆ ನಿನ್ನೆ ತಾನೇ ಪೊಲೀಸರಿಗೆ ಆರೋಪಿ  ಮಾಹಿತಿ ನೀಡಿದ್ದು, ಇಂದು ಯಗಚಿ ನದಿಯಿಂದ ರಾಧಾ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಪ್ರಕರಣ ಸಂಬಂಧ ಸದ್ಯ ಆರೋಪಿ ಕುಮಾರ್​ನನ್ನು ಆಲೂರು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:30 pm, Tue, 13 January 26