ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ (HD Devegowda Wife Chennamma) ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ ಎಂದು ಶಾಸಕ ಎಚ್.ಡಿ.ರೇವಣ್ಣ (HD Revanna) ಹೇಳಿದರು. ‘ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ. ಅದನ್ನು ನೋಡದೆ ನಮ್ಮ ತಾಯಿಗೆ ನೊಟೀಸ್ ಕೊಟ್ಟಿದ್ದಾರೆ. ಆರ್‌ಟಿಒದಲ್ಲಿ ನೂರಾರು ಕೋಟಿ ರೂಪಾಯಿ ಆಸ್ತಿ ಸಂಪಾದನೆ ಮಾಡಿರುವವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ. ನಾವ್ಯಾರೂ ಅಕ್ರಮ ಮಾರ್ಗದಲ್ಲಿ ಆಸ್ತಿ ಸಂಪಾದಿಸಿಲ್ಲ. ಈ ನೊಟೀಸ್ಗೆ ಕಾನೂನು ಪ್ರಕಾರ ಉತ್ತರ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ಅಸ್ತಿ ವಿವರದ ಬಗ್ಗೆ ಮಾಹಿತಿ ಕೇಳಿ ಐಟಿ ನೋಟಿಸ್ ನೀಡಿದ್ದಾರೆ. ನಾನು ಆಲೂಗಡ್ಡೆ ಬೆಳೆದಿದ್ದೆ, ಈಗ ಕಬ್ಬು ಬೆಳೆದಿದ್ದೇನೆ. ಬೇಕಿದ್ದರೆ ನನಗೆ ಐಟಿ ನೋಟಿಸ್ ಕೊಡಲಿ ಅದಕ್ಕೇನೂ ಇಲ್ಲ ಎಂದು ನುಡಿದರು. ಒಬ್ಬೊಬ್ಬ ಆರ್ಟಿಒ ನೂರು ಇನ್ನೂರು ಕೋಟಿಗಟ್ಟಲೆ ದುಡಿದಿದ್ದಾರೆ. ಇವರು ಕೆಲಸಕ್ಕೆ ಸೇರಿದಾಗ ಎಷ್ಟು ಆಸ್ತಿ ಇತ್ತು? ಆಮೇಲೆ ಎಷ್ಟಾಯ್ತು? ಅವರಿಗೆ ನೋಟಿಸ್ ಯಾರು ಕೊಡೋದು? ದ್ವೇಷದ ರಾಜಕಾರಣ ಯಾವ ಮಟ್ಟಿಗೆ ಇದೆ ನೋಡಿ ಎಂದು ಕಿಡಿಕಾರಿದರು.
ಜೆಡಿಎಸ್ನವರನ್ನು ಹುಡುಕಿ ನೊಟೀಸ್ ಕೊಡುತ್ತಿದ್ದಾರೆ. ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಗುಡುಗಿದರು. ಜಿಲ್ಲೆಯ ದೊಡ್ಡಪುರ, ಪಡುವಲಹಿಪ್ಪೆ ಸಮೀಪದ ಗದ್ದೆಯಲ್ಲಿ ನಮ್ಮ ಗದ್ದೆಯಿದೆ. ಡ್ರೋಣ್ ಸರ್ವೆ ಮಾಡಿಸಿ, ನಾವು ಏನು ಬೆಳೆಯುತ್ತಿದ್ದೇವೆ ಎನ್ನುವುದನ್ನು ಕಂಡುಕೊಳ್ಳಲಿ ಎಂದು ಸವಾಲು ಹಾಕಿದರು.
ನಾವೇನೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿಲ್ಲ. ಕಾನೂನು ಪ್ರಕಾರ ನಡೆದುಕೊಂಡರೆ ನನಗೆ ಯಾವ ಅಭ್ಯಂತರವೂ ಇಲ್ಲ. ನಾನೂ ಅದೇ ರೀತಿಯಲ್ಲಿ ಉತ್ತರ ಕೊಡುತ್ತೇನೆ. ಆರ್‌ಟಿಒದಲ್ಲಿ ಲೂಟಿ ಮಾಡಿ, ಈಗ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಕೆಲವರು ಬಂದಿದ್ದಾರೆ. ಅವರು ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಗುಡುಗಿದರು.
ನನಗೇನೂ ಗೊತ್ತಿಲ್ಲ: ಎಚ್ಡಿಕೆ
ತಮ್ಮ ತಾಯಿಗೆ ನೊಟೀಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ‘ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ ಇದ್ದಂತೆ. ದೇವೇಗೌಡರು ಎಂದೂ ಹಣಕ್ಕೆ ಮಹತ್ವ ಕೊಟ್ಟವರಲ್ಲ. ನೊಟೀಸ್ಗೆ ಉತ್ತರ ಕೊಡುತ್ತೇವೆ. ಇದರಲ್ಲಿ ರಾಜಕೀಯ ಮಾಡಬಾರದು’ ಎಂದರು.
ಇದನ್ನೂ ಓದಿ: ಹಿಂದೂ ಮುಸ್ಲಿಂ ಎಂದು ಯಾರಾದ್ರು ಅಡೆತಡೆ ಮಾಡಿದ್ರೆ..: ಹಾಸನದಲ್ಲಿ ಗುಡುಗಿದ ಹೆಚ್.ಡಿ ರೇವಣ್ಣ
ಇದನ್ನೂ ಓದಿ: ಸಂಸದರಾಗಿ ಮಂಡ್ಯಕ್ಕೆ ಸುಮಲತಾರ ಕೊಡುಗೆ ಏನು: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
Published On - 7:45 am, Tue, 29 March 22