ಹಾಸನ: ವಿಧಾನ ಪರಿಷತ್ ಚುನಾವಣೆ ಮತದಾನ ಭರದಿಂದ ನಡೆಯುತ್ತಿದೆ. ಇದರ ನಡುವೆ ಮತದಾನ ಮಾಡಿದ ಮತ ಪತ್ರದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೆಡಿಎಸ್ಗೆ ಮತದಾನ ಮಾಡಿ ಫೋಟೋ ತೆಗೆದು ಜೆಡಿಎಸ್ ಬೆಂಬಲಿಗ ವೈರಲ್ ಮಾಡಿರುವುದಾಗಿ ಕಾಂಗ್ರೆಸ್ ಬೆಂಬಲಿಗರು ಆರೋಪ ಮಾಡಿದ್ದಾರೆ.
ಇಂದು ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಿದ ಜೆಡಿಎಸ್ ಬೆಂಬಲಿಗ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ವೈರಲ್ ಆಗಿದ್ದು ಫೋಟೋ ಪ್ರದರ್ಶನ ಮಾಡಿ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಚುನಾವಣಾ ಅಕ್ರಮ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಆರೋಪ ಮಾಡಿದ್ದಾರೆ. ಗೌಪ್ಯ ಮತದಾನದ ನಿಯಮ ಉಲ್ಲಂಘನೆ ಆಗಿದೆ ಎಂದು ಚುನಾವಣಾ ಅಧಿಕಾರಿಗೆ ದೂರು ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಬ್ಯಾಲೆಟ್ ಪೇಪರ್ ಜೊತೆಗೆ ಮೊಬೈಲ್ ತೆಗೆದುಕೊಂಡು ಹೋಗಿ ಮತ ಹಾಕಿದ್ದಾರೆ. ಸ್ವಾಮೀಜಿಯೊಬ್ಬರ ಫೋಟೋ ಮೊಬೈಲ್ ನಲ್ಲಿ ನೋಡಿ ಬ್ಯಾಲೆಟ್ ಪೇಪರ್ ಪಡೆದುಕೊಂಡು ಮತಗಟ್ಟೆ ಒಳಗೆ ಮೊಬೈಲ್ ಸಮೇತ ಹೋಗಿ ಮತ ಚಲಾಯಿಸಿದ್ದಾರೆ. ಆದ್ರೆ ಮತಗಟ್ಟೆ ಒಳಗೆ ಮೊಬೈಲ್ ಮತ್ತು ಪೆನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಹೀಗಿದ್ದರೂ ಚುನಾವಣಾ ಸಿಬ್ಬಂದಿ ಎದುರು ಮೊಬೈಲ್ ಹಿಡಿದು ಲಕ್ಷ್ಮೀ ಹೆಬ್ಬಾಳ್ಕರ್ ವೋಟ್ ಮಾಡಿದ್ದು ಸಿಬ್ಬಂದಿ ಮಾತ್ರ ಪ್ರಶ್ನೆ ಮಾಡಿಲ್ಲ.
ಹಾಸನದಲ್ಲಿ ಮತದಾನ ಮುಂದುವರೆದಿದೆ. ಹಾಸನದ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ ಚಲಾಯಿಸಿದ್ದು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಸೂರಜ್ ಅತ್ಯಧಿಕ ಮತಗಳಿಂದ ಜಯಗಳಿಸುತ್ತಾರೆ. ದೇವರ ಆಶೀರ್ವಾದ ಹಾಗೂ ದೇವೇಗೌಡ್ರು ಜಿಲ್ಲೆಗೆ ಮಾಡಿರೋ ಕೆಲಸ 14 ತಿಂಗಳಲ್ಲಿ ಕುಮಾರಸ್ವಾಮಿ ಅವರು ಮಾಡಿದ ಕೆಲಸ ಎಲ್ಲವೂ ನಮ್ಮ ಕೈ ಹಿಡಿಯುತ್ತದೆ. ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಅವರದೇ ಕೊಡುಗೆ ನೀಡಿದ್ದಾರೆ. ಹಾಗಾಗಿ ಸೂರಜ್ ಅವರು ಗೆಲ್ಲುತ್ತಾರೆಂಬ ವಿಶ್ವಾಸವಿದೆ ಅದ್ರಲ್ಲಿ ಅನುಮಾನವಿಲ್ಲ ಎಂದರು.
ಪುರಸಭೆ ಮತಗಟ್ಟೆಯಲ್ಲಿ 23 ಮಂದಿ ಕೌನ್ಸಿಲರ್, ನಾನು ಹಾಗೂ ಎಂಪಿ ಅವರು ಮತದಾನ ಮಾಡಿದ್ದೇವೆ. ಏಳು ವಿಧಾನಸಭಾ ಕ್ಷೇತ್ರದಲ್ಲೂ ಹೆಚ್ಚಿನ ಲೀಡ್ ಬರಲಿದೆ ಎಂಬ ವಿಶ್ವಾಸವಿದೆ ಎಂದರು. ಇದೇ ವೇಳೆ ಮಗ ಪ್ರಜ್ವಲ್ ಗೆ 9 ನಂಬರ್ನಲ್ಲಿ ಮತಚಲಾವಣೆ ವಿಚಾರಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ನಾನು ಹಾಗೆನೂ ಮತ ಹಾಕಿಲ್ಲಪ್ಪ. ಪ್ರಜ್ವಲ್ 9 ನೇ ನಂಬರ್ನಲ್ಲಿ ಹಾಕ್ತೀನಿ ಅಂದ್ರು ಹಾಕಪ್ಪ ಅಂದೆ. ಅದ್ರಲ್ಲಿ ಏನೂ ಇಲ್ಲ ರೀ ಎಂದು ನಗುತ್ತಲೇ ರೇವಣ್ಣ ಮುಂದೆ ನಡೆದ್ರು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ, ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಸಂಸದ ಜಾಧವ್! ವಾಸ್ತು ನೋಡಿ ಹಕ್ಕು ಚಲಾಯಿಸಿದ ರೇವಣ್ಣ!
Published On - 12:33 pm, Fri, 10 December 21