ಹಾಸನ, ಏಪ್ರಿಲ್ 08: ಲೋಕಸಭಾ ಚುನಾವಣೆ (Lok Sabha Election) ಹಿನ್ನಲೆಯಲ್ಲಿ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು (Excise Department) ಹಾಸನ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿರುವ ವುಡ್‌ಪೆಕರ್ ಡಿಸ್ಟಿಲರಿಸ್ ಆ್ಯಂಡ್ ಬ್ರಿವರೀಸ್ ಪ್ರೈವೆಟ್ ಲಿ., (ಬ್ರಿವರಿ ವಿಭಾಗ) ನಲ್ಲಿ ತಪಾಸಣೆ ನಡೆಸಿದರು. ತಪಾಸಣೆ ವೇಳೆ ನ್ಯೂನ್ಯತೆ ಕಂಡುಬಂದ ಹಿನ್ನೆಲೆಯಲ್ಲಿ 9,54,08,422 ಕೋಟಿ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ. 56,236 ಬಾಕ್ಸ್‌ಗಳಲ್ಲಿದ್ದ (5,63,756.88 ಲೀಟರ್) ಪವರ್ ಕೂಲ್, ಲೆಜೆಂಡ್, ಬ್ಲಾಕ್‌ಫೋರ್ಟ್, ವುಡ್‌ಪೆಕರ್ ಬ್ರ್ಯಾಂಡ್ ಬಿಯರ್ ಅನ್ನು ವಶಪಡಿಸಿಕೊಂಡಿದ್ದಾರೆ. ರೂಗಳ ಬಿಯರ್ ವಶಕ್ಕೆ ವುಡ್‌ಪೆಕರ್ ಡಿಸ್ಟಿಲರಿಸ್ ಸನ್ನದುದಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾ.16 ರಿಂದ ಏ.6 ರವರೆಗೆ ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಒಟ್ಟು 944 ಪ್ರಕರಣಗಳು ದಾಖಲು ಮಾಡಿಕೊಂಡಿದ್ದಾರೆ. ಇದರಲ್ಲಿ 3,488.185 ಲೀಟರ್ ಮದ್ಯ, 5,64,362 ಲೀಟರ್ ಬಿಯರ್, 34 ಲೀಟರ್ ವೈನ್, 14 ಲೀಟರ್ ಸೇಂದಿ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣು: ರಾಜ್ಯದ ವಿವಿಧಡೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ವಸ್ತುಗಳು ಜಪ್ತಿ
ಇದರ ಜೊತೆಗೆ ಅಬಕಾರಿ ಇಲಾಖೆ ಅಧಿಕಾರಿಗಳು 51 ವಿವಿಧ ರೀತಿಯ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು 10,48,76,148 ರೂ ಮೌಲ್ಯದ ಮದ್ಯ ಜಪ್ತಿಮಾಡಲಾಗಿದೆ. 970 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆ: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 14.88 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ನಾಯನೇಗಲಿ ಚೆಕ್ಪೋಸ್ಟ್ ಬಳಿ ಜಪ್ತಿ ಮಾಡಿದ್ದಾರೆ. ತಮಿಳುನಾಡು ಮೂಲದ ಲಾರಿಯಲ್ಲಿ ದಾಖಲೆ ಇಲ್ಲದೆ ಹಣ ಸಾಗಿಸಲಾಗುತ್ತಿತ್ತು. ತಪಾಸಣೆ ವೇಳೆ ಲಾರಿಯಲ್ಲಿ 14.88 ಲಕ್ಷ ರೂ. ಹಣ ಪತ್ತೆಯಾಗಿದೆ.
ಬಳ್ಳಾರಿ: ನಗರದ ಕಂಬಳಿ ಬಜಾರ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 5.60 ಲಕ್ಷ ನಗದು, 3 ಕೆ.ಜಿ ಚಿನ್ನ, 68 ಕೆ.ಜಿ ಬೆಳ್ಳಿ ಗಟ್ಟಿ, 103 ಕೆ.ಜಿ ಬೆಳ್ಳಿ ಆಭರಣಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹಣ, ಚಿನ್ನ ಮತ್ತು ಬೆಳ್ಳಿ ಹೇಮಾ ಜ್ಯುವೆಲರ್ಸ್ ಮಾಲೀಕ ನರೇಶ್ ಸೋನಿ ಎಂಬುವರಿಗೆ ಸೇರಿದೆ. ಹಣ ಸಾಗಿಸುತ್ತಿದ್ದವರನ್ನು ಬ್ರೂಸ್‌ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:31 am, Mon, 8 April 24