ಹಾಸನ, ಜುಲೈ 3: ಹಾಸನ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾರಿ ಮಳೆ ಮುಂದುವರಿದಿದ್ದು, ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಲವೆಡೆ ಭೂ ಕುಸಿತ ಸಂಭವಿಸಿದೆ. ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಢಿಘಾಟ್ ಮಾರ್ಗದ ಸಕಲೇಶಪುರ ಬೈಪಾಸ್ನಲ್ಲಿ ಹಲವೆಡೆ ದೊಡ್ಡ ದೊಡ್ಡ ಬಂಡೆ ಕಲ್ಲುಗಳ ಜೊತೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ತಡೆಗೋಡೆ ನಿರ್ಮಿಸದೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವ ಹಲವೆಡೆ ಭೂ ಕುಸಿತ ಸಂಭವಿಸಿದೆ.
ಚತುಷ್ಪತ ರಸ್ತೆಯಲ್ಲಿ ಮಣ್ಣು ಕುಸಿದಿರುವ ಕಾರಣ ಬೈಪಾಸ್ ರಸ್ತೆಯ ಒಂದು ಬದಿಯ ಸಂಚಾರ ಸ್ಥಗಿತಗೊಂಡಿದೆ. ಮತ್ತಷ್ಟು ಮಳೆ ಸುರಿದರೆ ರಸ್ತೆ ಸಂಚಾರವೇ ಬಂದ್ ಆಗುವ ಆತಂಕ ಎದುರಾಗಿದೆ. ಇದರೊಂದಿಗೆ, ಉದ್ಘಾಟನೆಗೂ ಮೊದಲೇ ರಸ್ತೆಯ ಅವ್ಯವಸ್ಥೆ ಬಯಲಾಗಿದೆ.
ನಿರ್ಮಾಣ ಹಂತದಲ್ಲೇ ಹಲವೆಡೆ ಕಾಂಕ್ರೀಟ್ ರಸ್ತೆ ಬಿರುಕುಬಿಟ್ಟಿದೆ. ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯ ಗುಣಮಟ್ಟ ಹಾಳಾಗಿರುವ ಬಗ್ಗೆ ಇದೀಗ ಆಕ್ಷೇಪಗಳು ಕೇಳಿಬಂದಿವೆ. ಕಳೆದ ಏಳು ವರ್ಷಗಳಿಂದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಗೃಹ ಮಂಡಳಿ ಅಧ್ಯಕ್ಷ, ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ವಿರುದ್ದ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಬಾಬಾಸಾಬ್ ಕಾಲೋನಿಯ ನಿವಾಸಿಗಳು ಪೋಸ್ಟರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಯಿಂದ ಮನೆಗಳು ಬಿದ್ದು ಹೋಗ್ತಿವೆ, ಸಮಸ್ಯೆ ಆಲಿದಬೇಕಾದ ಶಾಸಕರು ಕೈಗೆ ಸಿಗ್ತಿಲ್ಲ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡು ಕೊಳಚೆ ನೀರು ಹರಿಯುತ್ತಿಲ್ಲ. ಅತಿಯಾದ ಶೀತದಿಂದ ವಾಸದ ಮನೆಗಳು ಬಿರುಕು ಬಿಟ್ಟಿವೆ. ಸೊಳ್ಳೆಗಳ ಕಾಟದಿಂದ ಡೆಂಗ್ಯೂ ಜ್ವರ ಸೇರಿ ಹಲವು ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ. ಸರಿಯಾದ ಚರಂಡಿ, ರಸ್ತೆ ಇಲ್ಲದೆ ಇಲ್ಲದೇ ನಿವಾಸಿಗಳು ಪರದಾಡುವಂತಾಗಿದೆ.
ಇದನ್ನೂ ಓದಿ: ಚಾರಣ ಪ್ರಿಯರೇ ಗಮನಿಸಿ: ಜುಲೈಯಿಂದ ಕರ್ನಾಟಕದ ಎಲ್ಲ ಟ್ರೆಕ್ಕಿಂಗ್ ತಾಣಗಳಿಗೂ ಆನ್ಲೈನ್ ಬುಕಿಂಗ್
ಕೆಲ ವರ್ಷಗಳ ಹಿಂದೆ ಅರಸೀಕೆರೆ ನಗರದಲ್ಲಿನ ಮುಸ್ಲಿಂ ಮೊಹಲ್ಲಗಳಿಗೆ ಶಾಸಕರು ಭೇಟಿ ನೀಡಿದ್ದರು. ಅದು ಬಿಟ್ಟರೆ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಕಾಲೋನಿಯ ಸಮಸ್ಯೆಗಳ ಬಗ್ಗೆ ನಿವಾಸಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ. ಸಮಸ್ಯೆಗಳು ಉಲ್ಬಣಗೊಂಡರೂ ಶಾಸಕ ಶಿವಲಿಂಗೇಗೌಡ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಒಂದು ವರ್ಷಕ್ಕೆ ಒಂದು ಬಾರಿಯಾದರೂ ಭೇಟಿ ಕೊಟ್ಟಿದ್ದೀರಾ ನೀವು? ಮತ ಕೊಟ್ಟವರು ಸತ್ತಿದ್ದಾರಾ, ಇಲ್ಲಾ ಬದುಕಿದ್ದಾರಾ ಅಂತ ನೋಡಿ’ ಎಂದು ಶಾಸಕ ಶಿವಲಿಂಗೇಗೌಡ ವಿರುದ್ಧ ಪೋಸ್ಟರ್ ಅಂಟಿಸಿ ನಿವಾಸಿಗಳೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Wed, 3 July 24