ಚಾರಣ ಪ್ರಿಯರೇ ಗಮನಿಸಿ: ಜುಲೈಯಿಂದ ಕರ್ನಾಟಕದ ಎಲ್ಲ ಟ್ರೆಕ್ಕಿಂಗ್ ತಾಣಗಳಿಗೂ ಆನ್‌ಲೈನ್ ಬುಕಿಂಗ್
ಕರ್ನಾಟಕದ ಕೆಲವೇ ಕೆಲವು ಚಾರಣ ಸ್ಥಳಗಳಿಗೆ ಆನ್‌ಲೈನ್ ಬುಕಿಂಗ್ ಕಡ್ಡಾಯ ಮಾಡಿ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಇದೀಗ ರಾಜ್ಯದ ಎಲ್ಲ ಟ್ರೆಕ್ಕಿಂಗ್ ತಾಣಗಳಿಗೂ ಆನ್‌ಲೈನ್ ಬುಕಿಂಗ್ ಜಾರಿಗೊಳಿಸಲು ಹೊರಟಿದೆ. ಇದಕ್ಕಾಗಿ ಸಾಫ್ಟ್‌ವೇರ್ ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಗ್ಗೆ ಅರಣ್ಯ ಸಚಿರು ನೀಡಿದ ಮಾಹಿತಿ, ವಿವರಗಳು ಇಲ್ಲಿವೆ.
ಮಂಗಳೂರು, ಜುಲೈ 3: ಕರ್ನಾಟಕದ ಎಲ್ಲಾ ಟ್ರೆಕ್ಕಿಂಗ್ ತಾಣಗಳಿಗೂ ಜುಲೈ ಮೂರನೇ ವಾರದಿಂದ ಆನ್‌ಲೈನ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಪರಿಚಯಿಸಲಾಗುವುದು ಎಂದು ಕರ್ನಾಟಕ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಟ್ರೆಕ್ಕಿಂಗ್ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮ ಮೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಅರಣ್ಯ ಇಲಾಖೆಯ ಮಂಗಳೂರು ವೃತ್ತದ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ವ್ಯಾಪ್ತಿಯ ಕುದುರೆಮುಖ, ನೇತ್ರಾವತಿ ಮತ್ತು ಇತರ ಕೆಲವು ಟ್ರೆಕ್ಕಿಂಗ್ ತಾಣಗಳಿಗೆ ಇಲಾಖೆಯು ಈಗಾಗಲೇ ಆನ್‌ಲೈನ್ ಬುಕಿಂಗ್ ಪರಿಚಯಿಸಿದೆ. ಜುಲೈ ತಿಂಗಳ ಕೊನೆಯಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದಿದ್ದಾರೆ.
ಒಂದೇ ವೆಬ್‌ಸೈಟ್‌ನಲ್ಲಿ ಎಲ್ಲಾ ಟ್ರೆಕ್ಕಿಂಗ್ ತಾಣಗಳಿಗೆ ಆನ್‌ಲೈನ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಹದಿನೈದು ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸುವ ಮೂಲಕ ಬುಕ್ಕಿಂಗ್ ವ್ಯವಸ್ಥೆಯಲ್ಲಿನ ಅಕ್ರಮಗಳಿಗೆ ಕೊನೆ ಹಾಡುವ ಗುರಿಯನ್ನು ಹೊಸ ವ್ಯವಸ್ಥೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ 5 ಕೋಟಿ ಸಸಿ ನೆಡುವ ಗುರಿ
ಕರ್ನಾಟಕದಲ್ಲಿ ಈ ವರ್ಷ 5 ಕೋಟಿ ಸಸಿಗಳನ್ನು ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದ್ದು, ಈಗಾಗಲೇ ಕೆಲಸ ಆರಂಭವಾಗಿದೆ ಎಂದು ಖಂಡ್ರೆ ಹೇಳಿದ್ದಾರೆ. ಕಳೆದ ವರ್ಷ ಕೂಡ 5 ಕೋಟಿ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, 5.43 ಕೋಟಿ ಸಸಿ ನೆಡಲಾಗಿತ್ತು. ಇದಕ್ಕಾಗಿ 100 ಕೋಟಿ ಹೆಚ್ಚುವರಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಖಂಡ್ರೆ ಮಾಹಿತಿ ನೀಡಿದ್ದಾರೆ.
150 ಎಕರೆಯಲ್ಲಿ ಮ್ಯಾಂಗ್ರೋವ್: ಖಂಡ್ರೆ
ಮಂಗಳೂರು ವ್ಯಾಪ್ತಿಯಲ್ಲಿ ಕಳೆದ ವರ್ಷ 26.5 ಲಕ್ಷ ಸಸಿಗಳನ್ನು ನೆಡಲಾಗಿದ್ದು, ಅದರಲ್ಲಿ ಶೇ 90ಕ್ಕೂ ಹೆಚ್ಚು ಸಸಿಗಳು ಉಳಿದಿವೆ ಎಂದಿದ್ದಾರೆ. ಈ ವರ್ಷ ಮಂಗಳೂರು ವ್ಯಾಪ್ತಿಯಲ್ಲಿ ವಿವಿಧ ನರ್ಸರಿಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗಿದ್ದು, ಜುಲೈ ಅಂತ್ಯದೊಳಗೆ ನೆಡಲಾಗುವುದು. 10 ಲಕ್ಷ ಸಸಿಗಳನ್ನು ನೆಡುವ ಮೂಲಕ 150 ಎಕರೆಯಲ್ಲಿ ಮ್ಯಾಂಗ್ರೋವ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಮುಳ್ಳಯ್ಯನಗಿರಿಯಲ್ಲಿ ಕಂಟ್ರೋಲ್ ಟೂರಿಸಂ, ಗಿರಿಗೆ ಬರಲು ಬುಕ್ ಮಾಡಿಕೊಂಡು ಬನ್ನಿ
ಕರಾವಳಿ ನಿಯಂತ್ರಣ ವಲಯದಲ್ಲಿನ ಉಲ್ಲಂಘನೆಗಳ ವಿರುದ್ಧ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ, ನ್ಯಾಯಾಲಯದ ತಡೆಯಾಜ್ಞೆ ತೆರವು ಮಾಡುವ ಮೂಲಕ ಅರಣ್ಯ ಭೂಮಿ ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:58 am, Wed, 3 July 24