ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಭತ್ತದ ಗದ್ದೆಗೆ ಗಜಪಡೆಗಳು ಲಗ್ಗೆಯಿಟ್ಟಿದ್ದು, ಬಯಲಿನಲ್ಲಿ ದನಕರುಗಳು ಅಡ್ಡಾಡುವಂತೆ 35 ಆನೆಗಳು ಪ್ರತ್ಯಕ್ಷವಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕುಂಬಾರಕಟ್ಟೆ ಭಾಗದಲ್ಲಿ ಕಾಡಾನೆಗಳು ಬೀಡುಬಿಟ್ಟಿದೆ. ಕಾಡಾನೆ ಹಾವಳಿಯಿಂದ ಬೇಸತ್ತು ನೆನ್ನೆ (ನವೆಂಬರ್ 20) ರೈತರು (Farmers) ಗೆದ್ದಾರಿ ತಡೆ ನಡೆಸಿದ್ದು, ವಿಷದ ಬಾಟಲ್ ಕೈಯಲ್ಲಿ ಹಿಡಿದು ಹೋರಾಟ ಮಾಡಿದ್ದಾರೆ. ಆದರೆ ನೆನ್ನೆಯೇ ಭಾರಿ ಸಂಖ್ಯೆಯಲ್ಲಿ ಆನೆ ಹಿಂಡು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ. ಸದ್ಯ ಭತ್ತದ ಗದ್ದೆಯಲ್ಲಿ ಅಲೆದಾಡುತ್ತಿರುವ 35 ಆನೆಗಳ (Elephant) ಹಿಂಡಿನ ವಿಡಿಯೋ ವೈರಲ್ ಆಗಿದೆ.
ಕಾಡಾನೆ ಹಾವಳಿ ನಿಯಂತ್ರಣಕ್ಕೆ ರೈತರು ಈಗಾಗಲೇ ಹೋರಾಟಕ್ಕೆ ಮುಂದಾಗಿದ್ದು, ನಿನ್ನೆಯೇ ಸಂಜೆ ಭತ್ತದ ಗದ್ದೆಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದೆ. ಹೀಗಾಗಿ ರೈತರು ಹೀಗೆ ಆದರೆ ಬೆಳೆ ಬೆಳೆಯುವುದು ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಆದಷ್ಟು ಬೇಗ ಈ ಬಗ್ಗೆ ಗಮನಹರಿಸಿ ಪರಿಹಾರ ದೊರಕಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರು: ಕಾಳೇನಹಳ್ಳಿ ಬಳಿ ಬೀಡುಬಿಟ್ಟಿದ್ದ ಆನೆಗಳು ಕಾಡಿಗೆ ವಾಪಸ್
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಆರು ಕಾಡಾನೆಗಳು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಾಳೇನಹಳ್ಳಿಗೆ ಬಂದಿದ್ದವು. ಸದ್ಯ ಗ್ರಾಮಸ್ಥರೇ ಕಾಡಾನೆಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ವಾಪಸ್ಸು ಕಳುಹಿಸಿದ್ದಾರೆ. ಹುಣಸೂರು ತಾಲ್ಲೂಕು ಕಾಳೇನಹಳ್ಳಿಯ ಜಮೀನಿಗೆ ಕಾಡಾನೆಗಳು ಲಗ್ಗೆಯಿಟ್ಟಿದ್ದವು. ಹೀಗಾಗಿ ಗ್ರಾಮಸ್ಥರು ಕಾಡಾನೆಗಳನ್ನು ಸುತ್ತುವರಿದು ಶಿಳ್ಳೆ ಹಾಕಿ, ಕೂಗಾಡಿ, ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಆನೆಗಳತ್ತ ಕಲ್ಲು ತೂರಿದ್ದು, ಇದರಿಂದ ಗಾಬರಿಗೊಂಡ ಆನೆಗಳು ದಿಕ್ಕಾಪಾಲಾಗಿ ಕಾಡಿಗೆ ಓಡಿವೆ.
ರಾಮನಗರ: ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಯಿಂದ ಬೆಳೆ ನಾಶ
ರಾಮನಗರ ತಾಲೂಕಿನ ಆಲೆಮರದದೊಡ್ಡಿ ಗ್ರಾಮದಲ್ಲಿ ಘಟನೆ ಕಾಡಾನೆಗಳ ದಾಳಿಯಿಂದ ಬೆಳೆ ನಾಶವಾಗಿದೆ. ರೈತ ನಾಗೇಶ್ ಜಮೀನಿನಲ್ಲಿ ಇದ್ದ ರಾಗಿ, ತೆಂಗು, ಮಾವು ನಾಶವಾಗಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ದನ, ಕರುಗಳ ಜೊತೆ ಕಾಡಾನೆ ಪರೇಡ್; ಅಪರೂಪದ ವಿಡಿಯೋ ನೋಡಿ
ಹಾಸನದಲ್ಲಿ ಒಂದೇ ಕಡೆ ಬೀಡುಬಿಟ್ಟಿರುವ 35ಕ್ಕೂ ಹೆಚ್ಚು ಕಾಡಾನೆಗಳು; ವಿಡಿಯೋ ವೈರಲ್
Published On - 8:17 am, Sun, 21 November 21