ಅಶ್ಲೀಲ ವಿಡಿಯೋ ಪ್ರಕರಣ: ದೇವರ ಮೊರೆ ಹೋದ ಹೆಚ್​ಡಿ ರೇವಣ್ಣ, ಮನೆಯಲ್ಲಿ ಹೋಮ, ಹವನ

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೋಟಿಸ್ ನೀಡಿದ ಬೆನ್ನಲ್ಲೇ ಬೆಂಗಳೂರಿನಿಂದ ಹೊಳೆನರಸೀಪುರದ ಮನೆಗೆ ಬಂದಿರುವ ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣ, ದೇವರ ಮೊರೆ ಹೋಗಿದ್ದಾರೆ. ಮನೆ ಸಮೀಪದ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಅವರು, ಮನೆಯಲ್ಲಿಯೂ ಹೋಮ-ಹವನ ನೆರವೇರಿಸಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣ: ದೇವರ ಮೊರೆ ಹೋದ ಹೆಚ್​ಡಿ ರೇವಣ್ಣ, ಮನೆಯಲ್ಲಿ ಹೋಮ, ಹವನ
ಹೆಚ್​ಡಿ ರೇವಣ್ಣರ ಹೊಳೆನರಸೀಪುರದ ನಿವಾಸ
Edited By:

Updated on: May 01, 2024 | 12:37 PM

ಹಾಸನ, ಮೇ 1: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ, ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣ (HD Revanna) ದೇವರ ಮೊರೆ ಹೋಗಿದ್ದಾರೆ. ಪ್ರಕರಣದ ತನಿಖೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡದಿಂದ (SIT) ನೋಟಿಸ್ ಬಂದ ಬೆನ್ನಲ್ಲೇ ರೇವಣ್ಣ ಮನೆಯಲ್ಲಿ ಬುಧವಾರ ಹೋಮ, ಹವನ ನಡೆದಿದೆ. ಹೊಳೆನರಸೀಪುರದ (Holenarasipur) ಮನೆಯಲ್ಲಿ ರೇವಣ್ಣ ಹೋಮ-ಹವನ ನೆರವೇರಿಸಿದ್ದಾರೆ.

ಮನೆಯಲ್ಲೇ ಹೋಮ ಕುಂಡ ನಿರ್ಮಿಸಿರುವ ರೇವಣ್ಣ ಹೋಮ-ಹವನ ಮಾತ್ರವಲ್ಲದೆ, ಬೆಳಗ್ಗೆಯಿಂದಲೇ ವಿವಿಧ ಪೂಜೆಯನ್ನೂ ಮಾಡಿಸಿದ್ದಾರೆ. ಮಂಗಳವಾರ ತಡರಾತ್ರಿ ಬೆಂಗಳೂರಿನಿಂದ ಹೆಚ್​​ಡಿ ರೇವಣ್ಣ ಹೊಳೆನರಸೀಪುರಕ್ಕೆ ಆಗಮಿಸಿದ್ದರು.

ರೇವಣ್ಣ ನಿವಾಸ ಖಾಲಿ ಖಾಲಿ!

ಸಾಮಾನ್ಯವಾಗಿ ಹೆಚ್​​ಡಿ ರೇವಣ್ಣರ ಹೊಳೆನರಸೀಪುರದ ಮನೆಯಲ್ಲಿ ಸದಾ ಜನ ತುಂಬಿರುತ್ತಾರೆ. ವಿವಿಧ ಕೆಲಸಗಳಿಗಾಗಿ ಅವರ ಮನೆಗೆ ಜನ ಬಂದಿರುತ್ತಾರೆ. ಆದರೆ, ಇಂದು ರೇವಣ್ಣ ಮನೆ ಖಾಲಿಖಾಲಿಯಾಗಿದೆ. ಮಂಗಳವಾರ ತಡರಾತ್ರಿ ಹೊಳೆನರಸೀಪುರ ನಿವಾಸಕ್ಕೆ ಬಂದ ರೇವಣ್ಣ, ಇಂದು ಬೆಳಗ್ಗೆಯೇ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವೇಶ್ವರ, ಲಕ್ಷ್ಮೀ ನರಸಿಂಹ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ರೇವಣ್ಣ ಮನೆಗೆ ನೋಟಿಸ್​ ಅಂಟಿಸಿರುವ ಎಸ್​ಐಟಿ

ಈ ಮಧ್ಯೆ, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ರೇವಣ್ಣ ನಿವಾಸದ ಗೋಡೆಗೆ ಬುಧವಾರ ಬೆಳಗ್ಗೆ ನೋಟಿಸ್ ಅಂಟಿಸಿದೆ. ಮೇ 4ರಂದು ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಮೇ 4ರಂದು ಹಾಜರಾಗುವುದಾಗಿ ರೇವಣ್ಣ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನೆಯಲ್ಲಿಯೇ ಹೋಮ, ಹವನದಲ್ಲಿ ಭಾಗಿಯಾದ ಬಳಿಕ ರೇವಣ್ಣ ಹಾಗೂ ಭವಾನಿರೇವಣ್ಣ ಮನೆಯಿಂದ ಹೊರಟಿದ್ದಾರೆ. ಇದೇ ವೇಳೆ, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಸ್‌ಐಟಿಯವರು ಮನೆಗೆ ನೋಟಿಸ್ ಅಂಟಿಸಿದ್ದಾರೆ. ಅದರಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಎಲ್ಲವನ್ನೂ ಎದುರಿಸುತ್ತೇನೆ, ಎಲ್ಲಾ ಸರಿ ಹೋಗುತ್ತದೆ ಎಂದರು.

ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ವಿಡಿಯೋ ಮೂಲ ಹುಡುಕುವುದು ಹೇಗೆ, ಹೇಗಿರಲಿದೆ ಎಸ್​ಐಟಿ ತನಿಖೆ? ಇಲ್ಲಿದೆ ಮಾಹಿತಿ

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಸದ್ಯ ಪ್ರಕರಣದ ತನಿಖೆ ಎಸ್ಐಟಿಗೆ ವರ್ಗಾವಣೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Wed, 1 May 24