ಹಾಸನ: ಮಲೆನಾಡು ಭಾಗದಲ್ಲಿ ನಿರಂತರ ಮಳೆ (Rain) ಹಿನ್ನೆಲೆ ಬೆಳೆಗಳು ಮಣ್ಣುಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ. ತೇವಾಂಶ ಹೆಚ್ಚಾಗಿ ಕಾಫಿ, ಮೆಣಸು ನೆಲಕಚ್ಚಿರುವಂತಹ ಘಟನೆ ಜಿಲ್ಲೆಯ ಬೇಲೂರು, ಸಕಲೇಶಪುರ ತಾಲೂಕಿನ ಹಲವು ಕಡೆ ಕಂಡುಬಂದಿದೆ. ಕಾಫಿ ಹಾಗೂ ಮೆಣಸಿನಲ್ಲಿ ಕೊಳೆರೋಗ ಕಾಣಿಸಿಕೊಂಡಿದ್ದು, ಶೇಕಡಾ 50 % ಫಸಲು ಕಡಿಮೆಯಾಗೋ ಆತಂಕದಲ್ಲಿ ಕಾಫಿಬೆಳೆಗಾರರಿದ್ದಾರೆ. ಸರ್ಕಾರ ಕಾಫಿಗೆ ವೈಜ್ಞಾನಿಕ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಧಾರಾಕಾರ ಮಳೆಯಿಂದಾಗಿ ಅರಸೀಕೆರೆ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆಯಿಂದ ಅರಸೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದಾಗಿ ಮುಂಜಾಗ್ರತೆಯಿಂದ ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್ ಆದೇಶ ಹೊರಡಿಸಿದರು.
ಇದನ್ನೂ ಓದಿ: ಕಾಫಿನಾಡಿನಲ್ಲಿ ಮಳೆಯ ಅಬ್ಬರ; ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಡಿಸಿ ಆದೇಶ
ವರದಾ ನದಿಯಲ್ಲಿ ವೃದ್ಧನ ಹುಚ್ಚಾಟ
ಹಾವೇರಿ: ಭರಪೂರ ಹರಿತಿರೋ ವರದಾ ನದಿ ನೀರಿನಲ್ಲಿ ವೃದ್ಧ ಓರ್ವ ಹುಚ್ಚಾಟ ಮಾಡಿರುವಂತಹ ಘಟನೆ ತಾಲೂಕಿನ ಹಾಲಗಿ ಗ್ರಾಮದ ಬಳಿ ಹರಿತಿರೋ ವರದಾ ನದಿಯಲ್ಲಿ ಹುಚ್ಚಾಟ ಮಾಡಲಾಗಿದೆ. ಭರ್ಜರಿ ತುಂಬಿರೋ ನದಿ ನೀರಿನಲ್ಲಿ ಸ್ವಿಮ್ಮಿಂಗ್ ಮಾಡಲಾಗಿದೆ. ನದಿ ಬಳಿ ಇರೋ ಸಣ್ಣ ಕಟ್ಟೆಯ ಮೇಲಿಂದ ಜಿಗಿದು ನದಿ ನೀರಲ್ಲಿ ಹುಚ್ಚಾಟ ಮಾಡಿದ್ದು, ಸೇತುವೆ ಮೇಲಿನ ಕಬ್ಬಿಣದ ಸಹಾಯದಿಂದ ಈಜಿ ವೃದ್ಧ ದಡ ಸೇರುತ್ತಾರೆ. ಇನ್ನೂ ಜಿಲ್ಲೆಯ ಸವಣೂರು ತಾಲೂಕಿನ ಕುಣಿಮೆಳ್ಳಿಹಳ್ಳಿ, ಹಲಸೂರು ಗ್ರಾಮ, ಹಾನಗಲ್ ತಾಲೂಕಿನ ಹರವಿ, ಕೂಡಲ, ಹಾವೇರಿ ತಾಲೂಕಿನ ವರದಹಳ್ಳಿ, ನಾಗನೂರು ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನು ಸಂಪೂರ್ಣ ಜಲಾವೃತವಾಗಿದೆ. ಹೂವಿನ ತೋಟ, ಮೆಕ್ಕೆಜೋಳ, ಕಬ್ಬು, ಹೂಕೋಸು ಬೆಳೆ ಹಾನಿಯಾಗಿದ್ದು,
ನದಿ ಪಾತ್ರದ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ನಾಶವಾಗಿದೆ. ಕೆರೆಯಂತಾಗಿರುವ ಜಮೀನು ಕಂಡು ರೈತರು ಕಂಗಾಲಾಗಿದ್ದಾರೆ.
ಬಾಗಲಕೋಟೆಯ ಹೊಳೆಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ
ಬಾಗಲಕೋಟೆ: ನಿರಂತರ ಮಳೆಯಿಂದಾಗಿ ಘಟಪ್ರಬಾ ನದಿ ಹರಿವಿನಲ್ಲೂ ಸ್ವಲ್ಪ ಹೆಚ್ಚಳವಾಗಿದ್ದು, ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ ಉಂಟಾಗಿದೆ. ದೇವಸ್ಥಾನದ ಸುತ್ತು ಘಟಪ್ರಭಾ ನದಿ ನೀರು ಸುತ್ತುವರೆದಿದೆ. ಪೂಜೆಗೆ ನೀರಲ್ಲೆ ನಡೆದುಕೊಂಡು ಹೋಗುವ ಸ್ಥಿತಿ ಉಂಟಾಗಿದ್ದು, ಪ್ರತಿ ಭಾರೀ ಪ್ರವಾಹ ಬಂದಾಗ ದೇವಸ್ಥಾನ ಮುಳುಗಡೆಯಾಗುತ್ತದೆ. ನೀರಿನ ಪ್ರಮಾಣ ಹೆಚ್ಚಾದರೆ ಇಡೀ ದೇಗುಲ ಮುಳುಗಡೆ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಇದುವರೆಗೂ 175 ಮನೆಗಳು ಕುಸಿತ
ದಾವಣಗೆರೆ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಜುಲೈ 1ರಿಂದ ಈವರೆಗೆ ಜಿಲ್ಲೆಯಲ್ಲಿ 175 ಮನೆಗಳು ಕುಸಿದಿವೆ. ಗೆದ್ಲಟ್ಟಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಮನೆ ಕುಸಿದು ಬಿದ್ದಿರುವಂತಹ ಘಟನೆ ಚನ್ನಗಿರಿ ತಾಲೂಕಿನ ಗೆದ್ಲಟ್ಟಿ ಗ್ರಾಮದಲ್ಲಿ ನಡೆದಿದೆ. ನಲ್ಲೂರ ಹಾಲೇಶ್ ಎಂಬುವರ ಮನೆ ಸಂಪೂರ್ಣ ಕುಸಿದಿದೆ. ಹೊನ್ನಾಳಿ ತಾಲೂಕಿನ ಹತ್ತೂರು, ಕತ್ತಿಗೆ ಗ್ರಾಮಗಳ ರಸ್ತೆ ನಾಶವಾಗಿದ್ದು, ವಿವಿಧ ಇಲಾಖೆಗಳ ಜಂಟಿ ಸಮೀಕ್ಷೆಗೆ ಜಿಲ್ಲಾಡಳಿತ ಮುಂದಾಗಿದೆ.
Published On - 2:44 pm, Mon, 18 July 22