ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ ಸಾಲುಮರದ ತಿಮ್ಮಕ್ಕ, ಇಬ್ಬರು ನರ್ಸ್‌ಗಳ ನಿಯೋಜನೆ
ಅನಾರೋಗ್ಯದಿಂದ ಬಳಲುತ್ತಿದ್ದ ವೃಕ್ಷಮಾತೆ, ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಇದೀಗ ಮನೆಗೆ ಮರಳಿದ್ದಾರೆ. ಸರ್ಕಾರ ಸಂಪುದ ದರ್ಜೆ ಸ್ಥಾನಮಾನ ನೀಡಿದ್ದರೂ ಸಹ ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಅಂಬ್ಯಲೆನ್ಸ್‌ನಲ್ಲೇ ಮನೆಗೆ ವಾಪಾಸ್ಸಾಗಿದ್ದಾರೆ.
ಹಾಸನ, (ಸೆಪ್ಟೆಂಬರ್ 27): ಅನಾರೋಗ್ಯದಿಂದ ಬಳಲುತ್ತಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (Saalumarada timmakka) ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಇದೀಗ ಮನೆಗೆ ಮರಳಿದ್ದಾರೆ. ಜ್ವರ, ಮೈಕೈ ನೋವಿದಿಂದ ಸುಸ್ತಾಗಿದ್ದ ತಿಮ್ಮಕ್ಕ ಅವರನ್ನು ಬೇಲೂರು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಆರೋಗ್ಯ ಸುಧಾರಣೆಯಾಗಿದ್ದರಿಂದ ಬೇಲೂರು ತಾಲ್ಲೂಕಿನ ಬಳ್ಳೂರಿನರುವ ತಮ್ಮ ನಿವಾಸಕ್ಕೆ ಮರಳಿದ್ದಾರೆ. ಇನ್ನು ಹಾಸನ ಜಿಲ್ಲಾಡಳಿತವು ತಿಮ್ಮಕ್ಕ ಅವರಿಗೆ ಚಿಕಿತ್ಸೆ ನೀಡಲು ಇಬ್ಬರು ನರ್ಸ್‌ಗಳನ್ನು ನಿಯೋಜನೆ ಮಾಡಿದೆ.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಸರ್ಕಾರ ಸಂಪುದ ದರ್ಜೆ ಸ್ಥಾನಮಾನ ನೀಡಿದ್ದರೂ ಸಹ ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಅಂಬ್ಯಲೆನ್ಸ್‌ನಲ್ಲೇ ಮನೆಗೆ ವಾಪಾಸ್ಸಾಗಿರುವುದು ವಿಶೇಷ. ಇನ್ನು ಮನೆಯಲ್ಲಿ ತಿಮ್ಮಕ್ಕ ಅವರಿಗೆ ಚಿಕಿತ್ಸೆ ನೀಡಲು ಇಬ್ಬರು ನರ್ಸ್‌ಗಳನ್ನು ಜಿಲ್ಲಾಡಳಿತ ನಿಯೋಜನೆ ಮಾಡಿದೆ. ಬಳ್ಳೂರಿನ ನಿವಾಸಕ್ಕೆ ತೆರಳಿದ ಸಾಲುಮರದ ತಿಮ್ಮಕ್ಕ ವಿಶ್ರಾಂತಿ ಪಡೆಯುತ್ತಿದ್ದು, ಕೆಲ ದಿನಗಳ ಕಾಲ ನರ್ಸ್‌ಗಳೇ ಆರೋಗ್ಯ ನಿಗಾವಹಿಸಲಿದ್ದಾರೆ.
ಇದನ್ನೂ ಓದಿ: Saalumarada Thimmakka: ಕಾಲು ಜಾರಿ ಬಿದ್ದ ಸಾಲುಮರದ ತಿಮ್ಮಕ್ಕ: ಆಸ್ಪತ್ರೆಗೆ ದಾಖಲು
ಇತ್ತೀಚೆಗಷ್ಟೇ ತಿಮ್ಮಕ್ಕ ಬೆಂಗಳೂರಿನ ಮಂಜುನಾಥನಗರದಲ್ಲಿರುವ ನಿವಾಸದಲ್ಲಿ ಕಾಲು ಜಾರಿ ಬಿದ್ದಿದ್ದು, ಬೆನ್ನು ಮೂಳೆಗೆ ಪೆಟ್ಟಾಗಿತ್ತು. ಹಾಗಾಗಿ ಅವರನ್ನು ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸಾಲುಮರದ ತಿಮ್ಮಕ್ಕ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳ್ಳೂರಿನರುವ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಮೈಕೈ ನೋವಿನಿಂದ ಜ್ವರ ಬಂದಿತ್ತು. ಹೀಗಾಗಿ ಬೇಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.
ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು ಪರಿಸರದ ಮೇಲಿನ ತಮ್ಮ ಪ್ರೀತಿಯಿಂದ ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತರಾದವರು. ಕಿತ್ತು ತಿನ್ನುವ ಬಡತನದ ನಡುವೆಯೂ ಸಾಲು ಸಾಲು ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಿರುವ ಈ ವೃಕ್ಷಮಾತೆ ಎಂತಹವರಿಗೂ ಸ್ಪೂರ್ತಿ. ಸುಮಾರು 112ರ ವಯಸ್ಸಿನ ತಿಮ್ಮಕ್ಕ ಅವರು ಕಳೆದ 65 ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಿಸುವಂತಹ ಕಾಯಕದಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೂ ಸರಿಸುಮಾರು 8 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ‘ವೃಕ್ಷ ಮಾತೆ’ ಎಂದು ಪ್ರಖ್ಯಾತಿ ಗಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:46 am, Wed, 27 September 23