AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವರು 1.5 ಕೋಟಿ ರೂ ಸೋಲಾರ್ ಪ್ರಾಜೆಕ್ಟ್ ಕೊಡ್ತೀವಿ ಅಂದರು, ಇವರು 21 ಲಕ್ಷ ರೂ ಕಮಿಷನ್ ಕೊಟ್ಟರು! ಆಮೇಲೇನಾಯ್ತು?

ಕೋಟಿ ಕೋಟಿ ಆಸೆಗೆ ಬಿದ್ದು ಖದೀಮರ ಬಣ್ಣದ ಮಾತಿಗೆ ಮರುಳಾಗಿ 21 ಲಕ್ಷ ಹಣ ಕೊಟ್ಟು ಮೋಸ ಹೋಗಿದ್ದ ಸೋಲಾರ್ ಕಂಪನಿ ಮಾಲೀಕರು ಆರೋಪಿಗಳ ಬಂಧನದಿಂದ ಬಳಿಕ ನಿಟ್ಟುಸಿರುಬಿಟ್ಟಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದು ವಿಚಾರಣೆ ಬಳಿಕ ಖತರ್ನಾಕ್ ವಂಚಕರು ಮಾಡಿರೋ ಮತ್ತಷ್ಟು ಮೋಸ ಬಯಲಾಗಲಿದೆ.

ಅವರು 1.5 ಕೋಟಿ ರೂ ಸೋಲಾರ್ ಪ್ರಾಜೆಕ್ಟ್ ಕೊಡ್ತೀವಿ ಅಂದರು, ಇವರು 21 ಲಕ್ಷ ರೂ ಕಮಿಷನ್ ಕೊಟ್ಟರು! ಆಮೇಲೇನಾಯ್ತು?
ಸೋಲಾರ್ ಪ್ರಾಜೆಕ್ಟ್ ಮಹಾ ಮೋಸ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 16, 2023 | 2:33 PM

ಆ ಇಬ್ಬರೂ ದೊಡ್ಡ ದೊಡ್ಡ ಸೋಲಾರ್ ಕಂಪನಿ ನಡೆಸುತ್ತಿದ್ದವರಿಗೆ ಟೋಪಿ ಹಾಕೋಕೆ (Solar Project fraud) ಖತರ್ನಾಕ್ ಪ್ಲಾನ್ ಮಾಡಿದ್ರು. ಒಂದೂವರೆ ಕೋಟಿ ರೂ ಪ್ರಾಜೆಕ್ಟ್ ಹೆಸರಿನಲ್ಲಿ ಹಾವೇರಿಯ ಕಾಗಿನೆಲೆ ಮಠದ ಹೆಸರಿನಲ್ಲಿ ಡೀಲ್ ಗೆ ಕೂತಿದ್ರು. 1.5 ಕೋಟಿ ಪ್ರಾಜೆಕ್ಟ್ ನಿಮಗೆ ಕೊಡ್ತೀವಿ.. 21 ಲಕ್ಷ ಕಮಿಷನ್ ಮೊದಲೇ ನಮಗೆ ಕೊಡಿ ಎಂದು ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸ್ಥಳವೊಂದನ್ನ ನಿಗದಿ ಮಾಡಿ ಕಮಿಷನ್ ಹಣ ಪಡೆಯೋಕೆ ಅಂತಾ ಬಂದ ಖತರ್ನಾಕ್ ವಂಚಕರು (scamsters) ತಮ್ಮ ಪಾಲಿನ 21 ಲಕ್ಷ ರೂ ಹಣ ಪಡೆದು ಅಗ್ರಿಮೆಂಟ್ ಪೇಪರ್ಸ್ ಎಂದು ಒಂದು ಬಾಕ್ಸ್ ಕೈಗಿಟ್ಟು ಎಸ್ಕೇಪ್ ಆದವರು ನಾಪತ್ತೆಯಾಗಿದ್ದರು. ಬಾಕ್ಸ್ ತೆರೆದು ನೋಡಿದ ಕಂಪನಿಯವರಿಗೆ ತಾವು ಮೋಸ ಹೋಗಿರೋದು ಗೊತ್ತಾಗಿದೆ. ಕೇಸ್ ದಾಖಲಿಸಿಕೊಂಡಿದ್ದ ಹಿರಿಸಾವೆ ಪೊಲೀಸರು (scamsters) ಇದೀಗ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದು ವಂಚಕರ ಮೋಸದ ಪುರಾಣ ಬಯಲಿಗೆಳೆಯಲು ತನಿಖೆ ಮುಂದುವರೆಸಿದ್ದಾರೆ. ಕೋಟಿ ಕೋಟಿ ರೂಪಾಯಿ ಪ್ರಾಜೆಕ್ಟ್ ಹೆಸರಿನಲ್ಲಿ ಗಾಳ… ವಂಚಕರ ನಯವಂಚಕ ಮಾತಿಗೆ ಮರಳಾದ ಸೋಲಾರ್ ಕಂಪನಿಗೆ 21 ಲಕ್ಷ ಟೋಪಿ ಹಾಕಿದ್ದವರ ಕೈಗೆ ಕೊನೆಗೂ ಬಿತ್ತು ಕೋಳ.. ಆಕ್ಚುಯಲೀ ಆ ಖದೀಮರು ಮಾಡುತ್ತಿದ್ದುದ್ದು ಪೇಂಟಿಂಗ್ ಕೆಲಸ, ಬಂಡವಾಳ ಹೂಡಿದ್ದು ಲಕ್ಷ ಲಕ್ಷ ಸುಲಿಯೋ ತಂತ್ರಗಾರಿಕೆಯನ್ನ. ಹೌದು ತಾವು ಹಾವೇರಿ ಜಿಲ್ಲೆಯ ಕಾಗಿನೆಲೆ ಮಠದ ಮ್ಯಾನೇಜರ್… ನಮ್ಮ ಮಠಕ್ಕೆ ಒಂದೂವರೆ ಕೋಟಿ ರೂ ವೆಚ್ಚದ ಬೃಹತ್ ಸೋಲಾರ್ ಪ್ಲಾಂಟ್ ಮಾಡಬೇಕು. ಈ ಪ್ರಾಜೆಕ್ಟ್ ನಿಮಗೆ ಕೊಡ್ತೇವೆ ಎಂದು ಬೆಂಗಳೂರಿನ ಆದ್ರಹಳ್ಳಿಯ ವಿದ್ಯಾಮಾನ್ಯ ನಗರದ ಜಯಕುಮಾರ್ ಮಾಲೀಕತ್ವದ ವಿಜಯ ಟೆಕ್ ಕಂಪನಿ ಎಂಬ ಸೋಲಾರ್ ಕಂಪನಿಗೆ ಗಾಳ ಹಾಕಿದ್ದಾರೆ.

ಮೂಲತಃ ತುಮಕೂರು ಜಿಲ್ಲೆಯ ಕೆ. ಲಕ್ಕಿಹಳ್ಳಿಯ ರಘು (30) ಎಂಬಾತನ ಬಣ್ಣದ ಮಾತಿಗೆ ಮರುಳಾಗಿದ್ದ ಸೋಲಾರ್​ ಮಾಲೀಕ ಜಯಕುಮಾರ್ ಡೀಲ್ ಗೆ ಓಕೆ ಮಾಡಿದ್ದರು. ಚಿಕ್ಕಮಗಳೂರು ಜಿಲ್ಲೆ ಬಿ. ಕೋಡಿಹಳ್ಳಿಯ ಶ್ರೀಧರ್ ಆಲಿಯಾಸ್ ಸಿದ್ದಪ್ಪನ ಜೊತೆಗೆ ಬಂದು ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಸಿದ್ದ ಖದೀಮರು ಒಂದೂವರೆ ಕೋಟಿಯ ಯೋಜನೆ ನಿಮಗೆ ಕೊಡ್ತೀವಿ, ಅದಕ್ಕೆ ಬದಲಾಗಿ 21 ಲಕ್ಷ ಕಮಿಷನ್ ಅನ್ನು ನಮಗೆ ನೀವು ಕೊಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದರು. 2022ರ ನವೆಂಬರ್ 28ರಂದೇ ಡೀಲ್ ಬಗ್ಗೆ ಮಾತನಾಡಿದ್ದ ವಂಚಕರು, ಡಿಸೆಂಬರ್ 4ರಂದು ಕಮಿಷನ್ ಹಣವನ್ನ ಕೊಡಬೇಕೆಂದು ಹೇಳಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್. ಹೊನ್ನೆನಹಳ್ಳಿಗೆ ಬರಲು ಹೇಳಿ ಕರೆಸಿಕೊಳ್ತಾರೆ.

ಹೇಗಿದ್ದರೂ ದೊಡ್ಡ ಪ್ರಾಜೆಕ್ಟ್, ಒಳ್ಳೆಯ ಆದಾಯ ಆಗುತ್ತೆ ಎಂದು ನಂಬಿದ ಸೋಲಾರ್​ ಮಾಲೀಕ ಜಯಕುಮಾರ್ ತಮ್ಮ ಪಾರ್ಟನರ್ ಗಳಾದ ಕೋಲಾರದ ಕಾರ್ತಿಕ್ ಚಂದರ್, ಮತ್ತು ಮೈಸೂರಿನ ಮಂಜುನಾಥ್ ಜೊತೆ ಸೇರಿ 21 ಲಕ್ಷ ಹಣ ಕೊಡಲು ಬರ್ತಾರೆ. ಅಲ್ಲಿಗೆ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಖದೀಮರಾದ ರಘು ಮತ್ತು ಶ್ರೀಧರ್ ಅಗ್ರಿಮೆಂಟ್ ಕಾಪಿಯ ಪೇಪರ್ಸ್ ಎಂದು ಒಂದು ಬಾಕ್ಸ್ ಕೈಗಿಟ್ಟು, ಅವರು ತಂದಿದ್ದ 21 ಲಕ್ಷ ಹಣವನ್ನು ಕಿತ್ತುಕೊಂಡು ಎಸ್ಕೇಪ್ ಆಗ್ತಾರೆ.

ಆದ್ರೆ ಅವರು ಕೊಟ್ಟ ಬಾಕ್ಸ್ ತೆರದು ನೋಡಿದಾಗ ಅದರೊಳಗೆ ಕೇವಲ ನ್ಯೂಸ್ ಪೇಪರ್ಸ್ ಹೊರತು ಬೇರೆ ಏನೂ ಇಲ್ಲದೆ ಇರೋದು ಗೊತ್ತಾಗಿ ಬೆಪ್ಪರಾಗಿದ್ದಾರೆ. ಮತ್ತೆ ಅವರನ್ನು ಸಂಪರ್ಕ ಮಾಡೋ ಯತ್ನ ಮಾಡಿದ್ದಾರೆ. ಆದ್ರೆ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದಾಗ ಜನವರಿ 20ರಂದು ಹಿರಿಸಾವೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ತುಮಕೂರು ಮೂಲದ ರಘು ಮತ್ತು ಚಿಕ್ಕಮಗಳೂರು ಮೂಲದ ಶ್ರೀಧರ್ ನನ್ನು ಬಂಧಿಸಿದ್ದು 9.19 ಲಕ್ಷ ನಗದು ಹಾಗೂ ಕಮಿಷನ್ ಹಣದಲ್ಲಿ ಖರೀದಿ ಮಾಡಿದ್ದ ಎರಡು ಕಾರುಗಳ ಸಹಿತ ಅವರು ಬಳಕೆ ಮಾಡಿದ್ದ ಕಾರನ್ನು ಕೂಡ ಸೀಝ್ ಮಾಡಿದ್ದಾರೆ.

ತಾವು ಈ ಹಿಂದೆ ಬೆಂಗಳೂರಿನ ಸೋಲಾರ್ ಕಂಪನಿಯೊಂದರಲ್ಲಿ ಮೂರು ವರ್ಷ ಕೆಲಸ ಮಾಡಿದ್ದೆ ಎಂದು ಜಯಕುಮಾರ್ ಜೊತೆಗೆ ಮಾತನಾಡಿದ್ದ ತುಮಕೂರಿನ ರಘು, ಈಗ ನಾನು ಹಾಲಿ ಕಾಗಿನೆಲೆ ಮಠದಲ್ಲಿ ಮ್ಯಾನೇಜರ್ ಆಗಿದ್ದೇನೆ ಎಂದು ಹೇಳ್ತಾನೆ. ಮಾಡೋದು ಪೇಂಟಿಂಗ್ ಕೆಲಸವಾದರೂ ಕೂಡ ಕೋಟಿ ಕೋಟಿ ವ್ಯವಹಾರದ ಮಾತನಾಡಿದ್ದಾನೆ. ಹೇಳಿ ಕೇಳಿ ಪ್ರತಿಷ್ಠಿತ ಮಠ ಕೋಟಿ ಕೋಟಿ ವ್ಯವಹಾರ ಬೇರೆ ಒಳ್ಳೇ ಆದಾಯ ಇದೆ ಎಂದು ಖುಷಿಯಾದ ವಿಜಯ ಟೆಕ್ ಕಂಪನಿ ಮಾಲೀಕರು 21 ಲಕ್ಷದ ದೊಡ್ಡ ಮೊತ್ತದ ಕಮಿಷನ್ ಕೊಡಲು ಹಿಂದೆಮುಂದೆ ನೋಡದೆ ಓಕೆ ಮಾಡ್ತಾರೆ.

ಹೇಗೋ ಲಕ್ಷ ಲಕ್ಷ ಹಣ ಹೊಂದಿಸಿ ಹಣ ಕೊಡೋಕೆ ಅವರೇ ಹೇಳಿದ ಸ್ಥಳಕ್ಕೂ ಬರ್ತಾರೆ,.ಆದ್ರೆ ಹಣ ದೋಚೋ ಪ್ಲಾನ್ ನಲ್ಲಿದ್ದ ಕದೀಮರು 21 ಲಕ್ಷ ಹಣ ತಂದಿದ್ದಾರ ಎನ್ಣೋದು ಗೊತ್ತಾಗುತ್ತಲೆ ಅವರಿಂದ ಹಣ ಕಸಿದುಕೊಂಡು ಅಗ್ರಿಮೆಂಟ್ ಕಾಪಿ ಎಂದು ಬಾಕ್ಸ್ ಕೈಗಿತ್ತು ಪರಾರಿಯಾದಾಗ ಆಗಿರೋ ಮೋಸದ ಅರಿವಾಗಿತ್ತು, ಪೊಲೀಸರಿಗೆ ದೂರುಕೊಡೊದುಬೇಡಾ ಎಂದು ಸುಮ್ಮನಾಗಿದ್ದಾರೆ, ಹಣ ವಾಪಸ್ ಕೊಡಬಹುದು ಎಂದು 20 ದಿನ ಕಾದಿದ್ದಾರೆ, ಆದ್ರೆ ಹಣ ಎಗರಿಸಿ ಎಸ್ಕೇಪ್ ಆದ ಕದೀಮರು ಫೋನ್ ಗೂ ಸಿಗದೆ ನಾಪತ್ತೆಯಾದಾಗ ಬೇರೆ ದಾರಿಯಿಲ್ಲದೆ ಪೊಲೀಸರಿಗೆ ದೂರು ನೀಡಿದ್ದಾರೆ, ಪದ್ರಕರಣವನ್ನು ಗಂಭಿರವಾಗಿ ಪರಿಹಣಿಸಿದ ಪೊಲೀಸರು ತನಿಖೆ ಕೈಗೊಂಡು ಹಣದ ಸಮೇತ ಅರಸೀಕೆರೆಯಲ್ಲಿದ್ದ ಕದೀಮರನ್ನ ಬಂದಿಸಿ ಜೈಲಿಗಟ್ಟಿದ್ದಾರೆ.

ಆರೋಪಿಗಳು ಈ ಹಿಂದೆ ಕೂಡ ಇದೇ ರೀತಿಯಲ್ಲಿ ಹಲವರಿಗೆ ಮೋಸ ಮಾಡಿರೊ ಬಗ್ಗೆ ಮಾಹಿತಿ ಇದ್ದು ಮೋಸ ಹೋದವರು ಬೇರೆ ಬೇರೆ ಕಾರಣಗಳಿಗಾಗಿ ದೂರು ನೀಡಿಲ್ಲ. ಹಾಗಾಗಿ ಆರೋಪಿಗಳನ್ನ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರೋ ಪೊಲೀಸರು ವಂಚಕರ ಜಾಲ ಬಯಲು ಮಾಡಲು ಮುಂದಾಗಿದ್ದಾರೆ.

ಒಟ್ನಲ್ಲಿ ಕೋಟಿ ಆಸೆಗೆ ಬಿದ್ದು ಹಿಂದೆ ಮುಂದೆ ನೋಡದೆ ಖದೀಮರ ಬಣ್ಣದ ಮಾತಿಗೆ ಮರುಳಾಗಿ 21 ಲಕ್ಷ ಹಣ ತಂದುಕೊಟ್ಟು ಮೋಸ ಹೋಗಿದ್ದ ಸೋಲಾರ್ ಕಂಪನಿ ಮಾಲೀಕರು ಆರೋಪಿಗಳ ಬಂಧನದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದು ಆರೋಪಿಗಳ ವಿಚಾರಣೆ ಬಳಿಕ ಖತರ್ನಾಕ್ ವಂಚಕರು ಮಾಡಿರೋ ಮತ್ತಷ್ಟು ಮೋಸ ಬಯಲಾಗಲಿದೆ.

ವರದಿ: ಮಂಜುನಾಥ್ ಕೆ.ಬಿ, ಟಿವಿ9, ಹಾಸನ