ಹಾಸನ: ಟ್ರಕ್ ಟರ್ಮಿನಲ್ (Truck Terminal) ನಿರ್ಮಾಣ ವಿವಾದದ ನಡುವೆಯೇ ಹಾಸನದಲ್ಲಿ ರಾತ್ರೋರಾತ್ರಿ ತಾಲೂಕು ಕಚೇರಿ (Taluk Office) ಹಳೇ ಕಟ್ಟಡವನ್ನು ನೆಲಸಮ ಮಾಡಿದ್ದಾರೆ. ಟ್ರಕ್ ಟರ್ಮಿನಲ್ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿತ್ತು. ತಾಲೂಕು ಕಚೇರಿ ಕಟ್ಟಡ ಕೆಡವಲು ಬಿಡಲ್ಲವೆಂದು ಮಾಜಿ ಸಚಿವ ಹೆಚ್ಡಿ ರೇವಣ್ಣ ಎಚ್ಚರಿಸಿದ್ದರು. ಗೋಲಿಬಾರ್ ಆದರೂ ಕಟ್ಟಡ ತೆರವಿಗೆ ಬಿಡಲ್ಲ ಎಂದಿದ್ದರು. ಹಳೇ ಕಟ್ಟಡ ಕೆಡವದೆ ಹೊಸ ಕಟ್ಟಡ ಕಟ್ಟಿ ಎಂದು ಆಗ್ರಹಿಸಿದ್ದರು. ಆದರೆ ರೇವಣ್ಣ ಮಾತಿಗೆ ಸೊಪ್ಪುಹಾಕದೆ ಗುತ್ತಿಗೆದಾರ ರಾತ್ರೋರಾತ್ರಿ ಕಟ್ಟಡ ತೆರವು ಮಾಡಿದ್ದಾರೆ.
ಕಟ್ಟಡ ಕೆಡವಿ ಮಾಜಿ ಸಚಿವ ರೇವಣ್ಣಗೆ ಟಾಂಗ್ ಕೊಟ್ಟಿದ್ದಾರೆ. 2 ಹಿಟಾಚಿ ಮೂಲಕ ಕಿಟಕಿ, ಬಾಗಿಲು ಸಮೇತ ಕಚೇರಿ ಕಟ್ಟಡವನ್ನು ನೆಲಸಮ ಮಾಡಿದ್ದಾರೆ.
ನಿನ್ನೆ ರಣರಂಗವಾಗಿದ್ದ ಉದ್ದೇಶಿತ ಟ್ರಕ್ ಟರ್ಮಿನಲ್ ಸ್ಥಳ ಇಂದು ನೀರವ ಮೌನದಿಂದ ಕೂಡಿದೆ. ಜಿಲ್ಲಾಡಳಿತ ಟರ್ಮಿನಲ್ ನಿರ್ಮಾಣಕ್ಕೆ ಕೆಲಸ ನಡೆಯುತ್ತಿರುವ ಸ್ಥಳದ ವ್ಯಾಪ್ತಿಯಲ್ಲಿ ನಿಷೇಧಾಜ್ಙೆ ಜಾರಿ ಮಾಡಿದೆ. ನಿಷೇಧಾಜ್ಙೆ ಹಿನ್ನೆಲೆಯಲ್ಲಿ ಜನರು ಸ್ಥಳಕ್ಕೆ ಆಗಮಿಸಿಲ್ಲ. ಹಾಸನ ಹೊರ ವಲಯದ ಕೆಂಚಟ್ಟಹಳ್ಳಿ ಸಮೀಪ 3.24 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ವಾಗುತ್ತಿದೆ. ಮೈಸೂರು ವಿವಿ ಸ್ನಾತಕೋತ್ತರ ಕೇಂದ್ರದ ಸಮೀಪ ಟ್ರಕ್ ಟರ್ಮಿನಲ್ ಬೇಡಾ ಎಂದು ಜೆಡಿಎಸ್ ನಾಯಕರು ಪಟ್ಟು ಹಿಡಿದಿದ್ದರು. ಉದ್ದೇಶಿತ ಟರ್ಮಿನಲ್ ಸಮೀಪ ವಿದ್ಯಾರ್ಥಿನಿಯರ ಹಾಸ್ಟೆಲ್ ಇದ್ದು ಸುರಕ್ಷತೆಗೆ ಸಮಸ್ಯೆ ಆಗಲಿದೆ ಎಂದು ಆರೋಪಿಸಿದ್ದರು.
ಆದರೆ ಜೆಡಿಎಸ್ ವಿರೋಧ ಲೆಕ್ಕಿಸದೆ ಶಾಸಕ ಪ್ರೀತಂಗೌಡ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಯತ್ನಿಸಿದ್ದಾರೆ ಜೆಡಿಎಸ್ ಬಿಜೆಪಿ ನಡುವೆ ಟರ್ಮಿನಲ್ ವಿಚಾರ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನೆ ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಙೆ ಜಾರಿ ಮಾಡಲಾಗಿದೆ. ಹಾಸನ ಘಟನಾ ಸ್ಥಳದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಮಾಲಾಗಿದೆ.
ತಿರುಗಿ ಬೀಳ್ತಾರಾ ಜೆಡಿಎಸ್ ನಾಯಕರು?:
ತಾಲೂಕು ಕಚೇರಿಯನ್ನು ತೆರವುಗೊಳಿಸಿದ ಹಿನ್ನೆಲೆ ಬಿಜೆಪಿ ನಾಯಕರ ವಿರುದ್ಧ ಜೆಡಿಎಸ್ ನಾಯಕರು ತಿರುಗಿ ಬೀಳ್ತಾರಾ ಎಂಬ ಪ್ರಶ್ನೆ ಮೂಡಿದೆ. ಗೋಲಿಬಾರ್ ಆದ್ರೂ ಕಟ್ಟಡ ಕೆಡವಲು ಬಿಡಲ್ಲ ಅಂತ ರೇವಣ್ಣ ಹೇಳಿದ್ದರು. ಆದರೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಳೆ ಕಟ್ಟಡ ನೆಲಸಮ ಮಾಡಲಾಗಿದೆ. ವಿರೋಧದ ನಡುವೆಯೂ ಶಾಸಕ ಪ್ರೀತಂಗೌಡ ಕಟ್ಟಡ ತೆರವುಗೊಳಿಸಿದ್ದಾರೆ. ಹೀಗಾಗಿ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ.
ಮತ್ತೊಂದು ಅಸ್ತ್ರ ಪ್ರಯೋಗಿಸಿದ ಬಿಜೆಪಿ:
ಜೆಡಿಎಸ್ ವಿರುದ್ಧ ಬಿಜೆಪಿ ಮತ್ತೊಂದು ಅಸ್ತ್ರ ಪ್ರಯೋಗಿಸಿದೆ. ರೇವಣ್ಣ ಮಾಲೀಕತ್ವದ ಕಲ್ಯಾಣ ಮಂಟಪದಿಂದ ರಾಜಕಾಲುವೆ ಪ್ರದೇಶ ಬಂದ್ ಮಾಡಿರೋ ಆರೋಪ ಕೇಳಿಬಂದಿದೆ. ರಾಜಕಾಲುವೆಗೆ ಮೇಲ್ಚಾವಣಿ ಹಾಕಿ ಪಾರ್ಕಿಂಗ್‌ಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಓಡಾಡದಂತೆ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಬಿಜೆಪಿ ಶಾಸಕ ಪ್ರೀತಂಗೌಡ ದೂರು ನೀಡಿದ್ದಾರೆ. ಡಿಸಿಗೆ ದೂರು ನೀಡಲು ಸಲಹೆ ಶಾಸಕ ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ. ಮ್ಯೂಸಿಯಂ ಮಾಡೋದಾಗಿ ಟ್ರಸ್ಟ್ ಹೆಸರಿಗೆ ಜಾಗ ಪಡೆದ್ರು. ಆದ್ರೆ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ
Published On - 9:06 am, Sun, 1 May 22