AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದ ಎಸ್ಪಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದ ಬುಡಕಟ್ಟು ಜನಾಂಗದ ಬಾಲಕಿ

ದೇಶದೆಲ್ಲೆಡೆ 77 ನೇ ಸ್ಚಾತಂತ್ರೋತ್ಸವ ಸಂಭ್ರಮ ಮನೆ ಮಾಡಿದೆ. ಎಲ್ಲರ ಮನೆ ಮನದಲ್ಲಿ ತಿರಂಗ ಹಾರಾಡುತ್ತಿದೆ. ಸಂಭ್ರಮ ಸಡಗರದ ನಡುವೆ ಜನರು ಸ್ವಾತಂತ್ರ್ಯದ ಖುಷಿಯಲ್ಲಿದ್ದಾರೆ. ಇತ್ತ ಹಾಸನ ಜಿಲ್ಲೆಯ ಎಸ್ಪಿ ಹರಿರಾಮ್ ಶಂಕರ್ ತಮ್ಮ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆದಿವಾಸಿ ಬುಡಕಟ್ಟು ಬಾಲಕಿಯಿಂದ ಧ್ವಜಾರೋಹಣ ಮಾಡಿಸಿ ಹೊಸತನಕ್ಕೆ ನಾಂದಿ ಹಾಡಿದ್ದಾರೆ.

ಹಾಸನದ ಎಸ್ಪಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದ ಬುಡಕಟ್ಟು ಜನಾಂಗದ ಬಾಲಕಿ
ಧ್ವಜಾರೋಹಣ ನೆರವೇರಿಸಿದ ವಿದ್ಯಾರ್ಥಿನಿ
ಮಂಜುನಾಥ ಕೆಬಿ
| Updated By: ವಿವೇಕ ಬಿರಾದಾರ|

Updated on:Aug 15, 2023 | 12:43 PM

Share

ಹಾಸನ: ದೇಶದೆಲ್ಲೆಡೆ 77 ನೇ ಸ್ವಾತಂತ್ರ್ಯದ ಸಂಭ್ರಮ (Independence Day) ಮನೆ ಮಾಡಿದೆ. ಎಲ್ಲರ ಮನೆ ಮನದಲ್ಲಿ ತಿರಂಗ ಹಾರಾಡುತ್ತಿದೆ. ಸಂಭ್ರಮ ಸಡಗರದ ನಡುವೆ ಜನರು ಸ್ವಾತಂತ್ರ್ಯದ ಖುಷಿಯಲ್ಲಿದ್ದಾರೆ. ಇತ್ತ ಹಾಸನ (Hassan) ಜಿಲ್ಲೆಯ ಎಸ್ಪಿ ಹರಿರಾಮ್ ಶಂಕರ್ ತಮ್ಮ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆದಿವಾಸಿ ಬುಡಕಟ್ಟು ಬಾಲಕಿಯಿಂದ ಧ್ವಜಾರೋಹಣ ಮಾಡಿಸಿ ಹೊಸತನಕ್ಕೆ ನಾಂದಿ ಹಾಡಿದ್ದಾರೆ. ಹೌದು ಇಂದು (ಆ.15) ಬೆಳಿಗ್ಗೆ ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿಯ ವಿದ್ಯಾರ್ಥಿನಿ ಸಂಗೀತಾ ಎಸ್ಪಿ ಕಛೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಗಮನ ಸೆಳೆದರು.

ಗ್ರಾಮದ ಹರಿರಾ ಹಾಗೂ ಮಂಜುಳಾ ದಂಪತಿಯ ಮೂರನೇ ಮಗಳು ಸಂಗೀತಾ, 2022-23ನೇ ಸಾಲಿನಲ್ಲಿ ತಮ್ಮೂರಿನ ವಿದ್ಯಾರ್ಥಿಗಳಲ್ಲಿ ಅತ್ಯಧಿಕ ಅಂಕ ಗಳಿಸಿ ಎಸ್.ಎಸ್.ಎಲ್​ಸಿಯಲ್ಲಿ ಪಾಸಾಗಿದ್ದಾಳೆ. ಅಲೆಮಾರಿಗಳಾಗಿ, ಜೀವನ ಸಾಗಿಸುತ್ತಿರುವ ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗದ ಬಾಲಕಿ ಸಂಗೀತಾ ತಮ್ಮೂರಿನ ಸಮೀಪದ ಹಗರೆ ಸರ್ಕಾರಿ ಪ್ರೌಡ ಶಾಲೆಯಲ್ಲಿ ಪ್ರೌಡ ಶಿಕ್ಷಣ ಪಡೆದು ಇದೀಗ ಹಗರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಉಡುಪಿ, ಯಾದಗರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಕುಸಿದು ಬಿದ್ದ ವಿದ್ಯಾರ್ಥಿಗಳು

ಇಂತಹ ಬಾಲಕಿಯನ್ನ ಕರೆಸಿ ಧ್ವಜಾರೋಹಣ ಮಾಡಿಸೋ ಮೂಲಕ ಸಮಾಜದ ಕಟ್ಟ ಕಡೆಯ ಜನರಿಗು ಸ್ವಾತಂತ್ರ್ಯ ಸಂಭ್ರಮದ ಸಂದೇಶ ತಲುಪುವಂತೆ ಎಸ್ಪಿ ಹರಿರಾಮ್ ಶಂಕರ್ ಮಾಡಿದ್ದಾರೆ. ನೂರಾರು ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತ್ರಿವರ್ಣ ದ್ವಜ ಹಾರಿಸಿರುವ ಬಾಲಕಿಯ ಕುಟುಂಬ ಸದಸ್ಯರು ಖುಷಿಯಾಗಿದ್ದಾರೆ. ಎಸ್ಪಿಯವರ ಈ ಕಾರ್ಯ ತಮ್ಮೂರಿನ ಹಿರಿಮೆ ಹೆಚ್ಚಿಸಿದೆ ಎಂದು ಸಂಗಿತಾ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಎಸ್ಪಿ ಸರ್ ನಮ್ಮ ಹಳ್ಳಿಯ ಮಗಳನ್ನು ಕರೆಸಿ ಧ್ವಜಾರೋಹಣ ಮಾಡಿಸಿರೋದು ನಮಗೆ ಹೆಮ್ಮೆ ಎನಿಸಿದೆ. ಇಂತಹ ಸಂಭ್ರಮದ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿರುವುದು ಹಾಗೂ ನೂರಾರು ಪೊಲೀಸರ ಎದುರು ನಮ್ಮ ಹುಡುಗಿ ದ್ವಜ ಹಾರಿಸಿದ್ದು ಖುಷಿ ತಂದಿದೆ ಇದರಿಂದ ನಮ್ಮ ಬುಡಕಟ್ಟು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಪೂರ್ತಿ ನೀಡಿದೆ ಎಂದು ಹಾಸನ ಜಿಲ್ಲಾ ಹಕ್ಕಿ ಪಿಕ್ಕಿ ಮೂಲ ಬುಡಕಟ್ಟು ಅಭಿವೃದ್ಧಿ ಸೇವಾ ಸಮಿತಿ ಮುಖಂಡ ಸತ್ಯರಾಜ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:40 pm, Tue, 15 August 23