ಹಾಸನ: ಜೆಡಿಎಸ್ ಭದ್ರಕೋಟೆ, ದಳಪತಿಗಳ ಕರ್ಮಭೂಮಿ ಹಾಸನದಲ್ಲಿ ಈ ಬಾರಿ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ದೊಡ್ದ ಸದ್ದು ಮಾಡುತ್ತಿದೆ. ಅದರಲ್ಲೂ ಹಾಸನದ ಜಿಲ್ಲಾ ಕೇಂದ್ರದಿಂದ ಯಾರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲದ ನಡುವೆ, ತಿಂಗಳ ಹಿಂದೆ ನಾನೇ ಹಾಸನದಲ್ಲಿ ಸ್ಪರ್ಧಿಸೋದು ಎಂದು ಭವಾನಿ ರೇವಣ್ಣ ಘೋಷಣೆ ಮಾಡಿಕೊಂಡ ಬೆನ್ನಲ್ಲೇ ಶುರುವಾದ ಸಂಘರ್ಷ ಇನ್ನು ಮುಗಿದಿಲ್ಲ. ಒಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಭವಾಣಿ ರೇವಣ್ಣ ಈ ಚುಣಾವಣೆಯಲ್ಲಿ ಅನಿವಾರ್ಯ ಅಲ್ಲ ಎನ್ನುವ ಅಭಿಪ್ರಾಯಕ್ಕೆ ಅಂಟಿಕೊಂಡಿದ್ದು, ರೇವಣ್ಣ ಫ್ಯಾಮಿಲಿಯಲ್ಲಿ ತಳಮಳ ಶುರುಮಾಡಿತ್ತು. ಆದರೆ ಪಟ್ಟು ಬಿಡದ ರೇವಣ್ಣ ಹಾಸನದಿಂದ ಬಿಜೆಪಿ ಶಾಸಕ ಪ್ರೀತಂಗೌಡರ ಸವಾಲು ಸ್ವೀಕಾರ ಮಾಡಿ ನಾನೇ ಕಣಕ್ಕಿಳಿಯುತ್ತೇನೆ, ಹೊಳೆನರಸೀಪುರದ ತಮ್ಮ ತವರು ಕ್ಷೇತ್ರದಿಂದ ಭವಾನಿ ಅವರು ಸ್ಪರ್ಧೆ ಮಾಡಲು ಒಪ್ಪಿಗೆ ನೀಡಿ ಎಂದು ಪಟ್ಟು ಹಿಡಿದಿದ್ದರು.
ಆದರೆ ಕುಮಾರಸ್ವಾಮಿ ಭವಾನಿಗೆ ಟಿಕೆಟ್ ಕೊಟ್ಟರೆ, ಕುಟುಂಬ ರಾಜಕಾರಣ ಎಂಬ ಆರೋಪಕ್ಕೆ ಗುರಿಯಾಗಬೇಕಾಗುತ್ತೆ ಎನ್ನುವ ಕಾರಣದಿಂದ ಭವಾನಿಗೆ ಟಿಕೆಟ್ ಕೊಡಲು ಇನ್ನೂ ಒಪ್ಪಿಲ್ಲ ಎಂದೇ ಹೇಳಲಾಗುತ್ತಿದೆ. ಹಾಗಾಗಿಯೇ ಕುಮಾರಸ್ವಾಮಿ ಫೆಬ್ರವರಿ 12ಕ್ಕೆ ಹಾಸನಕ್ಕೆ ಭೇಟಿ ನೀಡಿದ್ದ ದಿನವೇ ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಬೀಳುತ್ತೆ ಎಂದು ಹೇಳಲಾಗಿದ್ದರೂ ಅದು ಇತ್ಯರ್ಥವಾಗಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲೇ ಎಲ್ಲರೂ ಕುಳಿತು ತೀರ್ಮಾನ ಮಾಡೋ ಕಾರಣದಿಂದ ಫೆಬ್ರವರಿ 18ರ ಶಿವರಾತ್ರಿ ದಿನ ನಿಗದಿ ಮಾಡಲಾಗಿತ್ತಾದರೂ ಈ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗಿಲ್ಲ. ಶತಾಯ ಗತಾಯ ಹಾಸನ ಅಥವಾ ಹೊಳೆನರಸೀಪುರದಿಂದ ಭವಾನಿ ರೇವಣ್ಣಗೆ ಟಿಕೆಟ್ ಕೊಡಿಸಲು ರೇವಣ್ಣ ಅಂಡ್ ಫ್ಯಾಮಿಲಿ ಪಟ್ಟು ಹಿಡಿದಿದ್ದು ಟಿಕೆಟ್ ಹಂಚಿಕೆ ವಿಚಾರ ಮತ್ತಷ್ಟು ಕಗ್ಗಂಟಾಗಿದೆ.
ಹಾಸನ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ಎಸ್ ಪ್ರಕಾಶ್ ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ ವಿರುದ್ದ ಸೋಲುಂಡಿದ್ದರು. ಸೋಲಿನ ಬಳಿಕ ಪ್ರಕಾಶ್ ಮೃತಪಟ್ಟ ಬಳಿಕ ಕುಮಾರಸ್ವಾಮಿ ಅವರನ್ನ ಕೊನೆಯಬಾರಿ ಭೇಟಿಯಾದಾಗ ನಿನ್ನ ಮಗನ ರಾಜಕೀಯ ಭವಿಷ್ಯ ನನಗೆ ಬಿಟ್ಟುಬಿಡು ಎಂದು ಮಾತು ಕೊಟ್ಟಿದ್ದರು. ಇದೇ ಮಾತಿಕೆ ಕಟ್ಟುಬಿದ್ದಿರೋ ಕುಮಾರಸ್ವಾಮಿ ನಾಲ್ಕು ತಿಂಗಳ ಹಿಂದೆ ಎಚ್.ಎಸ್ ಪ್ರಕಾಶ್ ಸ್ಮರಣೆ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಸ್ವರೂಪ್ ಹಾಸನದ ಜೆಡಿಎಸ್ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದ್ರು. ಆದ್ರೆ ಸ್ವರೂಪ್ ಬದಲು ತಾನೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಸ್ವಯಂ ಘೋಷಣೆ ಮಾಡಿಕೊಂಡಾಗ ಇಕ್ಕಟ್ಟಿಗೆ ಸಿಲುಕಿದ್ದ ಕುಮಾರಸ್ವಾಮಿ ಹಾಸನಕ್ಕೆ ನಮಗೆ ಸೂಕ್ತ ಅಭ್ಯರ್ಥಿ ಇದ್ದಾರೆ ಭವಾನಿಯವರು ಸದ್ಯಕ್ಕೆ ಅವಶ್ಯಕತೆ ಇಲ್ಲಾ ಎನ್ನೋ ಸಂದೇಶ ಕೊಟ್ಟಿದ್ದರು.
ಆದರೆ ಅಮ್ಮನ ಬೆನ್ನಿಗೆ ನಿಂತಿದ್ದ ವಿಧಾನಪರಿಷತ್ ಸದಸ್ಯ ಸೂರಜ್ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಟಿಕೆಟ್ ಯಾರಿಗೆ ಎಂದು ತೀರ್ಮಾನ ಮಾಡೋದು ಮಾಜಿ ಪ್ರಧಾನಿ ದೇವೇಗೌಡರು ಎನ್ನುವ ಮೂಲಕ ಚಿಕ್ಕಪ್ಪನಿಗೆ ಪರೋಕ್ಷವಾಗಿ ಸೆಡ್ಡು ಹೊಡೆದಿದ್ದರು. ಆದ್ರೆ ಪಟ್ಟು ಬಿಡದ ಕುಮಾರಸ್ವಾಮಿ ಪದೇ ಪದೇ ತಮ್ಮ ಅಭಿಪ್ರಾಯ ಹೇಳಿದಾಗ ಬೇರೆ ದಾರಿಯಿಲ್ಲದೆ ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ ಬೇಡ ಎಂದು ತೀರ್ಮಾನ ಮಾಡಿದ ರೇವಣ್ಣ ತಾವೇ ಹಾಸನದಿಂದ ಅಖಾಡಕ್ಕಿಳಿಯಲು ತೀರ್ಮಾನ ಮಾಡಿದ್ದರು. ಹೊಳೆನರಸೀಪುರದಿಂದ ಭವಾನಿಯವರಿಗೆ ಟಿಕೆಟ್ ನೀಡಿ ಎನ್ನುವ ಒತ್ತಡ ಹೇರೋಕೆ ಶುರುಮಾಡಿದ್ರು ಆದ್ರೆ ಇದಕ್ಕೂ ಕುಮಾರಸ್ವಾಮಿ ಓಕೆ ಮಾಡದಿದ್ದಾಗ ಶಿವರಾತ್ರಿ ದಿನ ದೇವೇಗೌಡರ ಮನೆಯಲ್ಲಿ ಸಭೆ ಸೇರೋದು ಅಲ್ಲಿ ಹಾಸನದ ಟಿಕೆಟ್ ಬಗ್ಗೆ ಯಾರಿಗೆ ಎನ್ನೋದರ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗಿತ್ತು, ಇದೀಗ ಜೆಡಿಎಸ್ ವರಿಷ್ಠ ದೇವೇಗೌಡರು ಏನು ಹೇಳ್ತಾರೆ, ಭವಾನಿಗೆ ಹಾಸನದಿಂದ ಗ್ರೀನ್ ಸಿಗ್ನಲ್ ಸಿಗುತ್ತಾ, ಇಲ್ಲಾ ಹೊಳೆನರಸೀಪುರದಿಂದ ಸ್ಪರ್ಧೆಗೆ ಅಸ್ತು ಅಂತಾರಾ ಎನ್ನುವ ಕುತೂಹಲ ಮನೆ ಮಾಡಿದೆ.
ಒಟ್ಟಿನಲ್ಲಿ ದಳಪತಿಗಳ ತವರು ಹಾಸನ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿ ಬದಲಾಗಿದ್ದು, ಜೆಡಿಎಸ್ ವಲಯದಲ್ಲಿ ಚರ್ಚೆ ಆಗುತ್ತಿರುವಂತೆ ನಾಳೆಯೇ ಹಾಸನದ ಕದನ ಕಲಿ ಯಾರು ಎನ್ನೋದಕ್ಕೆ ತೆರೆ ಬೀಳುತ್ತಾ, ಕುಮಾರಸ್ವಾಮಿ ಇಚ್ಚೆಯಂತೆ ಸ್ವರೂಪ್ ಕಣಕ್ಕಿಳಿಯುತ್ತಾರಾ, ಅಥವಾ ಪ್ರೀತಂಗೌಡ ಅವರ ಸವಾಲು ಸ್ವೀಕಾರ ಮಾಡಿ ರೇವಣ್ಣ ಸ್ಪರ್ಧೆ ಮಾಡ್ತಾರಾ. ಇಲ್ಲಾ ತಮ್ಮ ಇಚ್ಚೆಯಂತೆ ಪಟ್ಟು ಬಿಡದೇ ಭವಾನಿಯೇ ಹಾಸನದಿಂಧ ಸ್ಪರ್ಧೆ ಮಾಡ್ತಾರಾ ಈ ಎಲ್ಲಾ ಗೊಂದಲಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ತೆರೆ ಎಳೆಯುತ್ತಾರಾ ಕಾದು ನೋಡಬೇಕಿದೆ.
ವರದಿ: ಮಂಜುನಾಥ್ ಕೆ.ಬಿ ಟಿವಿ9ಹಾಸನ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ