
ಹಾಸನ, ಅಕ್ಟೋಬರ್ 28: ಆಪರೇಷನ್ ಕಮಲದ ಬಗ್ಗೆ ಯಾರೇ ಮಾತಾಡಲಿ ಅವರು ಹುಚ್ಚರು. ಈ ಜನ್ಮದಲ್ಲಿ ಆಪರೇಷನ್ ಕಮಲ ಸಾಧ್ಯವಿಲ್ಲ ಎಂದು ಶಾಸಕ ಶಿವಲಿಂಗೇಗೌಡ (Shivalingegowda) ಹೇಳಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಮಾತನಾಡಿದ ಅವರು, ಕೆಲವರು ಚುನಾವಣೆಯಲ್ಲಿ ಸೋತಿದ್ದಾರೆ ಅವರಿಗೆ ಯಾವುದೇ ಕೆಲಸವಿಲ್ಲ. ಸೋತವರು ಪ್ರಚಾರಕ್ಕಾಗಿ ಏನೇನೋ ಮಾತಾಡುತ್ತಾರೆ. ಇದೇನಾದ್ರೂ ನಿಜವಾದರೆ ಪ್ರಜಾಪ್ರಭುತ್ವ ಅನ್ನೋದಕ್ಕೆ ಅರ್ಥವಿರುವುದಿಲ್ಲ ಎಂದಿದ್ದಾರೆ.
50 ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದರೆ ಜನ ಹೊಡೆಯುತ್ತಾರೆ. ಆಪರೇಷನ್ ಕಮಲಕ್ಕೆ ಒಳಗಾದವರಿಗೆ ಯಾವುದರಲ್ಲಿ ಹೊಡಿತಾರೋ ಗೊತ್ತಿಲ್ಲ. ಸಚಿವಸ್ಥಾನ, 50 ಕೋಟಿ ರೂ. ದುಡ್ಡು ಕೊಡ್ತೀನಿ ಅಂತಾ ಆಫರ್ ಮಾಡಬಹುದು. ಆದರೆ ಈ ಜನ್ಮದಲ್ಲಿ ಆಪರೇಷನ್ ಕಮಲ ನಡೆಯುವುದಿಲ್ಲ ಬಿಡಿ ಎಂದು ವಾಗ್ದಾಳಿ ಮಾಡಿದ್ದಾರೆ.
ಶಾಸಕ ಶಿವಲಿಂಗೇಗೌಡಗೆ ನಿಗಮ ಮಂಡಳಿ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರ ನಿರ್ಧಾರಕ್ಕೆ ನಾವು ಬದ್ಧರಾಗಿ ಇರಬೇಕಾಗುತ್ತದೆ. ಸಚಿವಸ್ಥಾನ ಸಿಗುವವರೆಗೆ ಅವರನ್ನ ನೇಮಕ ಮಾಡಲು ತೀರ್ಮಾನ ಮಾಡಲಾಗಿದೆ. ಬಹುಶಃ ಈ ವಾರದ ಒಳಗೆ ನೇಮಕಾತಿ ಪ್ರಕ್ರಿಯೆ ಮುಗಿಯಬಹುದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಭರವಸೆ ಕೊಟ್ಟಿದ್ದಾರೆ. ಹಾಗಾಗಿ ನನಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದರು.
ಎರಡೂವರೆ ವರ್ಷದ ನಂತರ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಎರಡೂವರೆ ಮಾಡಿದರೋ, 5 ವರ್ಷ ಮಾಡಿದರೋ ನಮಗೆ ಗೊತ್ತಿಲ್ಲ. ಎರಡೂವರೆ ವರ್ಷ ಆಗುವವರೆಗೂ ಮೌನವಾಗಿ ಕಾಯಬೇಕಲ್ವಾ ಎಂದಿದ್ದಾರೆ. ಈ ಬಗ್ಗೆ ಹೈಕಮಾಂಡ್, ಸಂಬಂಧಪಟ್ಟವರು ರಿಯಾಕ್ಟ್ ಮಾಡಬೇಕು. ಹೈಕಮಾಂಡ್‌ಗಿಂತ ಯಾರು ದೊಡ್ಡವರಿದ್ದಾರೆ, ಈಗಲೇ ಏಕೆ ಇದೆಲ್ಲಾ ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ: ಡಿಕೆ ಶಿವಕುಮಾರ್ ತೆಲಂಗಾಣ ಪ್ರವಾಸಕ್ಕೆ ಬಿಜೆಪಿ ವ್ಯಂಗ್ಯ
ಒಬ್ಬರು ಸಿದ್ದರಾಮಯ್ಯ ಮುಂದುವರಿಯುತ್ತಾರೆ ಅಂತಾರೆ, ಒಬ್ಬರು ಇಲ್ಲ ಅಂತಾರೆ. ಶಾಸಕರಿಗೆ ಹೈಕಮಾಂಡ್‌ನಲ್ಲಿ ಆಗಿರುವ ಒಪ್ಪಂದ ಗೊತ್ತಿಲ್ಲದೆ ಹೇಳಿರಬಹುದು. ಇವರಿಗೆ ಗೊತ್ತಿಲ್ಲದೆ ಮೇಲೆ ಸುಮ್ಮನಿರಬೇಕು. ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತೋ ಅದೇ ಅಂತಿಮ. ಶಾಸಕರು ಮಾತಾಡಬೇಡಿ ಎಂದು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ರು. ಆದರೂ ಮಾತನಾಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಹೆಚ್ಡಿ ದೇವೇಗೌಡ ಇಲ್ಲದಿದ್ರೆ ಶಿವಲಿಂಗೇಗೌಡ ಶಾಸಕರಾಗುತ್ತಿರಲಿಲ್ಲವೆಂದು ಸಂಸದ ಪ್ರಜ್ವಲ್ ಹೇಳಿಕೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿರುಗೇಟು ನೀಡಿದ್ದು, ಹೆಚ್‌ಡಿಡಿ ಋಣದಲ್ಲಿ ಇದ್ದೀನಿ, ಹಾಗಂತ ಮಾತ್ರಕ್ಕೆ ಋಣಿಯಾಗಿರಬೇಕಾ. ಅವರ ಮನೆ ಮಕ್ಕಳಿಗೆಲ್ಲಾ ಋಣಿಯಾಗಿರಬೇಕು ಅಂತಾ ಏನಿಲ್ವಲ್ಲಾ. ದೇವೇಗೌಡರ ಬಗ್ಗೆ ನಾನು ಯಾವುದೇ ಹಗುರವಾದ ಮಾತುಗಳನ್ನು ಆಡಲ್ಲ. ಹೆಚ್ಡಿ ದೇವೇಗೌಡ ಋಣ ನಮ್ಮ ಮೇಲಿದೆಯೋ, ನನ್ನ ಋಣ ಬೇರೆಯವರ ಮೇಲಿದೆಯೋ ಗತಕಾಲದ್ದನ್ನು ನೆನಪು ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಕನಕಪುರ ಬೆಂಗಳೂರಿಗೆ ಸೇರಿಸುವ ವಿಚಾರ: ನನ್ನ ಜೊತೆ ಯಾರೂ ಚರ್ಚಿಸಿಲ್ಲ ಎಂದ ಸಿಎಂ ಸಿದ್ದರಾಮಯ್ಯ
1991ರಲ್ಲಿ HDDಗೆ ಅರಸೀಕೆರೆಯಲ್ಲಿ ಕೇವಲ 13 ಸಾವಿರ ಮತ ಬರುತ್ತಿತ್ತು. ನಂತರ 3 ಲೋಕಸಭೆ ಚುನಾವಣೆಯಲ್ಲಿ 70, 80, 90ಸಾವಿರ ಮತ ಕೊಡ್ಸಿದ್ದೀವಿ. ಇವರದ್ದಾ ವೋಟ್, ಸಂಸದ ಪ್ರಜ್ವಲ್ ರೇವಣ್ಣ ಬಂದಿದ್ರಾ ವೋಟ್ ಕೊಡಿಸಲು. 90ಸಾವಿರ ಮತ ಕೊಡಿಸಿದ್ದೇನೆ, ಪ್ರಜ್ವಲ್ 1 ದಿನ ಬಂದು ಪ್ರಚಾರ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ.
ನಾನು ಹೆಚ್.ಡಿ.ದೇವೇಗೌಡರ ಋಣದ ಬಗ್ಗೆ ಮಾತನಾಡಲ್ಲ. ಟಿಕೆಟ್ ಕೊಟ್ಟು ಆಶೀರ್ವದಿಸಿದ್ರು, ಸಮಯ, ಸಂದರ್ಭ ಬೇರೆ ಪಕ್ಷಕ್ಕೆ ಬಂದಿದ್ದೀನಿ. ಜೆಡಿಎಸ್‌ನವ್ರು ಯಾವುದೇ ಕಾರಣಕ್ಕೂ ಬಿಜೆಪಿಯವರ ಜೊತೆ ಹೋಗಲ್ಲ ಅಂದಿದ್ರು. ನನ್ನ ಹೆಣನೂ BJPಗೆ ಹೋಗಲ್ಲ ಅಂದಿದ್ರು, ಹೇಗೆ ಹೊಂದಾಣಿಕೆ ಮಾಡಿಕೊಂಡರು. ಪ್ರಜ್ವಲ್ ರೇವಣ್ಣ ನಮ್ಮ ಬಗ್ಗೆ ಏಕೆ ಟೀಕೆ ಮಾಡಬೇಕು, ಋಣ ಯಾರ ಮೇಲಿದೆ. 36 ಗ್ರಾಮ ಪಂಚಾಯಿತಿ ಇಲ್ಲಿರೋದು, 36 ಪಂಚಾಯಿತಿ ನನ್ನ ನಿಯಂತ್ರಣದಲ್ಲಿದೆ. ನನ್ನ ಕ್ಷೇತ್ರ ಏನು ಅಂತಾ ನನಗೆ ಗೊತ್ತು, ಪಟ್ಟಿ ಬಿಡುಗಡೆ ಮಾಡಬೇಕಾ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.