28 ವರ್ಷಗಳ ದಾಂಪತ್ಯ ಅಂತ್ಯ: ಆಸ್ತಿಗಾಗಿ ಗಂಡನ ಕೊಂದು ನಾಟಕ ಮಾಡಿದ್ದವಳು, ಈಗ ಅಂದರ್ ಆಗಿದ್ದಾಳೆ!
ನಾಲ್ಕು ವರ್ಷಗಳ ಹಿಂದೆ ಮಮತಾ ಎಂಬಾಕೆಯನ್ನ ಎರಡನೆ ಮದುವೆಯಾಗಿದ್ದ ರವೀಶ್ ಹೊಸ ಜೀವನ ಶುರು ಮಾಡಿದ್ದ. ಗಂಡ ಎರಡನೆ ಮದುವೆ ಆಗಿರೋ ವಿಚಾರ ಗೊತ್ತಾಗುತ್ತಲೆ ಸಿಟ್ಟಾಗಿದ್ದ ಶಿವಗಂಗಮ್ಮ ಆಸ್ತಿಯಲ್ಲಿ ಪಾಲು ಕೇಳಲು ಮುಂದಾಗಿದ್ದಳು.
ಆಕೆ ಮದುವೆಯಾಗಿ 28 ವರ್ಷಗಳಾದರೂ 20 ವರ್ಷಗಳಿಂದ ಗಂಡನಿಂದ ದೂರವಾಗಿದ್ಲು. ಗಂಡ ಬೇಡವೆಂದುಕೊಂಡಿದ್ದವಳು ಗಂಡನಿಗಿದ್ದ ಆಸ್ತಿಯಲ್ಲಿ ಪಾಲು ಬೇಕೆಂದು ಹಲವು ವರ್ಷಗಳಿಂದ ಗಂಡನ ಬೆನ್ನುಬಿದ್ದಿದ್ದಳು. ಇದ್ದ ಆಸ್ತಿ ಕೊಡಲು ಗಂಡ ಒಪ್ಪದಿದ್ದಾಗ ಅವನನ್ನೇ ಮುಗಿಸೋ ಪ್ಲಾನ್ ಮಾಡಿದ್ದ ಕತರ್ನಾಕ್ ಪತ್ನಿ ಜಮೀನಿನ ಬಳಿಯೇ ತನ್ನ ಸಂಬಂಧಿ ಜೊತೆ ಸೇರಿ ಗಂಡನನ್ನ ಬಡಿದು ಕೊಂದಿದ್ದಾಳೆ. ಕೊನೆಗೆ, ದನಗಳು ತುಳಿದು ಸಾಯಿಸಿವೆ ಎಂದು ಕತೆ ಕಟ್ಟಿ ಪ್ರಕರಣವನ್ನೇ ಮುಚ್ಚಿ ಹಾಕೋ ತಂತ್ರ ಹೆಣೆದಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಪಾತಕ ಪತ್ನಿಯ ಪಾಪದ ಕೃತ್ಯ ಗೊತ್ತಾಗಿ ಹೋಗಿತ್ತು. ಗಂಡನ ಕೊಂದು ನಾಟಕ ಮಾಡಿದ್ದವಳು ಈಗ ಅಂದರ್ ಆಗಿದ್ದಾಳೆ.
ಮೂರೂವರೆ ಎಕರೆ ಆಸ್ತಿಗಾಗಿ ಗಂಡನ ಹತ್ಯೆ (murder)… ಗಂಡ ಮತ್ತು ಮಗ ಬೇಡವೆಂದು ದೂರವಾದವಳಿಗಿದ್ದ ಆಸ್ತಿ ವ್ಯಾಮೋಹದಿಂದ ಬಲಿಯಾಯ್ತು ಜೀವ.. ತಾನೇ ಪತಿಯ (husband) ಕೊಂದು ದನ ತುಳಿದು ಸಾವು ಎಂದು ನಾಟಕ ಆಡಿದ್ದವಳ ಮುಖವಾಡ ಕಳಚಿದ ಪೊಲೀಸರ ತನಿಖೆ.. ಹೌದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಯಡವನಹಳ್ಳಿ ಗ್ರಾಮದಲ್ಲಿ (yedavanahalli in arsikere) ನವೆಂಬರ್ 29ರಂದು ನಡೆದಿದ್ದ ರೈತ ರವೀಶ್(55) ಅನುಮಾನಾಸ್ಪದ ಸಾವು ಪ್ರಕರಣವನ್ನ ಬೇಧಿಸಿರೋ ಪೊಲೀಸರು ಪತ್ನಿಗೇ (Wife) ತನ್ನ ಸಂಬಂಧಿ ಜೊತೆ ಸೇರಿ ಗಂಡನನ್ನ ಕೊಂದು ಹಸುಗಳು ತುಳಿದು ಸಾಯಿಸಿವೆ ಎಂದು ಕಟ್ಟಿದ್ದ ಕತೆಯ ಅಸಲಿಯನ್ನ ಬಯಲು ಮಾಡಿದ್ದಾರೆ.
28 ವರ್ಷಗಳ ಹಿಂದೆ ಯಡವನಹಳ್ಳೀ ಗ್ರಾಮದ ರವೀಶ್ ಜೊತೆಗೆ ಮದುವೆಯಾಗಿದ್ದ ಮೂಲತಃ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಶಿವಗಂಗಮ್ಮ ಮದುವೆಯಾದ ಎಂಟೇ ವರ್ಷಕ್ಕೆ ಗಂಡನಿಂದ ದೂರವಾಗಿದ್ದಳು. ಗಂಡನ ಜೊತೆಗಿದ್ದಾಗ ಬಗರ್ ಹುಕಂ ಯೋಜನೆಯಡಿ ಈಕೆಯ ಹೆಸರಿಗೆ 3 ಎಕರೆ 20 ಗುಂಟೆ ಜಮೀನು ಮಂಜೂರಾಗಿತ್ತು. ಇದೇ ಜಮೀನಿಗಾಗಿ ಎರಡು ದಶಕಗಳ ಬಳಿಕ ಬೆನ್ನುಬಿದ್ದಿದ್ದ ಶಿವಗಂಗಮ್ಮ ಆಸ್ತಿ ಬೇಕು ಆಸ್ತಿ ಬೇಕು ಎಂದು ಗಂಡನಿಗೆ ಕಾಟ ಕೊಡೋಕೆ ಶುರುಮಾಡಿದ್ದಳು.
ರವೀಶ್ ಇದಕ್ಕೆ ಒಪ್ಪದಿದ್ದಾಗ ಅವನನ್ನೇ ಮುಗಿಸೋ ಪ್ಲಾನ್ ಮಾಡಿ ನವೆಂಬರ್ 29ರ ಮಂಗಳವಾರ ತನ್ನ ಅಣ್ಣನ ಮಗ ಗುರುಪ್ರಸಾದ್ ಜೊತೆಗೆ ಜಮೀನಿನ ಬಳಿ ಬಂದಿದ್ದಾಳೆ. ಅಲ್ಲೇ ಇದ್ದ ಗಂಡನ ಜೊತೆಗೆ ವಾಗ್ವಾದ ಶುರುಮಾಡಿದ್ದಾಳೆ. ಆಸ್ತಿ ಕೊಡದ ನಿನ್ನನ್ನ ಉಳಿಸೋದಿಲ್ಲ ಎಂದು ಗುರುಪ್ರಸಾದ್ ಜೊತೆ ಸೇರಿ ಕಲ್ಲು ದೊಣ್ಣೆಯಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ನಂತರ ಸಂಬಂಧಿ ಹಾಗು ರೈತ ಮುಖಂಡನೆಂದು ಹೇಳಿಕೊಂಡು ಓಡಾಡುತ್ತಿದ್ದ ದಯಾನಂದ್ ಸಹಾಯ ಪಡೆದು ಜಮೀನಿನ ಬಳಿ ರವೀಶ್ ಜಾನುವಾರು ಮೇಯಿಸುತ್ತಿದ್ದಾಗ ಹಸುಗಳು ಮೈ ಮೇಲೆ ಬಿದ್ದಿವೆ, ಹಗ್ಗ ಸುತ್ತಿಕೊಂಡು ಎಳೆದಾಡಿದ್ದರಿಂದ ಪ್ರಾಣ ಹೋಗಿದೆ ಎಂದು ಆಸ್ಪತ್ರೆಯಲ್ಲಿ ಮೃತದೇಹ ಇಟ್ಟು ನೋಟ್ ಬರೆಸಿದ್ದಾರೆ. ಹೀಗೆ ಕೇಸ್ ದಾಖಲಾದ್ರೆ ಯಾರಿಗೂ ಗೊತ್ತಾಗಲ್ಲ ಎಂದು ಪ್ಲಾನ್ ಮಾಡಿದ್ದವರ ಮೇಲೆ ಊರ ಜನರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ನಡೆದ ಹತ್ಯೆಯ ವಿಚಾರ ಬಯಲಾಗಿತ್ತು.
28 ವರ್ಷಗಳ ಹಿಂದೆ ಶಿವಗಂಗಮ್ಮಳನ್ನ ಮದುವೆಯಾಗಿದ್ದ ರವೀಶ್ ತನಗಿದ್ದ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ. ಆದ್ರೆ ಗಂಡನ ಜೊತೆ ಕೂಡಿಬಾಳದ ಶಿವಗಂಗಮ್ಮ ತನಗಿದ್ದ ಎರಡು ವರ್ಷದ ಮಗನ ಜೊತೆಗೆ ತವರು ಮನೆ ಸೇರಿಕೊಂಡಿದ್ದಳು. ಬಳಿಕ ಈಕೆಯ ದುರ್ಬುದ್ದಿಅರಿತ ಮಗ ಕೂಡ ಆಕೆಯ ಸಹವಾಸಬಿಟ್ಟು ಅಪ್ಪನ ಜೊತೆ ಸೇರಿಕೊಂಡಿದ್ದ.
ಈ ನಡುವೆ ನಾಲ್ಕು ವರ್ಷಗಳ ಹಿಂದೆ ಮಮತಾ ಎಂಬಾಕೆಯನ್ನ ಎರಡನೆ ಮದುವೆಯಾಗಿದ್ದ ರವೀಶ್ ಹೊಸ ಜೀವನ ಶುರು ಮಾಡಿದ್ದ. ಗಂಡ ಎರಡನೆ ಮದುವೆ ಆಗಿರೋ ವಿಚಾರ ಗೊತ್ತಾಗುತ್ತಲೆ ಸಿಟ್ಟಾಗಿದ್ದ ಶಿವಗಂಗಮ್ಮ ಆಸ್ತಿಯಲ್ಲಿ ಪಾಲು ಕೇಳಲು ಮುಂದಾಗಿದ್ದಳು. ಹೇಳಿ ಕೇಳಿ 20 ವರ್ಷಗಳ ಹಿಂದೆ ಗಂಡನ ಜೊತೆಗಿದ್ದಾಗ ಆಸ್ತಿ ಆಕೆಯ ಹೆಸರಿಗೇ ಮಂಜೂರಾಗಿತ್ತು.
ಹಾಗಾಗಿ ತನ್ನ ಹೆಸರಿನಲ್ಲಿರೋ 3 ಎಕರೆ 20 ಗುಂಟೆ ಜಮೀನನ್ನು ತನಗೇ ಬಿಟ್ಟುಕೊಡು ಎಂದು ಆಕೆ ಪಟ್ಟು ಹಿಡಿದಿದ್ದಳು. ಆದ್ರೆ ರವೀಶ್ ಇದಕ್ಕೆ ಒಪ್ಪಿರಲಿಲ್ಲ. ಇದ್ದಿದ್ದರಲ್ಲಿ ಅರ್ಧ ನಿನಗೆ, ಇನ್ನರ್ಧ ನನಗೆ ಎಂದು ಅರ್ಧ ಆಸ್ತಿ ಬಿಟ್ಟುಕೊಟ್ಟು ಉಳಿದ ಅರ್ಧದಲ್ಲಿ ತಾನು ರಾಗಿ ಬೆಳೆದುಕೊಂಡಿದ್ದ. ಆದ್ರೆ ಪೂರ್ತಿ ಆಸ್ತಿ ತನಗೇ ಸೇರಬೇಕು ಎಂದು ಹಠಕ್ಕೆ ಬಿದ್ದಿದ್ದ ಶಿವಗಂಗಮ್ಮ ನವೆಂಬರ್ 29ರಂದು ಕೂಡ ಜಮೀನಿನ ಬಳಿ ಬಂದು ಗಲಾಟೆ ಮಾಡಿದ್ದಾಳೆ.
ಗಂಡನನ್ನ ಒಪ್ಪಿಸೋ ಯತ್ನ ಮಾಡಿದ್ದಾಳೆ. ಆದ್ರೆ ಇದಕ್ಕೆ ರವೀಶ್ ಒಪ್ಪದಿದ್ದಾಗ ಆತನನ್ನೇ ಮುಗಿಸಿ ಹಸು ತುಳಿತ, ಗಾಯದಿಂದಾದ ಸಾವು ಅಂತೆಲ್ಲಾ ಕತೆ ಕಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿದ್ದ ಗಂಡಸಿ ಪೊಲೀಸರು ತನಿಖೆಗಿಳಿದಾಗ ನಡೆದ ಹತ್ಯೆಯ ಹಿಂದಿನ ಅಸಲಿಯತ್ತು ಬಯಲಾಗಿದ್ದು ಕೊಲೆ ಮಾಡಿದ ಶಿವಗಂಗಮ್ಮ ಇದೀಗ ಅರೆಸ್ಟ್ ಆಗಿದ್ದು, ಮತ್ತೋರ್ವ ಕೊಲೆ ಆರೋಪಿ ಗುರುಪ್ರಸಾದ್ ಹಾಗೂ ಹಸು ತುಳಿದು ಸಾವು ಎಂದು ಹೇಳಲು ಪ್ಲಾನ್ ಕೊಟ್ಟಿದ್ದ ಸಂಬಂದಿ ದಯಾನಂದ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರೆ, ನಮ್ಮಪ್ಪನ ತಪ್ಪು ಏನೂ ಇಲ್ಲಾ ಆಸ್ತಿಗಾಗಿ ಅಮ್ಮನೇ ಎಲ್ಲವನ್ನು ಮಾಡಿದ್ದಾಳೆ, ಅವಳಿಗೆ ಶಿಕ್ಷೆಯಾಗಲಿ ಎಂದು ಮಗನೇ ಒತ್ತಾಯ ಮಾಡುತ್ತಿದ್ದಾರೆ.
ಒಟ್ನಲ್ಲಿ ಇದ್ದ ಆಸ್ತಿಯನ್ನ ಹಂಚಿ ಜೀವನ ಮಾಡೋದು ಬಿಟ್ಟು ಇರೋದೆಲ್ಳಾ ತನಗೇ ಬೇಕು ಎಂದು ಹಠಕ್ಕೆ ಬಿದ್ದು ಪಾತಕ ಪತ್ನಿ ಮಾಡಿದ ಕ್ರೌರ್ಯದಿಂದ ಪತಿ ಕೊಲೆಯಾಗಿದ್ದು ಆಸ್ತಿ ಆಸ್ತಿ ಎಂದು ಆಸೆಪಟ್ಟ ಮಡದಿ ಜೈಲುಪಾಲಾಗಿದ್ದಾಳೆ. (ವರದಿ: ಕೆಬಿ ಮಂಜುನಾಥ್, ಟಿವಿ 9, ಹಾಸನ)