ಸಕಲೇಶಪುರದ ವಿವಿಧೆಡೆ ಕಾಡಾನೆ ದಾಳಿ: 25 ಅಡಿ ಆಳದ ಗುಂಡಿ ತೆಗೆದು ಆನೆ ಬೀಳಿಸ್ತೇವೆ ಎಂದು ಎಚ್ಚರಿಸಿದ ಜನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 01, 2022 | 3:26 PM

ನಾವು ಆನೆಗಳನ್ನು ಕೊಲ್ಲುವುದಿಲ್ಲ. ಅವು ಗುಂಡಿಗೆ ಬಿದ್ದಾಗ ಫೋನ್ ಮಾಡುತ್ತೇವೆ. ಬಂದು ತೆಗೆದುಕೊಂಡು ಹೋಗಿ ಎಂದು ನೇರ ಎಚ್ಚರಿಕೆ ನೀಡಿದರು.

ಸಕಲೇಶಪುರದ ವಿವಿಧೆಡೆ ಕಾಡಾನೆ ದಾಳಿ: 25 ಅಡಿ ಆಳದ ಗುಂಡಿ ತೆಗೆದು ಆನೆ ಬೀಳಿಸ್ತೇವೆ ಎಂದು ಎಚ್ಚರಿಸಿದ ಜನ
ಆನೆ (ಪ್ರಾತಿನಿಧಿಕ ಚಿತ್ರ)
Follow us on

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಂಧಲೆ (Wild Elephants) ಹೆಚ್ಚಾಗಿದೆ. ಆನೆಗಳಿಂದ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು (Crop Loss), ಜನರು ಸಿಟ್ಟಿಗೆದ್ದಿದ್ದಾರೆ. ಬೆಳೆಹಾನಿ ಪರಿಶೀಲಿಸಲೆಂದು ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜನರು ಆಕ್ರೋಶ ಹೊರಹಾಕಿದ್ದಾರೆ. ಸಕಲೇಶಪುರ ತಾಲೂಕಿನ ಕಟ್ಟಳ್ಳಿ ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿದ್ದರು. ಈ ವೇಳೆ ಸಿಟ್ಟು ತೋಡಿಕೊಂಡ ಗ್ರಾಮಸ್ಥರು, ‘ಸರ್ಕಾರಕ್ಕೆ ಕಾಡಾನೆ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ನಿಮಗೂ ನಿರ್ದೇಶನ ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಡಾನೆಯನ್ನು ಸ್ಥಳಾಂತರ ಮಾಡಲು ಸರ್ಕಾರವು ನಿರ್ದೇಶನ ನೀಡಿದರೆ ಅಧಿಕಾರಿಗಳು ಒಂದೇ ದಿನದಲ್ಲಿ ಹಿಡಿಯುತ್ತಾರೆ. ಆದರೆ ಈ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಇನ್ನು 8 ದಿನ ಕಳೆದರೆ ನಮ್ಮ ಬೆಳೆ ಸಂಪೂರ್ಣ ನಾಶವಾಗುತ್ತದೆ. ನಮ್ಮ ಹಿಡುವಳಿ ಜಾಗದಲ್ಲಿ 20*20 ಅಳತೆಯಲ್ಲಿ 25 ಅಡಿ ಆಳದ ಗುಂಡಿ ತೆಗೆಯುತ್ತೇವೆ. ಆ ಗುಂಡಿಗೆ ಆನೆ ಬಿದ್ದಾಗ ಬಂದು ಆ ಆನೆಯನ್ನು ನೀವು ಬಂದು ಎತ್ತಿಕೊಂಡು ಹೋಗಿ ಆಕ್ರೋಶ ವ್ಯಕ್ತಪಡಿಸಿದರು.

ನಾವೇನೂ ಅರಣ್ಯ ಇಲಾಖೆಗೆ ಸೇರಿದ ಅಥವಾ ಮೀಸಲು ಅರಣ್ಯದ ಭೂಮಿಯಲ್ಲಿ ಗುಂಡಿ ತೆಗೆಯುವುದಿಲ್ಲ. ನಮ್ಮ ಜಾಗದಲ್ಲಿ ಮಾತ್ರ ನಾವು ಗುಂಡಿ ತೆಗೆಯುತ್ತೇವೆ. ಇಂಥ ಗುಂಡಿಗಳಿಗೆ ಆನೆಗಳು ಬಿದ್ದು ಅವುಗಳ ಆಕ್ರಂದನ ಕೇಳಿಸುವವರೆಗೂ ಸರ್ಕಾರ ಎಚ್ಚೆತ್ತುಕೊಳ್ಳುವುದಿಲ್ಲ ಎನಿಸುತ್ತದೆ ಎಂದು ಬೇಸರ ತೋಡಿಕೊಂಡರು.

ಹಿಂದೆ ಬೆಂಗಳೂರು, ಮಂಗಳೂರು ಅಥವಾ ಮೈಸೂರಿಗೆ ಹೋದರೆ ಅಪ್ಪನೋ ಅಮ್ಮನೋ ಹೆಂಡಿತಿಯೋ ಆಗಾ ಫೋನ್ ಮಾಡಿ ವಿಚಾರಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಾವು ಬೆಳಿಗ್ಗೆ ಎದ್ದು ತೋಟಕ್ಕೆ ಹೋದರೆ ಹತ್ತು ನಿಮಿಷಕ್ಕೊಮ್ಮೆ ಮನೆಗಳಿಂದ ಫೋನ್ ಬರುವಂತಾಗಿದೆ. ನಾವು ಫೋನ್ ತೆಗೆಯದಿದ್ದರೆ ಹುಡುಕಿಕೊಂಡು ಬರುತ್ತಾರೆ. ಇಲ್ಲಿನ ಪರಿಸ್ಥಿತಿ ಅಷ್ಟು ಹದಗೆಟ್ಟಿದೆ ಎಂದು ವಿವರಿಸಿದರು.

ಮಕ್ಕಳು ಸಾಕಿದ ಹಾಗೆ ಕಾಫಿ ಗಿಡಗಳನ್ನು ಸಾಕಿದ್ದೇವೆ. ನಮ್ಮ ಕಷ್ಟವನ್ನ ಯಾರು ಕೇಳುತ್ತಾರೆ. ನಿಮ್ಮ ಬಳಿ ಕಿರುಚಾಡಿ ನಮ್ಮ ಗಂಟಲು ಸತ್ತು ಹೋಗಿದೆ. ಶನಿವಾರದವರೆಗೂ ಸರ್ಕಾರಕ್ಕೆ ಗಡುವು ಕೊಡುತ್ತೇವೆ. ಇಲ್ಲದಿದ್ದರೆ ಸೋಮವಾರ ಅಥವಾ ಮಂಗಳವಾರ ಆನೆಗಳು ಗುಂಡಿಯಲ್ಲಿ ಇರುತ್ತವೆ. ನಾವು ಆನೆಗಳನ್ನು ಕೊಲ್ಲುವುದಿಲ್ಲ. ಅವು ಗುಂಡಿಗೆ ಬಿದ್ದಾಗ ಫೋನ್ ಮಾಡುತ್ತೇವೆ. ಬಂದು ತೆಗೆದುಕೊಂಡು ಹೋಗಿ ಎಂದು ನೇರ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಆನೆಗಳೇ ಹೆಚ್ಚಿರುವ ಚಾಮರಾಜನಗರಕ್ಕಿಲ್ಲ ಟಾಸ್ಕ್​ಪೋರ್ಸ್

ಮರಗಳ್ಳರ ಮೇಲೆ ಗುಂಡು ಹಾರಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಮಂಡ್ಯ: ಗಂಧದ ಮರ ಕಳ್ಳರ ಮೇಲೆ ಅರಣ್ಯಾಧಿಕಾರಿಗಳು ಗುಂಡು ಹಾರಿಸಿದ ಘಟನೆ ನಾಗಮಂಗಲ ತಾಲ್ಲೂಕಿನ ಎಚ್​​.ಎನ್​.ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಅರಣ್ಯಾಧಿಕಾರಿಗಳ ಮೇಲೆ ಕಳ್ಳರು ಹಲ್ಲೆಗೆ ಯತ್ನಿಸಿದರು. ಫಾರೆಸ್ಟ್ ಗಾರ್ಡ್ ಮೇಲೆ ಮಚ್ಚು ಬೀಸಿದರು. ಈ ವೇಳೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಮೂವರು ಆರೋಪಿಗಳ ಸೆರೆ ಹಿಡಿಯಲಾಯಿತು. ಗೋವಿಂದಪ್ಪ, ಶಂಕರ, ಕುಮಾರ್ ಬಂಧಿತರು. ಆರೋಪಿಗಳು ಬೇಲೂರು ತಾಲ್ಲೂಕಿನ ಗೆಂಡಹಳ್ಳಿ ನಿವಾಸಿಗಳು. ಪದೇಪದೆ ಮೀಸಲು ಪ್ರದೇಶದಲ್ಲಿ ಗಂಧದ ಮರ ಕಳ್ಳತನ ಮಾಡುತ್ತಿದ್ದರು. ಗಾಯಗೊಂಡಿರುವ ಆರೋಪಿ ಗೋವಿಂದಪ್ಪ, ಫಾರೆಸ್ಟ್ ಗಾರ್ಡ್ ಸಾಕಯ್ಯಗೆ ಚಿಕಿತ್ಸೆ ಕೊಡಲಾಗುತ್ತಿದೆ.

ಹಾಸನದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Thu, 1 December 22