ಮರುಕಳಿಸಿದ ವೈಭವ! ದಕ್ಷಿಣ ಕಾಶಿ ರಾಮನಾಥಪುರದಲ್ಲಿ ತಿಂಗಳ ಕಾಲ ಷಷ್ಠೋತ್ಸವ, ಜಾತ್ರೆ ಸಂಭ್ರಮ!
ವರ್ಷಕ್ಕೊಮ್ಮೆ ಒಂದು ತಿಂಗಳ ಕಾಲ ನಡೆಯುವ ಷಷ್ಠಿ ಉತ್ಸವ ವೇಳೆ ಸುಬ್ರಹ್ಮಣ್ಯಸ್ವಾಮಿ ರಥ ಪೂರ್ವಾಭಿಮುಖವಾಗಿ ಸಾಗುತ್ತಿದ್ದಂತೆಯೇ ಸಾವಿರಾರು ಭಕ್ತರು, ಹಣ್ಣು-ಜವನ ಎಸೆದು ಜಯಘೋಷ ಮೊಳಗಿಸಿ ಭಕ್ತಿ ಭಾವ ಪ್ರದರ್ಶನ ಮಾಡಿದರು.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ರಾಮನಾಥಪುರದಲ್ಲಿ (Ramanathapura) ಮಂಗಳವಾರ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಯ (subramanya Jatre) ಮೊದಲ ಷಷ್ಠಿ ರಥೋತ್ಸವ ಅದ್ಧೂರಿಯಿಂದ ಜರುಗಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತೇರನ್ನೆಳೆದು ರಥಕ್ಕೆ ಹಣ್ಣು, ಜವನ ಎಸೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲಾಗದವರು, ರಾಮನಾಥಪುರದ ಕಾವೇರಿ ನದಿಯಲ್ಲಿ ಮಿಂದು, ವಿಶೇಷ ಪೂಜೆ ಸಲ್ಲಿಸಿದ್ರೆ ಸಾಕು ಕಂಕಣ ಭಾಗ್ಯ ಒದಗುತ್ತೆ, ರೋಗ-ರುಜಿನ ನಿವಾರಣೆ ಆಗುತ್ತೆ, ಹಣ್ಣು ಜವರ ಸಮರ್ಪಣೆ ಮಾಡಿದ್ರೆ ಬೇಡಿಕೊಂಡಿದ್ದ ವರ ಈಡೇರಲಿದೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸೋ ನವ ಜೋಡಿಗಳು ಸುಬ್ರಹ್ಮಣ್ಯನ ದರ್ಶನ ಪಡೆದು ಪುನೀತರಾಗುತ್ತಾರೆ. ನವೆಂಬರ್ 29ರಿಂದ ಆರಂಭವಾಗಿ ಒಂದು ತಿಂಗಳ ಕಾಲ ಷಷ್ಠೋತ್ಸವದಲ್ಲಿ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ (Spiritual).
ಸುಪ್ರಸಿದ್ಧ ಕುಕ್ಕೆಸುಬ್ರಹ್ಮಣ್ಯ ರಥೋತ್ಸವ ದಿನದಂದೇ ರಾಮನಾಥಪುರದಲ್ಲೂ ಮಾರ್ಗಶಿರ ಶುದ್ಧ ಷಷ್ಠಿಯಂದು ಅದ್ಧೂರಿ ರಥೋತ್ಸವ ಜರುಗಿತು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಲಂಕೃತ ರಥ, ರಾಮನಾಥಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿ ಹೊತ್ತ ರಥ, ರಾಜಬೀದಿಗಳಲ್ಲಿ ಸಾಗುವ ಮುನ್ನ ದೈವಿ ಸ್ವರೂಪ ಎನಿಸಿರುವ ಗರುಡಗಳು ನಭದಲ್ಲಿ ಹಾರಾಡಿದರೆ ಶುಭ ಸೂಚನೆ ಎಂಬ ನಂಬಿಕೆ ಹಿಂದಿನಿಂದಲೂ ಇದ್ದು ನಿನ್ನೆಯೂ ಸಹ ಗರುಡ ಪ್ರತ್ಯಕ್ಷವಾಗಿ ರಥದ ಸುತ್ತ ಪ್ರದಕ್ಷಿಣೆ ಹಾಕಿದ ನಂತರವೇ ರಥ ಮುಂದೆ ಸಾಗಿತು.
ಸುಬ್ರಹ್ಮಣ್ಯಸ್ವಾಮಿ ರಥ ಪೂರ್ವಾಭಿಮುಖವಾಗಿ ಸಾಗುತ್ತಿದ್ದಂತೆಯೇ ಜಿಲ್ಲೆ ಹಾಗೂ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು, ಹಣ್ಣು-ಜವನ ಎಸೆದು ಜಯಘೋಷ ಮೊಳಗಿಸಿ ತಮ್ಮ ಭಕ್ತಿ ಭಾವ ಪ್ರದರ್ಶನ ಮಾಡಿದರು. ವರ್ಷಕ್ಕೊಮ್ಮೆ ಒಂದು ತಿಂಗಳ ಕಾಲ ನಡೆಯುವ ಷಷ್ಠಿ ಉತ್ಸವ ವೇಳೆ ಆಗಮಿಸಿ ಇಲ್ಲಿನ ಕಾವೇರಿ ನದಿಯಲ್ಲಿ ಮಿಂದು ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ರೆ, ಅಂದುಕೊಂಡಿದ್ದೆಲ್ಲಾ ಈಡೇರಲಿದೆ ಎಂಬ ನಂಬಿಕೆ ಇದೆ.
ಕಂಕಣಭಾಗ್ಯ, ಸಂತಾನ ಫಲ ಹಾಗೂ ಚರ್ಮರೋಗದಂಥ ಆರೋಗ್ಯ ಸಮಸ್ಯೆಗಳು ಶ್ರೀ ಕ್ಷೇತ್ರಕ್ಕೆ ಬಂದು ಹೋದ್ರೆ ಗುಣವಾಗಲಿವೆ ಎಂಬ ಅಚಲ ನಂಬಿಕೆ ಹಿನ್ನೆಲೆಯಲ್ಲಿ ಷಷ್ಠಿಯ ವೇಳೆ ಭಾರೀ ಸಂಖ್ಯೆಯಲ್ಲಿ ಆಗಮಿಸೋ ಭಕ್ತರು. ಪ್ರಸನ್ನ ಸುಬ್ರಹ್ಮಣ್ಯನ ಸನ್ನಿಧಿಗೆ ಆಗಮಿಸಿ ರಥೋತ್ಸವದಲ್ಲಿ ಬಾಗಿಯಾಗಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ ಎನ್ನುತ್ತಾರೆ ರಮೇಶ್ ಭಟ್ -ಪಾರುಪತ್ತೆಗಾರರು, ಪ್ರಸನ್ನಸುಬ್ರಹ್ಮಣ್ಯ ದೇಗುಲ ರಾಮನಾಥಪುರ.
ಮೂರು ವರ್ಷಗಳಿಂದ ಕೋವಿಡ್ ಆತಂಕದ ಕಾರಣದಿಂದ ಕಳೆಗುಂದಿದ್ದ ರಾಮನಾಥಪುರ ರಥೋತ್ಸವ ಈ ವರ್ಷ ತನ್ನ ಹಳೆ ವೈಭವ ಮರುಕಳಿಸಿಕೊಂಡು ಕಂಗೊಳಿಸುತ್ತಿತ್ತು, ಎಲ್ಲೆನ್ನೂ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಂದು ದೇವರ ದರ್ಶನಕ್ಕೆ ಮುಗಿಬಿದ್ದಿದ್ದರು. ನೂರಾರು ಮೀಟರ್ ಉದ್ದಕ್ಕೆ ಸರತಿ ಸಾಲುಗಳಲ್ಲಿ ನಿಂತು ದೇವರ ದರ್ಶನ ಪಡೆದುಕೊಂದ್ರು. ಸುಬ್ರಹ್ಮಣ್ಯನ ಸನ್ನಿಧಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲಾದವರು ರಾಮನಾಥಪುರಕ್ಕೆ ಬಂದು ಪೂಜಿಸಿದರೆ ಸಾಕು ಎಂಬ ವಾಡಿಕೆ ಇರುವುದರಿಂದ ಇದನ್ನು ಬಡವರ ಕಾಶಿ ಎಂತಲೂ ಕರೆಯುತ್ತಾರೆ.
ಇದೇ ಕಾರಣಕ್ಕೆ ಯಾವುದೇ ರೀತಿಯ ಬೇಧ-ಭಾವ ಇಲ್ಲದೇ ಅಪಾರ ಭಕ್ತ ಸಂಗಮವೇ ಇಲ್ಲಿ ಮೇಳೈಸುತ್ತದೆ. ಜೊತೆಗೆ ರಥೋತ್ಸವ ವೇಳೆ ಇಲ್ಲಿಗೆ ಬಂದು ಹಣ್ಣು ತುಪ್ಪದ ಹರಕೆ ತೀರಿಸಿದ್ರೆ ಚರ್ಮರೋಗದಂಥ ಅನಾರೋಗ್ಯ ವಾಸಿಯಾಗುತ್ತದೆ. ಕಾವೇರಿ ನದಿಯಲ್ಲಿ ಮಿಂದು ಗಂಗೆ ಪೂಜೆ ಮಾಡಿದ್ರೆ, ಮಕ್ಕಳಾಗುತ್ತವೆ ಅನ್ನೋ ಪ್ರತೀತಿ ಇದೆ. ಹೀಗಾಗಿಯೇ ಇದಕ್ಕೆಂದು ಹರಕೆ ಕಟ್ಟಿಕೊಂಡಿದ್ದ ಹೆಂಗೆಳೆಯರು, ನವಜೋಡಿ ಆಗಮಿಸಿ ಪೂಜೆ ಸಲ್ಲಿಸೋದು ವಾಡಿಕೆ ಎಂದವರು ಚೈತ್ರಾ, ಸಾಗರ್ ನವವಿವಾಹಿತರು.
ಒಟ್ನಲ್ಲಿ ಒಂದು ತಿಂಗಳ ರಾಮನಾಥಫುರದಲ್ಲಿ ಷಷ್ಠಿ ಜಾತ್ರಾ ಮಹೋತ್ಸವ ನಡೆಯಲಿದ್ದು, ನಿತ್ಯವೂ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಅದರಲ್ಲೂ ಶನಿವಾರ, ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ರಥೋತ್ಸವ ನಡೆದಿರಲಿಲ್ಲ. ಈ ವರ್ಷ ಇಡೀ ಊರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಕಳೆದ ಹೋದ ನೋವು ಮರೆತು, ಹೊಸ ನಲಿವಿನಲ್ಲಿ ಸ್ಥಳೀಯರು ಭಾಗಿಯಾಗಿದ್ದಾರೆ. (ವರದಿ: ಕೆ.ಬಿ. ಮಂಜುನಾಥ್, ಟಿವಿ 9, ಹಾಸನ)
Also Read: